ಜೋಕಟ್ಟೆ: ಕುಸಿಯುತ್ತಿರುವ ಗುಡ್ಡ; ಅಪಾಯದಲ್ಲಿ ಹಲವು ಮನೆಗಳು

Update: 2018-09-02 06:09 GMT
ಗುಡ್ಡ ಕುಸಿಯುವ ಭೀತಿ ಎದುರಿಸುತ್ತಿರುವ ಜೋಕಟ್ಟೆಯ ಪ್ರದೇಶ.

ಮಂಗಳೂರು, ಸೆ.1: ತೋಕೂರು 62 ಮತ್ತು ಕೆಂಜಾರು ಗ್ರಾಪಂ ಗಡಿಭಾಗದಲ್ಲಿರುವ ಜೋಕಟ್ಟೆ ಬಳಿಯ ಗುಡ್ಡವೊಂದು ಕೆಲವು ದಿನಗಳಿಂದೀಚೆಗೆ ಕುಸಿಯುತ್ತಿದೆ. ಇದರ ಪಕ್ಕದಲ್ಲೇ ಹಲವು ಮನೆಗಳಿದ್ದು, ಆ ಪೈಕಿ ಮೂರ್ನಾಲ್ಕು ಮನೆಗಳು ಅಪಾಯದಲ್ಲಿವೆ. ಈ ಮಧ್ಯೆ ಇದೇ ಗುಡ್ಡದಲ್ಲಿ ‘ಕೆಪಿಟಿಸಿಎಲ್’ಗೆ ಸೇರಿದ ಹೈಟೆನ್ಶನ್ ವಿದ್ಯುತ್ ತಂತಿಯೂ ಇದ್ದು, ಇದರ ಟವರ್ ಯಾವುದೇ ಕ್ಷಣ ನೆಲಕ್ಕುರುಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹಾಗಾಗಿ ಇಲ್ಲಿನ ಮೂರ್ನಾಲ್ಕು ಮನೆಗಳ ನಿವಾಸಿಗಳು ರಾತ್ರಿ ಹೊತ್ತು ಸಂಬಂಧಿಕರ, ಸ್ನೇಹಿತರ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಕೂಡ ಇದನ್ನು ದ.ಕ. ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಜನಪ್ರತಿನಿಧಿಗಳು ಕೂಡಾ ಇತ್ತ ಗಮನ ಹರಿಸಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಜೋಕಟ್ಟೆಯ ರೈಲು ಹಳಿಯ ಪಕ್ಕದಲ್ಲೇ ಬೃಹತ್ ಗುಡ್ಡವಿದೆ. ಕಾವೂರಿನಿಂದ ಎಂಆರ್‌ಪಿಎಲ್‌ಗೆಸಾಗಿಸುವ ಕೆಪಿಟಿಸಿಎಲ್‌ಗೆ ಸೇರಿದ ಹೈಟೆನ್ಶನ್ ತಂತಿಯನ್ನೊಳಗೊಂಡ ಟವರ್ ಕೂಡಾ ಈ ಗುಡ್ಡದಲ್ಲಿದೆ. ಗುಡ್ಡದ ತಟದಲ್ಲಿ ತಡೆಗೋಡೆ ಹಾಕಲಾಗಿದ್ದರೂ ಕೂಡಾ ದಿನದಿಂದ ದಿನಕ್ಕೆ ಗುಡ್ಡ ಕುಸಿತವು ಅಧಿಕವಾಗುತ್ತಿರುವುದರಿಂದ ತಡೆಗೋಡೆಯಲ್ಲೂ ಬಿರುಕು ಕಾಣಿಸಿವೆ. ಇದರಿಂದ ಇಲ್ಲಿನ ನಿವಾಸಿಗಳು ಭಯಭೀತರಾಗಿದ್ದಾರೆ. ಸಂಬಂಧಪಟ್ಟವರ ಗಮನ ಸೆಳೆದರೂ ಯಾರೂ ಇತ್ತ ಸುಳಿದಾಡಿಲ್ಲ.

ಜೋಕಟ್ಟೆಯ ಖಾಸಗಿ ಶಾಲೆಯೊಂದರ ಮೇಲೂ ಈ ಹೈಟೆನ್ಶನ್ ತಂತಿ ಹರಿದಿವೆ. ಗುಡ್ಡ ಕುಸಿದರೆ ಟವರ್‌ನೊಂದಿಗೆ ಹೈಟೆನ್ಶನ್ ತಂತಿಯು ಶಾಲೆಯ ಮೇಲೆ ಬೀಳುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಹಾಗೇ ಬಿದ್ದರೆ ಎದುರಾಗುವ ಅಪಾಯ ಊಹಿಸಲೂ ಸಾಧ್ಯವಿಲ್ಲ. ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕೆಪಿಟಿಸಿಎಲ್ ಚೆಲ್ಲಾಟವಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಇದು ಕಾವೂರಿನಿಂದ ಜೋಕಟ್ಟೆ ಮಾರ್ಗವಾಗಿ ಎಂಆರ್‌ಪಿಎಲ್‌ಗೆ 110ಕೆವಿ ವಿದ್ಯುತ್ ಪ್ರವಹಿಸುವ ಟವರ್ ಆಗಿದ್ದು, ಎರಡು ದಿನಗಳ ಹಿಂದೆ ನಮಗೆ ಇಲ್ಲಿನ ಸಮಸ್ಯೆಯ ಬಗ್ಗೆ ತಿಳಿಯಿತು. ತಕ್ಷಣ ನಾವು ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಪರ್ಯಾಯ ಕ್ರಮಕ್ಕೆ ಮುಂದಾಗಿದ್ದೇವೆ. ಈಗಾಗಲೇ ಬಿರುಕು ಬಿಟ್ಟವುಗಳ ದುರಸ್ತಿಯಲ್ಲದೆ, ಹೊಸ ಟವರನ್ನು ಅಳವಡಿಸುತ್ತೇವೆ. ಇದಕ್ಕೆ ಕನಿಷ್ಠ 47 ದಿನಗಳು ಬೇಕಾಗಬಹುದು. ಸ್ಥಳೀಯರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ.

ಅನಿಲ್, ಕೆಪಿಟಿಸಿಎಲ್ ಅಧಿಕಾರಿ, ಮಂಗಳೂರು

ಕಳೆದ ಕೆಲವು ದಿನಗಳಿಂದ ಈ ಭಾಗದ ಜನರ ಬದುಕು ಅತಂತ್ರವಾಗಿದೆ.ವಿಷಯ ತಿಳಿದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದಿದ್ದೆವು. ಅದರಂತೆ ಗುರುವಾರ ಪೂರ್ವಾಹ್ನ 11 ಗಂಟೆಯ ಬಳಿಕ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಕೆಲಸ ಕಾರ್ಯ ಆರಂಭಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಶೀಘ್ರದಲ್ಲೇ ಸಮಸ್ಯೆಗೆ ಪರಿಹಾರ ಕಂಡುಕೊಂಡು ಸ್ಥಳೀಯರ ಆತಂಕ ದೂರ ಮಾಡುವ ಅಗತ್ಯವಿದೆ.

 ಮುನೀರ್ ಕಾಟಿಪಳ್ಳ, ರಾಜ್ಯಾಧ್ಯಕ್ಷರು, ಡಿವೈಎಫ್‌ಐ

ಮೊನ್ನೆಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಪರಿಣಾಮ ಗುಡ್ಡವೂ ಕುಸಿಯತೊಡಗಿದೆ. ಈಗಲೇ ಅಪಾಯದ ಸ್ಥಿತಿಯಲ್ಲಿ ನಾವಿದ್ದೇವೆ. ಗುಡ್ಡ ಇನ್ನಷ್ಟು ಕುಸಿದರೆ ಊಹಿಸಲೂ ಸಾಧ್ಯವಿಲ್ಲ. ಮನೆಯಲ್ಲಿ ಮಹಿಳೆಯರು, ಮಕ್ಕಳು, ಹಿರಿಯರು ಕೂಡಾ ಇದ್ದಾರೆ. ಏನು ಮಾಡಬೇಕು ಎಂದು ತೋಚುತ್ತಿಲ್ಲ.

 ಅಬ್ದುಲ್ ಕರೀಂ, ಸ್ಥಳೀಯ ನಿವಾಸಿ

ನಾವು ನಮ್ಮ ಮನೆಯಲ್ಲೇ ಕೂರುವ ಸ್ಥಿತಿಯಲ್ಲಿಲ್ಲ. ಹಗಲು ಹೊತ್ತನ್ನು ಹೇಗಾದರು ಕಳೆಯುತ್ತೇವೆ. ರಾತ್ರಿ ಏನಾಗಬಹುದು ಎಂದು ಹೇಳಲಿಕ್ಕಾಗದು. ಕೆಪಿಟಿಸಿಎಲ್ ಅಧಿಕಾರಿಗಳ, ಗ್ರಾಮ ಪಂಚಾಯತ್ ಸದಸ್ಯರ ಗಮನ ಸೆಳೆದರೂ ಪ್ರಯೋಜನವಾಗಿಲ್ಲ.

ಅಬ್ದುಲ್ ಖಾದರ್, ಜೋಕಟ್ಟೆ

ನಮ್ಮ ಬದುಕು ಈಗ ಅಥವಾ ನಾಳೆ ಎಂಬಂತಿದೆ. ರಾತ್ರಿ ಹೊತ್ತು ಇಲ್ಲಿ ಕಳೆಯಲು ಸಾಧ್ಯವೇ ಇಲ್ಲ. ಹಾಗಾಗಿ ಒಂದಷ್ಟು ದೂರದ ಮನೆಯಲ್ಲಿ ಹೋಗಿ ಮಲಗುವಂತಹ ಸ್ಥಿತಿ ಇದೆ. ನಮ್ಮ ನೋವಿಗೆ ಈವರೆಗೆ ಯಾರೂ ಸ್ಪಂದಿಸಿಲ್ಲ. ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಈ ಕಡೆ ಬಂದಿಲ್ಲ.

ಅಬೂಬಕರ್ ಬಾವ, ಸ್ಥಳೀಯ ನಿವಾಸಿ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News