ಧರ್ಮ,ಜಾತಿ,ಲಿಂಗದ ಆಧಾರದಲ್ಲಿ ತಾರತಮ್ಯ ಸ್ವೀಕಾರಾರ್ಹವಲ್ಲ: ನಾಯ್ಡು

Update: 2018-09-02 17:08 GMT

ಹೊಸದಿಲ್ಲಿ,ಸೆ.2: ಧರ್ಮ,ಜಾತಿ,ಲಿಂಗದ ಆಧಾರದಲ್ಲಿ ತಾರತಮ್ಯ ಯಾವುದೇ ರಾಷ್ಟ್ರೀಯವಾದಿಗೆ ಸ್ವೀಕಾರಾರ್ಹವಲ್ಲ ಮತ್ತು ಪ್ರತಿಯೊಬ್ಬರೂ ಈ ನಿಲುವನ್ನು ತಳೆಯಬೇಕಾಗಿದೆ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ರವಿವಾರ ಇಲ್ಲಿ ಹೇಳಿದರು.

ರಾಜ್ಯ ಶಾಸಕಾಂಗಗಳಲ್ಲಿ ಮೇಲ್ಮನೆಗಾಗಿ ರಾಷ್ಟ್ರೀಯ ನೀತಿಯೊಂದನ್ನು ರೂಪಿಸುವ ಅಗತ್ಯದ ಕುರಿತು ನಿರ್ಧಾರವೊಂದನ್ನು ಕೈಗೊಳ್ಳಲು ಕರೆ ನೀಡಿದ ರಾಜ್ಯಸಭೆಯ ಸಭಾಪತಿಗಳೂ ಆಗಿರುವ ನಾಯ್ಡು,ಶಾಸನಸಭೆಗಳ ಒಳಗೆ ಮತ್ತು ಹೊರಗೆ ತಮ್ಮ ಸದಸ್ಯರಿಗಾಗಿ ನೀತಿ ಸಂಹಿತೆಯ ಕುರಿತು ಒಮ್ಮತವನ್ನು ರೂಪಿಸುವಂತೆ ರಾಜಕೀಯ ಪಕ್ಷಗಳನ್ನು ಆಗ್ರಹಿಸಿದರು.

 ‘ಮೂವಿಂಗ್ ಆನ್...ಮೂವಿಂಗ್ ಫಾರ್ವರ್ಡ್:ಎ ಇಯರ್ ಇನ್ ಆಫೀಸ್’ ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ,ಮಾಜಿ ಪ್ರಧಾನಿಗಳಾದ ಮನಮೋಹನ ಸಿಂಗ್ ಮತ್ತ್ತು ಎಚ್.ಡಿ.ದೇವೇಗೌಡ,ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ,ವಿತ್ತಸಚಿವ ಅರುಣ್ ಜೇಟ್ಲಿ ಮತ್ತು ರಾಜ್ಯಸಭೆಯಲ್ಲಿ ಪ್ರತಿಪಕ್ಷ ಉಪನಾಯಕ ಆನಂದ ಶರ್ಮಾ ಅವರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಳೆದ ಅಧಿವೇಶನವನ್ನು ’ಸಾಮಾಜಿಕ ನ್ಯಾಯದ ಅಧಿವೇಶನ’ವೆಂದು ಕರೆಯಲಾಗಿತ್ತು ಎಂದು ಬೆಟ್ಟುಮಾಡಿದ ನಾಯ್ಡು,ಸಾಮಾಜಿಕ ನ್ಯಾಯಕ್ಕೆ ಸಾಮೂಹಿಕ ಬದ್ಧತೆಯನ್ನು ಪ್ರತಿಬಿಂಬಿಸುವ ಶಾಸನಗಳನ್ನು ಪರಿಗಣಿಸಿ ಅಂಗೀಕರಿಸುವುದು ಮುಖ್ಯವಾಗಿದೆ ಎಂದು ಹೇಳಿದರು.

ಸಾಂಸ್ಕೃತಿಕ ವೈವಿಧ್ಯ ಮತ್ತು ರಾಷ್ಟ್ರೀಯವಾದವನ್ನು ಎತ್ತಿಹಿಡಿಯಲು ಕರೆ ನೀಡಿದ ಅವರು,ತನ್ನ ಅಭಿಪ್ರಾಯದಲ್ಲಿ ‘ಭಾರತ ಮಾತಾ ಕೀ ಜೈ’ ರಾಷ್ಟ್ರೀಯವಾದವಾಗಿದೆ, ಅದು ಜಾತಿ,ಜನಾಂಗ,ಲಿಂಗ ಅಥವಾ ಧರ್ಮವನ್ನು ಪರಿಗಣಿಸದೆ ದೇಶದ ಎಲ್ಲ 130 ಕೋಟಿ ಜನರಿಗೂ ಜೈಕಾರವಾಗಿದೆ ಎಂದರು.

ರಾಜಕೀಯ ಪಕ್ಷಾಂತರಗಳ ಕುರಿತು ಮಾತನಾಡಿದ ಅವರು,ಮೂರು ತಿಂಗಳಲ್ಲಿ ಪಕ್ಷಾಂತರ ನಿಗ್ರಹ ಕಾನೂನುಗಳು ಕಟ್ಟುನಿಟ್ಟಾಗಿ ಜಾರಿಗೊಳ್ಳಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News