ಒಮ್ಮತದಿಂದ ಬಿಬಿಎಂಪಿ ಮೇಯರ್ ಆಯ್ಕೆ: ಡಿಸಿಎಂ ಡಾ.ಪರಮೇಶ್ವರ್

Update: 2018-09-02 16:44 GMT

ಬೆಂಗಳೂರು, ಸೆ. 2: ಬಿಬಿಎಂಪಿ ಮೇಯರ್ ಆಯ್ಕೆ ಸಂಬಂಧ ಇನ್ನೂ ಅಧಿಕೃತವಾಗಿ ಮೀಸಲಾತಿ ಹೊರಬಿದ್ದಿಲ್ಲ. ಮೀಸಲಾತಿ ಪ್ರಕಟಗೊಂಡ ನಂತರ ಎಲ್ಲರ ಒಮ್ಮತದಿಂದ ಮೇಯರ್ ಆಯ್ಕೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ರವಿವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಬಿಬಿಎಂಪಿಯಲ್ಲಿ ಅಧಿಕಾರ ನಡೆಸುತ್ತಿದ್ದೇವೆ. ಅದು ಮುಂದುವರಿಯಲಿದೆ. ಮೇಯರ್ ಅಭ್ಯರ್ಥಿ ಆಯ್ಕೆ ಬಗ್ಗೆ ಎಲ್ಲರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದರು.

ಬಿಬಿಎಂಪಿ ಮೇಯರ್ ಆಯ್ಕೆ ಮೀಸಲಾತಿ ಹೊರಬಿದ್ದ ಮೇಲೆ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗುವುದು. ನಗರ ಶಾಸಕರು, ಸಂಸದರು, ಬಿಬಿಎಂಪಿ ಸದಸ್ಯರು ಎಲ್ಲರೊಂದಿಗೆ ಚರ್ಚೆ ನಡೆಸಲಾಗುವುದು ಎಂದ ಅವರು, ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಮುಂದಿನ ವಾರದಲ್ಲಿ ಮುಖಂಡರ ಪಟ್ಟಿ ಸಿದ್ದಪಡಿಸಿ ವರಿಷ್ಠರಿಗೆ ರವಾನಿಸಲಾಗುವುದು ಎಂದರು.

ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಎಲ್ಲ ಜಿಲ್ಲಾ ಮುಖಂಡರೊಂದಿಗೆ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದು, ಅಭ್ಯರ್ಥಿಗಳ ಆಯ್ಕೆ ಸಂಬಂಧ ಆಕಾಂಕ್ಷಿಗಳ ಪಟ್ಟಿ ಸಿದ್ದಪಡಿಸಿ ಹೈಕಮಾಂಡ್‌ಗೆ ಕಳುಹಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News