ಅರಸು ಚಿಂತನೆ ಸಾರ್ವಕಾಲಿಕ: ಶಾಸಕ ಅಶ್ವತ ನಾರಾಯಣ

Update: 2018-09-03 16:56 GMT

ಬೆಂಗಳೂರು, ಸೆ.3: ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ವಿಚಾರಗಳು ಹಾಗೂ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದ್ದು, ಎಂದಿಗೂ ಸಾರ್ವಕಾಲಿಕವಾದುದಾಗಿದೆ ಎಂದು ಶಾಸಕ ಅಶ್ವತನಾರಾಯಣ ಹೇಳಿದ್ದಾರೆ.

ರಾಜು ಕ್ಷತ್ರಿಯ ಸಂಘದ ವತಿಯಿಂದ ಅಯೋಜಿಸಿದ ದೇವರಾಜ ಅರಸು ಅವರ ಜನ್ಮದಿನೋತ್ಸವ ಹಾಗೂ ಅರಸು ಚಿಂತನೆ ವಿಚಾರ ಸಂಕಿರಣ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇವರಾಜ ಅರಸು ರಾಷ್ಟ್ರ ರಾಜಕಾರಣದಲ್ಲಿ ವಿಶಿಷ್ಟವಾದ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅವರೊಬ್ಬ ಅಪ್ರತಿಮ ಜನ ನಾಯಕರಾಗಿದ್ದರು ಎಂದರು.

ನಿವೃತ ಎಸಿಪಿ ಬಿ.ಕೆ.ಶಿವರಾಂ ಮಾತನಾಡಿ, ಕೃಷ್ಣರಾಜೇಂದ್ರ ಒಡೆಯರ್ ದೇಶದ ಇತಿಹಾಸದಲ್ಲಿ ಮಹತ್ತರವಾದ ಕ್ರಾಂತಿಕಾರಿ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಶೋಷಿತರ, ಹಿಂದುಳಿದ ಜನರ ಮನದಲ್ಲಿ ಮನೆ ಮಾಡಿದ್ದಾರೆ. ಅವರ ಪ್ರಭಾವ ದೇವರಾಜ ಅರಸು ಅವರ ಮೇಲೆಯೂ ಬೀರಿತ್ತು. ಹೀಗಾಗಿ, ಅವರು ರಾಜ್ಯದಲ್ಲಿ ಮಹತ್ತರವಾದ ಬದಲಾವಣೆಗಾಗಿ ಹಲವಾರು ಕ್ರಾಂತಿಕಾರಕ ನಿರ್ಣಯಗಳನ್ನು ಕೈಗೊಂಡಿದ್ದರು ಎಂದು ಹೇಳಿದರು.

ಜನಪರವಾಗಿ, ಬಡವರ, ಶೋಷಿತರ ಏಳಿಗೆಗಾಗಿ ದುಡಿದ ಅರಸು ಅವರಿಂದಲೇ ರಾಜಕೀಯವಾಗಿ ಬೆಳೆದ ಹಲವು ನಾಯಕರು ಕೊನೆಕ್ಷಣದಲ್ಲಿ ಅರಸುಗೆ ದ್ರೋಹ ಮಾಡಿದರು. ಇದರಿಂದಾಗಿ ಅವರು ಅನಿವಾರ್ಯವಾಗಿ ಸೋಲಬೇಕಾಯಿತು. ಇಲ್ಲದಿದ್ದರೆ, ರಾಜ್ಯದಲ್ಲಿ ಮತ್ತಷ್ಟು ನಿರ್ಣಾಯಕ ಬದಲಾವಣೆಗಳನ್ನು ಕಾಣಬಹುದಾಗಿತ್ತು ಎಂದು ನುಡಿದರು.

ದೇವರಾಜ ಅರಸು ಮುಖ್ಯಮಂತ್ರಿ ಆಗುವ ಮುನ್ನ ಬಲಿಷ್ಠ ಜಾತಿಗೆ ಸೀಮಿತವಾಗಿದ್ದ ರಾಜಕೀಯ ಅಧಿಕಾರವನ್ನು ಎಲ್ಲರೂ ರಾಜಕೀಯವಾಗಿ ಮುಂದೆ ಬರಬೇಕು, ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ಎಂಬ ಉದ್ದೇಶದಿಂದ ಅಲ್ಪಸಂಖ್ಯಾತರಿಗೆ, ಹಿಂದುಳಿದವರಿಗೆ ಅಧಿಕಾರ ವಿಸ್ತರಿಸಿದರು. ಅಂತಹ ನಾಯಕರನ್ನು ಮುಂದಿನ ದಿನಗಳಲ್ಲಿ ಕಾಣಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಹಿರಿಯ ಕವಿ ಮುಕುಂದರಾಜು ಮಾತನಾಡಿ, ದೇವರಾಜ ಅರಸು ಅಧಿಕಾರಕ್ಕೆ ಬಂದ ಮೇಲೆ ಮಲ ಹೊರುವ ಪದ್ದತಿ ಸೇರಿದಂತೆ ಅನೇಕ ಅನಿಷ್ಟ ಪದ್ಧತಿಗಳನ್ನು ನಿಷೇಧ ಮಾಡುವ ಮೂಲಕ, ಅವುಗಳಿಗೆ ಮುಕ್ತಿ ಕಾಣಿಸಿದರು. ಬಡವರ ಪರ 20 ಅಂಶದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜಾರಿ ಮಾಡಿದರು. ಆದರೆ, ಸ್ವಪಕ್ಷದಿಂದಲೇ ಅವರನ್ನು ನಿರ್ನಾಮ ಮಾಡಲು ಮುಂದಾಗಿದ್ದು, ದೊಡ್ಡ ದುರಂತ ಎಂದು ಹೇಳಿದರು.

ದೇವರಾಜ ಅರಸು ಪಕ್ಷದಿಂದ ಹೊರಹೋಗಲು ಗುಂಡೂರಾವ್ ಸೇರಿದಂತೆ ಅನೇಕರು ವ್ಯವಸ್ಥಿತವಾದ ಪಿತೂರಿ ನಡೆಸಿದರು. ಅಲ್ಲದೆ, ರಾಜಕೀಯ ಚರಿತ್ರೆಯಲ್ಲಿ ಬುದ್ಧಿ ಎಂದು ಕರೆಸಿಕೊಳ್ಳುತ್ತಿದ್ದ ಏಕೈಕ ನಾಯಕ ಅರಸು, ಅರಸು ಅಜ್ಞಾತ ಜನರ ಪಾಲಿನ ಅಸ್ಮಿತೆಯಾಗಿದ್ದರು ಎಂದು ಅವರು ನುಡಿದರು.

ಕಾರ್ಯಕ್ರಮದಲ್ಲಿ ಕೆಂಗಲ್ ಹನುಮಂತಯ್ಯ ಅವರ ಪುತ್ರ ಶೀಪಾದ ರೇಣು, ಷಣ್ಮುಖರಾಜು, ರಾಜೇಶ್ ಅರಸ್, ಓ.ರಾಜು, ಆಶಾರಾಜು, ರಂಗಕಲಾವಿದ ವೆಂಕಟರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News