ಉಮ್ಮಾ

Update: 2018-09-01 12:55 GMT

ಇಸ್ಲಾಮಿನ ಇತಿಹಾಸ ದಲ್ಲಿ ಪ್ರವಾದಿಯ ಪತ್ನಿಯರನ್ನೊಳಗೊಂಡಂತೆ ಅಷ್ಟಾಗಿ ಯಾರ ಗಮನಕ್ಕೂ ಬಾರದೇ ಹೋದ ಮಹಿಳೆಯರ ಪಾತ್ರಗಳನ್ನು ಚಿತ್ರಿಸುವುದು ಕಷ್ಟ ಸಾಧ್ಯವೆನ್ನುವುದರಲ್ಲಿ ಸಂದೇಹವಿಲ್ಲ. ಕಾರಣ ಪುರುಷರ ದುಃಖ ದುಮ್ಮಾನ ಗಳು, ಕಷ್ಟಕೋಟಲೆಗಳನ್ನು ಅಭಿವ್ಯಕ್ತ ಗೊಳಿಸುವುದು ತುಲನಾತ್ಮಕವಾಗಿ ಸುಲಭ. ಆದರೆ ಹೆಣ್ಣಿನ ತವಕ ತಲ್ಲಣಗಳೆಲ್ಲ ಅವಳೊಂದಿಗೇ ಗೋರಿ ಸೇರುತ್ತವೆ ಏಕೆ? ಹೆಣ್ಣಿನ ಸೌಂದರ್ಯ ಅಷ್ಟೇ ಅಲ್ಲ, ಅವಳ ದನಿ ಸಹ ಧಾರ್ಮಿಕವಾಗಿ ಗಂಡಸನ್ನು ದಾರಿ ತಪ್ಪಿಸಬಲ್ಲದು ಎನ್ನುವ ಬಲವಾದ ನಂಬಿಕೆ.

ಇತಿಹಾಸಕಾರ ಗತಕಾಲದ ಘಟನೆಗಳನ್ನು ಆರೋಗ್ಯಪೂರ್ಣ ದೃಷ್ಟಿಕೋನದಿಂದ ಸಮೀಕ್ಷೆ ಮಾಡಿ ದಾಖಲಿಸಿದರೆ ಮಾತ್ರ ನಮಗೆ ಒಂದು ಸಮುದಾಯದ ಬಗ್ಗೆ ಸರಿಯಾದ ಚಿತ್ರಣ ದೊರೆಯಬಹುದು. ಇಸ್ಲಾಂ ಇತಿಹಾಸಕ್ಕೆ ಸಂಬಂಧಿಸಿದಂತೆ ಈ ನಿಟ್ಟಿನಲ್ಲಿ ಕ್ರಿಯಾಶೀಲರಾಗಿ ಗಮನಾರ್ಹ ಸಾಧನೆ ಮಾಡಿದವರೆಂದರೆ ಅಸ್ಗರ್ ಅಲಿ ಇಂಜಿನಿಯರ್. ಇಸ್ಲಾಮೀ ಇತಿಹಾಸವನ್ನಾಧರಿಸಿದ ಸಾಹಿತ್ಯ ಕೃತಿಯ ರಚನೆಗೆ ತೊಡಗುವ ಸೃಜನಶೀಲ ಸಾಹಿತಿಗೆ ಧಾರ್ಮಿಕ ಕಟ್ಟಳೆಗಳು ಅಡೆತಡೆಗಳಾಗಿ ಪರಿಣಮಿಸುತ್ತವೆ. ಇಂದಿಗೂ ಪರಿಸ್ಥಿತಿ ಬದಲಾಗಿಲ್ಲ. ಹೀಗಿರುವಾಗ ಸಾಹಿತ್ಯ ಸೃಷ್ಟಿ ಸಾಹಿತಿಗೆ ಇಂದಿಗೂ ಒಂದು ಸವಾಲಾಗಿ ಪರಿಣಮಿಸಿಬಿಟ್ಟಿದೆ. ಬೊಳುವಾರು ಮುಹಮದ್ ಕುಂಞಿ ಅವರೊಬ್ಬರೇ ಕನ್ನಡದಲ್ಲಿ ಇಂತಹ ಸಾಹಸಕ್ಕಿಳಿದು ಯಶಸ್ವಿಯಾದ ಸಾಹಿತಿ ಎನ್ನಬಹುದು. ಇಸ್ಲಾಮಿನ ಇತಿಹಾಸದಲ್ಲಿ ಪ್ರವಾದಿಯ ಪತ್ನಿಯರನ್ನೊಳ ಗೊಂಡಂತೆ ಅಷ್ಟಾಗಿ ಯಾರ ಗಮನಕ್ಕೂ ಬಾರದೇ ಹೋದ ಮಹಿಳೆಯರ ಪಾತ್ರಗಳನ್ನು ಚಿತ್ರಿಸುವುದು ಕಷ್ಟ ಸಾಧ್ಯವೆನ್ನುವುದರಲ್ಲಿ ಸಂದೇಹವಿಲ್ಲ. ಕಾರಣ ಪುರುಷರ ದುಃಖ ದುಮ್ಮಾನಗಳು, ಕಷ್ಟಕೋಟಲೆಗಳನ್ನು ಅಭಿವ್ಯಕ್ತಗೊಳಿಸುವುದು ತುಲನಾತ್ಮಕವಾಗಿ ಸುಲಭ. ಆದರೆ ಹೆಣ್ಣಿನ ತವಕ ತಲ್ಲಣಗಳೆಲ್ಲ ಅವಳೊಂದಿಗೇ ಗೋರಿ ಸೇರುತ್ತವೆ. ಏಕೆ? ಹೆಣ್ಣಿನ ಸೌಂದರ್ಯ ಅಷ್ಟೇ ಅಲ್ಲ, ಅವಳ ದನಿ ಸಹ ಧಾರ್ಮಿಕವಾಗಿ ಗಂಡಸನ್ನು ದಾರಿ ತಪ್ಪಿಸಬಲ್ಲದು ಎನ್ನುವ ಬಲವಾದ ನಂಬಿಕೆ. ಹೆಣ್ಣು ಅದೆಷ್ಟು ಮೆಲು ದನಿಯಲ್ಲಿ ಮಾತನಾಡಬೇಕೆಂದರೆ ಆ ದನಿ ಗಂಡಸರ ಕಿವಿ ಮೇಲೆ ಬೀಳ ಕೂಡದು. ಇದು ಹೆಣ್ಣು ಪಾಲಿಸಬೇಕಾದ ಕಟ್ಟಳೆ. ಬೊಳುವಾರು ಅವರ ಕಾದಂಬರಿ ‘ಉಮ್ಮಾ’ದ ಹೆಣ್ಣು ಪಾತ್ರಗಳಲ್ಲಿ ಹಿಂದ್ ಎನ್ನುವ ಮಹಿಳೆಯ ಪಾತ್ರ ನನ್ನ ಗಮನ ಸೆಳೆಯಿತು. ಅಬು ಸುಫಿಯಾನನ ಮಡದಿ ಹಿಂದ್ ಛಲದಲ್ಲಿ ದ್ರೌಪದಿಗೆ ಸರಿಸಮವಾಗಬಲ್ಲಳು. ಆದರೆ, ಕ್ರೌರ್ಯದಲ್ಲಿ ಅವಳ ತುಲನೆಗೆ ಯಾವುದೇ ಐತಿಹಾಸಿಕ ಹಿಂದೂ ಸ್ತ್ರೀ ಪಾತ್ರ ನನ್ನ ಗಮನಕ್ಕೆ ಬಂದಿಲ್ಲ. ಪುರುಷ ಪ್ರಧಾನ ಸಮಾಜದಲ್ಲಿ ಕ್ರೌರ್ಯವು ಪುರುಷನಿಗಷ್ಟೇ ಸುಲಭ ಸಾಧ್ಯವೇನೋ. ಈ ಮಾತನ್ನು ‘ಉಮ್ಮಾ’ದ ಹಿಂದ್ ಪಾತ್ರ ಹುಸಿ ಮಾಡಿದೆಯೆನ್ನಬಹುದು. ಅಷ್ಟರ ಮಟ್ಟಿಗೆ ಪ್ರವಾದಿ ಪತ್ನಿಯರ ಘನವಂತಿಕೆ ಜೊತೆಗೆ ಹಿಂದ್‌ಳ ಕ್ರೌರ್ಯವೂ ವಾಸ್ತವವೆನಿಸುತ್ತದೆ. ಕತೆಗಾರ ಬೊಳುವಾರರು ಇತಿಹಾಸದ ಪಾತ್ರಗಳನ್ನಷ್ಟೇ ಅಲ್ಲ ಕಾಲ್ಪನಿಕ ಪಾತ್ರಗಳನ್ನು ನಂಬುವಂತೆ ಸೃಷ್ಟಿಸುವುದರಲ್ಲಿ ಸಿದ್ಧ ಹಸ್ತರೆನ್ನುವುದು ಸಾಬೀತಾಗುತ್ತದೆ.

‘ಉಮ್ಮಾ’ ಕಾದಂಬರಿಯಲ್ಲಿ ಅಫೀರಾ ಒಂದು ಅಮುಖ್ಯ ಪಾತ್ರ. ಇಸ್ಲಾಂ ಇತಿಹಾಸದಲ್ಲಿ ಅಫೀರಾಳ ಪ್ರಸ್ತಾಪವಿರದಿದ್ದರೂ ಇಂಥದೊಂದು ಪಾತ್ರವನ್ನು ಕಾದಂಬರಿಕಾರರು ಸೃಷ್ಟಿಸಿದ್ದಾರೆ. ಕತೆಯ ಬಂಧಕ್ಕೆ ಇದೇ ಅಫೀರಾ ಸೂತ್ರಧಾರಳೆೆನಿಸುತ್ತಾಳೆ. ಇಸ್ಲಾಂ ಪೂರ್ವದ ಅರೇಬಿಯನ್ ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಜೀವಂತ ಹುಗಿದು ಬಿಡುವ ಅಮಾನವೀಯ ಸಂಪ್ರದಾಯವಿತ್ತು. ಅದು ಯಾವಾಗ ಆರಂಭವಾಯಿತೆ ನ್ನುವುದು ತಿಳಿಯದು. ಆ ಸಂಪ್ರದಾಯ ಯಾವ ಮಗುವುಮೊದಲ ಬಲಿಯಾಯಿತು ಎನ್ನುವುದೂ ನಿಖರವಾಗಿ ತಿಳಿಯದು. ಆದರೆ ಮುವತ್ತಿಲ್ ತನ್ನ ಹೆಣ್ಣು ಮಗು ಅಫೀರಾ ಳನ್ನು ಜೀವಂತ ದಫನ್ ಮಾಡುವುದರೊಂದಿಗೆ ಆ ಸಂಪ್ರದಾಯ ಆರಂಭ ಗೊಂಡಿದ್ದು ಎನ್ನುವಂತೆ ಕಾದಂಬರಿಕಾರರು ಕತೆ ಹೆಣೆದಿದ್ದಾರೆ. ಇಲ್ಲಿ ಅವರು ಸಾಕಷ್ಟು ಯಶಸ್ವಿಯಾಗಿದ್ದಾರೆ ಎನಿಸುತ್ತದೆ. ಈ ಮಗುವು ಪ್ರವಾದಿ ಪತ್ನಿಯರಷ್ಟೇ ಪ್ರಾಮುಖ್ಯತೆ ಪಡೆಯದಿದ್ದರೂ ಒಂದು ದೃಷ್ಟಿಯಲ್ಲಿ ಇದೊಂದು ಅತ್ಯಂತ ಪ್ರಮುಖ ಪಾತ್ರವೇ ಆಗಿ ಪರಿಣಮಿಸಿದೆ. ಕಾದಂಬರಿಕಾರ ಇತಿಹಾಸದ ಘಟನೆಗಿಂತಲೂ ರೋಚಕವಾದ ಘಟನಾವಳಿಗಳನ್ನು ಸೃಜಿಸುತ್ತಾನೆ. ಇತಿಹಾಸದ ಭಾಗ ಯಾವುದು? ಕಾದಂಬರಿಕಾರನ ಕಲ್ಪನಾಜನ್ಯ ಅಧ್ಯಾಯ ಯಾವುದು? ಎನ್ನುವಂತಹ ವಿಷಯಗಳನ್ನೊಳಗೊಂಡಂತೆ ಕಾದಂಬರಿಯನ್ನು ಸಮಗ್ರವಾಗಿ ಅರ್ಥೈಸಿಕೊಳ್ಳಲು ಅಂತರ್ಶಿಸ್ತೀಯ ಅಧ್ಯಯನಕ್ಕೆ ಒತ್ತು ಕೊಡುವ ವಿಮರ್ಶೆ ಸಹಾಯಕವಾಗಬಲ್ಲದು. ಜೊತೆಗೆ ಓದುಗರಿಗೂ ಅರೇಬಿಯಾದ ಇತಿಹಾಸ, ಭೂಗೋಳ, ಸಮಾಜಶಾಸ್ತ್ರ, ಅರ್ಥಶಾಸ್ತ್ರಗಳ ಅಧ್ಯಯನಕ್ಕೂ ತೊಡಗಲು ಕುಮ್ಮಕ್ಕು ನೀಡಬಲ್ಲದು. ಸೃಜನಶೀಲ ಸಾಹಿತಿ ಇತಿಹಾಸವನ್ನಾಧರಿಸಿ ತನ್ನ ಕೃತಿ ರಚಿಸುತ್ತಾನಾದರೂ ಅವನು ಕೇವಲ ಇತಿಹಾಸದ ಮುಖ್ಯ ಪಾತ್ರಗಳನ್ನಷ್ಟೇ ಸೃಷ್ಟಿಸದೇ ಓದುಗರ ಮನಸ್ಸಿನಲ್ಲಿ ನೆಲೆ ನಿಲ್ಲಬಲ್ಲ ಕಾಲ್ಪನಿಕ ಪಾತ್ರಗಳನ್ನೂ ಕಡೆಯಬಲ್ಲನು. ಅಫೀರಾಳ ತಾಯಿ ಅಕಿಯಾ ಇಸ್ಲಾಂ ಪೂರ್ವದ ಹೆಣ್ಣಿನ ಪ್ರತೀಕವಾಗಿದ್ದಾಳೆ. ಅಕಿಯಾ ಒಂಟಿಯಾಗಿ ಮರಳುಗಾಡಿನ ಬಯಲಲ್ಲಿ ಮೇಕೆಗಳನ್ನು ಮೇಯಿಸುವ ಕೆಲಸ ಮಾಡುವ ಸಾಹಸಕ್ಕೆ ಇಳಿದದ್ದು ಈಗ ನಂಬುವುದು ಕಷ್ಟವೆನ್ನಿಸಬಹುದು. ಆದರೆ, ಇಸ್ಲಾಂ ಇತಿಹಾಸ ಬಲ್ಲವರಿಗೆ, ನಿಜಕ್ಕೂ ಆಗ ಹೆಣ್ಣಿಗೆ ಇಂತಹ ಸ್ವಾತಂತ್ರವಿತ್ತು ಎನ್ನುವುದು ಗೊತ್ತಿರುವ ಸಂಗತಿ. ಇಂತಹ ಧೈರ್ಯವಂತ ಹೆಣ್ಣುಮಕ್ಕಳ ಸ್ವಾತಂತ್ರ ಹರಣ ಹೇಗಾಯಿತೆನ್ನುವುದನ್ನು ಅರಿತುಕೊಳ್ಳಲೇ ಬೇಕೆಂದು ಓದುಗರಿಗೆ ಅನ್ನಿಸದೇ ಇರದು. ಅದಕ್ಕಾಗಿ ಇಸ್ಲಾಮಿನ ನೈಜ ಇತಿಹಾಸದ ಓದು ಅನಿವಾರ್ಯವಾಗುತ್ತದೆ. ಮುಸಲ್ಮಾನರು ಇತಿಹಾಸ ಪ್ರಜ್ಞೆಯುಳ್ಳವರೆಂದು ಭಾವಿಸಲಾಗುತ್ತದೆ.

ಅರೇಬಿಯಾದಂತಹ ವಣಿಕ ಸಮಾಜದಲ್ಲಿ ಇಸ್ಲಾಂ ಸೃಜನಶೀಲತೆ ಯನ್ನು ಮಾತ್ರ ಬೆಳೆಸಲಿಲ್ಲ. ಅದು ತರ್ಕಬದ್ಧತೆಯನ್ನು ಪ್ರೋತ್ಸಾಹಿಸಿತು. ಕೃಷಿ ಪ್ರಧಾನ ಸಮಾಜದಲ್ಲಿ ಮಾತ್ರ ಸೃಜನಶೀಲತೆ ಸಹಜವೆನ್ನುವಂತೆ ಅರಳುತ್ತದೆ. ಅಷ್ಟೇ ಅಲ್ಲ, ಅರೇಬಿಯಾದ ವಣಿಕ ಸಮಾಜದಲ್ಲಿ ಲಲಿತ ಕಲೆಗಳು ಅರೇಬಿಯಾದಲ್ಲಿ ಅಷ್ಟಾಗಿ ಬೆಳೆಯುವುದು ಸಾಧ್ಯವಾಗಲಿಲ್ಲ, ಅಷ್ಟೇ ಅಲ್ಲ ಮಹಾಕಾವ್ಯಗಳೂ ಬರಲಿಲ್ಲ. ‘ಅಲಿಫ್ ಲೈಲಾ’ದಂತಹ ‘ಅರೇಬಿಯಾದ ಸಾವಿರ ಕತೆಗಳು’, ಲೈಲಾ ಮಜ್ನೂ, ಶೀರೀನ್- ಫರ್ಹಾದ್ ಮೊದಲಾದ ಅಮರ ಪ್ರೇಮಿಗಳ ಕತೆಗಳು ಹುಟ್ಟಿದ್ದು ಇಸ್ಲಾಂ ಪರ್ಶಿಯಾದಂತಹ ಕೃಷಿ ಪ್ರಧಾನ ಸಮಾಜಗಳನ್ನು ಪ್ರವೇಶಿದ ನಂತರವೇ. ಅನಂತರ ಇಸ್ಲಾಂ ಕಾವ್ಯವನ್ನು ನಿಷೇಧಿಸುತ್ತದೆ ಎನ್ನುವ ನಂಬಿಕೆಯೊಂದಿಗೆ ಸೃಜನಶೀಲತೆಯನ್ನು ಹೊಸಕಿ ಹಾಕುವಂತಹ ಕಾನೂನುಗಳು ರೂಪುಗೊಂಡವು. ಅದೇ ನೈಜ ಇಸ್ಲಾಂ ಎನ್ನುವಂತೆ ಜಗತ್ತಿನ ಇತರೆಡೆ ಸಹ ಸೃಜನಶೀಲ ಮನಸ್ಸುಗಳು ಮುರುಟಿ ಹೋಗಲಾರಂಭಿಸಿದವು.

ಅಷ್ಟಕ್ಕೂ ಈ ಅಮರ ಪ್ರೇಮಿಗಳ ಕತೆಗಳೇ ಸೂಫೀ ಇಸ್ಲಾಮಿನ ಹುಟ್ಟಿಗೆ ನಾಂದಿ ಹಾಡಿದವು. ‘ಅನಲ್ ಹಕ್’ (ಅಹಂ ಬ್ರಹ್ಮಾಸ್ಮಿ) ಎಂದು ಸಾರಿದ ಮನ್ಸೂರ್ ಅಲ್ ಹಲ್ಲಾಜ್ ಎನ್ನುವನನ್ನು ಗಲ್ಲಿಗೇರಿಸಲಾಯಿತು. ಅದೇ ಮನ್ಸೂರ್ ಸೂಫಿ ಪಂಥದ ಹರಿಕಾರನಾದ. ಜೊತೆಗೆ ಸೂಫಿ ಇಸ್ಲಾಂ ನಿಜವಾದ ಇಸ್ಲಾಂ, ಮನುಷ್ಯ ಮನುಷ್ಯರನ್ನು ಒಂದುಗೂಡಿಸಬಲ್ಲ ಇಸ್ಲಾಂ ಎನ್ನುವುದನ್ನು ಜಗತ್ತಿಗೆ ಸಾರಿ ಹೇಳಿದ. ಕೊನೆಗೆ ಉರ್ದುವಿನ ಮಹಾಕವಿ ಇಕ್ಬಾಲ್ ಸಹ,

‘ಏಕ್ ಹೀ ಸಫ್ ಮೇಂ ಖಡೆ ಹೋಗಯೆ ಮೆಹಮೂದ್-ಒ-ಅಯಾಝ್

ನ ಕೋಯಿ ಬಂದಾ ರಹಾ ಔರ್ ನ ಕೋಯಿ ಬಂದಾನವಾಝ್’

(ಒಂದೇ ಸಾಲಿನಲಿ ನಿಂತರು ಮೆಹಮೂದ್ ಮತ್ತು ಅಯಾಝ್

ದಾಸ ಎನ್ನುವವನೂ ಇಲ್ಲ ದಾಸನನ್ನು ಪೊರೆವ ಅರಸನೂ ಇಲ್ಲ’)

ಅಲ್ಲಾಹನೆದುರು ಎಲ್ಲರೂ ಸಮಾನರು ಎನ್ನುವುದರ ಮೂಲಕ ಸೂಫಿ ಇಸ್ಲಾಮನ್ನು ಎತ್ತಿ ಹಿಡಿದರು. ಅದೇ ಇಕ್ಬಾಲ್ ‘ತಂಗ್ ಹೈ ಸಹರಾ ತೇರಾ ಮಹಮಿಲ್ ಹೈ ಬೇಲೈಲಾ ತೇರಾ’ ಎಂದು ಇಂದಿನ ಮುಸಲ್ಮಾನರ ಮನೋಧರ್ಮದ ಬಗ್ಗೆ ವಿಷಾದಿಸುತ್ತಾರೆ. ನಿನ್ನ ಸಹರಾ ತುಂಬ ಕಿರಿದಾಗಿದ್ದು ಲೈಲಾ ಪ್ರಯಾಣಿಸಬೇಕಾದ ಪಲ್ಲಕ್ಕಿ (ಮೆಹಮಿಲ್)ಯಲ್ಲಿ ಲೈಲಾಳೇ ಇಲ್ಲವೆನ್ನುತ್ತಾರೆ. ಅದೇನೇ ಇರಲಿ ಕೊನೆಗೂ ಸಾಹಿತ್ಯ ಮನುಷ್ಯನನ್ನು ಮನುಷ್ಯನನ್ನಾಗಿ ಮಾಡಬಲ್ಲದು ಎನ್ನುವುದು ಮತ್ತೊಮ್ಮೆ ಸಾಬೀತಾಯಿತು. ನಮ್ಮ ಬೊಳುವಾರು ಇಸ್ಲಾಂ ಪ್ರವಾದಿ ಕುರಿತ ಇತಿಹಾಸವನ್ನಾಧರಿಸಿದ ಮೊತ್ತ ಮೊದಲ ಕಾದಂಬರಿ ಬರೆದು ಈಗಾಗಲೇ ಎಲ್ಲರಿಂದ ಸೈ ಎನಿಸಿಕೊಂಡಿದ್ದಾರೆ. ಇದೀಗ ‘ಉಮ್ಮಾ’ ಕಾದಂಬರಿಯು ಬೊಳುವಾರರ ಸಾಹಸ ಪ್ರವೃತ್ತಿ ಮತ್ತೆ ಗರಿಗೆದರಿರುವುದಕ್ಕೆ ಬಲವಾದ ಸಾಕ್ಷ್ಯವೆನಿಸುತ್ತದೆ. ಈಗಾಗಲೇ ಎರಡು ಬಾರಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದಿರುವ ನಮ್ಮ ಈ ಹೆಮ್ಮೆಯ ಸಾಹಿತಿ ಒಂದು ದಾಖಲೆ ನಿರ್ಮಿಸಿದ್ದಾರೆ. ಇವರಿಗೆ ಮೂರನೇ ಸಲ ಈ ಪ್ರಶಸ್ತಿ ಸಿಕ್ಕರೂ ಸಿಗಬಹುದು. ಇಲ್ಲವಾದರೆ ಇನ್ನೂ ದೊಡ್ಡ ದೊಡ್ಡ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬರಬಹುದು. ಯಾವ ಪ್ರಶಸ್ತಿ ಬರದಿದ್ದರೂ ಓದುಗರ ಮನದಲ್ಲಿ ಶಾಶ್ವತವಾಗಿ ನೆಲೆ ನಿಲ್ಲಬಲ್ಲರು.

ಬೊಳುವಾರು ಜೊತೆಗೆ ಕೆಲವು ಪ್ರಶ್ನೆಗಳು-ಉತ್ತರಗಳು

►ನಿಮ್ಮ ಕಾದಂಬರಿಗೆ ‘ಉಮ್ಮಾ’ ಎನ್ನುವ ಹೆಸರು ಇಡಲು ಕಾರಣವೇನು ?

  -ತಾಯಿಯನ್ನು ನಾನು ಸಂಬೋಧಿಸುತ್ತಿದ್ದದ್ದು ‘ಉಮ್ಮ’ ಎಂದು. ರಸ್ತೆಯಲ್ಲಿ ಕಲ್ಲು ಎಡವಿದಾಗ ಬಾಯಿಂದ ಹೊರಡುತ್ತಿದ್ದ ಉದ್ಗಾರ ‘ಉಮ್ಮಾ’ ಎಂದು. ಅರೇಬಿಯಾದ ಮಗುವೊಂದು ಎಡವಿದಾಗ ಹೊರಹೊಮ್ಮುವ ಉದ್ಗಾರ ‘ಉಮ್ಮೀ’ ಎಂದು. ಆದರೆ, ಪ್ರಸಕ್ತ ಕಾದಂಬರಿಯಲ್ಲಿ ಬಳಸಲಾಗಿರುವ ‘ಉಮ್ಮಾ’ ಎಂಬ ಹೆಸರಿಗೂ ಈ ಮೊದಲು ಹೇಳಿದ, ‘ಉಮ್ಮ’, ‘ಉಮ್ಮಾ’ ಹಾಗೂ ‘ಉಮ್ಮೀ’ ಎಂಬ ಮೂರು ಪದಗಳಿಗೂ ಅರ್ಥವ್ಯತ್ಯಾಸಗಳುಂಟು. ಇಸ್ಲಾಮ್ ಸಂಸ್ಕೃತಿಯಲ್ಲಿ ಅಂತ್ಯಪ್ರವಾದಿ ಮುಹಮ್ಮದರ ಪತ್ನಿಯರಿಗೆ ಮಾತ್ರ ಈ ‘ಉಮ್ಮಾ’ ಎಂಬ ಪದವನ್ನು, ‘ವಿಶ್ವಾಸಿಗಳ ಅಮ್ಮ’ ಎಂಬ ಅರ್ಥದಲ್ಲಿ ಬಳಸಲಾಗಿದೆ. ನಾನು ಬರೆಯಬಯಸಿದ್ದು ಮತ್ತು ಬರೆದದ್ದು ಪ್ರವಾದಿಪತ್ನಿಯರ ಜೀವನಪ್ರೇರಿತ ಕತೆಗಳಾಗಿರುವುದರಿಂದ,‘ಉಮ್ಮಾ’ (ಉಮ್ಮುಲ್ ಮೂಮಿನೀನ್) ಎಂಬ ಗೌರವಸೂಚಕ ಪದವೇ ಸೂಕ್ತ ಅನ್ನಿಸಿತ್ತು. ಹಾಗೆಂದು ಈ ಕಾದಂಬರಿಯು ಒಬ್ಬರು ‘ಉಮ್ಮಾ’ನ ಕತೆಯೂ ಅಲ್ಲ. ನಮ್ಮೆಲ್ಲರ ಅಜ್ಜ ಮುತ್ತಜ್ಜರ ಕಾಲದ ಎಲ್ಲ ಉಮ್ಮಂದಿರ ಕತೆಗಳೂ ಹೌದು. ಮೂರು ವರ್ಷಗಳ ಹಿಂದೆ ನಾನು ಬರೆದಿದ್ದ ‘ಓದಿರಿ’ ಕಾದಂಬರಿಯಲ್ಲಿ ನಾಲ್ಕಾರು ಹೆಣ್ಣು ಪಾತ್ರಗಳೂ ಇದ್ದವು ಎಂಬುದಕ್ಕೆ ಉದಾಹರಣೆಗಳಿದ್ದರೂ, ಆ ಬರಹದ ಬಹುಭಾಗವನ್ನು ಆವರಿಸಿಕೊಂಡಿದ್ದವರು ಪುರುಷರು. ಯೋಚನೆ, ಮಾತು, ಕೃತ್ಯ ಎಲ್ಲದರಲ್ಲೂ ಅವರೇ ಪ್ರಧಾನ. ಹಾಗಾದರೆ, ಆ ಕಾಲದಲ್ಲಿ ಉಸಿರಾಡುತ್ತಿದ್ದ ಮಹಿಳೆಯರು ಸ್ವಂತವಾಗಿ ಯೋಚನೆಯನ್ನೇ ಮಾಡಿದ್ದಿರಲಿಲ್ಲವೇ? ತಮಗೆ ಅನ್ನಿಸಿದನ್ನು ಗಟ್ಟಿಯಾಗಿ ಹೇಳಿದ್ದೇ ಇಲ್ಲವೇ? ಕನಿಷ್ಠ ಸ್ವಗತಗಳಲ್ಲಾದರೂ? ಈ ಹುಡುಕಾಟವೇ ಈ ‘ಉಮ್ಮಾ’ ಕಾದಂಬರಿಯ ವಸ್ತು.

►ಚಾರಿತ್ರಿಕ ವ್ಯಕ್ತಿಗಳನ್ನು ಬಳಸಿ ಕಾದಂಬರಿ ಬರೆಯುವ ಸಂದರ್ಭದಲ್ಲಿ, ಅದು ಲೇಖಕನ ನಿಲುವಿಗೆ ತಕ್ಕಂತೆ ತಿರುಚಲ್ಪಡುವ ಅಪಾಯವಿಲ್ಲವೇ?

-ಇದೆ. ಇರಬೇಕು. ಆದರೆ, ಆಪಾಯವೆನ್ನುವುದು ತಿರುಚುವ ದಿಕ್ಕನ್ನು ಅವಲಂಬಿಸಿರುತ್ತದೆ. ‘ಸರಿ ಇರುವುದನ್ನು’ ತಪ್ಪು ದಿಕ್ಕಿಗೆ ತಿರುಚುವುದು ‘ಸರಿಯಲ್ಲ’. ಆದರೆ, ‘ಸರಿ ಇಲ್ಲದ್ದನ್ನು’ ಸರಿಯಾದ ದಿಕ್ಕಿಗೆ ತಿರುಚುವುದು ‘ಸರಿ’ ಎಂದು ಭಾವಿಸಿದರೆ ಯಾವುದೇ ಅಪಾಯವಿರುವುದಿಲ್ಲ.

‘ಉಮ್ಮಾ’ ಕೃತಿಯ ಆರಂಭದಲ್ಲೇ, ‘ಚರಿತ್ರೆಯೆಂದರೆ, ಚಲಿಸುವ ರೈಲಿನ ಕಿಟಿಕಿಯಿಂದ ತಾತ ಕಂಡ ದೃಶ್ಯವನ್ನು ಮೊಮ್ಮಗನೊಬ್ಬ ಸಂದರ್ಭ ಸಹಿತ ವಿವರಿಸುವುದು’ ಎಂದು ಬರೆದಿರುವೆ. ಈ ಮಾತನ್ನು ನಾವು ಇಂದು ಓದುತ್ತಿರುವ ಎಲ್ಲ ಚರಿತ್ರೆಗಳಿಗೂ ಅನ್ವಯಿಸಬಹುದು. ಕಿಟಿಕಿಯಿಂದ ತಾತ ಕಂಡಿದ್ದ ‘ಗಂಡ-ಹೆಂಡತಿ’ ಜಗಳವೊಂದನ್ನು ಕೇಳಿಸಿಕೊಂಡ ಮೊಮ್ಮಗನೊಬ್ಬ, ಆ ಜಗಳಕ್ಕೆ ಕಾರಣವೇನು, ಮೊದಲು ಜಗಳ ಆರಂಭಿಸಿದ್ದು ಯಾರು, ನಿಜವಾದ ತಪ್ಪು ಯಾರದು ಎಂಬುದನ್ನೆಲ್ಲ ಸಂದರ್ಭ ಸಹಿತ ಬರೆದುಬಿಟ್ಟರೆ, ಕಾಲಾನಂತರದಲ್ಲಿ ಅದೇ ಚರಿತ್ರೆಯೆನ್ನಿಸಲೂಬಹುದು. ಈ ಮಾತನ್ನು ಬಾಲಿಶವೆಂದು ಭಾವಿಸುವವರು, ಮೊನ್ನೆ ಮೊನ್ನೆ ತೀರಿಹೋಗಿರುವ ಸುಭಾಷ್’ಚಂದ್ರ ಬೋಸರು ತೀರಿಹೋದದ್ದು ಎಲ್ಲಿ, ಯಾಕೆ ಮತ್ತು ಹೇಗೆ ಎಂಬುದು ಇನ್ನೂ ಚರ್ಚೆಯಲ್ಲಿರುವುದನ್ನು ನೆನಪಿಸಿಕೊಂಡರೆ ಸಾಕು. ಏಳೆಂಟು ದಶಕಗಳ ಹಿಂದಿನ ಘಟನೆಗಳನ್ನೇ ತೀರ್ಮಾನಿಸಲಾಗದ ನಾವು, ಸಾವಿರ-ನಾಲ್ಕು ಸಾವಿರ ವರ್ಷಗಳ ಹಿಂದಿನ ಘಟನೆಗಳನ್ನು, ‘ಅದು ನಡೆದದ್ದು ಹೀಗೆಯೆ’ ಎಂದು ಸಾಧಿಸುತ್ತಿರುವುದು ಎಷ್ಟು ಸರಿ? ನಾವು ಓದುತ್ತಿರುವ ಚರಿತ್ರೆಗಳೆಲ್ಲವೂ ಪ್ರಭಾವಶಾಲಿ ನಾಯಕರುಗಳ ಸ್ತುತಿಮಂತ್ರಗಳಲ್ಲವೇ?

►ನೀವು ಆರಿಸಿದ ಕಥಾ ವಸ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಪಾಯವಿಲ್ಲವೇ?

  -ಇಲ್ಲ: ನಿಮ್ಮ ಪ್ರಶ್ನೆ 2.ರ ಉತ್ತರದಲ್ಲಿ ಈ ಪ್ರಶ್ನೆಯ ಉತ್ತರವೂ ಅಡಕವಾಗಿದೆ.

►ಇತಿಹಾಸವನ್ನು ಪುರಾಣವನ್ನಾಗಿ, ಪುರಾಣವನ್ನು ಇತಿಹಾಸವಾಗಿ ನೋಡುತ್ತಾ ವರ್ತಮಾನವನ್ನು ಗೋಜಲೆಬ್ಬಿಸುತ್ತಿರುವ ದಿನಗಳು ಇವು. ಒಂದು ಕಾಲದಲ್ಲಿ ಪ್ರಗತಿಶೀಲ ಕಾದಂಬರಿಕಾರರು ಕಟ್ಟಿಕೊಟ್ಟ ಇತಿಹಾಸವನ್ನೇ ನಿಜವೆಂದು ನಂಬಿಸುವ ಪ್ರಯತ್ನ ಇಂದು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಉಮ್ಮ ಕಾದಂಬರಿ ಇತಿಹಾಸದ ಕುರಿತು ಗೊಂದಲ ಹುಟ್ಟಿಸುವ ಸಾಧ್ಯತೆ ಇಲ್ಲವೇ?

-ಈ ಮೊದಲೇ ಹೇಳಿದಂತೆ, ‘ಕ್ರಿ.ಪೂ.,ಕ್ರಿ.ಶ.’, ಎಂದೆಲ್ಲ ನಮೂದಿಸಿ ಮೊಮ್ಮಗನೊಬ್ಬ ಸಂದರ್ಭ ಸಹಿತ ವಿವರಿಸಿದ ಬರಹಗಳನ್ನೇ ಅನುಮಾನದಿಂದ ನೋಡಬೇಕಾಗಿರುವಾಗ, ‘ಕ್ರಿಪೂ ಕ್ರಿಶ’ಗಳಿಲ್ಲದ ಪುರಾಣಕತೆಗಳಲ್ಲಿ ಮರಿಮಕ್ಕಳು ಹಸ್ತಕ್ಷೇಪ ಮಾಡುವುದು ಮಹಾಪರಾಧವೇನೂ ಅಲ್ಲ. ನೀವು ‘ಪ್ರಗತಿಶೀಲ’ ಎಂದು ಸರ್ಟಿಫೈ ಮಾಡಿದ ಕಾದಂಬರಿಕಾರರು ಸದರಿ ಹಸ್ತಕ್ಷೇಪಿಗಳಿಗೆ ಪ್ರಗತಿ ವಿರೋಧಿಗಳೆಂದೇಕೆ ಕಾಣಿಸಬಾರದು? ನಾವು ಓದುವುದು, ನಾವು ಆಲಿಸುವುದು ನಮ್ಮ ಮಾತುಗಳನ್ನು ಮಾತ್ರವಲ್ಲವೇ? ನಮಗಿಷ್ಟವಾದುದನ್ನಷ್ಟೇ ನಾವು ‘ಸತ್ಯ’ ಎಂದು ನಂಬುತ್ತೇವೆ. ಇಷ್ಟವಾಗದ್ದನ್ನೆಲ್ಲ ‘ಅಪ್ಪಟ ಸುಳ್ಳು’ ಎಂದು ತಿರಸ್ಕರಿಸುತ್ತೇವೆ. ಈ ಎರಡೂ ವಿರುದ್ಧ ನಂಬಿಕೆಗಳನ್ನು ನಂಬಲು ಪ್ರತಿಯೊಬ್ಬರೂ ಸ್ವತಂತ್ರರು. ಆದರೆ, ನನ್ನ ತಕರಾರು ಇರುವುದು, ತನ್ನ ನಂಬಿಕೆಯನ್ನು ವಿರುದ್ಧ ನಂಬಿಕೆಯವರ ಮೇಲೆ ಹೇರುವ ಬಗ್ಗೆ ಮಾತ್ರ. ಮೂರು ವರ್ಷಗಳ ಹಿಂದೆ ಪ್ರಕಟವಾಗಿದ್ದ, ಪ್ರವಾದಿ ಮುಹಮ್ಮದ್‌ರ ಜೀವನಾಧಾರಿತ ಐತಿಹಾಸಿಕ ಕಾದಂಬರಿ ‘ಓದಿರಿ’ಯಲ್ಲೂ ನಾನು ಯಾವುದೇ ಐತಿಹಾಸಿಕ ಗೊಂದಲ ಮಾಡಿರಲಿಲ್ಲ ಎಂಬುದಕ್ಕೆ, ಆ ಕೃತಿ ನಾಲ್ಕು ಮರುಮುದ್ರಣಗಳಾಗಿರುವುದೇ ಸಾಕ್ಷಿ. ಈ ‘ಉಮ್ಮಾ’ ಐತಿಹಾಸಿಕ ಕಾದಂಬರಿಯೇ ಅಲ್ಲ. ಹಾಗಾಗಿ ಗೊಂದಲದ ಪ್ರಶ್ನೆಯೇ ಹುಟ್ಟುವುದಿಲ್ಲ. ಅದಕ್ಕೂ ಹೆಚ್ಚಾಗಿ ‘ಉಮ್ಮಾ’ ಬಲು ಸಹನಶೀಲೆ ಮತ್ತು ಹೆಚ್ಚು ಕರುಣಾಮಯಿ. ‘ಉಮ್ಮಾ’ ಓದಿದವರೂ ಸಹನಾಶೀಲರಾಗುತ್ತಾರೆ.

 ►ಈ ಕಾದಂಬರಿ ಬರೆದು ಮುಗಿಸಿದಾಗ ನಿಮ್ಮಲ್ಲಾದ ಬದಲಾವಣೆ ಏನು?

-ಸುಮಾರು ಮೂರು ವರ್ಷಗಳಿಗೂ ಹೆಚ್ಚು ಕಾಲ ಕೂತಲ್ಲೇ ಕುಳಿತು ಕಂಪ್ಯೂಟರ್ ಕುಟ್ಟಿದ್ದರಿಂದ ಎರಡೂ ಕಾಲುಗಳು ಬಾತುಕೊಂಡು, ಬೆಂಕಿಬಿದ್ದಂತೆ ಉರಿಯತೊಡಗಿದ್ದೇ ನನ್ನಲ್ಲಾಗಿರುವ ಬದಲಾವಣೆ ಎಂಬುದು ನಿಜವಾದರೂ, ಉತ್ತರ ತಮಾಷೆಯಾಗಿ ಕಾಣಿಸಬಹುದು. ಆದ್ದರಿಂದ, ಅರುವತ್ನಾಲ್ಕರ ಅನುಭವವನ್ನು ಅರುವತ್ತೇಳಕ್ಕೆ ಏರಿಸಿಕೊಂಡದ್ದೇ ನನ್ನಲ್ಲಾದ ಬದಲಾವಣೆ ಅಂದುಕೊಳ್ಳುವೆ. ಈ ಸಂದರ್ಶನ ಪ್ರಕಟವಾಗುವ ಮುನ್ನ ಮಾರುಕಟ್ಟೆಯಲ್ಲಿದ್ದ ‘ಉಮ್ಮಾ’ ಕಾದಂಬರಿಯ ಪ್ರತಿಗಳಲ್ಲಿ ಅರ್ಧಕ್ಕೂ ಹೆಚ್ಚು ಓದುಗರ ಕೈ ಸೇರಿವೆ. ಕೃತಿಯ ಮರುಮುದ್ರಣದ ತಯಾರಿ ನಡೆದಿದೆ. ಎಲ್ಲಕ್ಕಿಂತ ಮುಖ್ಯವಾಗಿ, ನನ್ನ ಮಿತ್ರರ ಸಂಖ್ಯೆಯು ಗಣನೀಯ ಏರಿಕೆ ಕಂಡಿದೆ. ಇದಕ್ಕಿಂತ ಹಿತವಾದ ಬದಲಾವಣೆ ಬೇರೇನು ಬೇಕು?

ಸಂದರ್ಶನ: ಮುಸಾಫಿರ್

Writer - ಹಸನ್ ನಯೀಂ ಸುರಕೋಡ

contributor

Editor - ಹಸನ್ ನಯೀಂ ಸುರಕೋಡ

contributor

Similar News