ಬಟ್ಟೆ ಬ್ಯಾನರ್ ಬಳಕೆಗೆ ಅವಕಾಶ ನೀಡಲು ಆಗ್ರಹ: ರಂಗ ಕಲಾವಿದರಿಂದ ಧರಣಿ

Update: 2018-09-03 16:57 GMT

ಬೆಂಗಳೂರು, ಸೆ.3: ರವೀಂದ್ರ ಕಲಾಕ್ಷೇತ್ರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಬಟ್ಟೆ ಬ್ಯಾನರ್ ಬಳಕೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ರಂಗ ಕಲಾವಿದರು ನಗರದ ರವೀಂದ್ರ ಕಲಾಕ್ಷೇತ್ರದ ಎದುರು ಪ್ರತಿಭಟನಾ ಧರಣಿ ನಡೆಸಿದರು.

ನಗರದ ರವೀಂದ್ರ ಕಲಾಕ್ಷೇತ್ರ, ಕಲಾಗ್ರಾಮ, ಕೆ.ಎಚ್.ಕಲಾಸೌಧ ಸೇರಿದಂತೆ ಹಲವು ರಂಗಮಂದಿರಗಳಲ್ಲಿ ಪ್ರತಿನಿತ್ಯ ಹಲವಾರು ನಾಟಕಗಳು ನಡೆಯುತ್ತಲೇ ಇರುತ್ತವೆ. ಈ ಸಂದರ್ಭದಲ್ಲಿ ಬಿಬಿಎಂಪಿ ಫ್ಲೆಕ್ಸ್, ಬ್ಯಾನರ್ ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ಬಟ್ಟೆ ಬ್ಯಾನರ್‌ಗಳನ್ನು ತೆರವು ಮಾಡಲಾಗುತ್ತಿದೆ. ಹೀಗಾಗಿ, ಪ್ರಚಾರದ ಅಭಾವದಿಂದಾಗಿ ಪ್ರೇಕ್ಷಕರ ಕೊರತೆ ಹೆಚ್ಚಾಗುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್, ನಾಟಕ ಮಾಡುವ ಕಲಾತಂಡಗಳು ರಂಗಮಂದಿರಗಳ ಎದುರಿನಲ್ಲಿ ಅಷ್ಟೇ ಬಟ್ಟೆ ಬ್ಯಾನರ್ ಬಳಕೆ ಮಾಡುತ್ತಿದ್ದಾರೆ. ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ಬ್ಯಾನರ್ ಬಳಕೆ ಮಾಡುತ್ತಿಲ್ಲ. ಹೀಗಿರುವಾಗ ಪಾಲಿಕೆಯು ಏಕಾಏಕಿಯಾಗಿ ಬ್ಯಾನರ್ ತೆರವು ಮಾಡುತ್ತಿರುವುದು ಸರಿಯಲ್ಲ ಎಂದು ಅಭಿಪ್ರಾಯಿಸಿದರು.

ಸರಕಾರವು ಈ ಕುರಿತು ಚಿಂತನೆ ಮಾಡಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಸ್ಥಳದ ಸುತ್ತಮುತ್ತಲಿನಲ್ಲಿ, ಬಸ್ಸು ನಿಲ್ದಾಣ, ಆಯ್ದ ಮೆಟ್ರೋ ನಿಲ್ದಾಣಗಳಲ್ಲಿ ಗುರುತಿಸಿ ಪೋಸ್ಟರ್ ಹಾಗೂ ಬ್ಯಾನರ್ ಅಳವಡಿಸಲು ಅವಕಾಶ ಕಲ್ಪಿಸಬೇಕು. ಈ ಸಂಬಂಧ ಇಲಾಖೆಯ ನಿರ್ದೇಶಕರಿಗೆ, ಸಂಬಂಧಪಟ್ಟ ಸಚಿವರಿಗೆ ಪತ್ರ ಬರೆಯಲಾಗುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿನ ಕಲಾಗ್ರಾಮ ಹಾಗೂ ನಯನ ರಂಗಮಂದಿರಲ್ಲಿ ಕೆಟ್ಟು ಹೋಗಿರುವ ಜನರೇಟರ್ ವ್ಯವಸ್ಥೆ ಸರಿಪಡಿಸಬೇಕು. ನಾಟಕ ಪ್ರದರ್ಶನದ ವೇಳೆ ಬೆಳಕಿನ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಕಲಾಗ್ರಾಮ ಹಾಗೂ ನಯನ ರಂಗಮಂದಿರದಲ್ಲಿ ಕೆಲಸ ಮಾಡುವ ಗುತ್ತಿಗೆ ಸಿಬ್ಬಂದಿಗೆ ಪ್ರತಿ ತಿಂಗಳು ನಿಗದಿಯಾದ ದಿನದಂದು ತಪ್ಪದೇ ಸಂಬಳ ಸಿಗುವ ವ್ಯವಸ್ಥೆಯಾಗಬೇಕು ಎಂದು ಪ್ರತಿಭಟನಾನಿರತರು ಆಗ್ರಹಪಡಿಸಿದರು.

ರವೀಂದ್ರ ಕಲಾಕ್ಷೇತ್ರ, ಕಲಾಗ್ರಾಮ ಹಾಗೂ ನಯನ ರಂಗಮಂದಿರಗಳ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿ ರಂಗತಂಡಗಳಿಗೆ ಸತಾಯಿಸದೇ ಮೊದಲು ಬಂದವರಿಗೆ ಮೊದಲ ಆದ್ಯತೆ ಕೊಟ್ಟು ಮುಂಗಡವಾಗಿ ನೋಂದಣಿ ಮಾಡುವ ಪಾರದರ್ಶಕ ವ್ಯವಸ್ಥೆ ತರಬೇಕು. ರಂಗಮಂದಿರಗಳ ನಿರ್ವಹಣೆ ಮಾಡುವ ಜವಾಬ್ದಾರಿ ಹೊತ್ತಿರುವ ವ್ಯವಸ್ಥಾಪಕರು ಹಾಗೂ ಅಧಿಕಾರಿಗಳು ರಂಗತಂಡಗಳ ಮುಖ್ಯಸ್ಥರು ಹಾಗೂ ಕಲಾವಿದರುಗಳೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಒತ್ತಾಯಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಾಂಸ್ಕೃತಿಕ ಸಂಘ ಸಂಸ್ಥೆಗಳಿಗೆ ಕೊಡುವ ಪ್ರಾಯೋಜನೆ, ವಾರ್ಷಿಕ ಅನುದಾನ ಹಾಗೂ ಇನ್ನಿತರೆ ಯೋಜನೆಗಳ ಧನಸಹಾಯಗಳನ್ನು ಉದ್ದೇಶಿತ ಕಾರ್ಯಕ್ರಮ ನಡೆಸಿದ ಸೂಕ್ತ ದಾಖಲೆ ನೀಡಿದ ನಂತರ ಅನುದಾನ ನೀಡಬೇಕು ಎಂದು ನಿರ್ದೇಶಕರು ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಇದೇ ವೇಳೆ ಕಲಾವಿದರು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ನಾಟಕ ಅಕಾಡೆಮಿ ಸದಸ್ಯರಾದ ಶಶಿಕಾಂತ್ ಎಡಹಳ್ಳಿ, ಬಿ.ವಿಟ್ಠಲ್, ಆರ್.ವೆಂಕಟರಾಜು, ಮಹಿಳಾ ಸಂಘಟನೆಯ ಕೆ.ಎಸ್.ವಿಮಲಾ, ಮಾವಳ್ಳಿ ಶಂಕರ್, ಸಮುದಾಯ ಸಂಘಟನೆಯ ಗುಂಡಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News