ಪ್ರಕೃತಿಯೊಂದಿಗೆ ಬದುಕು ಕಟ್ಟಿಕೊಂಡವರು ಪ್ರಕೃತಿಯಿಂದಲೇ ಬದುಕು ಕಳೆದುಕೊಂಡರು

Update: 2018-09-02 16:28 GMT

ಮಡಿಕೇರಿ ಸೆ.2 : ಕೇವಲ 4,102 ಚದರ ಕಿಲೋ ಮೀಟರ್ ಭೌಗೋಳಿಕ ವಿಸ್ತೀರ್ಣ ಹೊಂದಿರುವ ಪುಟ್ಟ ಕೊಡಗು ಜಿಲ್ಲೆ ಇಂದು ದೊಡ್ಡ ಅಪಾಯವನ್ನೇ ಎದುರಿಸುತ್ತಿದೆ. ಎಲ್ಲಿ ನೋಡಿದರಲ್ಲಿ ಪ್ರವಾಹದ ನೀರಿನಿಂದ ಕೊಚ್ಚಿ ಬಂದ ಗುಡ್ಡದ ಮಣ್ಣಿನ ರಾಶಿಯೇ ಕಾಣುತ್ತಿದೆ.

ಗ್ರಾಮೀಣ ಜನರ ಬದುಕು ಕಾಡಿನಲ್ಲಿ ಕಣ್ಣು, ಕಿವಿ, ಬಾಯಿಗೆ ಬಟ್ಟೆ ಕಟ್ಟಿ ಬಿಟ್ಟಂತಾಗಿದೆ. ಪ್ರಕೃತಿಯನ್ನೇ ಆರಾಧಿಸುವ ಗ್ರಾಮೀಣರಿಗೆ ಪರಿಸರವೇ ಶಾಪವಾಗಬಹುದೆನ್ನುವ ಊಹೆ ಕೂಡ ಇರಲಿಲ್ಲ. ಜಿಲ್ಲೆಯಲ್ಲಿರುವ 5,54,762 ಜನಸಂಖ್ಯೆಯಲ್ಲಿ 4,73,659 ಮಂದಿ ಗ್ರಾಮೀಣರೇ ಆಗಿದ್ದಾರೆ. ನಗರ ಮತ್ತು ಪಟ್ಟಣದ ಜನಸಂಖ್ಯೆ ಕೇವಲ 81,103 ಮಾತ್ರ. ಒಟ್ಟು 296 ಗ್ರಾಮಗಳಲ್ಲಿ 291 ಜನವಸತಿ ಗ್ರಾಮಗಳಾಗಿವೆ. ಪ್ರತೀ ಚದರ ಕಿಲೋ ಮೀಟರ್‍ಗೆ 135 ಜನಸಾಂದ್ರತೆ ಇದೆ. 

ಈ ಲೆಕ್ಕಾಚಾರದ ಪ್ರಕಾರ ಕೊಡಗು ಜಿಲ್ಲೆ ಒಂದು ಗ್ರಾಮೀಣ ವ್ಯಾಪ್ತಿಯೇ ಆಗಿದೆ. ಇಂದು ಗ್ರಾಮೀಣರ ಬದುಕು ನರಕಯಾತನೆಗೂ ಕಡೆಯಾಗಿದೆ. ಮಡಿಕೇರಿ ತಾಲೂಕಿನ ಮಕ್ಕಂದೂರು, ಮುಕ್ಕೋಡ್ಲು, ಕಾಲೂರು, ಮೊಣ್ಣಂಗೇರಿ, ಜೋಡುಪಾಲ ಗ್ರಾಮಗಳು ನಾಪತ್ತೆಯಾದಂತಿವೆ. ಜುಲೈ ತಿಂಗಳ ತುಂಬಾ ಸುರಿದ ಮುಂಗಾರು ಆಗಸ್ಟ್ ತಿಂಗಳಿನಲ್ಲಿ ಸರ್ವನಾಶದ ಭವಿಷ್ಯವನ್ನು ಬರೆಯಲಾರಂಭಿಸಿತು. ಆಗಸ್ಟ್ 10 ರ ನಂತರ ತೀವ್ರಗೊಂಡ ಮಹಾಮಳೆ ಇಡೀ ಗ್ರಾಮಕ್ಕೆ ಗ್ರಾಮವನ್ನೇ ಸ್ವಾಹ ಮಾಡಿಬಿಡುತ್ತದೆ ಎನ್ನುವ ಯಾವುದೇ ಕಲ್ಪನೆ ಅಧಿಕಾರಿಗಳು ಅಥವಾ ವಿಜ್ಞಾನಿಗಳಿಗೂ ಇರಲಿಲ್ಲ. ಮಳೆಯ ಪ್ರಮಾಣ ಹೆಚ್ಚಾಗುತ್ತದೆ ಎನ್ನುವ ಮಾಹಿತಿಗಷ್ಟೇ ಸೀಮಿತವಾದ ಜಿಲ್ಲಾಡಳಿತ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ರಜೆ ನೀಡುವ ಕೆಲಸವನ್ನಷ್ಟೇ ಮಾಡಿತು ಹೊರತು ಮಹಾಮಳೆಯ ಸಂದರ್ಭ ಎತ್ತರದ ಪ್ರದೇಶ ಮತ್ತು ತಗ್ಗು ಪ್ರದೇಶದ ಮಂದಿ ಯಾವ ಯಾವ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕೆನ್ನುವ ಬಗ್ಗೆ ಜಾಗೃತಿಯನ್ನು ಮೂಡಿಸಲಿಲ್ಲ.

ಅಲ್ಲದೆ ಅಧಿಕಾರಿಗಳ ತಂಡ ಏನು ಮಾಡಬೇಕು ಎನ್ನುವ ಬಗ್ಗೆಯೂ ಸ್ಪಷ್ಟ ಸೂಚನೆಗಳಿರಲಿಲ್ಲ. ಜಿಲ್ಲಾಡಳಿತದ ವತಿಯಿಂದ ಅಪಾಯದಂಚಿನ ಗ್ರಾಮಗಳ ಸರ್ವೆ ಮತ್ತು ಸಮೀಕ್ಷೆ ಕಾರ್ಯಗಳು ಸಮರ್ಪಕವಾಗಿ ನಡೆದಿದ್ದರೆ ಹಾಗೂ ಗ್ರಾಮಸ್ಥರ ಮನವೊಲಿಸಿದ್ದರೆ ಅನಾಹುತಗಳು ಸಂಭವಿಸುವ ಮೊದಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ರಕ್ಷಿಸುವ ಮಹಾಕಾರ್ಯ ನಡೆಯುತ್ತಿತ್ತು. ಆದರೆ ಇಂದು ಎಲ್ಲವೂ ಮುಗಿದು ಹೋಗಿದೆ. 

ಕಳೆದ 40, 50, 60 ವರ್ಷಗಳಿಂದ ಬೆಟ್ಟ ಗುಡ್ಡಗಳ ಪ್ರದೇಶ ಮಕ್ಕಂದೂರು, ಮುಕ್ಕೋಡ್ಲು, ಕಾಲೂರು, ಹಾಲೇರಿ, ಮೊಣ್ಣಂಗೇರಿ ಗ್ರಾಮದಲ್ಲಿ ನೂರಾರು ಕುಟುಂಬಗಳು ವಾಸ ಮಾಡುತ್ತಿವೆ. ವಾರ್ಷಿಕ 200 ರಿಂದ 300 ಇಂಚು ಮಳೆ ಸುರಿಯುವುದನ್ನು ಈ ಗ್ರಾಮಗಳ ಜನ ಕಂಡಿದ್ದಾರೆ, ಕಷ್ಟ, ನಷ್ಟಗಳನ್ನು ಅನುಭವಿಸಿದ್ದಾರೆ. ಅತಿವೃಷ್ಟಿಯಿಂದ ಗದ್ದೆ, ತೋಟ, ಸೇತುವೆ, ರಸ್ತೆಗಳ ಮುಳುಗಡೆಯ ಸಂಕಷ್ಟದ ದಿನಗಳನ್ನು ಕಂಡಿದ್ದಾರೆ. 

ಕೃಷಿಯನ್ನೇ ಮೂಲ ಕಸುಬಾಗಿಸಿಕೊಂಡು ಮೈಮುರಿದು ದುಡಿದು ಬದುಕು ಸಾಗಿಸುತ್ತಿದ್ದ ಗ್ರಾಮಸ್ಥರು ಮೂಲಭೂತ ಸೌಲಭ್ಯಗಳ ಕೊರತೆಯ ನಡುವೆಯೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಶಿಕ್ಷಣವನ್ನು ನೀಡುತ್ತಿದ್ದರು. ಈ ಕುಗ್ರಾಮಗಳು ಇಂದಿಗೂ ಅಪಾಯಕಾರಿ ಕಾಲು ಸೇತುವೆ ಹಾಗೂ ಮಾರ್ಗಗಳನ್ನು ಹೊಂದಿವೆ. ಅನಾಹುತಕ್ಕೊಳಗಾಗಿರುವ ಗ್ರಾಮಗಳೇನು ರಾಜಕೀಯವಾಗಿ ಅನಾಥವಲ್ಲ. ಮಾಜಿ ಸ್ಪೀಕರ್, ಹಾಲಿ ಶಾಸಕ ಕೆ.ಜಿ.ಬೋಪಯ್ಯ ಕಾಲೂರು ಗ್ರಾಮದವರು. ಹಾಲಿ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಮುಕ್ಕೋಡ್ಲು ಗ್ರಾಮದವರು. ಜಿ.ಪಂ ಹಾಲಿ ಅಧ್ಯಕ್ಷ ಬಿ.ಎ.ಹರೀಶ್ ಮಕ್ಕಂದೂರು ಗ್ರಾಮದವರು. ಮಾಜಿ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಮುಕ್ಕೋಡ್ಲು ಗ್ರಾಮದವರು. ಇಷ್ಟೆಲ್ಲಾ ರಾಜಕೀಯ ಶಕ್ತಿಗಳಿದ್ದರೂ ಈ ಗ್ರಾಮಗಳ ಸಂಕಷ್ಟಕ್ಕೆ ಮುಕ್ತಿಯೇ ಸಿಕ್ಕಿರಲಿಲ್ಲ. ಗಾಮಸ್ಥರು ಮಾಡುತ್ತಿದ್ದ ಸುದ್ದಿಗೋಷ್ಠಿಗಳೆಲ್ಲವೂ ಅರಣ್ಯರೋಧನವಷ್ಟೇ ಆಗಿತ್ತು. 

ಇದೀಗ ವೀಣಾಅಚ್ಚಯ್ಯ ಅವರು ನನ್ನ ಗ್ರಾಮದ ಜನರನ್ನು ರಕ್ಷಿಸಿ ಎಂದು ಕಣ್ಣೀರಿಡುವಂತಾಗಿದೆ. ಸುಮಾರು 10 ದಿನಗಳ ಸತತ ಮಳೆಯಿಂದ ಗ್ರಾಮಗಳ ಸಂಪರ್ಕವೇ ಕಡಿತಗೊಂಡಿದೆ. ಇಂದು ಕಡಿಮೆಯಾಗಬಹುದು, ನಾಳೆ ಕಡಿಮೆಯಾಗಬಹುದೆಂದು ಮಳೆಯನ್ನು ನಂಬಿದ್ದ ಗ್ರಾಮಸ್ಥರ ನಿರೀಕ್ಷೆಗಳು ಹುಸಿಯಾಗುತ್ತಲೇ ಹೋಯಿತು. ಪ್ರಕೃತಿಯ ನಡುವೆಯೇ ಬದುಕು ಕಟ್ಟಿಕೊಂಡ ಮನೆಯ ಸುತ್ತ ಗುಡ್ಡದ ಮೇಲಿನಿಂದ ಸುರಿಯುತ್ತಿದ್ದ ನೀರು ಆವರಿಸತೊಡಗಿತು. ಆದರೂ ಸಹಿಸಿಕೊಂಡ ನಿವಾಸಿಗಳು ಭಯ ಭೀತರಾಗಿ ತಮ್ಮ ಬದುಕಿನ ಮೇಲಿನ ವಿಶ್ವಾಸವನ್ನೇ ಕಳೆದುಕೊಂಡದ್ದು ಬೆಟ್ಟಗಳು ಕುಸಿಯತೊಡಗಿದಾಗ, ಕೆಸರು ಮಣ್ಣಿನೊಂದಿಗೆ ಬಂಡೆಗಳು ಉರುಳತೊಡಗಿದಾಗ, ಎಕರೆ ಗಟ್ಟಲೆ ಕಾಫಿ ತೋಟ ತಗ್ಗಿನ ಪ್ರದೇಶಕ್ಕೆ ಜಾರಿ ಹೋದಾಗ, ಅನ್ನ ನೀಡುವ ಗದ್ದೆಯೇ ಕೆಸರಿನಲ್ಲಿ ನಾಪತ್ತೆಯಾದಾಗ, ರಾತ್ರೋರಾತ್ರಿ ಕೆಸರು, ಮಣ್ಣು, ಕಲ್ಲಿನ ದ್ವೀಪದಂತ್ತಾದ ಗ್ರಾಮವನ್ನು ತೊರೆಯಲೇಬೇಕಾದ ಪರಿಸ್ಥಿತಿ ಎದುರಾದರೂ ಎಲ್ಲಿಗೆ ಹೋಗಬೇಕೆಂದು ತಿಳಿಯದೆ ಉಟ್ಟ ಬಟ್ಟೆಯಲ್ಲೇ ಮಹಿಳೆಯರು, ಮಕ್ಕಳು, ಗರ್ಭಿಣಿಯರು, ವಯೋವೃದ್ಧರು ಓಡತೊಡಗಿದರು. ಪರಿಚಯಸ್ಥರ ಸುರಕ್ಷಿತ ಸ್ಥಳಗಳಲ್ಲಿ ತಂಗತೊಡಗಿದರು. ಇನ್ನೂ ಕೆಲವರು ಧೈರ್ಯ ಮಾಡಿ ಬೆಟ್ಟ ಹತ್ತಿ ಪಟ್ಟಣ ಸೇರುವ ಪ್ರಯತ್ನ ಮಾಡಿದರು. ಪರಿಸ್ಥಿತಿಯ ಗಂಭೀರತೆ ಅರಿತೊಡನೆ ಸುರಕ್ಷಿತ ಸ್ಥಳದಲ್ಲಿದ್ದವರು ಗ್ರಾಮಕ್ಕೆ ಗ್ರಾಮವೇ ನಾಶವಾಗುತ್ತಿರುವ ಬಗ್ಗೆ ನಗರ, ಪಟ್ಟಣದಲ್ಲಿದ್ದವರಿಗೆ ವಿಷಯ ಮುಟ್ಟಿಸಿದರು. ಆದರೆ ಅದಾಗಲೇ ಕಾಲ ಮಿಂಚಿಹೋಗಿತ್ತು. ಗ್ರಾಮಸ್ಥರಿಗೆ ಮಾತ್ರವಲ್ಲ ಅವರನ್ನು ರಕ್ಷಿಸಲು ಹೋದ ಮಂದಿಗೂ ಪ್ರಕೃತಿ ಜಲ, ಮಣ್ಣಿನ ದಿಗ್ಬಂಧನವನ್ನು ಹಾಕಿತ್ತು. ಸಂಕಷ್ಟದಲ್ಲಿ ಸಿಲುಕಿರುವವರ ಬಗ್ಗೆ ಮಾಹಿತಿ ಪಡೆಯುವ ಪ್ರಯತ್ನಗಳು ವಿದ್ಯುತ್ ಮತ್ತು ಮೊಬೈಲ್ ಸಂಪರ್ಕ ಕಡಿತದಿಂದ ವಿಫಲವಾಯಿತು. 

ಇಲ್ಲಿಂದಲೇ ಆರಂಭವಾಗಿದ್ದು ಆತಂಕದ ಕ್ಷಣಗಳು, ಜಿಲ್ಲಾಡಳಿತ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಸ್ವಯಂ ಸೇವಾ ಸಂಸ್ಥೆಗಳು ಹೇಗಾದರು ಮಾಡಿ ಗ್ರಾಮಸ್ಥರನ್ನು ರಕ್ಷಿಸಬೇಕೆಂದು ಕಾರ್ಯಾಚರಣೆಗಿಳಿದರು. ಅನಾರೋಗ್ಯ ಪೀಡಿತರನ್ನು ಕಿಲೋ ಮೀಟರ್ ಗಟ್ಟಲೆ ಹೊತ್ತುಕೊಂಡೇ ಬಂದರು. ಸುಮಾರು 100 ಕ್ಕೂ ಅಧಿಕ ಮಂದಿಯನ್ನು ರಕ್ಷಿಸುವ ಸಂದರ್ಭದಲ್ಲಿ ವಿಪತ್ತು ನಿರ್ವಹಣಾ ದಳ ಹಾಗೂ ಪೊಲೀಸ್ ಅಧಿಕಾರಿಗಳು ಕೂಡ ಸೇರಿಕೊಂಡರು. ಮತ್ತೆ ಮತ್ತೆ ಗುಡ್ಡ ಕುಸಿಯುತ್ತಾ ಕೆಸರಿನ ಆರ್ಭಟ ಹೆಚ್ಚಾಗುತ್ತಿದ್ದಂತೆ ಪರಿಸ್ಥಿತಿ ಕೈ ಮೀರಿ ಹೋಗತೊಡಗಿತು. ಆ ನಂತರವೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಮೂರು ದಿನ ಕಳೆದು ಸೇನಾ ತುಕುಡಿಯನ್ನು ಬರಮಾಡಿಕೊಂಡಿತು. ಸೇನಾ ಕಾರ್ಯಾಚರಣೆಯೂ ಅತ್ಯಂತ ಕ್ಲಿಷ್ಟಕರವಾಗಿತ್ತು.

ಇದೀಗ ಕತ್ತಲಾದ ಬದುಕಿಗೆ ಬೆಳಕಿನ ನಿರೀಕ್ಷೆಗಳು ಮರೆಯಾಗಿ ಕಣ್ಣೀರಿನ ಕೋಡಿಯೊಂದೇ ಆಸರೆಯಾಗಿದೆ. 1,800 ಕ್ಕೂ ಅಧಿಕ ಮಂದಿ ಸಂತ್ರಸ್ತರಿಗೆ. ಮತ್ತೆ ತಮ್ಮ ತಮ್ಮ ಗ್ರಾಮಗಳಿಗೆ ತೆರಳುವ ಬಗ್ಗೆ ಯಾವುದೇ ನಂಬಿಕೆ ಇಲ್ಲ. ಕೆಲವರು ಧೈರ್ಯ ಮಾಡಿ ಗ್ರಾಮಕ್ಕೆ ಬೆಟ್ಟದ ಮೂಲಕವೇ ತೆರಳಿ ಮನೆಗಳು ಉಳಿದಿವೆಯೇ ಎಂದು ನೋಡಿದ್ದಾರೆ. ಕೆಲವು ಮನೆಗಳು ಉಳಿದಿದ್ದರೆ, ಕೆಲವು ಅಳಿದಿವೆ. ಕಣ್ಣೀರಿನಲ್ಲೇ ಮರಳಿರುವ ಸಂತ್ರಸ್ತರು ಪರಿಹಾರ ಕೇಂದ್ರಗಳಲ್ಲೇ ರಾತ್ರಿ, ಹಗಲು ಕಳೆಯುತ್ತಿದ್ದಾರೆ. ಕೆಲವರು ತಮ್ಮ ನೆಂಟರಿಷ್ಟರ ಮನೆಗಳಿಗೆ ತೆರಳಿದ್ದು, ಬದುಕಿ ಉಳಿದರೆ ಮತ್ತೆ ಬರುತ್ತೇವೆ ಎಂದು ಕಣ್ಣೀರು ಹಾಕುತ್ತಿದ್ದಾರೆ.

ಮಕ್ಕಂದೂರು, ಮುಕ್ಕೋಡ್ಲು, ಮೊಣ್ಣಂಗೇರಿ, ಹಾಲೇರಿ ಹಾಗೂ ಕಾಲೂರು ಗ್ರಾಮಗಳು ನಾಪತ್ತೆಯ ಪರಿಸ್ಥಿತಿಯಲ್ಲಿವೆ. ಕಳೆದ ಹಲವು ದಶಕಗಳಿಂದ ಕೃಷಿ ಮಾಡಿಕೊಂಡೇ ಬದುಕು ಸಾಗಿಸುತ್ತಿದ್ದವರು ಇತ್ತೀಚಿನ ವರ್ಷಗಳಲ್ಲಿ ಹವಾಗುಣ ವೈಪರಿತ್ಯ ಹಾಗೂ ವನ್ಯಜೀವಿಗಳ ದಾಳಿಯಿಂದ ನಲುಗಿ ಹೋಗಿದ್ದಾರೆ. ಇದೇ ಕಾರಣಕ್ಕೆ ಕೆಲವು ಮಂದಿ ಪ್ರವಾಸೋದ್ಯಮಕ್ಕೆ ಮಾರು ಹೋಗಿ ಹೋಂ ಸ್ಟೇಗಳನ್ನು ನಿರ್ಮಾಣ ಮಾಡಿ ಬದುಕು ಕಂಡುಕೊಂಡಿದ್ದರು. ಬಹುತೇಕ ಯುವಕರು ಉದ್ಯೋಗ ಹರಸಿ ಊರನ್ನೇ ಬಿಟ್ಟಿದ್ದರು. ಆದರೆ ಇಲ್ಲೇ ಉಳಿದವರು ಈಗ ಅಳಿದು ಹೋಗುವ ಆತಂಕವನ್ನು ಎದುರಿಸುತ್ತಿದ್ದಾರೆ. 

ಕಳೆದ ವರ್ಷ ಸಾಧಾರಣ ಮಳೆಯನ್ನು ಕಂಡಿದ್ದ ಕೊಡಗು ಈ ಬಾರಿ ನಿರೀಕ್ಷೆಗೂ ಮೀರಿ 350 ಇಂಚಿಗೂ ಅಧಿಕ ನಿರಂತರವಾಗಿ ಸುರಿದ ಪರಿಣಾಮ ಗುಡ್ಡಗಳು ಕುಸಿದು ಅನಾಹುತವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಒಂದು ತಿಂಗಳ ಹಿಂದೆ ಭೂಮಿ ಕಂಪಿಸಿದ ಪರಿಣಾಮವೂ ಈ ಘಟನೆಗಳಿಗೆ ಕಾರಣವಾಗಿರಬಹುದೆಂದು ಅಂದಾಜಿಸಲಾಗಿದೆ. ಹಿರಿಯರು ಬಹಳ ವರ್ಷಗಳ ಹಿಂದೆಯೇ ಮಕ್ಕಂದೂರು ಅಪಾಯಕ್ಕೆ ಸಿಲುಕುವ ಬಗ್ಗೆ ಮಾಹಿತಿ ನೀಡಿದ್ದರಂತೆ.   

ಮಹಾಮಳೆಗೆ ಅಂತರ್ಜಲ ಮಟ್ಟ ಹೆಚ್ಚಾಗಿ ಮನೆ ಬಿರುಕುಗೊಂಡ ಘಟನೆಗಳು ಜುಲೈ ತಿಂಗಳಿನಲ್ಲೇ ನಡೆದಿತ್ತು. ಜಲಸಂಚಾರದ ಶಬ್ಧವನ್ನು ಕೇಳಿ ಆತಂಕಗೊಂಡಿದ್ದ  ಕೆಲವು ನಿವಾಸಿಗಳು ಮನೆಗಳನ್ನೇ ತೊರೆದಿದ್ದರು. ಆದರೆ ಈ ರೀತಿಯ ಪ್ರಕರಣಗಳನ್ನು ಜಿಲ್ಲಾಡಳಿತ ಲಘುವಾಗಿ ಕಂಡಿತ್ತು. ಮನೆ, ಮನ ಎಲ್ಲವನ್ನೂ ಕಳೆದುಕೊಂಡು ಅಸಹಾಯಕ ಸ್ಥಿತಿಯಲ್ಲಿ ಗ್ರಾಮಸ್ಥರಿದ್ದರೆ, ಭೂಕಂಪನ ಮತ್ತು ಇನ್ನಷ್ಟು ಅನಾಹುತಗಳ ವದಂತಿ ಹಬ್ಬಿ ಪಟ್ಟಣ ಹಾಗೂ ನಗರದ ಹಲವು ನಿವಾಸಿಗಳು ಜಿಲ್ಲೆಯನ್ನು ತೊರೆದಿದ್ದಾರೆ. ಜೀವ ಉಳಿದರೆ ಸಾಕು ಎಂದು ಸುರಕ್ಷಿತ ಊರುಗಳಿಗೆ ತೆರಳಿದ್ದಾರೆ. 

ನಗರ, ಪಟ್ಟಣ ಪ್ರದೇಶಗಳಲ್ಲೂ ಪ್ರಕೃತಿಗೆ ವಿರುದ್ಧವಾಗಿ ನಿರ್ಮಾಣಗೊಂಡ ಕಟ್ಟಡಗಳು ಬರೆಕುಸಿತದಿಂದ ಹಾನಿಗೊಳಗಾಗಿವೆ. ಮಡಿಕೇರಿಯಲ್ಲಿ ಎರಡು ಬಡಾವಣೆಗಳ 1300 ಕ್ಕೂ ಅಧಿಕ ಕುಟುಂಬಗಳು ಜಾಗ ಖಾಲಿ ಮಾಡಿವೆ. ಪ್ರಕೃತಿಯ ಮೇಲಿನ ನಿರಂತರ ದಾಳಿ ಮತ್ತು ಪ್ರಾಕೃತಿಕ ಅಸಮಾತೋಲನವನ್ನು ಕಾಯ್ದುಕೊಂಡಿದ್ದೇ ಇಷ್ಟೆಲ್ಲಾ ಅನಾಹುತಗಳಿಗೆ ಕಾರಣವೆಂದು ಹೇಳುವವರೂ ಇದ್ದಾರೆ. ಈ ಹಂತದಲ್ಲೆ ಪ್ರವಾಸೋದ್ಯಮವೂ ಕುಸಿದು ಬಿದ್ದು, ಹೊಟೇಲ್, ರೆಸಾರ್ಟ್ ಮತ್ತು ರೆಸ್ಟೋರೆಂಟ್ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ 15 ರಿಂದ 20 ಸಾವಿರ ಮಂದಿಯ ಬದುಕು ಅತಂತ್ರವಾಗಿದೆ.

ಒಟ್ಟಿನಲ್ಲಿ ಪ್ರವಾಸಿಗರ ಸ್ವರ್ಗವಾಗಿದ್ದ ಕೊಡಗು ಜಿಲ್ಲೆ ಈಗ ಅಘೋಷಿತ, ನಿರ್ಬಂಧಿತ ಪ್ರದೇಶವಾಗಿ ಮಾರ್ಪಟ್ಟಿದ್ದು, ಆತಂಕವನ್ನು ಹೆಚ್ಚಿಸುತ್ತಲೇ ಇದೆ. ಪ್ರಕೃತಿಯೊಂದಿಗೆ ಬದುಕು ಕಟ್ಟಿಕೊಂಡಿದ್ದ ಗ್ರಾಮಸ್ಥರು ಈಗ ಪ್ರಕೃತಿಯಿಂದಲೇ ಬದುಕು ಕಳೆದುಕೊಂಡಿದ್ದಾರೆ. ಹೊಸ ಬದುಕನ್ನು ಕಟ್ಟಿಕೊಡುವ ಮಹಾಸೇವೆ ಈ ಸಮಾಜದಿಂದ ಆಗಬೇಕಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News