ಮುಂದಿನ ವರ್ಷದಿಂದ ನಾಗರೀಕ ಸೇವೆಗಳು ಆನ್‌ಲೈನ್‌ನಲ್ಲಿ ಲಭ್ಯ

Update: 2018-09-02 16:41 GMT

ಬೆಂಗಳೂರು, ಸೆ.2: ಬಿಬಿಎಂಪಿ ಸೇರಿದಂತೆ ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ನಾಗರೀಕರಿಗೆ ನೀಡುವ ಎಲ್ಲ ಸೇವೆಗಳನ್ನು ಮುಂದಿನ ವರ್ಷದ ಜ.1 ರಿಂದ ಆನ್‌ಲೈನ್‌ನಲ್ಲಿ ಲಭ್ಯವಾಗಲಿವೆ.

ಹಿಂದಿನ ಸರಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್‌ನಲ್ಲಿ ಇದನ್ನು ಘೋಷಣೆ ಮಾಡಿದ್ದರು. ಅದರ ಪ್ರಕಾರ ಸರಕಾರಿ ಆದೇಶ ಹೊರಡಿಸಿದ್ದು, ಮುಂದಿನ ವರ್ಷದಿಂದ ಎಲ್ಲ ಕಡೆಗಳಲ್ಲಿ ಜಾರಿಯಾಗಲಿದೆ. ಆಸ್ತಿ ತೆರಿಗೆ, ಖಾತಾ, ಕಟ್ಟಡ ನಕ್ಷೆ ಅನುಮೋದನೆ ಸೇರಿದಂತೆ ಮತ್ತಿತರೆ ಸೇವೆಗಳು ಲಭ್ಯವಾಗಲಿವೆ.

ಬಿಬಿಎಂಪಿ ಹಾಗೂ ಸರಕಾರ ಈಗಾಗಲೇ ತಂತ್ರಾಂಶ ಅಭಿವೃದ್ಧಿ ಮಾಡುವ ಕೆಲಸ ಬಹುತೇಕ ಪೂರ್ಣಗೊಂಡಿದೆ. ನಗರ ಸ್ಥಳೀಯ ಸಂಸ್ಥೆಗಳ ಕಚೇರಿ ಕಾರ್ಯಚಟುವಟಿಕೆಗಳ ಸ್ವಯಂಚಾಲಿತ ನಿರ್ವಹಣೆಗಾಗಿ ಆನ್‌ಲೈನ್ ಉದ್ಯಮ ಸಂಪನ್ಮೂಲ ಯೋಜನೆ ಅಭಿವೃದ್ಧಿಪಡಿಸಲು, ಕಟ್ಟಡ ಮತ್ತು ನಿವೇಶನಗಳ ಅನುಮೋದನಾ ಪ್ರಕ್ರಿಯೆಯ ಸ್ವಯಂಚಾಲಿತ ನಿರ್ವಹಣೆಗಾಗಿ ತಂತ್ರಾಂಶ ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಗಿದೆ.

ಅನುಕೂಲವೇನು?: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಲೇಔಟ್ ಅಥವಾ ಕಟ್ಟಡ ನಿರ್ಮಾಣ ಮಾಡಬೇಕಾದರೆ ಖಾತೆ, ಕಟ್ಟಡ ನಕ್ಷೆ ಅನುಮೋದನೆ, ವಿದ್ಯುತ್ ಸಂಪರ್ಕ ಮತ್ತು ನೀರಿನ ಸಂಪರ್ಕಕ್ಕಾಗಿ ರಸ್ತೆ ತುಂಡರಿಸುವುದು ಸೇರಿ ವಿವಿಧ ಸೇವೆಗಳಿಗೆ ಬೇರೆ ಬೇರೆ ಇಲಾಖೆಗಳಿಗೆ ಅರ್ಜಿ ಸಲ್ಲಿಸಬೇಕಿತ್ತು. ನಕ್ಷೆ ಮಂಜೂರಾದರೂ ಅನುಮತಿ ತಡವಾಗುತ್ತಿತ್ತು. ಸಾರ್ವಜನಿಕರು ಕಚೇರಿಯಿಂದ ಕಚೇರಿಗೆ ಅಲೆಯಬೇಕಿತ್ತು. ಆದರೆ, ಆನ್‌ಲೈನ್ ಸೇವೆಯಿಂದಾಗಿ ಎಲ್ಲವೂ ಒಂದೇ ಕಡೆ ಸಿಗುತ್ತದೆ. ಇದರಿಂದ ಸಾರ್ವಜನಿಕರಿಗೆ ಹೆಚ್ಚು ತೊಂದರೆಯಾಗುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News