×
Ad

ಸಂವಿಧಾನದ ಮೂಲ ಆಶಯಗಳ ರಕ್ಷಣೆಗೆ ಶ್ರಮಿಸಬೇಕು: ಪ್ರೊ.ಪೀಟರ್ ರೊನಾಲ್ಡ್ ಡಿ’ಸೋಜಾ

Update: 2018-08-31 21:36 IST

ಬೆಂಗಳೂರು, ಆ.31: ಸಂವಿಧಾನದ ಮೂಲ ಆಶಯಗಳ ರಕ್ಷಣೆಗೆ ನಾವೆಲ್ಲರೂ ಶ್ರಮಿಸಬೇಕಿದೆ. ಇತ್ತೀಚಿನ ವರ್ಷಗಳಲ್ಲಿ ದೇಶದ ಪ್ರಜಾಪ್ರಭುತ್ವದಲ್ಲಿ ಆಸಕ್ತದಾಯಕವಾದ ವಿರೋಧಾಭಾಸಗಳು ಉದಯಿಸಿವೆ ಎಂದು ಹೊಸದಿಲ್ಲಿಯ ಸೆಂಟರ್ ಫಾರ್ ದ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್‌ನ ಫ್ರೊ.ಪೀಟರ್ ರೊನಾಲ್ಡ್ ಡಿ’ಸೋಜಾ ತಿಳಿಸಿದ್ದಾರೆ.

ನಗರದ ನಾಗರಭಾವಿಯಲ್ಲಿರುವ ಐಸಿಇಎಸ್(ಇನ್ಸ್‌ಟಿಟ್ಯೂಟ್ ಫಾರ್ ಸೋಷಿಯಲ್ ಅಂಡ್ ಇಕನಾಮಿಕ್ ಚೇಂಜ್) ಸಭಾಂಗಣದಲ್ಲಿ ಶ್ರೀ ರಾಮಕೃಷ್ಣ ಹೆಗ್ಡೆ ಸ್ಮಾರಕ ಉಪನ್ಯಾಸ-2 ಅಂಗವಾಗಿ ಆಯೋಜಿಸಿದ್ದ ‘ಧರ್ಮ ಮತ್ತು ಅಧರ್ಮ: ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉದಯಿಸುತ್ತಿರುವ ವಿರೋಧಾಭಾಸಗಳು’ ಕುರಿತು ಅವರು ಮಾತನಾಡಿದರು.

ಸಾಂವಿಧಾನಿಕ ಮೌಲ್ಯಗಳು ಒಂದೆಡೆಯಾದರೆ, ಸಾರ್ವಜನಿಕರ ವರ್ತನೆ ಮತ್ತೊಂದೆಡೆಯಿದೆ. ಇತ್ತೀಚಿಗಿನ ಕೆಲವು ಪ್ರಕರಣಗಳಲ್ಲಿನ ವಿರೋಧಭಾಸಾಗಳು ಹಾಗೂ ಆ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಬಂದಿರುವ ತೀರ್ಪುಗಳು, ಸಾಮಾಜಿಕ ಮತ್ತು ರಾಜಕೀಯ ವರ್ತನೆಗಳ ರೋಗಲಕ್ಷಣಗಳು ನಿರಂತರವಾಗಿ ಪ್ರಮುಖ ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು ಅವರು ಹೇಳಿದರು.

ಪ್ರಕರಣಗಳು: ಸಂವಿಧಾನ ಒದಗಿಸಿರುವ ಅಭಿವ್ಯಕ್ತಿ ಸ್ವಾತಂತ್ರದ ಹಕ್ಕಿನ ಉಲ್ಲಂಘನೆ ಕುರಿತ ಶ್ರೇಯಾ ಸಿಂಘಾಲ್ ಹಾಗೂ ಕೇಂದ್ರ ಸರಕಾರದ ನಡುವಿನ ಪ್ರಕರಣ, ಮಹಿಳೆಯರ ಹಕ್ಕುಗಳ ರಕ್ಷಣೆ ಕುರಿತ ತ್ರಿವಳಿ ತಲಾಕ್‌ಗೆ ಸಂಬಂಧಿಸಿದ ಶಾ ಬಾನು ಹಾಗೂ ಕೇಂದ್ರ ಸರಕಾರದ ನಡುವಿನ ಪ್ರಕರಣಗಳು ಒಂದೆಡೆಯಿವೆ ಎಂದು ಅವರು ತಿಳಿಸಿದರು.

ಅದೇ ಮತ್ತೊಂದೆಡೆ, ತಾರತಮ್ಯ ಕುರಿತು ಎನ್‌ಎಎಲ್‌ಎಸ್‌ಎ ನೀಡಿರುವ ತೀರ್ಪು, ಖಾಸಗಿತನಕ್ಕೆ ಸಂಬಂಧಿಸಿದ ಪುಟ್ಟಸ್ವಾಮಿ ತೀರ್ಪು, ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗಾಗಿ ಸೆಕ್ಷನ್ 377ರಡಿಯಲ್ಲಿ ಬರಬೇಕಾದ ತೀರ್ಪುಗಳನ್ನು ಎದುರು ನೋಡಲಾಗುತ್ತಿದೆ ಎಂದು ಪೀಟರ್ ರೊನಾಲ್ಡ್ ಹೇಳಿದರು.

ನ್ಯಾಯಾಲಯದ ಸಾಂವಿಧಾನಿಕ ನೈತಿಕತೆಯನ್ನೆ ಬುಡಮೇಲು ಮಾಡುವಂತಹ ಪ್ರಕರಣಗಳು ನಮ್ಮ ಮುಂದೆ ಬಂದಿವೆ. ಅವುಗಳಲ್ಲಿ ಪ್ರಮುಖವಾದದ್ದು ಬಿಹಾರದಲ್ಲಿನ ನಿರಾಶ್ರಿತರ ಶಿಬಿರಗಳ ಕುರಿತು ಟಿಐಎಸ್‌ಎಸ್ ವರದಿ, ಯಾದಗಿರಿ ಹಾಗೂ ತೆಲಂಗಾಣದಲ್ಲಿ ಕಂಡು ಬಂದ ಹೆಣ್ಣು ಮಕ್ಕಳ ಕಳ್ಳಸಾಗಾಣಿಕೆ, ಕಾಶ್ಮೀರದಲ್ಲಿ ಪೆಲ್ಲೆಟ್ ಗನ್‌ಗಳ ಬಳಕೆ ಹಾಗೂ ದೇಶಾದ್ಯಂತ ಪದೇ ಪದೇ ಮರುಕಳಿಸುತ್ತಿರುವ ಗುಂಪು ಹಲ್ಲೆಗಳು ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪ್ರೊ.ಎಂ.ಜಿ.ಚಂದ್ರಕಾಂತ್, ಡಾ.ಜೋಸ್ ಚಾತುಕುಲಮ್, ಡಾ.ಎ.ರವೀಂದ್ರ, ಡಾ.ಪಿ.ಎಸ್.ಶ್ರೀನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News