ಕುವೆಂಪು ಸಾಹಿತ್ಯದಲ್ಲಿ ಶೋಷಿತರೆ ‘ನಾಯಕರು’: ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ

Update: 2018-08-31 16:29 GMT

ಬೆಂಗಳೂರು, ಆ.31: ರಾಷ್ಟ್ರಕವಿ ಕುವೆಂಪು ಅವರ ಕತೆ-ಕಾವ್ಯಗಳಲ್ಲಿ ಶೋಷಿತ ಸಮುದಾಯದವರನ್ನು ನಾಯಕರನ್ನಾಗಿ(ಹೀರೋ) ಚಿತ್ರಿಸುವ ಮೂಲಕ ಸಾಮಾಜಿಕ ನ್ಯಾಯ ಪರತೆಯನ್ನು ತೋರಿದ್ದರು ಎಂದು ರಾಜ್ಯಸಭಾ ಸದಸ್ಯ ಡಾ. ಎಲ್.ಹನುಮಂತಯ್ಯ ಅಭಿಪ್ರಾಯಪಟ್ಟರು.

ಶುಕ್ರವಾರ ನಗರದ ಎನ್.ಆರ್.ಕಾಲನಿಯ ಎಪಿಎಸ್ ಕಾಲೇಜಿನ ಕನ್ನಡ ವಿಭಾಗ ಆಯೋಜಿಸಿದ್ದ ‘ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಪರಿಚಯ ಉಪನ್ಯಾಸ ಮಾಲಿಕೆ’ ಉದ್ಘಾಟಿಸಿ ‘ರಾಷ್ಟ್ರಕವಿ ಕುವೆಂಪು ಬದುಕು-ಬರಹ’ ವಿಚಾರ ಕುರಿತು ಅವರು ಮಾತನಾಡಿದರು.

ಜಮೀನುದಾರರ ಕುಟುಂಬದಲ್ಲಿ ಜನಿಸಿದರೂ, ಕುವೆಂಪು ತನ್ನ ಮನೆಯಲ್ಲಿದ್ದ ಜೀತದಾಳು ಬಗ್ಗೆ ಒಂದು ಕವನ ರಚಿಸಿದ್ದಾರೆ. ಅವರ ಬಹುತೇಕ ಕೃತಿ-ಕಾವ್ಯಗಳಲ್ಲಿ ಶೋಷಿತ ಸಮುದಾಯಕ್ಕೆ ಪ್ರಧಾನ ಪಾತ್ರ ನೀಡಿದ್ದಾರೆ. ಇದು ಅವರೊಳಗಿರುವ ಸಾಮಾಜಿಕ ನ್ಯಾಯದ ಪರಿಕಲ್ಪನೆ ಬಿಂಬಿಸುತ್ತದೆ ಎಂದು ನುಡಿದರು.

ಕಾಲ ಬದಲಾದಂತೆ ರಾಮಾಯಣ-ಮಹಾಭಾರತಕ್ಕೆ ಕೆಲವು ತಿದ್ದುಪಡಿಯಾಗಿದೆ. ರಾಮ-ಲಕ್ಷ್ಮಣ, ವಾಲಿ-ಸುಗ್ರೀವ ಬಗ್ಗೆ ಕುವೆಂಪು ತಮ್ಮ ಶ್ರೀರಾಮಯಣರ್ದಶನಂನಲ್ಲಿ ಉತ್ತಮವಾಗಿ ಚಿತ್ರಿಸಿದ್ದಾರೆ. ಇದರಿಂದ ರಾಮನ ಮೇಲಿರುವ ಜನರ ನಂಬಿಕೆ ಮತ್ತಷ್ಟು ಹೆಚ್ಚಾಗಿತ್ತು. ವಿದ್ಯಾರ್ಥಿಗಳು ಕನ್ನಡ ಸಾಹಿತ್ಯದ ಬಗ್ಗೆ ಆಳವಾಗಿ ಅಧ್ಯಯನ ಮಾಡುವ ಮೂಲಕ ನಮ್ಮ ಸಾಹಿತ್ಯ ಲೋಕದ ಇತಿಹಾಸ ತಿಳಿದುಕೊಳ್ಳಬೇಕು ಎಂದು ಹನುಮಂತಯ್ಯ ಹೇಳಿದರು. ಕಾರ್ಯಕ್ರಮದಲ್ಲಿ ಎಪಿಎಸ್‌ಇಟಿ ಅಧ್ಯಕ್ಷ ಟಿ.ವಿ.ಮಾರುತಿ, ಪ್ರಧಾನ ಕಾರ್ಯದರ್ಶಿ ಪ್ರೊ.ಕೆ.ವಿ.ನರಸಿಂಹಮೂರ್ತಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News