ಕೊಡಗು ಪುನರ್ ನಿರ್ಮಾಣವಾಗಬೇಕಿದೆ: ನಿರ್ಮಲಾನಂದನಾಥ ಸ್ವಾಮೀಜಿ

Update: 2018-09-02 16:51 GMT

ಬೆಂಗಳೂರು, ಸೆ. 2: ಹಸಿರು ಮತ್ತು ಉಸಿರನ್ನು ಕೊಟ್ಟಿರುವ ಕೊಡಗನ್ನು ಪುನರ್ ನಿರ್ಮಿಸುವ ಕೆಲಸವನ್ನು ನಾವು ಮಾಡಬೇಕಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.

ರವಿವಾರ ವಿಜಯನಗರದ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮಿ ‘ಕೊಡಗಿಗೆ ನಮ್ಮ ಕೊಡುಗೆ’ ಪಾದಯಾತ್ರೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಅತಿವೃಷ್ಠಿಯಿಂದ ಹಾನಿಗೊಳಗಾಗಿರುವ ಕೊಡಗು ಜಿಲ್ಲೆ ದೇಶಕ್ಕೆ ಎಲ್ಲವನ್ನು ಕೊಟ್ಟು, ಇಂದು ಎಲ್ಲವನ್ನೂ ಕಳೆದು ಕೊಂಡಿದೆ. ಅದನ್ನು ಪುನರ್ ನಿರ್ಮಾಣ ಮಾಡಬೇಕು ಎಂದು ಕರೆ ನೀಡಿದರು.

ಮಳೆಯಿಂದ ಸಂತ್ರಸ್ತರಾಗಿರುವ ಕೊಡಗಿನವರ ಸಂಕಷ್ಟಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಅಲ್ಲಿ ಪ್ರಾಣ ಕಳೆದುಕೊಂಡವರಿಗೆ ನಮ್ಮ ಶ್ರದ್ಧಾಂಜಲಿ ಸಲ್ಲಬೇಕಿದೆ ಎಂದ ಅವರು, ಮಾರ್ಗದುದ್ದಕ್ಕೂ ಪಾದಯಾತ್ರೆಯಲ್ಲಿ ದೇಣಿಗೆ ಸಂಗ್ರಹಕ್ಕೆ ಪ್ರೇರೆಣೆ ನೀಡಿದರು. ವಿಜಯನಗರದ ಆದಿಚುಂಚನಗಿರಿ ಮಠದ ಆವರಣದಿಂದ ಆರಂಭಗೊಂಡ ಪಾದಯಾತ್ರೆ ಶನಿಮಹಾತ್ಮ ದೇವರ ದರ್ಶನ ಪಡೆದು ಮಾಗಡಿ ರಸ್ತೆಯ ಆಂಜನೇಯಸ್ವಾಮಿ ದೇವಸ್ಥಾನ, ವಿಜಯನಗರದ ಮಾರುತಿ ಮಂದಿರದ ಮೂಲಕ ನಡೆದ ಪಾದಯಾತ್ರೆ ಸಂಕಷ್ಟಹರ ಗಣಪತಿ ದೇವಸ್ಥಾನದಲ್ಲಿ ಮುಕ್ತಾಯವಾಯಿತು. ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ, ಮಳೆ ಅನಾಹುತ ಸಂಭವಿಸಿದ ಸಂದರ್ಭದಲ್ಲೇ ನಾವು ಅಲ್ಲಿಗೆ ತೆರಳಿ 80ಲಕ್ಷ ರೂ. ಸಹಾಯ ಮಾಡಿದ್ದೇವೆ. ಮಠದ ಮೂಲಕ ಮತ್ತಷ್ಟು ನೆರವು ನೀಡುತ್ತೇವೆ ಎಂದು ಭರವಸೆ ನೀಡಿದರು.

ಶಾಸಕ ವಿ.ಸೋಮಣ್ಣ ಅವರು ವೈಯಕ್ತಿಕವಾಗಿ 20ಲಕ್ಷ ರೂ.ಗಳನ್ನು ನೀಡುವುದಾಗಿ ಘೋಷಣೆ ಮಾಡಿ, ನಿರ್ಮಲಾನಂದನಾಥ ಸ್ವಾಮೀಜಿಗಳು ಭಾರೀ ಮಳೆ ಸಂದರ್ಭದಲ್ಲಿ ಮೂರು ದಿನ ಕೊಡಗಿನಲ್ಲೇ ನೆಲೆಯೂರಿ ಅಲ್ಲಿನವರ ಕಷ್ಟಗಳಿಗೆ ಸ್ಪಂದಿಸಿ ಮಾನವೀಯತೆ ಮೆರೆದರು ಎಂದು ಸ್ಮರಿಸಿದರು.

ಮಾಜಿ ಸಚಿವ ಎಂ.ಕೃಷ್ಣಪ್ಪ 25ಲಕ್ಷ ರೂ., ಮಹಾಲಕ್ಷ್ಮಿಪುರ ಕ್ಷೇತ್ರದ ಶಾಸಕ ಗೋಪಾಲಯ್ಯ 2ಲಕ್ಷ ರೂ., ಮಾಜಿ ಉಪಮೇಯರ್ ಎಂ.ಶ್ರೀನಿವಾಸ್ 5ಲಕ್ಷ ರೂ., ಜೆಡಿಎಸ್‌ನ ಬೆಂಗಳೂರು ನಗರಾಧ್ಯಕ್ಷ ಪ್ರಕಾಶ್ 50 ಸಾವಿರ ರೂ., ಶಿಡ್ಲಘಟ್ಟ ಒಕ್ಕಲಿಗರ ಸಂಘದಿಂದ 10 ಸಾವಿರ ರೂ. ದೇಣಿಗೆಯನ್ನು ಆರಂಭದಲ್ಲಿ ಕೊಡಗು ಸಂತ್ರಸ್ತರಿಗಾಗಿ ನೀಡಲಾಯಿತು.

ವಿಜಯನಗರ ಮತ್ತು ಗೋವಿಂದರಾಜನಗರ ಕ್ಷೇತ್ರಗಳ ಬಿಬಿಎಂಪಿ ಸದಸ್ಯರಿಂದ 20 ಲಕ್ಷ ರೂ. ದೇಣಿಗೆ ನೀಡಲಾಗುತ್ತಿದೆ. ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ, ಚಲನಚಿತ್ರ ಕಲಾವಿದರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News