ಒಬಿಸಿ ಪಟ್ಟಿಯಲ್ಲಿ ಮುಸ್ಲಿಂ ಧರ್ಮದ ಉಪಜಾತಿಗಳ ಹೆಸರು ಸೇರಿಸಿ: ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆ

Update: 2018-09-02 16:43 GMT

ಬೆಂಗಳೂರು, ಸೆ.2: ಕರ್ನಾಟಕಕ್ಕೆ ಸಂಬಂಧಿಸಿದಂತೆ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಮುಸ್ಲಿಂ ಧರ್ಮದ ಎಲ್ಲ ಉಪಜಾತಿ ಹೆಸರುಗಳನ್ನು ಸೇರಿಸುವಂತೆ ಕೇಂದ್ರ ಸರಕಾರಕ್ಕೆ ಆದೇಶಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ಮುಹಮ್ಮದ್ ಜಮೀಲ್ ಎಂಬುವರು ಅರ್ಜಿ ಸಲ್ಲಿಸಿದ್ದು, ಅದನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಪೀಠ, ಸೆ.19ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ರಾಜ್ಯ ಸರಕಾರ ಸಿದ್ಧಪಡಿಸಿರುವ ಪ್ರವರ್ಗ 2ಬಿ ಪಟ್ಟಿಯಲ್ಲಿ ಮುಸ್ಲಿಂ ಧರ್ಮದ 17 ಉಪಜಾತಿಗಳ ಹೆಸರುಗಳನ್ನು ಸೇರಿಸಲಾಗಿದೆ. ಆದರೆ, ಕೇಂದ್ರ ಸರಕಾರದ ಒಬಿಸಿ ಪಟ್ಟಿಯಲ್ಲಿ ಈ ಎಲ್ಲ ಉಪಜಾತಿಗಳನ್ನು ಉಲ್ಲೇಖಿಸಿಲ್ಲ. ಇದರಿಂದ ಈ ಉಪಜಾತಿಗೆ ಸೇರಿದವರು ಕೇಂದ್ರ ಸರಕಾರಿ ಅಧೀನದ ಶಿಕ್ಷಣ ಸಂಸ್ಥೆಗಳ ಸೀಟು ಪ್ರವೇಶಾತಿಗೆ ಮತ್ತು ಕೇಂದ್ರ ಸರಕಾರಿ ಇಲಾಖೆಯ ನೌಕರಿಗೆ ಅರ್ಜಿ ಸಲ್ಲಿಸಿದರೆ, ತಹಶೀಲ್ದಾರ್ ಉಪಜಾತಿಯ ಕುರಿತ ಪ್ರಮಾಣಪತ್ರ ನೀಡುತ್ತಿಲ್ಲ. ಇದರಿಂದ ಮೀಸಲು ಸೌಲಭ್ಯ ಪಡೆಯಲು ಸಾಕಷ್ಟು ತೊಂದರೆ ಉಂಟಾಗುತ್ತಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ರಾಜ್ಯ ಸರಕಾರದ ಪರ ವಕೀಲರು ವಾದ ಮಂಡಿಸಿ, ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿರುವ ಅಂಶಗಳು ಕೇಂದ್ರ ಸರಕಾರಕ್ಕೆ ಸಂಬಂಧಪಟ್ಟ ವಿಚಾರ. ಇದರಲ್ಲಿ ರಾಜ್ಯ ಸರಕಾರ ಯಾವುದೇ ನಿರ್ಧಾರ ಕೈಗೊಳ್ಳಲಾಗದು ಎಂದು ನ್ಯಾಯಪೀಠಕ್ಕೆ ಗಮನಕ್ಕೆ ತಂದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, ಕೇಂದ್ರ ಸರಕಾರದ ಪರ ವಾದ ಮಂಡಿಸಲಿರುವ ಸಹಾಯಕ ಸಾಲಿಸಿಟರ್ ಜನರಲ್ ಶಶಿಕಾಂತ್ ಅವರ ಹೆಸರನ್ನು ಪ್ರತಿವಾದಿ ವಕೀಲರ ಪಟ್ಟಿಯಲ್ಲಿ ಸೇರಿಸುವಂತೆ ಅರ್ಜಿದಾರರಿಗೆ ಸೂಚಿಸಿ ವಿಚಾರಣೆಯನ್ನು ಸೆ.19ಕ್ಕೆ ಮುಂದೂಡಿತು.

ರಾಜ್ಯದಲ್ಲಿ ಸಂಬಂಧಪಟ್ಟ ತಹಶೀಲ್ದಾರ್ ಅವರು ಮುಸ್ಲಿಂ ಸಮುದಾಯದ 17 ಉಪ ಜಾತಿಗಳ ಸಂಬಂಧ ಪ್ರವರ್ಗ 2ಬಿ ಜಾತಿ ಪ್ರಮಾಣಪತ್ರ ನೀಡುತ್ತಿಲ್ಲ. ಈ ಕುರಿತಂತೆ ರಾಜ್ಯ ಅಲ್ಪ ಸಂಖ್ಯಾತರ ಆಯೋಗಕ್ಕೆ ಮನವಿ ಪತ್ರ ಸಲ್ಲಿಸಿದರೆ, ಅದನ್ನು ಕೇಂದ್ರ ಅಲ್ಪಸಂಖ್ಯಾತ ಆಯೋಗಕ್ಕೆ ಕಳುಹಿಸಲಾಗುತ್ತಿದೆ. ನಾಲ್ಕು ವರ್ಷದಿಂದ ಇದೇ ನಡೆಯುತ್ತಿದೆ ಹೊರತು ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತಿಲ್ಲ. ಹೀಗಾಗಿ, ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಮುಸ್ಲಿಂ ಧರ್ಮದಲ್ಲಿನ ಎಲ್ಲ ಉಪ ಜಾತಿಗಳನ್ನು ಸೇರಿಸಲು ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News