ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್

Update: 2018-09-03 17:55 GMT

ಚಾಂಗ್ವಾನ್, ಸೆ.3: ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನ ಮಹಿಳೆಯರ 10 ಮೀ.ಏರ್ ರೈಫಲ್ ಇವೆಂಟ್‌ನಲ್ಲಿ ಕ್ರಮವಾಗಿ ಎರಡನೇ ಹಾಗೂ ನಾಲ್ಕನೇ ಸ್ಥಾನ ಗಿಟ್ಟಿಸಿಕೊಂಡಿರುವ ಅಂಜುಮ್ ವೌದ್ಗಿಲ್ ಹಾಗೂ ಅಪೂರ್ವಿ ಚಾಂಡೇಲಾ 2020ರ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದಾರೆ.

 ಸೋಮವಾರ 8 ಶೂಟರ್‌ಗಳ ನಡುವೆ ನಡೆದ ಫೈನಲ್ ಸ್ಪರ್ಧೆಯಲ್ಲಿ 24ರ ಹರೆಯದ ವೌದ್ಗಿಲ್ 248.4 ಅಂಕ ಗಳಿಸಿ ಎರಡನೇ ಸ್ಥಾನ ಪಡೆದರೆ, ಕೊರಿಯಾದ ಹನಾ(251.1) ಹಾಗೂ ಎನ್‌ಹಿಯಾ ಜಂಗ್(228.0)ಕ್ರಮವಾಗಿ ಮೊದಲ ಹಾಗೂ ಮೂರನೇ ಸ್ಥಾನ ಪಡೆದಿದ್ದಾರೆ.

ಬೆಳ್ಳಿ ಪದಕ ಜಯಿಸಿರುವ ವೌದ್ಗಿಲ್ ಪ್ರತಿಷ್ಠಿತ ಟೂರ್ನಮೆಂಟ್‌ನಲ್ಲಿ ಭಾರತದ ಪದಕದ ಖಾತೆ ತೆರೆದಿದ್ದಾರೆ. ಇನ್ನೋರ್ವ ಪ್ರತಿಭಾವಂತ ಶೂಟರ್ ಅಪೂರ್ವಿ 207 ಅಂಕ ಗಳಿಸಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಆದಾಗ್ಯೂ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾರೆ.

ಟೋಕಿಯೊ ಗೇಮ್ಸ್‌ನಲ್ಲಿ ಸ್ಥಾನ ಪಡೆಯಲು ಇಂಟರ್‌ನ್ಯಾಶನಲ್ ಶೂಟರ್ ಸ್ಪೋರ್ಟ್ಸ್ ಫೆಡರೇಶನ್‌ನ ಪ್ರಮುಖ ಟೂರ್ನಿ ಇದಾಗಿದೆ. 15 ಇವೆಂಟ್‌ಗಳಲ್ಲಿ ಸುಮಾರು 60 ಒಲಿಂಪಿಕ್ಸ್ ಸ್ಥಾನಗಳು ಭರ್ತಿಯಾಗಲಿವೆ.

ಪುರುಷರ 10 ಮೀ. ಏರ್ ರೈಫಲ್ ಇವೆಂಟ್‌ನಲ್ಲಿ ಏಶ್ಯನ್ ಗೇಮ್ಸ್‌ನಲ್ಲಿ ಪದಕ ವಿಜೇತ ದೀಪಕ್ ಕುಮಾರ್ ಕ್ವಾಲಿಫಿಕೇಶನ್‌ಗೆ ತೇರ್ಗಡೆಯಾಗಿದ್ದಾರೆ. ರಶ್ಯ ಹಾಗೂ ಕ್ರೊಯೇಶಿಯ ಆಟಗಾರರ ಪ್ರಾಬಲ್ಯವಿರುವ ಸ್ಪರ್ಧೆಗಳಲ್ಲಿ ಆರನೇ ಸ್ಥಾನ ಪಡೆದಿದ್ದಾರೆ.

ಭಾರತ ರವಿವಾರ ಜೂನಿಯರ್ ವಿಭಾಗದಲ್ಲಿ ಎರಡು ಪದಕಗಳನ್ನು ಜಯಿಸಿತ್ತು. ಆದರೆ, ಹಿರಿಯ ಶೂಟರ್‌ಗಳು 10 ಮೀ. ಏರ್ ರೈಫಲ್ ಹಾಗೂ ಏರ್ ಪಿಸ್ತೂಲ್ ಇವೆಂಟ್‌ಗಳಲ್ಲಿ ಫೈನಲ್‌ಗೆ ತಲುಪಲು ವಿಫಲರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News