ತಮಿಳುನಾಡಿನಲ್ಲಿ ಬ್ಯಾಂಕ್ ಸಾಲ ವಂಚನೆ ಹಗರಣ: 6 ತಿಂಗಳಲ್ಲಿ 15 ಸಾಲಗಾರರ ಅಸಹಜ ಸಾವು, ಓರ್ವ ನಾಪತ್ತೆ

Update: 2018-09-04 06:20 GMT

ಚೆನ್ನೈ, ಸೆ.4: ತಮಿಳುನಾಡಿನ ವಿರುಧುನಗರ ಮತ್ತು ಥೇಣಿ ಜಿಲ್ಲೆಗಳಲ್ಲಿ ನಡೆದಿರುವ ಬಹುಕೋಟಿ ಬ್ಯಾಂಕ್ ಸಾಲಹಗರಣದಲ್ಲಿ ಬಲಿಪಶುಗಳಾಗಿದ್ದ ಸಾಲಗಾರರ ಪೈಕಿ 15 ಮಂದಿ ಕಳೆದ ಆರು ತಿಂಗಳಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಹಗರಣದಲ್ಲಿ ಸಿಲುಕಿಕೊಂಡಿದ್ದ ಓರ್ವ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.

ಸ್ಟೇಟ್ ಬ್ಯಾಂಕ್ ಇಂಡಿಯಾದಿಂದ  ಅಮಾಯಕರ ಹೆಸರಲ್ಲಿ  60 ಕೋಟಿ ರೂ. ಸಾಲ ಪಡೆದು  ವಂಚಿಸಿದ ಹಗರಣದ ಪ್ರಮುಖ ಆರೋಪಿಗಳು ಪೆರಿಯಾಕುಲಂ ಜೈಲಿನಲ್ಲಿ ಇದೀಗ ಕಂಬಿ ಎಣ್ಣಿಸುತ್ತಿದ್ದಾರೆ.

ಸಾಲದ ಹಗರಣದಲ್ಲಿ ಸಿಲುಕಿಕೊಂಡು ಅಸಹಜ ಸಾವನ್ನಪ್ಪಿದ ಎಲ್ಲರು ತಮಿಳುನಾಡಿನ ವಿರುಧುನಗರದ ಮತ್ತು ಅಕ್ಕಪಕ್ಕದ ಗ್ರಾಮಗಳ ನಿವಾಸಿಗಳು. ಇವರ ಹೆಸರಿನಲ್ಲಿ ಬ್ಯಾಂಕ್ ಸಾಲದ ಹೊರೆ ಇದೆ. ಆದರೆ ಇವರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ತನಿಖೆ ನಡೆದಿಲ್ಲ ಎಂದು ತಿಳಿದು ಬಂದಿದೆ.

ಮೃತಪಟ್ಟವರ ಮೂವರ ಹೆಸರು ಲಭ್ಯವಾಗಿದ್ದು, ಅವರನ್ನು ಮಾಹಾಲಿಂಗಮ್, ಪಾಂಡಿ ಮತ್ತು ರಾಜ್ ಗೋಪಾಲ್ ಎಂದು  ತಿಳಿದು ಬಂದಿದೆ.

ರಾಜ್ ಗೋಪಾಲ್ ರಸ್ತೆ ಬದಿಯಲ್ಲಿ ಮತ್ತು ಇತರ ಇಬ್ಬರು ಮನೆಯಲ್ಲಿ ನಿಗೂಢವಾಗಿ ಮೃತಪಟ್ಟಿದ್ದರು. ಇವರ ಅಸಹಜ  ಸಾವಿಗೆ ಸಂಬಂಧಿಸಿ ಪೊಲೀಸರು ಅಪರಾಧ ದಂಡ ಸಂಹಿತೆ 174ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾವಿನ ಪ್ರಕರಣದ ಕಡತ ಹೆಚ್ಚಿನ  ತನಿಖೆ ಇಲ್ಲದೆ ಮುಚ್ಚಿ ಹೋಗಿವೆ. ಮೃತಪಟ್ಟ ಎಲ್ಲರೂ ಬ್ಯಾಂಕ್ ಗೆ ವಂಚಿಸಿದ ಆರೋಪಿಗಳಿಗೆ ಸೇರಿದ ಆರ್ ಎಂಪಿಟಿ ದಾಲ್ ಮಿಲ್ಲ್ ನ  ಕಾರ್ಮಿಕರು ಎಂದು ಆಂಗ್ಲ ಪತ್ರಿಕೆಯೊಂದು  ವರದಿ ಮಾಡಿದೆ.

ಆರೋಪಿಗಳಾದ ಒಎಂ ಎಸ್ ವೇಲುಮುರುಗನ್ ಮತ್ತು ಆತನ ಅಣ್ಣನ ಮಗ ಆರ್ ಶೇನ್ ಬಾಗನ್ ತನ್ನ ಕಾರ್ಖಾನೆಯ ದಿನಗೂಲಿ ನೌಕರರಿಂದ  ಸರಕಾರದಿಂದ ಪಿಂಚಣಿ ಸೌಲಭ್ಯ  ದೊರಕಿಸಿಕೊಡುವ ನೆಪದಲ್ಲಿ ದಾಖಲೆ ಪತ್ರಗಳಿಗೆ ಸಹಾ ಹಾಕಿಸಿ ಅವರ ಮೂಲಕ 25 ಲಕ್ಷ ರೂ.ಗಳಿಂದ 40 ಲಕ್ಷ ರೂ. ತನಕ ಬ್ಯಾಂಕ್ ಸಾಲ ಪಡೆದು ವಂಚಿಸಿರುವುದಾಗಿ  ತಿಳಿದು ಬಂದಿದೆ.

ಬ್ಯಾಂಕ್ ನಿಂದ ಸಾಲ ಮರುಪಾವತಿಗೆ ನೋಟಿಸ್ ಬರುವಾಗಲೇ ಕಾರ್ಮಿಕರಿಗೆ ತಾವು ಮೋಸ ಹೋಗಿರುವ ವಿಚಾರ ಗೊತ್ತಾಯಿತು. ಬ್ಯಾಂಕ್ ನಿಂದ ಸಾಲ ಮರುಪಾವತಿ ನೋಟಿಸ್ ಜಾರಿಯಾದ ಮರುದಿನವೇ  ರಿಯಲ್ ಎಸ್ಟೇಟ್ ಏಜೆಂಟ್ ನಾಗಮುತ್ತು ಕಾಣೆಯಾಗಿದ್ದನು. ಈತನ ಹೆಸರಲ್ಲಿ 96 ಲಕ್ಷ ರೂ. ಬ್ಯಾಂಕ್ ಸಾಲ ಪಡೆಯಲಾಗಿದೆ. ಕಳೆದ ಆರು ತಿಂಗಳಿನಿಂದ ಈತ ನಾಪತ್ತೆಯಾಗಿದ್ದಾನೆ.

ವೇಲುಮುರುಗನ್ ಮತ್ತು ಶೇನ್ ಬಾಗನ್ ಬ್ಯಾಂಕ್ ಸಾಲ ಹಗರಣದ ಪ್ರಮುಖ ಆರೋಪಿಗಳಾಗಿ ಗುರುತಿಸಿಕೊಂಡಿದ್ದಾರೆ.

ವಂಚನೆ ಪ್ರಕರಣಕ್ಕೆ ಸಂಬಂಧಿಸಿ ದಿನಗೂಲಿ ನೌಕರ ವೇಲ್ ಮುತ್ತು ಅಲಗುರ್ಜಾ  ಜುಲೈ 30ರಂದು ದೂರು ನೀಡಿದ್ದರು. ಇದರ ಬೆನ್ನಲ್ಲೇ ವೇಲುಮುರುಗನ್ ಮತ್ತು ಶೇನ್ ಬಾಗನ್ ವಿರುದ್ಧ 400 ಮಂದಿ  ತಮ್ಮ  ಹೆಸರಲ್ಲಿ ಸಾಲ ಪಡೆದು ವಂಚಿಸಿರುವ ಬಗ್ಗೆ ದೂರು ನೀಡಿದ್ದರು.

ಆಗಸ್ಟ್ 30ರಂದು ಹಗರಣದ ಮಾಸ್ಟರ್ ಮೈಂಡ್ ಆಗಿರುವ ಶೇನ್ ಬಾಗನ್ ಮಗಳು ಇಂಧುಮತಿ ಎಂಬಾಕೆಗೆ ಮದ್ರಾಸ್ ಹೈಕೋರ್ಟ್  ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.

ಆ.8ರಂದು ಆರೋಪಿಗಳಾದ ಆರ್.ಶೇನ್ ಬಾಗನ್ (55) ಮತ್ತು ಆತನ ಚಿಕ್ಕಪ್ಪ ಒಎಂಎಸ್ ವೇಲ್ ಮುರುಗನ್ (65) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಸೆ.3ರಂದು ಪ್ರಕರಣದ ಇನ್ನೊಬ್ಬ ಆರೋಪಿ ಸನ್ಸಾಯಿ ಎಂಬಾತನನ್ನು ಪೊಲೀಸರು ಬಂಧಿಸಿ ಜೈಲಿಗೆ ತಳ್ಳಿದ್ದಾರೆ.

ವಂಚನೆಗೊಳಾದ ವ್ಯಕ್ತಿಯೊಬ್ಬರ ಸಂಬಂಧಿ ಗಣೇಶನ್ ಎಂಬವರು ಬ್ಯಾಂಕ್ ಸಾಲ ಹಗರಣದ  ಬಗ್ಗೆ ಕಳೆದ ಮಾರ್ಚ್ ನಲ್ಲಿ ವಿರುದ್ ನಗರ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಆದರೆ ದೂರಿಗೆ ಸಂಬಂಧಿಸಿ ಜಿಲ್ಲಾಧಿಕಾರಿಯವರಿಂದ ಈ ತನಕ ಯಾವುದೇ ಕ್ರಮ ಕೈಗೊಂಡಿಲ್ಲ  ಎಂದು ಅವರು ಅಪಾದಿಸಿದ್ದಾರೆ.

ನಾಗಮುತ್ತು ಪತ್ನಿ ಮಾಗೇಶ್ವರಿ ನಾಪತ್ತೆಯಾಗಿರುವ ತನ್ನ ಗಂಡ ಮರಳಿ ಬರುವ ವಿಶ್ವಾಸದಲ್ಲಿದ್ದಾರೆ. "  ನಾನು ವೇಲುಮುರುಗನ್ ನ್ನು ಹಲವು ಬಾರಿ ಆತನ ಕಚೇರಿಯಲ್ಲಿ ಭೇಟಿಯಾಗಿ ನನ್ನ ಎರಡನೇ ಮಗಳ ನಾಗ ಸುಧಾಳ ಕಾಲೇಜು ಫೀಸು (44,000 ರೂ) ಪಾವತಿಸಲು ಹಣ ನೀಡುವಂತೆ ಬೇಡಿಕೊಂಡೆ ಆದರೆ ಆತ ನೀಡಲಿಲ್ಲ. ನನ್ನ ಕುಟುಂಬವನ್ನು ಸರ್ವನಾಶ ಮಾಡಿದ ಆತನಿಗೆ ದೇವರು ತಕ್ಕ ಶಿಕ್ಷೆ ನೀಡುತ್ತಾನೆ" ಎಂದು ಮಾಗೇಶ್ವರಿ ಹೇಳಿದ್ದಾರೆ.



 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News