ಮೈಸೂರು ಮಟ್ಟಿಯಲ್ಲಿ ರಾಜಕೀಯ ಜಟ್ಟಿ ಶ್ರೀ ಸಾಹುಕಾರ್ ಚನ್ನಯ್ಯನವರು

Update: 2018-09-01 13:08 GMT
ಸಾಹುಕಾರ್ ಚನ್ನಯ್ಯ

ಮೈಸೂರಿನ ಸ್ವಾತಂತ್ರ ಸಂಗ್ರಾಮದಲ್ಲಿ ಶ್ರೀ ಸಾಹುಕಾರ್ ಚನ್ನಯ್ಯನವರ ಪಾತ್ರ ಹಿರಿದಾದುದು. ಸ್ವಾತಂತ್ರ್ಯಾನಂತರದ ರಾಜಕೀಯ ಪ್ರಾದೇಶಿಕ ಕ್ಷೇತ್ರದಲ್ಲಿ ಇವರ ಯಾಜಮಾನ್ಯ ಹಲವಾರು ವರ್ಷ ನಡೆಯಿತು. ಸಾಧಾರಣ ವಿದ್ಯಾವಂತರಾದರೂ ತೀಕ್ಷ್ಣಬುದ್ಧಿ, ಸಮಯಪ್ರಜ್ಷೆ ಮತ್ತು ಉದಾರ ಭಾವಗಳಿಂದ ಸಂಗಡಿಗರ ವಿಶ್ವಾಸ ಗಳಿಸಿದ್ದರು. ಶಾಸಕರಾಗಿದ್ದೂ ಅಧಿಕಾರ ಪಡೆಯದೆ ಪರೋಕ್ಷವಾಗಿ ಪ್ರಭಾವ ಬೀರುವ ಸ್ವಭಾವ ಇವರದು. ಒಮ್ಮೆ ಜನತಾಪಕ್ಷ ಎಂಬ ನಾಮಧೇಯದಲ್ಲಿ ಕೆಲ ಸಂಗಡಿಗರೊಂದಿಗೆ ಕಾಂಗ್ರೆಸ್ ವಿರೋಧವಾಗಿ ಹೋರಾಡಿದುದೂ ಉಂಟು. ಆದರೆ ಅವರಿಗೆ ಮಾತೃ-ಸಂಸ್ಥೆಯ ಬಗ್ಗೆ ಅಪಾರ ಪ್ರೀತಿ, ಅದರ ಕೊನೆಯುಸಿರಿರುವ ತನಕ ಈ ಅಭಿಮಾನ ಇದ್ದುದು ತಿಳಿದ ವಿಷಯವೇ. ದಾನ, ಧರ್ಮ, ಪರೋಪಕಾರದ ಪ್ರೇರಣೆ ಪಡೆದನಂತರ ಅನೇಕ ರೀತಿಯಲ್ಲಿ ಜನತೆಯ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರ ಪಾಲಿನದು.

ಶ್ರೀ ಚನ್ನಯ್ಯನವರು 1902 ರಲ್ಲಿ ಮಂಡ್ಯ ಜಿಲ್ಲೆಯ ಉಮ್ಮಡಹಳ್ಳಿಯಲ್ಲಿ ಜನಿಸಿದರು. ಸಾಹುಕಾರ್ ಸಿದ್ದಣ್ಣನವರ ಏಕೈಕ ಪುತ್ರ. ವ್ಯಾಸಂಗ ಮುಂದುವರಿಸದೆ ಕುಟುಂಬದ ಜಮೀನು ಅಕ್ಕಿ ಗಿರಣಿ ಮತ್ತು ಲೇವಾದೇವಿ ವ್ಯವಹಾರಗಳ ಹೊಣೆ ಹೊರಬೇಕಾಯಿತು. ಮೈಸೂರು ನಗರದಲ್ಲಿ ಇವರ ಮನೆಗಳೂ ಮಳಿಗೆಗಳೂ ಗಿರಣಿಗಳೂ ಇದ್ದು ನಝರ್‌ಬಾದಿನಲ್ಲಿ ವಾಸಿಸುತ್ತಿದ್ದರು.

ಶ್ರೀ ಎಚ್.ಸಿ. ದಾಸಪ್ಪನವರು ಮೈಸೂರಿನಲ್ಲಿ ವಕೀಲ ವೃತ್ತಿ ಪ್ರಾರಂಭಿಸಿದ ಕೆಲವೇ ಸಮಯದಲ್ಲಿ ಬಹುಯಶಸ್ವಿಯಾಗಿದ್ದರು. ಅವರ ಕಕ್ಷಿದಾರರ ಪೈಕಿ ಅಂದು ಪ್ರಸಿದ್ಧರಾಗಿದ್ದ ಶ್ರೀ ಬನುಮಯ್ಯ, ಯಜಮಾನ್ ವಿರೂಪಾಕ್ಷಯ್ಯ ಮತ್ತು ಜನಾಬ್ ಮಹಮದ್ ಸೇಟ್‌ರವರುಗಳು ಸೇರಿದ್ದರು.

ಸಾಹುಕಾರ್ ಚನ್ನಯ್ಯನವರು ಪರಿಚಿತರಾಗಿ ನಮ್ಮ ತಂದೆಯವರ ಕಕ್ಷಿದಾರರಾದರಲ್ಲದೇ ನಿಕಟವರ್ತಿಗಳೂ ಕೊನೆಗೆ ಅನುಯಾಯಿಗಳೂ ಆದರು. ನನ್ನ ತಾಯಿಯವರ ತಂದೆ ಶ್ರೀ ಕೆ.ಎಚ್. ರಾಮಯ್ಯನವರು ಇವರ ಮೇಲೆ ಪ್ರಭಾವ ಬೀರಿದರು. ಇದರ ಪರಿಣಾಮವಾಗಿ ಶ್ರೀ ಚನ್ನಯ್ಯನವರು ತಮ್ಮ ತಂದೆಯವರ ಹೆಸರಿನಲ್ಲಿ ಸಾಹುಕಾರ್ ಸಿದ್ದಣ್ಣ ಎಂಡೋಮೆಂಟ್ ಸ್ಥಾಪಿಸಿದರು. ಬಡಮಕ್ಕಳ, ಹಿಂದುಳಿದ ಗ್ರಾಮಗಳಿಂದ ಬಂದ ಮಕ್ಕಳ ವ್ಯಾಸಂಗಕ್ಕೆ ಅನುಕೂಲವಾಗಲೆಂದು ಒಕ್ಕಲಿಗರ ಹಾಸ್ಟೆಲ್ ಸ್ಥಾಪಿಸಿದರು. ಇದಕ್ಕಾಗಿ ತಾವು ವಾಸವಾಗಿದ್ದ ದೊಡ್ಡಮನೆಯನ್ನು ದಾನ ಮಾಡಿದರು. ಅಲ್ಲದೆ ಕೆ.ಎಚ್. ರಾಮಯ್ಯನವರ ಆಕಾಂಕ್ಷೆಯಾಗಿದ್ದ ಹಿಂದುಳಿದ ಜನಾಂಗಗಳಿಗೆ, ಹಳ್ಳಿಗಾಡಿನ ಬಡಮಕ್ಕಳಿಗೆ ವಿದ್ಯಾದಾನ, ಅನ್ನದಾನ ಮಾಡಬೇಕೆಂಬುದನ್ನು ಅರಿತಿದ್ದ ಶ್ರೀ ಚನ್ನಯ್ಯನವರು ಶ್ರೀ ರಾಮಯ್ಯನವರ ಸ್ಮರಣಾರ್ಥ ಉಚಿತ ವಿದ್ಯಾರ್ಥಿನಿಲಯವನ್ನು ಸ್ಥಾಪಿಸಿದರು. ನಮ್ಮ ತಂದೆಯವರ ಅಧ್ಯಕ್ಷತೆಯಲ್ಲಿ ಶ್ರೀ ಗುಜ್ಜೇಗೌಡರ ಕಾರ್ಯದರ್ಶಿತ್ವದಲ್ಲಿ ಈ ಸಂಸ್ಥೆ ಅವರೇ ಒಂಟಿಕೊಪ್ಪಲಿನಲ್ಲಿ ಕಟ್ಟಿದ ಕಟ್ಟಡದಲ್ಲಿ ಪ್ರಾರಂಭವಾಯಿತು. ಇದರ ನೆರವಿಗೆ ಸ್ವಲ್ಪ ಜಮೀನನ್ನು ಸಹ ದಾನ ಮಾಡಿದರು. ಸಾರ್ವಜನಿಕ ಕ್ಷೇತ್ರದಲ್ಲಿ ಹೆಚ್ಚು ಸೇವೆ ಸಲ್ಲಿಸುವುದಕ್ಕಾಗಿ ಮನೆಯಲ್ಲಿ ವ್ಯಾಸಂಗವನ್ನು ತಮ್ಮ ಪ್ರೌಢಾವಸ್ಥೆಯಲ್ಲಿ ಮುಂದುವರಿಸಿದರು. ಇಂಗ್ಲಿಷ್ ಭಾಷೆ ಕಲಿತರು. ತಮ್ಮ ವೈಭವದ ಜೀವನವನ್ನು ಅಲ್ಪಕಾಲದಲ್ಲಿಯೇ ಪರಿವರ್ತಿಸಿ ಸಾಧಾರಣ, ಸರಳ ಸೇವಾಮಯವಾದ ಜೀವನವನ್ನಾಗಿಸಿದರು. ದಾಸಪ್ಪ ದಂಪತಿ ಸ್ವಾತಂತ್ರ ಸಂಗ್ರಾಮದಲ್ಲಿ ಧುಮುಕಿದಾಗ ಇವರೂ ಅವರುಗಳೊಡನೆ ಸೇರಿ ನೆರವಾದರು.

ಶ್ರೀ ಚನ್ನಯ್ಯನವರು 1938ರ ಶಿವಪುರ ಕಾಂಗ್ರೆಸ್ ಮಹಾ ಧಿವೇಶನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ತಮ್ಮಾಡನೆ ಶ್ರೀಮಂತ ಶ್ರೀ ತಿರುಮಲೇಗೌಡರ ಜೊತೆಗೂಡಿ ತಮ್ಮ ವ್ಯವಸ್ಥಾಪನಾ ಕೌಶಲ್ಯವನ್ನು ತೋರಿದರು. ಶ್ರೀ ಎಂ.ಎನ್. ಜೋಯಿಸರ ಮಾತಿನಲ್ಲಿ ಅಂದಿನ ಚರಿತ್ರಾರ್ಹ ಮಹಾಧಿವೇಶನದ ಅಧ್ಯಕ್ಷರಾಗಿ ಶ್ರೀ ಟಿ. ಸಿದ್ದಲಿಂಗಯ್ಯನವರ ಪತ್ನಿ ಶ್ರೀಮತಿ ಪಾರ್ವತಮ್ಮನವರು ತಮ್ಮ ಪತಿಯ ಎರಡೂ ಕೈಗಳನ್ನು ಹಿಡಿದು ಸ್ವಾಗತ ಸಮಿತಿ ಅಧ್ಯಕ್ಷರಾದ ಶ್ರೀ ಚನ್ನಯ್ಯನವರಿಗೆ ಒಪ್ಪಿಸಿದರು ! ಶ್ರೀ ಚನ್ನಯ್ಯನವರು ಹಾರತುರಾಯಿಗಳನ್ನು ಅಧ್ಯಕ್ಷರಿಗೆ ನೀಡಿ ರಥದ ಮೇಲೇರಿಸಿದರು. ಇದೊಂದು ರೋಮಾಂಚಕರ ಸನ್ನಿವೇಶ. ಕನಸಿನಲ್ಲಿ ಕಂಡಂತಿದೆ ನನಗೆ ಈ ದೃಶ್ಯ. ಆಗ ವಾನರ ಸೇನೆಗೆ ಸೇರಿದ್ದ ನಾನೂ ನಮ್ಮಣ್ಣ ರಾಮದಾಸ್ ಅಧ್ಯಕ್ಷರನ್ನು ಕರೆತರುವಲ್ಲಿ ಅಲಂಕಾರ ಕ್ಕಾಗಿ ದೊಣ್ಣೆಗಳನ್ನು ಹಿಡಿದೆವು. ಸೇವಾದಳದ ಸಮವಸ್ತ್ರ ಧರಿಸಿದ್ದೆವು ! ಜನಸ್ತೋಮದ ಕರತಾಡನ! ಭಾರತ್ ಮಾತಾಕಿ ಜೈ ಎಂಬ ಘೋಷಣೆಗಳು!

ಶ್ರೀ ಚನ್ನಯ್ಯನವರ ಜೀವನ ಇದರ ನಂತರ ಸ್ಫುಟಗೊಂಡು ದಿಟ್ಟತನದಿಂದ ಮುಂದೆ ಸ್ವಾತಂತ್ರ ಹೋರಾಟದಲ್ಲಿ ಹಲವಾರು ರೀತಿಯ ಕಷ್ಟಗಳಿಗೆ ಒಳಗಾದರು. ಜೈಲಿಗೆ ಹಲವು ಬಾರಿ ಹೋಗಿಬರುವ ಪ್ರಸಂಗಗಳು ಅನಿವಾರ್ಯವಾಯಿತು. ಅಲ್ಲಿನ ಕಠಿಣತನ ಜೀವನವನ್ನು ಕರ್ತವ್ಯ ದೃಷ್ಟಿಯಿಂದ ನಿಭಾಯಿಸಿದರು. ತಮ್ಮ ನಿತ್ಯ ವ್ಯವಹಾರಗಳ, ಆದಾಯಗಳ ಮತ್ತು ಸಾಂಸಾರಿಕ ಜವಾಬ್ದಾರಿಗಳಿಗೆ ವಿಪತ್ತು ಬಂದಿತಾದರೂ ಧೃತಿಗೆಡದೆ ಮುಂದೆ ನಡೆದರು.

ರಾಜಕೀಯದಲ್ಲಿ ಪೂರ್ಣ ಸಮಯ ಕೊಡುತ್ತಿದ್ದ ಹಲವು ಸ್ವಾತಂತ್ರ ಯೋಧರ ಸಹಾಯಕ್ಕೆ ಇವರು ಸದಾ ಸಿದ್ಧರಿದ್ದರು. ಕಾಂಗ್ರೆಸ್ ಪಕ್ಷದ ಖಜಾಂಚಿಯಾಗಿ ಬಹುಕಾಲ ಸೇವೆ ಸಲ್ಲಿಸಿದರು. ಸ್ವಾತಂತ್ರ್ಯಾನಂತರ ಕೆಲವು ನಾಯಕರುಗಳು ಮಂತ್ರಿಗಳಾಗಿ ಸಹಕಾರ್ಯಕರ್ತರಿಂದ ದೂರವಾಗುತ್ತಿದ್ದಾರೆಂಬ ಆಕ್ಷೇಪಣೆ ಬಂದಾಗ ಶ್ರೀ ಚನ್ನಯ್ಯನವರು ತಮ್ಮ ಹಿರಿಯ ಜೊತೆಗಾರರ ಪರವಾಗಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಫರ್ಧಿಸಿ ಸೋತರು. ಆದರೂ ಕಾರ್ಯಕರ್ತರ ಪರವಾಗಿ ನಿಂತು ಗೆದ್ದ ಶ್ರೀಮತಿ ಯಶೋಧರಾ ದಾಸಪ್ಪನವರ ಬಲಗೈಯಾಗಿ ಕಾಂಗ್ರೆಸ್ ಕೋಶಾಧ್ಯಕ್ಷರಾಗಿ ಮುಂದುವರಿದರು ! ಕಾಂಗ್ರೆಸ್ ಪಕ್ಷದ ಆಂತರಿಕ ಲೋಕತಂತ್ರ ವ್ಯವಸ್ಥೆಗೆ ಲೋಪ ಬರದಂತೆ ಸಹಕರಿಸಿದರು. ಅಷ್ಟೇ ಏಕೇ ಕಾರ್ಯಕರ್ತರ ಸಂತೋಷದಲ್ಲಿ ಪಾಲ್ಗೊಂಡರು !

ಮಹಿಳೆ ಒಬ್ಬರು ಕಾಂಗ್ರೆಸ್ ಪಕ್ಷದ ಅಧ್ಯಕ್ಷಿಣಿಯಾಗಿ ಆರಿಸಿ ಬಂದುದನ್ನು ಮೆಚ್ಚಿ ನನ್ನ ತಾಯಿಯ ಸಮೀಪ ಬಂಧು - ಒಬ್ಬ ಮಹಿಳೆ - ಬೆಂಗಳೂರಿನ ರೇಸ್‌ಕೋರ್ಸ್ ಬಳಿ ಇರುವ ಅಮೂಲ್ಯ ವಿಶಾಲ ಜಮೀನನ್ನು ದಾನ ಮಾಡಿದರು. ಈ ಸ್ಥಳದಲ್ಲಿ ಕಾಂಗ್ರೆಸ್ ಕಚೇರಿ ಕಟ್ಟಲು ಯಶೋಧರಾ ದಾಸಪ್ಪನವರು ಅಸ್ತಿಭಾರ ಹಾಕಿದರಷ್ಟೆ. ಮುಂದೆ ಅಧ್ಯಕ್ಷರಾದ ಶ್ರೀ ಚನ್ನಯ್ಯನವರು ದೊಡ್ಡ ಕಲ್ಲಿನ ಕಟ್ಟಡವನ್ನು ಕಟ್ಟಿ ಕಚೇರಿಯನ್ನು ಸ್ಥಾಪಿಸಿದರು. ಪಕ್ಷದ ಬಗ್ಗೆ ಅವರಿಗಿದ್ದ ವಾತ್ಸಲ್ಯಕ್ಕಿದು ಸಾಕ್ಷಿ.

ಶ್ರೀ ಚನ್ನಯ್ಯನವರ ಸಾಂಸಾರಿಕ ಜೀವನದಲ್ಲಿ ಎಡರುತೊಡರುಗಳಿದ್ದವು. ಏನೇ ತೊಂದರೆ ಇದ್ದರೂ ಅವರ ತಾಯಿಯವರ ಬಗ್ಗೆ ಅತಿ ಗೌರವ-ವಿಧೇಯತೆ. ಅವರಿಗೊಬ್ಬ ತಂಗಿ ವಿಧವೆ, ಮಕ್ಕಳೊಡನೆ ಇವರಲ್ಲೆ ಹೆಚ್ಚು ವಾಸ. ಬಹುಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಅನೇಕ ಬಂಧುಗಳಿಗೆ ಸೂಕ್ತ ರೀತಿಯಲ್ಲಿ ಸಹಾಯ ಮಾಡುವುದು ಸಾಮಾನ್ಯವಾಗಿತ್ತು. ತಮ್ಮ ಏಕೈಕ ಪುತ್ರಿ ಪ್ರಮೀಳೆ ಇವರ ಸರ್ವಸ್ವ. ಇವರಿಗೆ ಶ್ರೀ ಕೆ.ಎಚ್. ರಾಮಯ್ಯನವರ ಬಗ್ಗೆ ಇದ್ದ ಅಪಾರ ಗೌರವದ ಫಲವೇನೋ ಎಂಬಂತೆ ಪ್ರಮೀಳಾ - ಕೃಷ್ಣರ ವಿವಾಹ ಸ್ವಗೃಹದಲ್ಲಿ ನೆರವೇರಿತು. ಶ್ರೀ ಕ್ಯಾಪ್ಟನ್ ಕೃಷ್ಣ ಶ್ರೀ ರಾಮಯ್ಯನವರ ನಾಲ್ಕನೇ ಪುತ್ರ. ನನ್ನ ಮತ್ತು ಅಣ್ಣ ರಾಮದಾಸನ ಸೋದರಿಯಂತಿದ್ದ ಪ್ರಮೀಳಾ ನಮ್ಮ ಸೋದರ ಮಾವನನ್ನೇ ಮದುವೆಯಾದುದು ನಮಗೆ ತುಂಬಾ ಸಂತೋಷವನ್ನೇ ತಂದಿತು.

ಕ್ಯಾಪ್ಟನ್ ಕೃಷ್ಣ ಅವರು ಅಂದಿನ ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಅವರ ಆಪ್ತ ಅಂಗರಕ್ಷಕ ದಳದ ನಾಯಕರಾಗಿದ್ದರು. ಅಳಿಯ ಕೆಲಸಕ್ಕೆ ರಾಜೀನಾಮೆ ಕೊಟ್ಟು ತಮ್ಮ ವಿವಿಧ ವಾಣಿಜ್ಯ ವ್ಯವಹಾರದಲ್ಲಿ ತೊಡಗಿಸಬೇಕೆಂದು, ತಮ್ಮ ಭಾರ ಕಡಿಮೆ ಮಾಡಿಕೊಳ್ಳಬೇಕೆಂಬ ಆಸೆ ಇದ್ದರೂ ಒತ್ತಾಯಿಸದೇ ಇದ್ದ ಪರಿಜ್ಞಾನ ಶ್ರೀ ಚನ್ನಯ್ಯನವರಿಗಿತ್ತು. ದಿವಂಗತ ಕ್ಯಾಪ್ಟನ್ ಕೃಷ್ಣ ಅವರು ಇತ್ತೀಚಿನವರೆವಿಗೂ ಶ್ರೀ ಕೆ.ಎಚ್. ರಾಮಯ್ಯ ಉಚಿತ ವಿದ್ಯಾರ್ಥಿನಿಲಯ ಮತ್ತು ಸಿದ್ದಣ್ಣ ಎಂಡೋಮೆಂಟ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಹೋಂಗಾರ್ಡ್ ಶ್ರೀ ಚನ್ನಯ್ಯ ಕುಸ್ತಿ ಅಖಾಡಾ ಮತ್ತು ಹಲವಾರು ಸಂಘಸಂಸ್ಥೆಗಳ ಸೇವೆಯನ್ನು ಕ್ಯಾಪ್ಟನ್ ಕೊನೆಯ ತನಕ ಮಾಡಿದರು. ಅವರಿಗೆ ಒಬ್ಬ ಮಗ ಚಂದ್ರಪ್ರಕಾಶ್ ಮತ್ತು ಮಗಳು ಲೇಖಾ.

ನವಜೀವನ ಟ್ರಸ್ಟ್‌ನ ಎಲ್ಲಾ ಪ್ರಕಾಶನಗಳನ್ನು ಸಂಗ್ರಹಿಸುವ ಮತ್ತು ಅಚ್ಚುಕಟ್ಟಾಗಿ ರಟ್ಟು ಹಾಕಿ ಶೇಖರಿಸುವುದು ಶ್ರೀ ಚನ್ನಯ್ಯನವರ ಹವ್ಯಾಸಗಳಲ್ಲೊಂದು. ಸ್ವತಃ ಕುಸ್ತಿಪಟುವಾಗಿದ್ದ ಶ್ರೀ ಚನ್ನಯ್ಯನವರು ಮೈಸೂರಿನ ಕುಸ್ತಿ - ಗರಡಿಗಳ ಸಂಘದ ಪೋಷಕರಾಗಿದ್ದರು. ಇವರ ಹೆಸರಿನಲ್ಲಿ ಪ್ರಸಿದ್ಧ ಮೈಸೂರು ಅಖಾಡಾ ಸ್ಥಾಪಿಸಲ್ಪಟ್ಟಿದೆ. ಬೆಟ್ಟಗುಡ್ಡಗಳು, ಕಾಡುಪ್ರದೇಶಗಳು ಇವರಿಗೆ ಬಹುಪ್ರಿಯವಾದುವು. ಸಮಯ ಸಿಕ್ಕಾಗ ಉದಕಮಂಡಲ - ಕೊಡಗಿನ ಮಡಿಕೇರಿ ಇತ್ಯಾದಿ ಸ್ಥಳಗಳಲ್ಲಿ ಸಂಚರಿಸುವುದು ಸಾಮಾನ್ಯವಾಗಿತ್ತು. ಮತ್ತೊಂದು ಹವ್ಯಾಸ ವಾಹನಗಳದ್ದು. ಬಹಳ ಪ್ರೀತಿಯಿಂದ ಮೋಟಾರು ಕಾರುಗಳನ್ನು ನೋಡಿಕೊಳ್ಳುತ್ತಿದ್ದರು. ತಮ್ಮ ಹವ್ಯಾಸಗಳ ಬಗ್ಗೆ ಹಾಗೂ ರಾಜಕೀಯ ವಿಚಾರಗಳ ಬಗ್ಗೆ ಒಡನಾಡಿಗಳೊಡನೆ ವಿಚಾರ ಸಂಗ್ರಹಿಸಿ ತಮ್ಮದೇ ಆದ ಶೈಲಿಯಲ್ಲಿ ಮಾತನಾಡುವುದು, ತೀರ್ಮಾನಗಳನ್ನು ನೀಡುವುದು ಇವರ ಜಾಣ್ಮೆ. ಚನ್ನಯ್ಯನವರು ಬಹುಪಾಲು ಸಮಯ ಸಾರ್ವಜನಿಕ ಕ್ಷೇತ್ರದಲ್ಲೇ ಕಳೆದರು. ಸ್ವಾತಂತ್ರ ಆಂದೋಲನ, ಕಾರಗೃಹ ವಾಸ, ತಾವೇ ಸ್ಥಾಪಿಸಿದ ದತ್ತಿಗಳ ಮೇಲ್ವಿಚಾರಣೆ, ಸ್ವಾತಂತ್ರ್ಯೋತ್ತರದಲ್ಲಿ ಆಡಳಿತದಲ್ಲಿ ತಮ್ಮ ವೈಯಕ್ತಿಕ ಪ್ರಭಾವ ಬೀರುವುದು, ಪಕ್ಷದ ಸಂಘಟನೆಗಳಲ್ಲಿ ಸದಾ ತೊಡಗಿರುವುದು - ಹೀಗೆ ಇವರ ಬದುಕು 1971 ರ ತನಕ ಸಾಗಿ ಚಿರ ವಿಶ್ರಾಂತಿ ಪಡೆಯಿತು.

ನವಜೀವನ ಟ್ರಸ್ಟ್‌ನ ಎಲ್ಲಾ ಪ್ರಕಾಶನಗಳನ್ನು ಸಂಗ್ರಹಿಸುವ ಮತ್ತು ಅಚ್ಚುಕಟ್ಟಾಗಿ ರಟ್ಟು ಹಾಕಿ ಶೇಖರಿಸುವುದು ಶ್ರೀ ಚನ್ನಯ್ಯನವರ ಹವ್ಯಾಸಗಳಲ್ಲೊಂದು. ಸ್ವತಃ ಕುಸ್ತಿಪಟುವಾಗಿದ್ದ ಶ್ರೀ ಚನ್ನಯ್ಯನವರು ಮೈಸೂರಿನ ಕುಸ್ತಿ - ಗರಡಿಗಳ ಸಂಘದ ಪೋಷಕರಾಗಿದ್ದರು. ಇವರ ಹೆಸರಿನಲ್ಲಿ ಪ್ರಸಿದ್ಧ ಮೈಸೂರು ಅಖಾಡಾ ಸ್ಥಾಪಿಸಲ್ಪಟ್ಟಿದೆ. ಬೆಟ್ಟಗುಡ್ಡಗಳು, ಕಾಡುಪ್ರದೇಶಗಳು ಇವರಿಗೆ ಬಹುಪ್ರಿಯವಾದುವು. ಸಮಯ ಸಿಕ್ಕಾಗ ಉದಕಮಂಡಲ - ಕೊಡಗಿನ ಮಡಿಕೇರಿ ಇತ್ಯಾದಿ ಸ್ಥಳಗಳಲ್ಲಿ ಸಂಚರಿಸುವುದು ಸಾಮಾನ್ಯವಾಗಿತ್ತು.

Writer - ತುಳಸೀದಾಸ್ ದಾಸಪ್ಪ

contributor

Editor - ತುಳಸೀದಾಸ್ ದಾಸಪ್ಪ

contributor

Similar News