ಬಿಬಿಎಂಪಿ ಮೇಯರ್, ಉಪ ಮೇಯರ್ ಆಯ್ಕೆಗೆ ಸೆ.28ಕ್ಕೆ ಚುನಾವಣೆ

Update: 2018-09-03 16:26 GMT

ಬೆಂಗಳೂರು, ಸೆ.3: ಬಿಬಿಎಂಪಿಯ ಮುಂದಿನ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಗೆ ಸೆ.28ಕ್ಕೆ ಚುನಾವಣೆ ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಪ್ರಾದೇಶಿಕ ಆಯುಕ್ತ ಶಿವಯೋಗಿ ಸಿ.ಕಳಸದ್ ಬಿಬಿಎಂಪಿಗೆ ಪತ್ರ ಬರೆದಿದ್ದಾರೆ.

ಚುನಾವಣೆಯ ದಿನಾಂಕ ನಿಗದಿಯಾಗುತ್ತಿದ್ದಂತೆ ಮೇಯರ್ ಆಕಾಂಕ್ಷಿಗಳು ತಮ್ಮ ಪರವಾಗಿ ಬೆಂಬಲ ಸೂಚಿಸಬೇಕು ಎಂದು ಹಿರಿಯ ನಾಯಕರಿಗೆ ದುಂಬಾಲು ಬಿದ್ದಿದ್ದು, ನಗರದ ಪ್ರಥಮ ಪ್ರಜೆ ಸ್ಥಾನ ಅಲಂಕರಿಸಲು ಪೈಪೋಟಿಗೆ ಇಳಿದಿದ್ದಾರೆ.

ಮುಂದಿನ ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿರಿಸಿರುವುದರಿಂದ ಆ ವರ್ಗಕ್ಕೆ ಸೇರಿದ ಆಕಾಂಕ್ಷಿಗಳು ಈಗಾಗಲೇ ನಾಯಕರಿಗೆ ಮನವಿ ಮಾಡುತ್ತಿದ್ದಾರೆ.

ಈ ಬಾರಿಯ ಮೇಯರ್ ಸ್ಥಾನ ಒಕ್ಕಲಿಗ ಸಮುದಾಯ ಇಲ್ಲವೆ ವೀರಶೈವ ಸಮುದಾಯವನ್ನು ಪ್ರತಿನಿಧಿಸುವ ವ್ಯಕ್ತಿಗೆ ಮೀಸಲಿಡಬೇಕು ಎಂಬ ಬೇಡಿಕೆ ಕೇಳಿಬರುತ್ತಿದೆ. ಹೀಗಾಗಿ ಮೇಯರ್ ಸ್ಥಾನಕ್ಕೆ ಶಾಂತಿನಗರ ವಾರ್ಡ್ ಸದಸ್ಯೆ ಸೌಮ್ಯ ಶಿವಕುಮಾರ್ ಹಾಗೂ ಜಯನಗರ ವಾರ್ಡ್‌ನ ಗಂಗಾಂಬಿಕೆ ಮಲ್ಲಿಕಾರ್ಜುನ್ ನಡುವೆ ತೀವ್ರ ಪೈಪೋಟಿ ಶುರುವಾಗಿದೆ ಎನ್ನಲಾಗುತ್ತಿದೆ.

ಸೌಮ್ಯ ಶಿವಕುಮಾರ್ ಈ ಹಿಂದೆ ಜಿ.ಪದ್ಮಾವತಿ ಮೇಯರ್ ಆಗಿ ಆಯ್ಕೆಯಾಗುವ ಸಂದರ್ಭದಲ್ಲೇ ಮೇಯರ್ ಸ್ಥಾನ ಅಲಂಕರಿಸಲು ಫೈಟ್ ನಡೆಸಿದ್ದರು. ಆದರೆ, ರಾಜಿ ಸಂಧಾನ ನಡೆಸಿದ ಕಾಂಗ್ರೆಸ್ ವರಿಷ್ಠರು ಮುಂದಿನ ಬಾರಿ ನಿಮಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸೌಮ್ಯ ನನಗೆ ನೀಡಬೇಕು ಎಂದು ಪಟ್ಟು ಹಿಡಿದ್ದಾರೆ ಎಂದು ತಿಳಿದುಬಂದಿದೆ.

ಲಿಂಗಾಯತ ಸಮುದಾಯದ ಜಯನಗರ ವಾರ್ಡ್‌ನ ಗಂಗಾಂಬಿಕೆ ಅವರಿಗೆ ಮೇಯರ್ ಸ್ಥಾನ ನೀಡಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ರಾಮಲಿಂಗಾರೆಡ್ಡಿ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರು ಪಟ್ಟುಹಿಡಿದಿದ್ದಾರೆ ಎಂದು ಮೂಲಗಳು ಹೇಳಿವೆ. ಗಂಗಾಬಿಕೆ ಅವರಿಗೆ ಮೇಯರ್ ಸ್ಥಾನ ನೀಡಿದರೆ ಬಿಜೆಪಿ ಕಡೆ ಮುಖ ಮಾಡಿರುವ ವೀರಶೈವ ಮತಗಳನ್ನು ಸೆಳೆಯಲು ಅನುಕೂಲವಾಗುತ್ತದೆ ಎನ್ನುವುದು ಶಾಸಕರ ಅಭಿಪ್ರಾಯವಾಗಿದೆ.

ಒಟ್ಟಾರೆ ಸೌಮ್ಯ ಶಿವಕುಮಾರ್ ಮತ್ತು ಗಂಗಾಂಬಿಕೆ ಅವರ ನಡುವೆ ನೇರಾನೇರ ಹಣಾಹಣಿ ಏರ್ಪಟ್ಟಿದ್ದು, ಈ ಇಬ್ಬರಲ್ಲಿ ಒಬ್ಬರು ಮೇಯರ್ ಆಗಿ ಆಯ್ಕೆಯಾಗುವುದು ಬಹುತೇಕ ಖಚಿತಪಟ್ಟಿದೆ.

ಜೆಡಿಎಸ್ ಪಟ್ಟು: ಕಳೆದ ಮೂರು ಬಾರಿ ಕಾಂಗ್ರೆಸ್‌ನಿಂದ ಆಯ್ಕೆಯಾದ ಮೇಯರ್‌ಗೆ ಸಹಕಾರ ನೀಡಿರುವುದರಿಂದ ಈ ಬಾರಿಯ ಮೇಯರ್ ಸ್ಥಾನವನ್ನು ತಮಗೆ ಬಿಟ್ಟುಕೊಡಬೇಕು ಎಂದು ಮಿತ್ರಪಕ್ಷವಾದ ಜೆಡಿಎಸ್ ಒತ್ತಾಯಿಸಿದೆ. ಜೆಡಿಎಸ್‌ನ ಈ ಬೇಡಿಕೆಗೆ ಕಾಂಗ್ರೆಸ್ ಸಮ್ಮತಿಸಿದರೆ ಬಿಬಿಎಂಪಿ ಜೆಡಿಎಸ್ ಗುಂಪಿನ ನಾಯಕಿ ನೇತ್ರಾ ನಾರಾಯಣ್ ಇಲ್ಲವೆ ಮಾಜಿ ಉಪ ಮೇಯರ್ ಹೇಮಲತಾ ಗೋಪಾಲಯ್ಯಗೆ ಮೇಯರ್ ಸ್ಥಾನ ಒಲಿಯುವ ಸಾಧ್ಯತೆಗಳಿವೆ.

ಮತದಾರರು: 198 ಸದಸ್ಯರು, 28 ಶಾಸಕರು ಹಾಗೂ ಮೇಲ್ಮನೆ ಸದಸ್ಯರು, 5 ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು ಸೇರಿದಂತೆ ಒಟ್ಟು 259 ಮಂದಿ ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸಬಹುದಾಗಿದೆ. ಮೇಯರ್ ಪಟ್ಟಕ್ಕೇರಲು 130 ಮ್ಯಾಜಿಕ್ ಸಂಖ್ಯೆ ಬೇಕು.

ಬಲಾಬಲ: 198 ಸದಸ್ಯ ಬಲದ ಬಿಬಿಎಂಪಿಯಲ್ಲಿ ಬಿಜೆಪಿ 100, ಕಾಂಗ್ರೆಸ್ 77, ಜೆಡಿಎಸ್ 14 ಹಾಗೂ 7 ಪಕ್ಷೇತರ ಸದಸ್ಯರಿದ್ದಾರೆ. ಕಾಂಗ್ರೆಸ್‌ನ 15 ಶಾಸಕರು, ಬಿಜೆಪಿಯ 11 ಮತ್ತು ಜೆಡಿಎಸ್‌ನ ಇಬ್ಬರು ಶಾಸಕರು ಮತ ಚಲಾಯಿಸಬಹುದಾಗಿದೆ. ಇದರೊಂದಿಗೆ ಐವರು ಲೋಕಸಭಾ ಸದಸ್ಯರು, 9 ಮಂದಿ ರಾಜ್ಯಸಭಾ ಸದಸ್ಯರು, 20 ಮಂದಿ ವಿಧಾನ ಪರಿಷತ್ ಸದಸ್ಯರು ಮತ ಚಲಾಯಿಸಬಹುದಾಗಿದೆ.

ಕಾಂಗ್ರೆಸ್‌ನ 77 ಸದಸ್ಯರು, 15 ಶಾಸಕರು, 7 ಪಕ್ಷೇತರ ಸದಸ್ಯರು, 6 ರಾಜ್ಯಸಭಾ ಸದಸ್ಯರು, ಇಬ್ಬರು ಸಂಸದರು ಹಾಗೂ 9 ವಿಧಾನ ಪರಿಷತ್ ಸದಸ್ಯರು ಸೇರಿದಂತೆ 116 ಮತದಾರರಿದ್ದಾರೆ. ಇದರೊಂದಿಗೆ ಜೆಡಿಎಸ್‌ನ 14 ಸದಸ್ಯರು, ಇಬ್ಬರು ಶಾಸಕರು, ಒಬ್ಬ ರಾಜ್ಯಸಭಾ ಸದಸ್ಯ ಸೇರಿದಂತೆ 17 ಮತದಾರರಿದ್ದಾರೆ. 116 ಸದಸ್ಯ ಬಲದ ಕಾಂಗ್ರೆಸ್‌ಗೆ ಜೆಡಿಎಸ್‌ನ 17 ಮಂದಿ ಸೇರಿದರೆ ಮೇಯರ್ ಸ್ಥಾನ ಗದ್ದುಗೆ ಹಿಡಿಯಲು ಅವಶ್ಯವಿರುವ 130ಕ್ಕಿಂತ ಮೂರು ಮತ ಹೆಚ್ಚಾಗಿ ಲಭಿಸಿದಂತಾಗುತ್ತದೆ. ಬಿಜೆಪಿ ನೂರು ಸದಸ್ಯರನ್ನು ಹೊಂದಿದ್ದರೂ ಈ ಬಾರಿಯೂ ಅವರಿಗೆ ಮೇಯರ್ ಸ್ಥಾನ ಕಷ್ಟ.

ಮೀಸಲು ಬದಲು?: ಬಿಬಿಎಂಪಿಗೆ ಸೆ.28 ಕ್ಕೆ ಚುನಾವಣೆ ನಡೆಯುವುದು ಖಾತ್ರಿಯಾಗಿದೆ. ಆದರೂ ಸರಕಾರದ ಹಂತದಲ್ಲಿ ಮೀಸಲಾತಿ ಬದಲಾವಣೆ ಮಾಡುವ ಕುರಿತ ಗಂಭೀರ ಚಿಂತನೆ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಮೀಸಲು ಬದಲಾವಣೆ ಮಾಡುವ ಸಂಬಂಧ ಮುನ್ಸಿಪಲ್ ಮತ್ತು ಅರ್ಬಲ್ ಇಲಾಖೆ ಸಾಧಕ-ಬಾಧಕಗಳ ಪರಿಶೀಲನೆ ನಡೆಸುತ್ತಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News