ಸಾರಿಗೆ ನಿಗಮದಲ್ಲಿ ಭ್ರಷ್ಟಾಚಾರ ಸಲ್ಲ: ಸಚಿವ ಡಿ.ಸಿ.ತಮ್ಮಣ್ಣ

Update: 2018-09-02 16:46 GMT

ಬೆಂಗಳೂರು, ಸೆ. 2: ಅಗತ್ಯ ಲಾಭದಾಯಕವಾಗಿ ನಡೆಯುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಸಾರ್ಟಿಸಿ)ದಲ್ಲಿ ಯಾವುದೇ ಕಾರಣಕ್ಕೂ ಭ್ರಷ್ಟಾಚಾರ ಸುಳಿಯಬಾರದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಇಂದಿಲ್ಲಿ ಸಲಹೆ ನೀಡಿದ್ದಾರೆ.

ರವಿವಾರ ನಗರದ ಕುವೆಂಪು ಕಲಾಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಪತ್ತಿನ ಸಹಕಾರ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಸ್ತೆ ಸಾರಿಗೆ ನಿಗಮದಲ್ಲಿ ಭ್ರಷ್ಟಾಚಾರವಾದರೆ, ನಷ್ಟ ಉಂಟಾಗಿ ಮುಂದೆ ಬರುವ ಸರಕಾರಗಳು ಖಾಸಗಿಕರಣಕ್ಕೆ ಒತ್ತು ನೀಡುತ್ತವೆ. ಆಗ ಲಕ್ಷಾಂತರ ನೌಕರರ ಭವಿಷ್ಯ ಬೀದಿಪಾಲಾಗುತ್ತದೆ ಎಂದ ಅವರು, ಸಂಘದ ನಿರ್ದೇಶಕರು ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಮಾತ್ರ ಅಲ್ಲಿನ ಸದಸ್ಯರಿಗೆ ಅನುಕೂಲವಾಗುತ್ತದೆ. ಇಲ್ಲವಾದರೆ ಸಹಕಾರಿ ಸಂಘ ನಾಶವಾಗಲಿದೆ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಅತೀ ಹೆಚ್ಚು ಉದ್ಯೋಗ ನೀಡಿರುವ ರಸ್ತೆ ಸಾರಿಗೆ ಸಂಸ್ಥೆಯು 1ಲಕ್ಷಕ್ಕೂ ಅಧಿಕ ಕನ್ನಡಿಗರಿಗೆ ಉದ್ಯೋಗ ನೀಡಿದೆ. ಅದರಲ್ಲಿ ಸಾಕಷ್ಟು ಗ್ರಾಮೀಣ ಪ್ರದೇಶದಿಂದ ಬಂದು ಬದುಕು ಕಟ್ಟಿಕೊಂಡಿದ್ದಾರೆ. ಅವರೇ ನಮ್ಮ ಆಧಾರ ಸ್ಥಂಭ. ಅಲ್ಲದೆ ನೌಕರರಿಗೆ ತೊಂದರೆ ಕೊಡಬೇಡಿ ಎಂದು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೆಎಸ್ಸಾರ್ಟಿಸಿ ಡಿಪೋದಲ್ಲಿ 500 ಮೆ.ವ್ಯಾ.ಸೌರ ವಿದ್ಯುತ್ ಉತ್ಪಾದನೆ ಮಾಡುವ ಚಿಂತನೆ ನಡೆಸಲಾಗುತ್ತಿದೆ. ಬಸ್ ನಿಲ್ದಾಣದಲ್ಲೆ ವಾಣಿಜ್ಯ ಕಚೇರಿಗಳ ನಿರ್ಮಿಸಿ ಸಂಸ್ಥೆ ಆದಾಯ ಹೆಚ್ಚಿಕೊಳ್ಳುವುದರ ಕುರಿತು ಮಾತುಕತೆ ನಡೆಸಲಾಗುತ್ತಿದ್ದು, ಟೆಂಡರ್ ಕರೆಯಲಾಗುತ್ತಿದೆ ಎಂದು ತಿಳಿಸಿದರು.

ಯಾವುದನ್ನು ಬೇಕಿದ್ದರೂ ಕಳೆದುಕೊಳ್ಳಬಹುದು. ಆದರೆ, ವಿದ್ಯೆಯನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ, ವಿದ್ಯೆಗೆ ಬೆಲೆಕೊಡಿ ಎಂದು ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿಗಳಲ್ಲಿ ಶೇ.60ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ ಸಂಘದ ಸದಸ್ಯರುಗಳ ಮಕ್ಕಳಿಗೆ, ಪ್ರತಿಭಾ ಪುರಸ್ಕಾರ ಮಾಡಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಜಯನಗರ ಕ್ಷೇತ್ರದ ಶಾಸಕಿ ಸೌಮ್ಯ ರೆಡ್ಡಿ, ಕೆಎಸ್ಸಾರ್ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಉಮಾಶಂಕರ್, ಬೆಂಗಳೂರು ವಿವಿಯ ಕುಲಪತಿ ಕೆ.ಆರ್. ವೇಣುಗೋಪಾಲ್, ತಾಂತ್ರಿಕ ಅಭಿಯಂತರ ಲಕ್ಷ್ಮಣ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಕೊಡಗಿನ ನೆರವಿಗೆ, ಸಂಘದ ಸದಸ್ಯರುಗಳಿಂದ ಸಂಗ್ರಹಿಸಲಾದ 17.9ಲಕ್ಷ ರೂ.ಚೆಕ್ ಅನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಇದೇ ಸಂದರ್ಭದಲ್ಲಿ ಸಾರಿಗೆ ಸಚಿವರ ಮೂಲಕ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News