ಹೂವಾಗದ ಮೊಗ್ಗುಗಳು

Update: 2018-09-01 12:52 GMT

ಬಹಳಷ್ಟು ಪ್ರಕರಣಗಳಲ್ಲಿ ಆತ್ಮಹತ್ಯೆ ಯನ್ನು ವಿದ್ಯಾರ್ಥಿಗಳ ಖಿನ್ನತೆಗೆ ಅಥವಾ ಪ್ರಣಯ ಸಮಸ್ಯೆಗಳಿಗೆ ಗಂಟು ಹಾಕಲಾಗುತ್ತದೆ. ಫ್ರೆಂಚ್ ಸಮಾಜವಿಜ್ಞಾನಿ ಎಮಿಲಿ ಡುರ್ಕೆ ಹೆಮ್ ಪ್ರಕಾರ ಆತ್ಮಹತ್ಯೆ ಕೇವಲ ವೈಯಕ್ತಿಕ ಕ್ರಿಯೆಯಲ್ಲ. ಒಂದು ಸಾಮಾಜಿಕ ವರ್ಗದಿಂದ ಇನ್ನೊಂದಕ್ಕೆ ಭಿನ್ನವಾಗಿರುವ ಸಮಾಜದ ನಡಾವಳಿಯನ್ನು ತೋರಿಸುತ್ತದೆ. ಸಮಾಜದ ಏಕತೆಯಲ್ಲಿ ಲೋಪವಿದ್ದಲ್ಲಿ ವ್ಯಕ್ತಿ ತಾನು ಏಕಾಂಗಿಯಾಗಿಸಲ್ಪಟಿದ್ದೇನೆ ಎಂಬ ಭಾವನೆಯಿಂದ ಬಲವನ್ಮರಣಕ್ಕೆ ಮುಂದಾಗುತ್ತಾರೆ.

2014-16ರ ಮಧ್ಯೆ ಭಾರತದಲ್ಲಿ 26,500 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥೂಲವಾಗಿ ಹೇಳಬೇಕೆಂದರೆ ಗಂಟೆಗೊಂದು ಆತ್ಮಹತ್ಯೆ, ದಿನಕ್ಕೆ 24 ಆತ್ಮಹತ್ಯೆಗಳು. ಈ ದುರಂತ ಅಧ್ಯಾಯಗಳಿಗೆ ತಾರತಮ್ಯದ ನಡವಳಿಕೆಗಳು ಮತ್ತು ಸಾಂಸ್ಥಿಕ ಪಕ್ಷಪಾತಗಳು ಕಾರಣಗಳಾಗಿವೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಲ್ಲಿ ಬಹುಮಂದಿ ದಮನಿತ ವರ್ಗಗಳವರು; ವಿಶೇಷವಾಗಿ ದಲಿತರು.

 ಕೇಂದ್ರ ಸಚಿವ ಹನ್ಸ್‌ರಾಜ್ ಗಂಗಾರಾಂ ಅಹಿರ್ ರಾಜ್ಯಸಭೆಯಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಗಳ ಡಾಟಾವನ್ನು ಮಾರ್ಚ್ 2018ರಲ್ಲಿ ಹಂಚಿಕೊಂಡರು. ತಮಿಳು ನಾಡಿನ ಸಂಸದೆ ಕನ್ನಿಮೊಳಿ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗಟ್ಟಲು ಯಾವ ಶ್ರಮ ಕೈಗೊಂಡಿದ್ದೀರಿ ಎಂಬ ಪ್ರಶ್ನೆಗೆ ಸಚಿವರು ಉತ್ತರಿಸುತ್ತಿದ್ದರು. ನ್ಯಾಷನಲ್ ಕ್ರೈ ಬ್ಯೂರೋದ ದಾಖಲೆಗಳನ್ನು ಉಲ್ಲೇಖಿಸಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಆತ್ಮಹತ್ಯೆಗಳು ಹೆಚ್ಚುತ್ತಿವೆ ಎಂದು ತಿಳಿಸಿದರು. 2014ರಲ್ಲಿ 8,068 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರೆ 2015ರಲ್ಲಿ 8,934 ಮತ್ತು 2016ರಲ್ಲಿ 9,474 ಮೊಗ್ಗುಗಳು ಹೂವಾಗದೇ ಮುದುಡಿ ಹೋಗಿವೆ.

ಈ ಎಲ್ಲಾ 3 ವರ್ಷಗಳಲ್ಲಿ ಮಹಾರಾಷ್ಟ್ರ ಅತ್ಯಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಸಾಕ್ಷಿಯಾಯಿತು. 2016ರಲ್ಲಿ ಒಟ್ಟು 1,350 ವಿದ್ಯಾರ್ಥಿಗಳು ಮಹಾರಾಷ್ಟ್ರದಲ್ಲಿ ಜೀವ ಕಳೆದುಕೊಂಡರು. ಪಶ್ಚಿಮ ಬಂಗಾಳ ಎರಡನೇ ಸ್ಥಾನದಲ್ಲಿದೆ (1,147), ತಮಿಳುನಾಡು (981), ಮಧ್ಯ ಪ್ರದೇಶ (838). 2015ರಲ್ಲಿ ಮಹಾರಾಷ್ಟ್ರ 1,230 ವಿದ್ಯಾರ್ಥಿಗಳ ಸಾವನ್ನು ಕಂಡಿತು. ತಮಿಳ್ನಾಡು (955) ಛತ್ತಿಸ್‌ಗಡ (730) ಮತ್ತು ಪಶ್ಚಿಮ ಬಂಗಾಳ (676). 2014ರಲ್ಲಿ ಮಹಾರಾಷ್ಟ್ರದಲ್ಲಿ 1.191 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು.

2016ರಲ್ಲಿ ರೋಹಿತ್ ವೇಮುಲಾ ಎಂಬ ದಲಿತ ವಿದ್ಯಾರ್ಥಿ ಹೈದರಾಬಾದ್ ಯೂನಿವರ್ಸಿಟಿಯ ರಿಸರ್ಚ್ ಸ್ಕಾಲರ್‌ನ ಆತ್ಮಹತ್ಯೆ ದೇಶದ ಆತ್ಮವನ್ನೇ ಅಲುಗಾಡಿಸಿತು. ಆತ ಬರೆದಿಟ್ಟ ಸುಸೈಡ್ ನೋಟ್ ಎಲ್ಲರ ಕಣ್ಗಳಲ್ಲಿ ಟಾರ್ಚ್ ಬಿಟ್ಟಿತು. ಆತನ ಸಾವು ಆಕಸ್ಮಿಕವಲ್ಲ, ಅದು ಪ್ರಜ್ಞಾಪೂರ್ವಕ ನಿರ್ಧಾರ ಎಂಬುದನ್ನು ಸ್ಪಷ್ಟಪಡಿಸಿತು. ಸಾಂಸ್ಥಿಕ ತಾರತಮ್ಯ ಅವನನ್ನು ಈ ಹತಾಶ ನಿರ್ಧಾರಕ್ಕೆ ದೂಡಿತು. ಅವನ ಸಹಪಾಠಿಗಳಾದ ಶೇಷು ಜೆಮುಡುಗುಂಟ, ದೊಂತ ಪ್ರಶಾಂತ್, ಸುಕನ್ನಾ ವೆಲ್ಬುಲ ಮತ್ತು ವಿಜಯಕುಮಾರ್‌ಸಿಂಗ್ ಸಹ ಅತನೊಂದಿಗೆ ಯೂನಿವರ್ಸಿಟಿಯಿಂದ ಸಸ್ಪೆಂಡ್ ಆಗಿ ಅವಮಾನಿಸಲ್ಪಟ್ಟಿದ್ದರು.

ಈ ದುರ್ಘಟನೆ ಬಳಿಕ ಆತನ ಶವವನ್ನು ಪೊಲೀಸರು ಕೊಂಡೊಯ್ದು ಗುಟ್ಟಾಗಿ ಹೂತಿದ್ದು, ದುಃಖಿತ ವಿದ್ಯಾರ್ಥಿಗಳ ಮೇಲೆ ಆಡಳಿತ ವರ್ಗದ ದೌರ್ಜನ್ಯ, ಪೊಲೀಸ್ ಕ್ರೌರ್ಯಗಳು ದೇಶಾದ್ಯಂತ ಪ್ರತಿಭಟನೆಯ ಜ್ವಾಲೆಗಳನ್ನು ಹತ್ತಿಸಿದವು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿರುವ ಪ್ರೊಫೆಸರ್‌ಗಳ ಜಾತ್ಯಹಂಕಾರ, ವಿದ್ಯಾರ್ಥಿಗಳ ಮಧೈ ತೋರುವ ಭೇದ ಭಾವಗಳನ್ನು ಅವನ ಸಾವು ಬಯಲು ಮಾಡಿತು. ದಲಿತರ ಕಲ್ಯಾಣದತ್ತ ಎನ್‌ಡಿಎ ಸರಕಾರದ ಹಿಪೊಕ್ರೆಸಿಯೂ ಬಹಿರಂಗ ಗೊಂಡಿತು. ಕೇಂದ್ರ ಸಚಿವರ ಸಹಾನುಭೂತಿ ಕೃತ್ರಿಮವಾದುದು ಎಂಬುದಕ್ಕೆ ದೂರಿನಲ್ಲಿ ಹೆಸರಿಸಿದ್ದ ಅಪ್ಪಾರಾವ್ ಪೊದಿಲೆ ಯೂನಿವರ್ಸಿಟಿಯ ಉಪಕುಲಪತಿಯಾಗಿ ಮುಂದುವರಿಯುತ್ತಿ ರುವುದೇ ಸಾಕ್ಷಿ. ರೋಹಿತ್ ವೇಮುಲಾನ ತಾಯಿ, ಸಹೋದರ ಮತ್ತು ಗೆಳೆಯರ ಹೋರಾಟದ ಹೊರತಾಗಿಯೂ ಕೇಸ್ ಎಳೆಯುತ್ತಿದ್ದು ಆರೋಪಿಗಳು ವ್ಯವಸ್ಥೆಯ ರಕ್ಷಣೆಯಲ್ಲಿ ಆರಾಮವಾಗಿದ್ದಾರೆ. ಈ ಕೇಸು ವ್ಯವಸ್ಥೆ ಎಷ್ಟು ಕೊಳೆತಿದೆ ಎಂಬುದಕ್ಕೆ ಮತ್ತು ಎಚ್ಚೆತ್ತ ದಲಿತರ ಚೈತನ್ಯಕ್ಕೆ ಪ್ರತೀಕವಾಗಿದೆ. 2017ರಲ್ಲಿ ದಿಲ್ಲಿಯ ಮುನಿರ್ ಶಾ ವಿಹಾರ್ ಎಂಬ ವಸತಿ ಪ್ರದೇಶದಲ್ಲಿ ಜೆ.ಮುತ್ತುಕೃಷ್ಣನ್ ಎಂಬ ಸೇಲಂ ಮೂಲದ ದಲಿತ ವಿದ್ಯಾರ್ಥಿ ಗೆಳೆಯನ ಮನೆಯಲ್ಲಿ ನೇಣು ಹಾಕಿಕೊಂಡಿದ್ದ. ಈತ ಜೆಎನ್‌ಯುದಲ್ಲಿ ಎಂಫಿಲ್ ವಿದ್ಯಾರ್ಥಿ. ಅವನ ಫೇಸ್ಬುಕ್‌ನ ಕೊನೆಯ ಪೋಸ್ಟ್: ಇಲ್ಲಿ ಎಂಫಿಲ್/ ಪಿಎಚ್‌ಡಿಗಳ ಅಡ್ಮಿಶನ್‌ನಲ್ಲಿ ಸಮಾನತೆ ಇಲ್ಲ. ವೈವಾವೋಸಿಯಲ್ಲಿ ಸಮಾನತೆಯಿಲ್ಲ. ಪ್ರೊ. ಸುಖದೇವ್ ಥೋರಟ್ ಶಿಫಾರಸು ಗಳನ್ನು ಅಮಾನ್ಯಗೊಳಿಸಲಾಗಿದೆ. ad block ನಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಟನಾ ಸ್ಥಳಗಳನ್ನು, ದಮನಿತರಿಗೆ ಶಿಕ್ಷಣವನ್ನು ನಿರಾಕರಿಸಲಾಗಿದೆ. ಸಮಾನತೆಯ ನಿರಾಕರಣೆ ಎಂದರೆ ನಿರಾಕರಿಸಿದಂತೆಯೇ.’

ಆತನಿಗಿನ್ನೂ 29ರ ಹರೆಯ. ಆತನ ಗೆಳೆಯನ ನೆನಪಿನಲ್ಲಿ ಅವನು ಅಭಿಮಾನಿಯಾಗಿದ್ದ. ಜೀವನೋತ್ಸಾಹಿ, ಬಹಿರ್ಮುಖ, ವಿನೋದಪ್ರಿಯ. ‘ಸಾಂಪ್ರದಾಯಿಕ’ ದಲಿತನಂತಿರಲಿಲ್ಲ. ‘ಪಕ್ಕಾ ದಲಿತ’ನಂತೆ ನಡೆದುಕೊಳ್ಳಬೇಕಾಗಿರುವುದು ಯುವಕರ ಹೆಗಲ ಮೇಲಿರುವ ಹೊರೆ. ವಿದ್ಯಾರ್ಥಿಗಳ ಸತತ ಪ್ರತಿಭಟನೆಯ ಹೊರತಾಗಿಯೂ ‘ಕ್ರಿಶ್’ ಸಾವನ್ನು ವೈಯಕ್ತಿಕ ಪ್ರಣಯ ಸಮಸ್ಯೆಗಳೆಂದು ಕೈತೊಳೆದುಕೊಳ್ಳಲಾಗಿದೆ.

ನೀಟ್‌ನಿಂದ ಘಾಟ್‌ಗೆ

2017ರ ಸೆಪ್ಟಂಬರ್‌ನಲ್ಲಿ ಎಸ್.ಅನಿತಾ ಎಂಬ ತಮಿಳುನಾಡಿನ ದಲಿತ ಯುವತಿ ಆತ್ಮಹತ್ಯೆ ಮಾಡಿಕೊಂಡಳು. ಆಕೆ ಕ್ಲಾಸ್ 12 ಬೋರ್ಡ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದಳಾದರೂ national eligibility entrance test(neet)neet ನಲ್ಲಿ ಫೇಲಾದಳು. ಮೆಡಿಕಲ್ ಕೋರ್ಸ್‌ಗೆ ಕಡ್ಡಾಯ ಇರಕೂಡದೆಂದು ಸುಪ್ರೀಂ ಕೋರ್ಟ್ ಮೆಟ್ಟಲು ಹತ್ತಿದಳು. ಒಂದು ವರ್ಷದ ಮಟ್ಟಿಗೆ ನಿಂದ ವಿನಾಯಿತಿ ನೀಡಬೇಕೆಂಬ ತಮಿಳುನಾಡಿನ ಡ್ರಾಫ್ಟ್ ಆರ್ಡಿನೆನ್ಸ್‌ನ್ನು ಎಂಡೋರ್ಸ್‌ ಮಾಡಲು ಕೇಂದ್ರ ಸರಕಾರ ತಿರಸ್ಕರಿಸಿದ ಬಳಿಕ ಸುಪ್ರೀಂ ಕೋರ್ಟ್ ಮತ್ತೆ ನೀಟ್ ಆಧಾರದ ಮೇಲೆ ಮೆಡಿಕಲ್‌ಗೆ ಪ್ರವೇಶ ನೀಡುವಂತೆ ಕೇಳಿತು. ತಾನು ಡಾಕ್ಟರಾಳಾಗಲಾರೆ ಎಂಬ ಹತಾಶೆಯಲ್ಲಿ ಅನಿತಾ ಬದುಕನ್ನು ಕೊನೆಗೊಳಿಸಿಕೊಂಡಳು. ಈ ನೀಟ್ ಎಂಬುದು ಸಾವಿರಾರು ಗ್ರಾಮೀಣ ದಮನಿತ ವಿದ್ಯಾರ್ಥಿಗಳ ಪಾಲಿಗೆ ಘಾಟ್ ದಾರಿಯಾಗಿದೆ. ಸರಕಾರಗಳು ಈ ಆತ್ಮಹತ್ಯೆಗಳಿಗೆ ನಿರ್ಲಕ್ಷದಿಂದ ಪ್ರತಿಕ್ರಿಯಿಸುತ್ತಿವೆ. 2018ರ ಫೆಬ್ರವರಿಯಲ್ಲಿ ತೆಲಂಗಾಣದ ಸಾಯಿದೀಪ್ತಿ ಎಂಬ ದಲಿತ ವಿದ್ಯಾರ್ಥಿನಿ ರೂ. 1,800 ಫೀ ಕಟ್ಟಲಿಲ್ಲ ಎಂಬುದಕ್ಕಾಗಿ ತರಗತಿಯಲ್ಲಿ ಅವಮಾನಿತಳಾಗಿ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಳು. ಅವಳ ತಂದೆಯ ಪ್ರಕಾರ ಮಲ್ಕಾಜ್‌ಗಿರಿಯ ಜ್ಯೋತಿ ಹೈಸ್ಕೂಲ್ ಪ್ರಿನ್ಸಿಪಾಲ್ ಫೀ ಕಟ್ಟಲಾಗದಿದ್ದ ಮೇಲೆ ನೀವು ದಲಿತರು ಯಾಕೆ ಬರ್ತಿರಿ ಶಾಲೆಗೆ? ಎಂದನಂತೆ.

 ಎಪ್ರಿಲ್‌ನಲ್ಲಿ ಕಾನ್ಪುರ (ಜಿಜಿಟಿ) ವಿದ್ಯಾರ್ಥಿಯಾಗಿದ್ದ ದಲಿತ ಯುವಕ ಭೀಮ್‌ಸಿಂಗ್ ಸಹ ನೇಣು ಹಾಕಿಕೊಂಡು ಸತ್ತನು. ಆತ್ಮಹತ್ಯೆಗಳನ್ನು ತಡೆಯುವುದಕ್ಕೆ (ಜಿಜಿಟಿ) ಪ್ಯಾನೆಲ್ ಯೋಗಾ ತರಗತಿ, ಇಂಟರ್‌ನೆಟ್ ವೇಗ ಇಳಿಕೆ ಮತ್ತು ಸೀಲಿಂಗ್ ಫ್ಯಾನ್‌ಗೆ ಬದಲು ಟೇಬಲ್ ಫ್ಯಾನ್‌ಗಳನ್ನು ಶಿಫಾರಸು ಮಾಡಿತು. ಭಿಕ್ಷಕರಿಗೂ ಯೋಗ ಮಾಡಿ, 5,000ವರ್ಷಗಳ ಪರಂಪರೆ ಎಂದು ಕಂತೆ ಬಿಚ್ಚುವವರ ದೇಶವಾಗಿದೆಯಷ್ಟೆ.

 2018ರಲ್ಲಿ ಹರ್ಷಿತ ಎಂಬ ಎಂಎಸ್ಸಿ ವಿದ್ಯಾರ್ಥಿನಿ ಎರಡು ವಿಷಯಗಳಲ್ಲಿ ಫೇಲಾಗಿ ಸಪ್ಲಿಮೆಂಟರಿ ಪರೀಕ್ಷೆಗಳಲ್ಲೂ ಸೋತು ಹತಾಶಳಾಗಿ 15ನೇ ಫ್ಲೋರ್‌ನಿಂದ ಜಿಗಿದು ಸತ್ತಳು. ಮೈಸೂರಿನ ನವೋದಯಾ ಮೈನಾರಿಟಿ ವಸತಿ ಶಾಲೆಯ ಹುಡುಗಿ ಝೈಬುನ್ನಿಸಾ(14) ತನ್ನನ್ನು ಪರಿಪರಿಯಾಗಿ ಪೀಡಿಸುತ್ತಿದ್ದ ರವಿ ಎಂಬ ಶಿಕ್ಷಕನಿಂದ ರೋಸಿ ಹೋಗಿ ನೇಣುಬಿಗಿದುಕೊಂಡಳು. ಇಲ್ಲಿ ಹೆಸರುಗಳು ಉಲ್ಟಾ ಆಗಿದ್ದಿದರೆ ಏನಾಗುತ್ತಿದ್ದವೋ ಅದೊಂದು ಆಗದೆ ತಣ್ಣಗಾಯಿತು.

 ಬಹಳಷ್ಟು ಸುಯಿಸೈಡ್ ಕೇಸ್‌ಗಳಲ್ಲಿ ಆತ್ಮಹತ್ಯೆಯನ್ನು ವಿದ್ಯಾರ್ಥಿಗಳ ಖಿನ್ನತೆಗೆ ಅಥವಾ ಪ್ರಣಯ ಸಮಸ್ಯೆಗಳಿಗೆ ಗಂಟು ಹಾಕಲಾಗುತ್ತದೆ. ಫ್ರೆಂಚ್ ಸಮಾಜವಿಜ್ಞಾನಿ ಎಮಿಲಿ ಡುರ್ಕೆ ಹೆಮ್ ಪ್ರಕಾರ ಆತ್ಮಹತ್ಯೆ ಕೇವಲ ವೈಯಕ್ತಿಕ ಕ್ರಿಯೆಯಲ್ಲ. ಒಂದು ಸಾಮಾಜಿಕ ವರ್ಗದಿಂದ ಇನ್ನೊಂದಕ್ಕೆ ಭಿನ್ನವಾಗಿರುವ ಸಮಾಜದ ನಡಾವಳಿಯನ್ನು ತೋರಿಸುತ್ತದೆ. ಸಮಾಜದ ಏಕತೆಯಲ್ಲಿ ಲೋಪವಿದ್ದಲ್ಲಿ ವ್ಯಕ್ತಿ ತಾನು ಏಕಾಂಗಿಯಾಗಿಸಲ್ಪಟಿದ್ದೇನೆ ಎಂಬ ಭಾವನೆಯಿಂದ ಬಲವನ್ಮರಣಕ್ಕೆ ಮುಂದಾಗುತ್ತಾನೆ/ಳೆ.

 ಸರಕಾರಕ್ಕೆ ಈ ಅಂಶಗಳು ಗೊತ್ತಿಲ್ಲದೇ ಇಲ್ಲ. ಸರಕಾರ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಆತ್ಮಹತ್ಯೆ ನಿಯಂತ್ರಣ ಸೇವೆಗಳು ಉದ್ಯೋಗ ಸ್ಥಳದಲ್ಲಿ ಒತ್ತಡ ನಿರ್ವಹಣೆ, ಜೀವನ ಕೌಶಲ್ಯಗಳ ತರಬೇತಿ, ಕೌನ್ಸಿಲಿಂಗ್ ಇತ್ಯಾದಿಗಳನ್ನು ಶಾಲಾ ಕಾಲೇಜುಗಳಲ್ಲಿ ನಿರ್ವಹಿಸುತ್ತಿದ್ದಾರೆ. ಖಿನ್ನತೆ, ಒತ್ತಡ ಎನ್ನುವುದಾದರೆ ಕೆಲವು ಜಾತಿ ವರ್ಗಗಳೇ ಹೆಚ್ಚು ಖಿನ್ನತೆಗೇಕೆ ಒಳಗಾಗುತ್ತಿದ್ದಾರೆ? ಮತ್ತು ಕ್ರೂರವಾದ ಗ್ರಹಿಕೆ ಎಂದರೆ ಇದೊಂದು ಮನೋರೋಗದ ಇಶ್ಯೂ ಎಂದು ವಿಶ್ಲೇಷಿಸಲಾಗುತ್ತಿದೆ ಎಂದು ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಪತ್ರಕರ್ತ ಪಿ.ಸಾಯಿನಾಥ್ ಹೇಳುತ್ತಾರೆ. ಶಿಕ್ಷಣ ಸಂಸ್ಥೆಗಳ ಫ್ಯಾಕಲ್ಟಿ ಸದಸ್ಯರು ಹೆಚ್ಚು ಸಂವೇದನಾಶೀಲರಾಗಿ ದಮನಿತ, ಬಡ ವಿದ್ಯಾರ್ಥಿಗಳನ್ನು ಆದರಿಸುವುದು , ಅವರಿಗೆ ನ್ಯಾಯಸಿಗುವ ಭರವಸೆ ನೀಡಬೇಕಾಗಿರುವುದು ಆತ್ಮಹತ್ಯೆಗಳನ್ನು ತಡೆಗಟ್ಟಲು ಬೇಕಾದ ಮುಖ್ಯ ನಿಯಂತ್ರಕಗಳಾಗಿದೆ.

(ಆಧಾರ -ಫ್ರಂಟ್ ಲೈನ್)

Writer - ಕನ್ನಡ ಕಸ್ತೂರಿ, ತುಮಕೂರು

contributor

Editor - ಕನ್ನಡ ಕಸ್ತೂರಿ, ತುಮಕೂರು

contributor

Similar News