ಗಾಡ್ಗೀಳ್, ಕಸ್ತೂರಿ ರಂಗನ್ ವರದಿಗಳ ಅನುಷ್ಠಾನ ಬೇಕೆ?

Update: 2018-08-31 18:46 GMT

ಪಶ್ಚಿಮ ಘಟ್ಟದ ಕೇರಳ ಮತ್ತು ಕೊಡಗು ಜಿಲ್ಲೆಗಳಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಸುತ್ತ ಕಸ್ತೂರಿ ರಂಗನ್ ವರದಿ ಸದ್ದು ಮಾಡುತ್ತಿದೆ. ಹಾಗಾಗಿಯೇ ಎಲ್ಲರೂ ಪರಿಸರ ಸಂರಕ್ಷಣೆ ಕುರಿತು ಆಲೋಚಿಸುವಂತೆ ಮಾಡಿದೆ. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ರಸ್ತೆ, ಹೆದ್ದಾರಿ ನಿರ್ಮಾಣ, ದೊಡ್ಡ ಪ್ರಮಾಣದ ಅರಣ್ಯನಾಶ, ಎಲ್ಲೆಂದರಲ್ಲಿ ಗುಡ್ಡಗಳನ್ನು ಬಗೆದು ಕಟ್ಟಡಗಳನ್ನು ಕಟ್ಟಿರುವುದು, ಮರಳು ಮತ್ತು ಕಲ್ಲು ಗಣಿಗಾರಿಕೆ ಮಾಡಿರುವುದು, ಗುಡ್ಡಗಳ ತುದಿಯಲ್ಲಿ ಕೆರೆಗಳ ನಿರ್ಮಾಣ ಇತ್ಯಾದಿ...ಮಾನವರು ಮಾಡಿದ ತಪ್ಪಿನಿಂದಲೇ ಅವಘಡ ಸಂಭವಿಸಿದೆ ಎಂದು ಪರಿಸರ ಮತ್ತು ಭೂವಿಜ್ಞಾನಿಗಳು ಹೇಳುತ್ತಿದ್ದಾರೆ. ಹೌದು ಇದನ್ನೆಲ್ಲ ಮಾಡಿದ್ದು ಉಳ್ಳವರೇ ಅಲ್ಲವೆ? ಅವರನ್ನು ಸರಕಾರಗಳು ಯಾಕೆ ತಡೆಯಲಿಲ್ಲ? ಪ್ರಶ್ನೆಗೆ ಉತ್ತರ ಅವರೇ ಕೊಡಬೇಕಿದೆ.

ಮಾಧವ್ ಗಾಡ್ಗೀಳ್, ಕಸ್ತೂರಿ ರಂಗನ್ ಪರಿಸರ ಸಂರಕ್ಷಣೆ ವರದಿಗಳನ್ನು ಜಾರಿಮಾಡಿದ್ದರೆ ಹೀಗಾಗುತ್ತಿರಲಿಲ್ಲವೇನೋ? ಎಂದು ಜನ ವಿರೋಧದಿಂದ ತಿರಸ್ಕರಿಸಲ್ಪಟ್ಟ ಯೋಜನೆಗಳನ್ನು ಈ ವಿಕೋಪದ ಸಾವು ನೋವಿನ ಹೊತ್ತಲ್ಲಿ ಹಿತ್ತಲ ಬಾಗಿಲಿನ ಮೂಲಕ ವರದಿ ಅನುಷ್ಠಾನಕ್ಕೆ ನಕಲಿ ಪರಿಸರವಾದಿಗಳು ಪ್ರಯತ್ನಿಸುತ್ತಿದ್ದಾರೆ.

ಈ ಎರಡೂ ವರದಿಗಳಲ್ಲಿ ಏನಿದೆ? 
ಪರಿಸರ ವಿಜ್ಞಾನಿ ಮಾಧವ್ ಗಾಡ್ಗೀಳ್‌ರವರು ಕರ್ನಾಟಕದಲ್ಲಿ ಆರು ಜಿಲ್ಲೆಗಳ ಸುಮಾರು 1,29,039 ಚ.ಕಿ.ಮೀಟರನ್ನು ಪಶ್ಚಿಮ ಘಟ್ಟದ ಭೂಪ್ರದೇಶ ಎಂದು ಗುರುತಿಸಿದರು. ಅದರಲ್ಲಿ ಶೇ. 60ರಷ್ಟು ಭೂಪ್ರದೇಶ ಅತೀ ಸೂಕ್ಷ್ಮ ಪರಿಸರ ಪ್ರದೇಶ. ಅದನ್ನು ಇಎಸ್‌ಝಡ್ 1 ಎಂದೂ, ಶೇ. 25ರಷ್ಟು ಭೂಪ್ರದೇಶವನ್ನು ಕಡಿಮೆ ಸೂಕ್ಷ್ಮ ಪ್ರದೇಶ ಇಎಸ್‌ಝಡ್ 2 ಎಂದೂ, ಉಳಿದ ಶೇ. 15ರಷ್ಟನ್ನು ಅತಿ ಕಡಿಮೆ ಸೂಕ್ಷ್ಮ ಭೂಪ್ರದೇಶ ಎಂದು ಗುರುತಿಸಿದ್ದಾರೆ. ಈ ವಲಯಗಳ ಪೈಕಿ ಒಂದರಲ್ಲಿ ಯಾವುದೇ ಬಗೆಯ ಪರಿಸರ ಮಾರಕ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ನೀರಿನ ಮೂಲಗಳಿಗೆ ಧಕ್ಕೆಯಾಗಬಾರದು, ಕೃಷಿ ಗಣಿಗಾರಿಕೆ ಮಾನವ ಹಸ್ತಕ್ಷೇಪವಾಗಬಾರದು ಎಂದಿದೆ. ಹಾಗಾಗಿಯೇ ವಲಯ ಎರಡರಲ್ಲಿ ಈಗಾಗಲೇ ಇರುವ ಗಣಿ, ಕೃಷಿ, ಮೂಲ ಸೌಕರ್ಯ ಮುಂದುವರಿಯಬಹುದು ಅದರೆ ಹೊಸ ವಿಸ್ತರಣೆಗೆ ಅವಕಾಶ ನೀಡುವಂತಿಲ್ಲ. ಇಲ್ಲಿಯೂ ಸಹ ಹಂತ ಹಂತವಾಗಿ ಪರಿಸರದ ಮೇಲೆ ಮಾನವ ಹಸ್ತಕ್ಷೇಪವನ್ನು ಕಡಿತಗೊಳಿಸಬೇಕು. ಮೂರನೇ ವಲಯದಲ್ಲಿ ರಾಸಾಯನಿಕ ಮುಕ್ತ ಕೃಷಿ, ಗಣಿ ಜಲವಿದ್ಯುತ್ ಯೋಜನೆಗಳಿಗೆ ಅವಕಾಶ ನೀಡಲಾಗಿದೆ. ಕೊನೆಯಲ್ಲಿ ಪಶ್ಚಿಮ ಘಟ್ಟ ಪ್ರದೇಶ ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ಪಶ್ಚಿಮ ಘಟ್ಟ ಪ್ರಾಧಿಕಾರ ರಚನೆ, ಪರಿಸರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಿರ್ಧರಿಸುವಾಗ ಗ್ರಾಮಗಳ ವಿಕೇಂದ್ರೀಕೃತ ವ್ಯವಸ್ಥೆಯನ್ನು ಬಳಸಿಕೊಳ್ಳುವುದಕ್ಕೆ ಶಿಫಾರಸು ಮಾಡಲಾಗಿದೆ.

ಅದರೆ ಕಸ್ತೂರಿ ರಂಗನ್ ನೇತೃತ್ವದ ಸಮಿತಿ ಈ ವಲಯಗಳನ್ನು ನೈಸರ್ಗಿಕ ಭೂಭಾಗ, ಸಾಂಸ್ಕೃತಿಕ ಭೂಭಾಗ ಎಂದು ಕರೆದು ನೈಸರ್ಗಿಕ ಭೂಭಾಗ ಜನರಹಿತ ಅರಣ್ಯ, ಸಾಂಸ್ಕೃತಿಕ ಭೂಭಾಗ ಎಂದರೆ ಜನವಸತಿ ಒಳಗೊಂಡ ಅರಣ್ಯ ಎಂಬುದಾಗಿ ವಿಂಗಡಿಸಲಾಗಿದೆ. ಗಾಡ್ಗೀಳ್ ಪರಿಗಣಿಸಿದ ಪ್ರದೇಶಕ್ಕಿಂತ ಹೆಚ್ಚು ಅಂದರೆ 1,29,039 ಚ.ಕಿ.ಮೀ.ಗೆ ಬದಲಾಗಿ 1,62,280 ಚ.ಕಿ.ಮೀ. ಭೂಪ್ರದೇಶವನ್ನು ಪಶ್ಚಿಮಘಟ್ಟ ವಲಯ ಎಂದು ಘೋಷಿಸಲಾಗಿದೆ. ಅದರಲ್ಲಿ ಕೇವಲ ಶೇ. 37ರಷ್ಟು ಪ್ರದೇಶವನ್ನು ಮಾತ್ರ ಪರಿಸರ ಸೂಕ್ಷ್ಮ ವಲಯ ಎಂದು ವಿಂಗಡಿಸಲಾಗಿದೆ. ಈ ಪ್ರದೇಶದಲ್ಲಿ ಕೃಷಿ, ಗಣಿಗಾರಿಕೆ, ಉದ್ಯಮ, ಬೃಹತ್ ಕಟ್ಟಡಗಳಿಗೆ ಅವಕಾಶ ನೀಡಬಾರದು ಎಂದು ಶಿಫಾರಸು ಮಾಡಿದೆ. ಗಾಡ್ಗೀಳ್ ವರದಿಯಲ್ಲಿ ಪ್ರಸ್ತಾಪಿಸಲಾಗಿದ್ದ ಶೇ. 40ರಷ್ಟು ಪ್ರದೇಶವನ್ನು ಕಸ್ತೂರಿ ರಂಗನ್ ವರದಿ ಸಂರಕ್ಷಣಾ ವಲಯದಿಂದ ಕೈ ಬಿಟ್ಟಿದೆ. ನೈಜ ಪರಿಸರ ಸಂರಕ್ಷಣೆ, ಜನಪರವಾದ ಕಾಳಜಿಯಿಂದ ಈ ವರದಿಯ ಅನುಷ್ಟಾನಕ್ಕೆ ಸರಕಾರಗಳು ಪ್ರಯತ್ನಿಸುತ್ತಿವೆಯೇ?

ಗಾಡ್ಗೀಳ್ ವರದಿ ಮತ್ತು ಕಸ್ತೂರಿ ರಂಗನ್ ವರದಿ ಎರಡರಲ್ಲೂ ಸಾರಂಶದಲ್ಲಿ ಏನೂ ವ್ಯತ್ಯಾಸವಿಲ್ಲ. ವ್ಯತ್ಯಾಸವೆಂದರೆ, ಗಾಡ್ಗೀಳ್ ವರದಿಯಲ್ಲಿ ಸಂರಕ್ಷಣೆ ಭೂಪ್ರದೇಶವನ್ನು ಹೆಚ್ಚಿಸಲಾಗಿದ್ದು, ಪರಿಸರ ಸಂರಕ್ಷಣೆಗೆ ಮೂರು ವಲಯಗಳಾಗಿ ವಿಂಗಡಿಸಿದ ರೀತಿ ಮತ್ತು ಪಶ್ಚಿಮ ಘಟ್ಟ ಪ್ರಾಧಿಕಾರ ರಚನೆ ವಿಕೇಂದ್ರೀಕೃತ ಆಡಳಿತ ಕುರಿತಾದ ಪ್ರಸ್ತಾಪ ಇದೆ ಅಷ್ಟೆ.

ಎರಡೂ ವರದಿಗಳನ್ನು ಹೋಲಿಸಿ ನೋಡಿದಾಗ ಮೇಲು ನೋಟಕ್ಕೆ ಗಾಡ್ಗೀಳ್ ವರದಿ ಪರಿಸರ ಸಂರಕ್ಷಣೆಗೆ ಒತ್ತಿದ್ದಂತೆ ಕಾಣುತ್ತದೆ. ಅದು ವಾಸ್ತವವಾಗಿ ಪರಿಸರವಾದವಲ್ಲ. ಇಡೀ ಪಶ್ಚಿಮಘಟ್ಟ ಪ್ರದೇಶದಲ್ಲಿ ಜನವಸತಿ ಇಲ್ಲದೆ ಇರುವ ಅರಣ್ಯಪ್ರದೇಶ ಎಲ್ಲೂ ಕಂಡು ಬರುವುದಿಲ್ಲ. ಈಗಾಗಲೇ ಅಲ್ಲಿ ವಾಸವಾಗಿರುವ ಮೂಲನಿವಾಸಿಗಳಾದ ಆದಿವಾಸಿ ದಲಿತ ಸಮುದಾಯಗಳು ರೈತರು ಅಲ್ಲೇ ವಾಸ ಮಾಡಬೇಕೆ ಅಥವಾ ಅಲ್ಲಿಂದ ಅವರನ್ನು ಒಕ್ಕಲೇಳಿಸಬೇಕೆ? ಒಕ್ಕಲೇಳಿಸಿದರೆ ಪರಿಹಾರ ಏನು? ಎಂಬುದರ ಬಗ್ಗೆ ವರದಿ ಸ್ಪಷ್ಟವಾಗಿ ಏನೂ ಹೇಳುವುದಿಲ್ಲ. ಪರಿಸರ ಸೂಕ್ಷ್ಮ ವಲಯದಿಂದ ಜನರನ್ನು ನಿರ್ಬಂಧಿಸುವ ಕುರಿತು ಹೇಳುವುದರ ಅರ್ಥ ಜನರನ್ನು ಅಲ್ಲಿಂದ ಒಕ್ಕಲೇಳಿಸುವುದೇ ಆಗಿದೆ. ಅಷ್ಟೇಯಲ್ಲ ಜನರಹಿತ ಪರಿಸರವಾದವೇ ಇದು. ಜನರಿಲ್ಲದೆ ಪರಿಸರ ಉಳಿಯಲು ಸಾಧ್ಯವಿಲ್ಲ. ಕಾಡುವಾಸಿಗಳು ಕಾಡನ್ನು ನಾಶಮಾಡುವುದಾಗಿದ್ದರೆ ಪಶ್ಚಿಮ ಘಟ್ಟ ಈಗಿರುವಂತೆ ಇರುತ್ತಿರಲಿಲ್ಲ ಎಂದು ಹೇಳಬಹುದು.

ಕರ್ನಾಟಕದಲ್ಲಿ ಆರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಸುಮಾರು 1,500 ಗ್ರಾಮಗಳು ಪರಿಸರ ಸೂಕ್ಷ್ಮ ವಲಯದ ಪ್ರದೇಶಕ್ಕೆ ಒಳಪಡುತ್ತವೆ ಎಂದು ವರದಿಯಲ್ಲಿ ನಮೂದಿಸಿದ್ದನ್ನು ಕಂಡು ಕಾಡುವಾಸಿಗಳು ಭಯಭೀತರಾಗಿದ್ದರು. ಆ ಕಾರಣದಿಂದಲೇ ಎರಡೂ ವರದಿಗಳನ್ನು ವಿರೋಧಿಸಿ ಹೋರಾಟಕ್ಕಿಳಿದಿದ್ದಾರೆ. ಭಾರತ ಮತ್ತು ವಿಶ್ವದಲ್ಲಿ ಇಂತಹ ವರದಿಗಳ ಅನುಷ್ಠಾನದಿಂದ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಮರ, ಮರಳು ಗಣಿಗಾರಿಕೆ, ಉದ್ಯಮ ಮುಂತಾದ ಮಾನವ ನಿರ್ಮಿತ ಚಟುವಟಿಕೆಗಳು ನಿಂತಿದ್ದು ಕಾಣುತ್ತಿಲ್ಲ.

ಕಳೆದ ಮೂರು ದಶಕಗಳ ಹಿಂದೆ ಮಧ್ಯ ಭಾರತದ ಅರಣ್ಯ ಪ್ರದೇಶಗಳಲ್ಲಿ ಇದೇ ರೀತಿಯ ಪರಿಸರ ಸಂರಕ್ಷಣೆಯ ಯೋಜನೆಗಳನ್ನು ಜಾರಿ ಮಾಡುವ ಭಾಗವಾಗಿ ವಿವಿಧ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ನಂತರ ಸರಕಾರಗಳೇ ಮುಂದೆ ನಿಂತು ಅರಣ್ಯದೊಳಗೆ ಅಭಿವೃದ್ಧ್ದಿ ಮಂತ್ರ ಪಠಿಸಿ ಭೂಮಿಯನ್ನು ಡಿನೋಟಿಫೈ ಮಾಡಿ ವಿವಿಧ ರೀತಿಯ ಗಣಿಗಾರಿಕೆಗೆ ಅವಕಾಶ ಮಾಡಿಕೊಡಲಾಯಿತು. ಈಗ ಏಸ್ಸಾರ್, ಮಿತ್ತಲ್, ವೇದಾಂತ್, ಪೊಸ್ಕೋ ಕಂಪೆನಿಗಳು ಅದಿರು ತೆಗೆದು ಲೂಟಿ ಮಾಡುತ್ತಿವೆ. ಈ ಕಂಪೆನಿಗಳೇ ಮೂಲನಿವಾಸಿಗಳನ್ನು ಅರಣ್ಯದಿಂದ ಹೊರಹಾಕಲು ಸರಕಾರಗಳ ಮೇಲೆ ಒತ್ತಡ ಹೇರುತ್ತಿವೆ. ಅಷ್ಟು ದೂರ ಯಾಕೆ? ಒಂದೂವರೆ ದಶಕದ ಹಿಂದೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪರಿಸರ ಯೋಜನೆ ಒಳಗೆ ಇರುವ ಕುದುರೆಮುಖ ಕಂಪೆನಿಯನ್ನು ಪರಿಸರ ಮಾಲಿನ್ಯ ಮಾಡುತ್ತಿದೆ ಎಂದು ಡಿನೋಟಿಫೈ ಮಾಡಿ, ಕುದುರೆಮುಖ ಕಂಪೆನಿಯನ್ನು ನಿಪ್ಪಾನ್ ಎಂಬ ಜಪಾನ್ ಕಂಪೆನಿಗೆ ಮಾರಾಟ ಮಾಡಿದ್ದ ಉದಾಹರಣೆ ಇದೆ. ಮಲೆನಾಡಿನ ಜನರು, ನೈಜ ಪರಸರವಾದಿಗಳಿಂದ ಒಂದು ದಶಕದ ಕಾಲ ನಿರಂತರ ನಡೆದ ವಿರೋಚಿತ ಹೋರಾಟದಿಂದ ಕುದುರೆಮುಖ ಕಂಪೆನಿ ಬಂದ್ ಆಗಿದ್ದು ಈಗ ಇತಿಹಾಸ.

ಕೇವಲ ಕಸ್ತೂರಿ ರಂಗನ್, ಮಾಧವ್ ಗಾಡ್ಗೀಳ್ ಯೋಜನೆಗಳು ಮಾತ್ರವಲ್ಲದೆ, ಪಶ್ಚಿಮ ಘಟ್ಟದಲ್ಲಿ ಪರಿಸರದ ಹೆಸರಲ್ಲಿ ಬಂದಿರುವ, ಬರಲಿರುವ ಎಲ್ಲಾ ಯೋಜನೆಗಳ ಹಿಂದೆ ಪರಿಸರ ಉಳಿಸುವ ಹೆಸರಲ್ಲಿ ನೈಸರ್ಗಿಕ ಸಂಪತ್ತನ್ನು ದೋಚುವ ಬಹುರಾಷ್ಟ್ರೀಯ ಕಂಪೆನಿಗಳ ಹುನ್ನಾರ ಇರುವುದು ಹಲವು ಸಂಗತಿಗಳಿಂದ ನಮಗೆ ತಿಳಿಯುತ್ತಿದೆ. ಸರಕಾರಗಳು ಬಂಡವಾಳಿಗರ ಪರವಾಗಿ ಇರುವುದರಿಂದ ಸಹಜವಾಗಿ ವರದಿಗಳ ಜಾರಿಗೆ ವಿವಿಧ ರೀತಿಯಲ್ಲಿ ಪ್ರಯತ್ನಗಳನ್ನು ನಡೆಸುತ್ತಿವೆ.

ಮಾಧವ್ ಗಾಡ್ಗೀಳ್ ವರದಿಯಲ್ಲಿ ಕನಿಷ್ಠ ಜನಮುಖಿ ಅಂಶಗಳು ಇರುವುದನ್ನು ಕಂಡ ಆಳುವವರು ಇದನ್ನು ಮುಂದೆ ಜನರಿಂದ ಪರಿಸರ ಹೋರಾಟದಿಂದ ನಿಭಾಯಿಸಲು ಕಷ್ಟವಾಗುತ್ತದೆ ಎಂದರಿತು, ತಮಗೆ ಅನುಕೂಲವಾಗುವಂತಹ ಕಸ್ತೂರಿ ರಂಗನ್ ವರದಿ ಹೇಳಿ ತಯಾರಿಸಿದ್ದಾಗಿದ್ದು ಅದು ಸಂಪೂರ್ಣವಾಗಿ ಜನವಿರೋಧಿ ಪರಿಸರ ವಿರೋಧಿಯಾಗಿದೆ.

ಪರಿಸರವಾದಿಗಳಲ್ಲಿ ಮಾಧವ್ ಗಾಡ್ಗೀಳ್ ವರದಿ ಪರಿಸರ ಸಂರಕ್ಷಣೆಗೆ ಪೂರಕವಾಗಿದೆ ಎಂದು ಅದನ್ನು ಜಾರಿಗೊಳಿಸಲು ಕೆಲವರು ಒತ್ತಾಯಿಸುತ್ತಿದ್ದಾರೆ. ಇನ್ನು ಕೆಲವರು ಕಸ್ತೂರಿ ರಂಗನ್ ವರದಿಯನ್ನು ಅಭಿವೃದ್ಧಿ ಒಳಗೊಂಡ ಪರಿಸರ ಸಂರಕ್ಷಣೆ; ಅದನ್ನು ಅನುಷ್ಠಾನಗೊಳಿಸಿ ಎಂದು ಹೇಳುತ್ತಿದ್ದಾರೆ. ಈ ವಾದಗಳು ಪರಿಸರ ಸಂರಕ್ಷಣೆ ಹೆಸರಲ್ಲಿ ಜನರ ಹಿತರಕ್ಷಣೆಯನ್ನು ಬಲಿಕೊಡುವುದು ಬಿಟ್ಟರೆ ಬೇರನಲ್ಲ. ಜನರು ಈ ಎರಡೂ ವರದಿಗಳ ಅಸಲಿಯೆತ್ತನ್ನು ಅರ್ಥ ಮಾಡಿಕೊಳ್ಳದೆ ಹಗಲು ಕಂಡ ಬಾವಿಗೆ ರಾತ್ರಿ ಬೀಳುವುದರ ಕುರಿತು ಅಲೋಚಿಸಬೇಕಿದೆ.

ಪಶ್ಚಿಮ ಘಟ್ಟದ ವ್ಯಾಪ್ತಿಯ ಜನರು ಈ ಎರಡು ವರದಿ ಪ್ರಸ್ತಾಪ ಬಂದ ದಿನದಿಂದ ಹಿಡಿದು ನಿರಂತರವಾಗಿ ವಿರೋಧಿಸಿ ಹೋರಾಡುತ್ತಿದ್ದಾರೆ. ಅದರಲ್ಲಿ ಕರ್ನಾಟಕ ಮತ್ತು ಕೇರಳದ ಪಾಲು ಹೆಚ್ಚಿರುವುದು ಮತ್ತೊಂದು ವಿಶೇಷ.ಜನರ ತೀವ್ರ ವಿರೋಧ ಇರುವ ಕಾರಣಕ್ಕಾಗಿ ಘಟ್ಟ ವ್ಯಾಪ್ತಿಯ ರಾಜ್ಯಗಳು ಕೇಂದ್ರ ಸರಕಾರ ಹೊರಡಿಸಿದ ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆಗೆ ಸಮ್ಮತಿಸುತ್ತಿಲ್ಲ. ಇತ್ತೀಚೆಗೆ ಮೂರನೇ ಸಲ ಕಳುಹಿಸಿದ ಅಧಿಸೂಚನೆ ಕೂಡ ತಿರಸ್ಕರಿಸಲ್ಪಟ್ಟಿದ್ದು ಅದು ಜನರಿಗೆ ಸಂದ ತಾತ್ಕಲಿಕ ಜಯ ಎನ್ನಬಹುದು. ಅದರೆ ರಾಜ್ಯ ಸರಕಾರಗಳನ್ನು ಬೈಪಾಸ್ ಮಾಡಿ ಹಸಿರು ನ್ಯಾಯ ಮಂಡಳಿಯ ಮೂಲಕ ವರದಿ ಅನುಷ್ಠಾನಕ್ಕೆ ಕೇಂದ್ರ ಸರಕಾರ ತುದಿಗಾಲಲ್ಲಿರುವಂತೆ ಕಾಣುತ್ತಿದೆ. ಸರಕಾರಗಳು ಏನೇ ಮಾಡಲಿ, ವರದಿ ವಿರೋಧಿಸುವಲ್ಲಿ ಮತ್ತು ಅದನ್ನು ಜಾರಿಗೊಳಿಸುವಾಗ ತಡೆಯುವಲ್ಲಿ ಜನರೇ ನಿರ್ಣಾಯಕ ಪಾತ್ರ ವಹಿಸಬೇಕಾಗಿದೆ.

Writer - ದೇವು ಟಿ. ವಡ್ಡಿಗೆರೆ

contributor

Editor - ದೇವು ಟಿ. ವಡ್ಡಿಗೆರೆ

contributor

Similar News