ಜಾಹೀರಾತು ನೀತಿ ಪೂರ್ಣಗೊಳ್ಳಲು 30 ದಿನ ಕಾಲಾವಕಾಶ ಬೇಕು: ಹೈಕೋರ್ಟ್‌ಗೆ ಸರಕಾರದ ಹೇಳಿಕೆ

Update: 2018-08-31 16:14 GMT

ಬೆಂಗಳೂರು, ಆ.31: ಬಿಬಿಎಂಪಿ ಸಲ್ಲಿಸಿರುವ ಜಾಹೀರಾತು ನೀತಿ ಹಾಗೂ ಕರಡು ಬೈಲಾವನ್ನು ಅಂತಿಮಗೊಳಿಸಲು 30 ದಿನ ಕಾಲಾವಕಾಶ ಅಗತ್ಯವಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ತಿಳಿಸಿದೆ.

ನಗರ ವ್ಯಾಪ್ತಿಯಲ್ಲಿರುವ ಅನಧಿಕೃತ ಜಾಹೀರಾತು ಲಕಗಳನ್ನು ತೆರವುಗೊಳಿಸಲು ರಾಜ್ಯ ಸರಕಾರ ಹಾಗೂ ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಪೀಠದಲ್ಲಿ ಶುಕ್ರವಾರ ನಡೆಯಿತು.

ರಾಜ್ಯ ಅಡ್ವೊಕೇಟ್ ಜನರಲ್ ಉದಯ ಹೊಳ್ಳ ವಾದ ಮಂಡಿಸಿ, ಬಿಬಿಎಂಪಿ ಸಲ್ಲಿಸಿರುವ ಜಾಹೀರಾತು ನೀತಿ ಹಾಗೂ ಕರಡು ಬೈಲಾ ಸರಕಾರದ ಕೈಸೇರಿದೆ. ಅವುಗಳನ್ನು ಅಂತಿಮಗೊಳಿಸಲು 30 ದಿನಗಳ ಕಾಲಾವಕಾಶದ ಅಗತ್ಯವಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪ್ರಕ್ರಿಯೆ ಪೂರ್ಣಗೊಳ್ಳಲು 30 ದಿನಗಳು ಬೇಕೆ? ಯಾವುದೇ ಶಾರ್ಟ್‌ಕಟ್‌ಗಳಿಲ್ಲವೇ ಎಂದು ಎಜಿ ಅವರನ್ನು ಪ್ರಶ್ನಿಸಿತು. ಉದಯ ಹೊಳ್ಳ ಉತ್ತರಿಸಿ, ನಿಯಮಗಳ ಪ್ರಕಾರ ಮೊದಲು ಬಿಬಿಎಂಪಿ ಸಲ್ಲಿಸಿರುವ ಬೈಲಾ ಕುರಿತು ಸಾರ್ವಜನಿಕ ಪ್ರಕಟಣೆ ನೀಡಬೇಕು. ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಸ್ವೀಕರಿಸಿ, ಏನಾದರೂ ಬದಲಾವಣೆ ಅಗತ್ಯವಿದ್ದರೆ ತಿದ್ದುಪಡಿ ಮಾಡಿ, ನಂತರ ಅನುಮೋದನೆ ನೀಡಬೇಕು. ಅದಕ್ಕಾಗಿ 30 ದಿನಗಳು ಬೇಕು ಎಂದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಗ್ರಾಮಪಂಚಾಯತ್ ಗಳ ಬೈಲಾವನ್ನು ಸಲ್ಲಿಸುವಂತೆ ಸರಕಾರಕ್ಕೆ ಸೂಚಿಸಿ, ವಿಚಾರಣೆಯನ್ನು ಸೆ.11ಕ್ಕೆ ಮುಂದೂಡಿತು.

ಬಿಬಿಎಂಪಿ ಪರ ವಕೀಲ ವಿ.ಶ್ರೀನಿಧಿ ಅವರು ಫ್ಲೆಕ್ಸ್ ತೆರವಿಗೆ ಕೈಗೊಂಡಿರುವ ಕ್ರಮಗಳ ಕುರಿತು ನ್ಯಾಯಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಿದರು. ಅಡ್ವೊಕೇಟ್ ಜನರಲ್ ಉದಯ ಹೊಳ್ಳ, 234 ಪ್ರಕರಣಗಳಲ್ಲಿ 228 ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಈ ಎಲ್ಲರ ವಿರುದ್ಧ ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ವಿಚಾರಣೆ ಪೂರ್ಣಗೊಂಡಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News