ಕಣ್ಣುಗಳ ದಾನದ ಪ್ರತಿಜ್ಞೆ ಕೈಗೊಳ್ಳಿ: ಡಾ.ಭುಜಂಗಶೆಟ್ಟಿ

Update: 2018-09-02 16:54 GMT

ಬೆಂಗಳೂರು, ಸೆ. 2: ದೇಶದಲ್ಲಿ 50 ಲಕ್ಷ ಮಂದಿ ದೃಷ್ಟಿದೋಷವುಳ್ಳವರ ಪೈಕಿ 15 ಲಕ್ಷ ಮಂದಿ ಕಾರ್ನಿಯಾದ ಅಂಧತ್ವದಿಂದ ಬಳಲುತ್ತಿದ್ದಾರೆ. ಈ ಜನರಿಗೆ ದೃಷ್ಟಿ ನೀಡುವುದು ನೇತ್ರದಾನದಿಂದ ಪಡೆಯಲಾದ ಕಾರ್ನಿಯಾ ಬದಲಾವಣೆಯಿಂದ ಮಾತ್ರ ಸಾಧ್ಯ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ.ಭುಜಂಗ ಶೆಟ್ಟಿ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಏರ್ಪಡಿಸಿದ್ದ ದಕ್ಷಿಣ ಭಾರತ ನೇತ್ರದಾನ ಸಮ್ಮೇಳನ ‘ಲಕ್ಷ ನೇತ್ರ ದೀಪೋತ್ಸವ 2018’ಕ್ಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾನವ ಜೀವಕೋಶಕ್ಕೆ ಯಾವುದೇ ಪರ್ಯಾಯವಿಲ್ಲ. ಪ್ರತಿಯೊಬ್ಬರೂ ಮುಂದೆ ಬಂದು ನಿಮ್ಮ ಕಣ್ಣುಗಳ ದಾನದ ಪ್ರತಿಜ್ಞೆ ಕೈಗೊಳ್ಳಬೇಕು ಎಂದು ಕರೆ ನೀಡಿದರು.

ಮೃತರ ಕುಟುಂಬ ಸದಸ್ಯರಿಗೆ ಮರಣ ಸಂಭವಿಸಿದ 6 ಗಂಟೆಗಳ ಒಳಗೆ ನೇತ್ರದಾನ ಮಾಡಲು ಮನವೊಲಿಸಲು ಎಲ್ಲರೂ ಶ್ರಮಿಸಲು ಕೋರುತ್ತೇನೆ ಎಂದ ಅವರು, ಜಾಗೃತಿಯ ಫಲಿತಾಂಶವಾಗಿ ಚಿತ್ರನಟ ಡಾ.ರಾಜ್‌ಕುಮಾರ್ ನೇತ್ರ ಬ್ಯಾಂಕ್ ಈಗ ಕರ್ನಾಟಕದಲ್ಲಿರುವ ನೇತ್ರಬ್ಯಾಂಕ್‌ಗಳಲ್ಲಿ ನಂ.1 ಎನಿಸಿದ್ದು ಒಟ್ಟು 1,849 ನೇತ್ರಗಳನ್ನು ಸಂಗ್ರಹಿಸಿದೆ ಎಂದರು.

ಇಬಿಎಐ ಅಂಕಿ ಅಂಶಗಳ ಪ್ರಕಾರ 2017-18ರಲ್ಲಿ ಭಾರತದಲ್ಲಿ ಸಂಗ್ರಹವಾದ ಒಟ್ಟು 57,138 ನೇತ್ರಗಳಲ್ಲಿ 29,708 ನೇತ್ರಗಳನ್ನು ದಕ್ಷಿಣ ಭಾರತದ ರಾಜ್ಯಗಳಲ್ಲಿ ಸಂಗ್ರಹಿಸಿ ಶೇ.40ರಷ್ಟು ಒಟ್ಟು ಭಾರತದ ನೇತ್ರ ಸಂಗ್ರಹಕ್ಕೆ ಕೊಡುಗೆ ನೀಡಿವೆ ಎಂದು ಭುಜಂಗ ಶೆಟ್ಟಿ ಹೇಳಿದರು. ಐ ಬ್ಯಾಂಕ್ ಅಸೋಸಿಯೇಷನ್ ಆಫ್ ಇಂಡಿಯಾದ ದಕ್ಷಿಣ ವಲಯದ ಅಧ್ಯಕ್ಷ ಎಂ.ಕೆ.ಕೃಷ್ಣ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News