3 ಸಾವಿರ ಮಣ್ಣಿನ ಗಣೇಶ ವಿತರಣೆ: ಶಾಸಕಿ ಸೌಮ್ಯಾ ರೆಡ್ಡಿ

Update: 2018-09-03 18:06 GMT

ಬೆಂಗಳೂರು, ಸೆ.3: ಈ ಬಾರಿಯ ಗಣೇಶನ ಹಬ್ಬಕ್ಕೆ 3 ಸಾವಿರ ಪರಿಸರ ಸ್ನೇಹಿ ಮಣ್ಣಿನ ಗಣೇಶನ ಮೂರ್ತಿಗಳನ್ನು ವಿತರಣೆ ಮಾಡಲಾಗುವುದು ಎಂದು ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ತಿಳಿಸಿದರು.

ಸೋಮವಾರ ಜೆಪಿ ನಗರದಲ್ಲಿ ಬಾಂಧವ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ, ಪರಿಸರ ಸ್ನೇಹಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಯನಗರ, ಬಿಟಿಎಂ ಲೇಔಟ್‌ನಲ್ಲಿ ಸೆ.10ರಿಂದ ಎರಡು ದಿನಗಳ ಕಾಲ 3 ಸಾವಿರ ಮಣ್ಣಿನ ಗಣೇಶಗಳನ್ನು ಉಚಿತವಾಗಿ ಸಾರ್ವಜನಿಕರಿಗೆ ವಿತರಣೆ ಮಾಡಲಾಗುವುದು ಎಂದರು.

ಪರಿಸರ ಸ್ನೇಹಿ ಮೂರ್ತಿಗಳ ಕುರಿತು ಶಾಲಾ-ಕಾಲೇಜುಗಳಲ್ಲಿ ಕಾರ್ಯಾಗಾರ ನಡೆಸುತ್ತಿದ್ದು, ಮಕ್ಕಳ ಕೈಯಲ್ಲೇ ಗಣೇಶ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ ಎಂದ ಅವರು, ಕೆರೆಯಲ್ಲಿ ಕರಗುವಂತಹ ಮಣ್ಣಿನ ಮೂರ್ತಿಯನ್ನಷ್ಟೇ ಬಳಸಲು ಎಲ್ಲರೂ ಮುಂದಾಗಬೇಕು ಎಂದು ಕರೆ ನೀಡಿದರು.

ಪಿಒಪಿ ಗಣೇಶ ಮೂರ್ತಿಗಳು ನೀರಿನಲ್ಲಿ ಕರಗುತ್ತಿಲ್ಲ. ಇದರಿಂದಾಗಿ ಜಲ ಮಾಲಿನ್ಯವಾಗುತ್ತಿದ್ದು, ಗಣೇಶ ಮೂರ್ತಿಗೆ ಬಳಸಿದ್ದ ರಾಸಾಯನಿಕಯುಕ್ತ ಬಣ್ಣವೂ ಸಹ ಜಲಮಾಲಿನ್ಯವನ್ನುಂಟು ಮಾಡುತ್ತಿದೆ. ಹೀಗಾಗಿ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ನಗರದ ಕೆರೆಗಳಿಗೆ ಕುಖ್ಯಾತಿ ಬಂದಿದ್ದು, ಇದನ್ನು ತಡೆಯಲು, ಪರಿಸರ ಸ್ನೇಹಿ ಗಣೇಶನನ್ನೇ ಬಳಸಿ ಎಂದು ಸಲಹೆ ಮಾಡಿದರು.

ಉಚಿತ ಪರಿಸರ ಸ್ನೇಹಿ ಗಣೇಶ ಮೂರ್ತಿ ಪಡೆಯುವ ಆಸ್ತಕರು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 93413 89999, 9742608420 ಅನ್ನು ಸಂಪರ್ಕಿಸಬಹುದಾಗಿ ಎಂದು ಬೈರಸಂದ್ರ ವಾರ್ಡ್ ಸದಸ್ಯ ಎನ್.ನಾಗರಾಜು ಇದೇ ವೇಳೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News