ಪರ್ಪುಂಜದಲ್ಲೊಂದು ವಿಭಿನ್ನ ನರ್ಸರಿ

Update: 2018-09-01 13:20 GMT

              ಚಂದ್ರ ಸೌಗಂಧಿಕಾ 

ಸಾಮಾನ್ಯವಾಗಿ ಒಂದು ನರ್ಸರಿಗೆ ಹೋದಾಕ್ಷಣ ಪ್ಲಾಸ್ಟಿಕ್ ಪಾತಿಯಲ್ಲೋ, ಮಣ್ಣಿನ ಕುಂಡದಲ್ಲೋ ನೆಟ್ಟು ಬೆಳೆಸಿ ಮಾರಲು ತಯಾರಾಗಿರಿಸಿದ ಸಾಲುಸಾಲು ಗಿಡಗಳನ್ನು ಕಾಣುತ್ತೇವೆ. ವ್ಯವಹಾರದ ಉದ್ದೇಶದಿಂದ ಪರಿಗಣಿಸಿದರೆ ಇದನ್ನು ತಪ್ಪೆನ್ನಲಾಗದು. ಆದರೆ ಮಾಣಿ-ಮೈಸೂರು ಹೆದ್ದಾರಿಯಲ್ಲಿ ಪುತ್ತೂರಿನಿಂದ ಸುಳ್ಯ ರೋಡ್‌ನಲ್ಲಿ ಸುಮಾರು ಆರು ಕಿ.ಮೀ. ದೂರದ ಪರ್ಪುಂಜದ ಲ್ಲಿರುವ ಸೌಗಂಧಿಕಾ ನರ್ಸರಿಗೆ ಹೋದರೆ ನಮಗೆ ವ್ಯತಿರಿಕ್ತವಾದ ಅನುಭವವಾಗುತ್ತದೆ. ಕಾರಣ ಈ ನರ್ಸರಿ ಇರುವುದು ಮನೆಯ ಅಂಗಳದಲ್ಲಿ. ತುಂಡು ಭೂಮಿಯಂತಿರುವ ಈ ಮನೆಯ ಸುತ್ತಮುತ್ತ ಎಲ್ಲಿ ನೋಡಿದರೂ ನೆಲವೇ ಕಾಣಸಿಗದಷ್ಟು ಗಿಡಗಳನ್ನು ಕಾಣಬಹುದು. ಹಾಗಾಗಿಯೇ ನಮಗೆ ಇಲ್ಲಿಗೆ ಹೋದಾಗ ಒಂದು ನರ್ಸರಿಗೆ ಹೋದದಕ್ಕಿಂತ ಹೆಚ್ಚಾಗಿ, ಆಸ್ಥೆಯಿಂದ ಬೆಳೆಸಿದ ಸುಂದರ ತೋಟವೊಂದಕ್ಕೆ ಹೋದ ಅನುಭವವಾಗುತ್ತದೆ. ಈ ನರ್ಸರಿಯ ವಿಶೇಷತೆ ಅಂದರೆ ಗಿಡಗಳಲ್ಲಿರುವ ವೈವಿಧ್ಯತೆ. ಸಾಮಾನ್ಯ ನರ್ಸರಿಯಲ್ಲಿ ವಿವಿಧ ಬಣ್ಣಗಳ ಗುಲಾಬಿ, ದಾಸವಾಳ, ಸದಾಪುಷ್ಪ, ತೆಂಗು, ಬಾಳೆ, ಅಡಿಕೆ ಮುಂತಾದ ಗಿಡಗಳನ್ನು ಕಾಣುವುದೇ ಅಧಿಕ. ಆದರೆ ಇಲ್ಲಿ ತರಹೇವಾರಿ ತಾವರೆಗಳು, ಅಪರೂಪದ ಔಷಧೀಯ ಗಿಡಗಳು, ವಿವಿಧ ರೀತಿಯ ಸ್ವದೇಶಿ, ವಿದೇಶಿ ಹಣ್ಣಿನ ಗಿಡಗಳು ನಮ್ಮ ಕಣ್ಮನ ಸೆಳೆಯುತ್ತವೆ. ಅಲ್ಲೂ ಕಾಣಸಿಗುವ ವಿಭಿನ್ನತೆಯನ್ನು ಕಂಡು ಬೆರಗಾಗುವ ಸರದಿ ನಮ್ಮದು. ಸುಮಾರು 25 ಬಣ್ಣದ ವಾಟರ್ ಲಿಲ್ಲಿ, ಪುರಾಣಕಾಲದಲ್ಲಿ ಹಿಂದೂ ದೇವತೆಗಳ ಆಸನವಾಗಿದ್ದ ಅಥವಾ ಕೈಯಲ್ಲಿ ರಾರಾಜಿಸುತ್ತಿದ್ದ ಪದ್ಮ ಅಥವಾ ಕಮಲವೂ (ನೀಂಪಿಯಾ), ನ್ಯೂಪುರಾ ಜಪಾನಿಕಾ, ವಾಟರ್ ಬ್ಯಾಂಬೋ ಹೀಗೆ ವಿಭಿನ್ನ ಮಾದರಿಯ ಜಲಸಸ್ಯಗಳನ್ನು ನಾವಿಲ್ಲಿ ಕಾಣಬಹುದು. ಸುಮಾರು ಐವತ್ತು ವಿಭಿನ್ನ ಮಾದರಿಯ ಹಾಗೂ ಬಣ್ಣದಲ್ಲಿರುವ ಆರ್ಚಿಡ್‌ನ ಸೌಂದರ್ಯವನ್ನು ಸವಿಯುವುದೇ ಕಣ್ಣಿಗೆ ಹಬ್ಬ. ಸ್ವರ್ಣ ಸಂಪಿಗೆಯಿಂದ ಹಿಡಿದು ಗೋ ಸಂಪಿಗೆಯವರೆಗೆ ಹಲವಾರು ಪ್ರಭೇದದ ಸಂಪಿಗೆಯೂ ಇಲ್ಲಿದೆ.

ಈ ನರ್ಸರಿಯ ರೂವಾರಿ ಚಂದ್ರರದ್ದು ಬರಿಯ ವ್ಯಾವಹಾರಿಕ ಮನಸಲ್ಲ. ಗಿಡಗಳನ್ನು ಮಾರುವ ಉದ್ದೇಶದೊಂದಿಗೆ ಅದನ್ನು ಪ್ರೀತಿಸುವ ಮನಸ್ಸೂ ಇದೆ ಅವರಿಗೆ. ಒಂದು ಗಿಡದ ಬಗೆಗೆ ಹೇಳುವಾಗಲೂ ಅಷ್ಟೇ ಪ್ರೀತಿಯಿಂದ ಅದರ ಆಮೂಲಾಗ್ರ ವಿಷಯವನ್ನು ತಿಳಿಸುವಷ್ಟು ಅರಿವು. ಸಾಧಾರಣ ಎಲ್ಲಾ ಗಿಡಗಳ ಸೈಂಟಿಫಿಕ್ ಹೆಸರುಗಳೂ ಅವರಿಗೆ ಕರತಲಾಮಲಕ. ಗ್ರಾಹಕರಿಗೆ ಗಿಡಗಳನ್ನು ಮಾರುವಾಗಲೂ, ಆ ಗಿಡಗಳನ್ನು ಯಾವ ಸೀಸನ್‌ಗೆ ನೆಡಬೇಕು, ಯಾವ ರೀತಿ ನೆಡಬೇಕು, ಹೇಗೆ ಬೆಳೆಸಬೇಕು ಎನ್ನುವುದನ್ನು ಸವಿವರಣೆ ನೀಡುವಲ್ಲಿಯೂ ಅವರಿಗೆ ಅಷ್ಟೇ ತಾಳ್ಮೆ.

ಚಂದ್ರರ ಗಿಡ ಸಂಗ್ರಹಣೆ ಕೂಡಾ ಭಿನ್ನ. ಅವರು ಎಲ್ಲೇ ಹೋದರೂ, ಅಲ್ಲಿ ಸಂಗ್ರಹ ಯೋಗ್ಯ ಗಿಡಗಳನ್ನು ಕಂಡರೆ ಅದನ್ನು ತಂದು ನೆಟ್ಟು ಬೆಳೆಸಿ, ಅವುಗಳನ್ನು ಪೋಷಿಸುತ್ತಾರಂತೆ. ಚಾರಣ ಹೋಗುವ ಹವ್ಯಾಸವಿರುವ ಅವರು, ಕಾಡಿನಲ್ಲಿ ಬೆಳೆಯುವ ಆರ್ಚಿಡ್ ಗಿಡಗಳನ್ನು ಮನೆಗೆ ತಂದು ಬೆಳೆಸಿದ್ದಾರೆ. ಇಂದು ಸುಮಾರು ಐವತ್ತಕ್ಕಿಂತ ಅಧಿಕ ಪ್ರಭೇದದ ಆರ್ಚಿಡ್ ಅವರ ಸಂಗ್ರಹದಲ್ಲಿದೆ. ಅಳಿವಿನಂಚಿನಲ್ಲಿರುವ, ಇಂದು ಜನಸಾಮಾನ್ಯರು ಗುರುತೇ ಹಿಡಿಯದಂತಹ ಪಶ್ಚಿಮ ಘಟ್ಟದ ಕಾಡುಹಣ್ಣುಗಳ ಪ್ರಭೇದದ ಗಿಡಗಳೂ ಇಲ್ಲಿ ಲಭ್ಯ. ಅಲ್ಲದೆ ಜಲಬ್ರಾಹ್ಮಿ, ಹಿಪ್ಪಲಿ, ಬಜೆ, ಮಧುನಾಶಿನಿ, ಲಿಂಬೆ ಹುಲ್ಲು ವರ್ಷವಿಡೀ ಫಲ ಕೊಡುವ ಗಿಡ್ಡ ತಳಿಯ ಕರಿಮೆಣಸು ಮುಂತಾದ ಔಷಧೀಯ ಸಸ್ಯಗಳನ್ನೂ ನಾವು ಇಲ್ಲಿ ಕಾಣಬಹುದು.

ಈ ನರ್ಸರಿಯನ್ನು ಚಂದ್ರ ಮತ್ತು ಅವರ ಪತ್ನಿ ವಿದ್ಯಾಲಕ್ಷ್ಮೀಯ ವರು ಇಬ್ಬರೇ ನಿರ್ವಹಿಸುತ್ತಿರುವುದು ವಿಶೇಷ. ಇಲ್ಲಿ ಬೇರಾವ ಕೆಲಸಗಾರರಿಲ್ಲ. ಆದ್ದರಿಂದ ಇಲ್ಲಿ ಯಾಂತ್ರೀಕೃತ ವ್ಯವಹಾರ ಕಾಣು ವುದಿಲ್ಲ. ಗಿಡಗಳ ಜೊತೆಗೆ ನಮಗೆ ಪ್ರೀತಿಯ ಮಾತುಗಳೂ ಸಿಗುತ್ತದೆ. ಹೆಚ್ಚಿನ ಮಾಹಿತಿಗೆ ಚಂದ್ರ ಸೌಗಂಧಿಕಾ (ಮೊ.ಸಂ.:9900409380)ರನ್ನು ಸಂಪರ್ಕಿಸಬಹುದು.

►ಮನೆಯಂಗಳದಲ್ಲಿ ಸ್ವದೇಶಿ, ವಿದೇಶಿ ಹಣ್ಣಿನ ಗಿಡಗಳು

►ಕಣ್ಣಿಗೆ ಮುದ ನೀಡುವ ಅಪರೂಪದ ಔಷಧೀಯ ಸಸ್ಯ ಸಾಮ್ರಾಜ್ಯ

ಸೌಗಂಧಿಕದ ಟೀ ಸ್ಟಾಲ್‌ನಲ್ಲಿ ಸಿಗುವಂಥದ್ದು ಪಕ್ಕಾ ಮನೆಯ ಆಹಾರವಾದ್ದರಿಂದ ಯಾವುದೇ ಆರೋಗ್ಯ ಸಮಸ್ಯೆಯೂ ಇರುವುದಿಲ್ಲ. ನರ್ಸರಿ ಯಲ್ಲಿ ಬೆಳೆದ ಸಸ್ಯಗಳ ಎಲೆ, ಚಿಗುರುಗಳಿಂದ ಚಹಾ ಮಾಡಿದರೆ, ಜ್ಯೂಸ್‌ಗಳನ್ನು ಅಲ್ಲೇ ಬೆಳೆದ ಹಣ್ಣುಗಳಿಂದ ಮಾಡುತ್ತಾರೆ. ಇದರಿಂದ ಯಾವುದೇ ರಾಸಾಯನಿಕ ವಸ್ತುಗಳಿಲ್ಲದ ಆಹಾರ ಸೇವನೆ ಮಾಡಿದಂತಾಗುತ್ತದೆ. ಅಲ್ಲದೆ ದಿನನಿತ್ಯದ ಜಂಜಾಟದಲ್ಲಿ ಬಳಲಿರುವ ನಮಗೆ ಈ ರೀತಿ ವಾರಕ್ಕೊಮ್ಮೆ ಗಿಡ, ಮರಗಳ ಮಧ್ಯೆ ಆಹ್ಲಾದಕರ ಪರಿಸರದಲ್ಲಿ ಸಮಯ ಕಳೆಯುವುದು ಹಿತಕರ ಅನುಭವವನ್ನೂ ನೀಡುತ್ತದೆ.

 ವಿಷ್ಣುಕುಮಾರ್ ಎ. ಉಪನ್ಯಾಸಕರು, ಪುತ್ತೂರು ವಿವೇಕಾಂದ ಕಾಲೇಜು

ಗಿಡಮರಗಳ ಬಗ್ಗೆ ಚಂದ್ರರಿಗೆ ಒಳ್ಳೆಯ ಜ್ಞಾನ ಇದೆ. ಅವರು ಒಟ್ಟು ವ್ಯಾಪಾರಕ್ಕೆ ಇಳಿದದ್ದಲ್ಲ. ನಿಜವಾದ ಜ್ಞಾನ ಇದ್ದೇ ಈ ವ್ಯಾಪಾರ ಮಾಡುತ್ತಿರುವುದು. ಸಸ್ಯಸಂಕುಲದ ಬಗೆಗೆ ಚಂದ್ರರಿಗಿರುವ ನಿಜವಾದ ಪ್ರೀತಿ ನಮಗೆ ಅವರನ್ನು ಮಾತನಾಡಿಸಿದಾಗ ತಿಳಿಯುತ್ತದೆ. ಈ ಪ್ರೀತಿಯ ಕಾರಣದಿಂದಲೇ ಬೇರೆಲ್ಲೂ ಇರದ ಸಸ್ಯ ವೈವಿಧ್ಯತೆಯನ್ನು ನಾವು ಸೌಗಂಧಿಕಾ ನರ್ಸರಿಯಲ್ಲಿ ಕಾಣಬಹುದು.

ಶೋಭಾ ಮಾಧವ ಕಲ್ಲಾರೆ, ಗೃಹಿಣಿ

ಚಹಾ-ತಂಪು ಪಾನೀಯದ ಕ್ಯಾಂಟೀನ್

ಚಂದ್ರರು ಈ ನರ್ಸರಿಯ ಪ್ರವೇಶ ದ್ವಾರದಲ್ಲೇ ವಿಶೇಷ ಕ್ಯಾಂಟೀನೊಂದನ್ನು ನಡೆಸುತ್ತಿದ್ದಾರೆ. ಬಳ್ಳಿಗಳ ಚಪ್ಪರ, ಗಿಡಗಳ ನಡುವೆಯೇ ಈ ಕ್ಯಾಂಟೀನ್ ಇದ್ದು, ಈ ಆಹ್ಲಾದದ ಅನುಭವಕ್ಕಾಗಿಯೇ ಇದು ತನ್ನದೇ ಗ್ರಾಹಕರನ್ನು ಹೊಂದಿದೆ ಎನ್ನುತ್ತಾರೆ ಅವರು. ಈ ಕ್ಯಾಂಟೀನ್‌ನ ಉಸ್ತುವಾರಿ ಚಂದ್ರರ ಪತ್ನಿ ವಿದ್ಯಾಲಕ್ಷ್ಮೀಯವರದ್ದು. ಈ ಕ್ಯಾಂಟೀನ್ ವಿಧವಿಧದ ಚಹಾಕ್ಕಾಗಿ ಖ್ಯಾತಿ ಹೊಂದಿದೆ. ತುಳಸಿ ಚಹಾ, ಶುಂಠಿ ಚಹಾ, ದಾಸವಾಳ ಹೂವಿನ ಚಹಾ, ಗುಲಾಬಿ ಚಹಾ, ಲಿಂಬೆ ಚಹಾ, ಲಿಂಬೆ ಹುಲ್ಲಿನ ಚಹಾ, ವೀಳ್ಯೆದೆಲೆ ಚಹಾ, ಬಿದಿರಿನ ಎಲೆಯ ಚಹಾ, ಬ್ಯಾಂಬೋ ಚಹಾ, ಮಸಾಲ ಚಹಾ, ಜಪಾನ್ ಮಿಂಟ್ ಚಹಾ ಇಲ್ಲಿ ದೊರಕುತ್ತದೆ. ಅಲ್ಲದೆ ಆಯಾ ಕಾಲಕ್ಕೆ ತಕ್ಕಂತೆ ಅಲ್ಲೇ ಬೆಳೆದ ಫ್ಯಾಷನ್ ಫ್ರೂಟ್ಸ್ ಮೊದಲಾದ ಹಣ್ಣುಗಳಿಂದ ಆಗಲೇ ಗಿಡಗಳಿಂದ ಕಿತ್ತು ತಂಪು ಪಾನೀಯ ತಯಾರಿಸಿಕೊಡುವುದು ಇಲ್ಲಿನ ವಿಶೇಷ. ವಿವಿಧ ಸಂದರ್ಭಕ್ಕೆ ತಕ್ಕಂತೆ ಪತ್ರೊಡೆ, ಹಲಸಿನ ಹಣ್ಣಿನ ಕಡುಬು, ಅರಿಶಿಣ ಎಲೆಯ ಕಡುಬು ಮುಂತಾದ ಖಾದ್ಯವೂ ಇಲ್ಲಿ ಲಭ್ಯ.

 

 

 

 

Writer - ವಿಶ್ವನಾಥ ಪಂಜಿಮೊಗರು

contributor

Editor - ವಿಶ್ವನಾಥ ಪಂಜಿಮೊಗರು

contributor

Similar News