ನಿವೃತ್ತ ಪೊಲೀಸ್ ಸಿಬ್ಬಂದಿಯನ್ನು ನಡುರಸ್ತೆಯಲ್ಲಿ ಥಳಿಸಿ ಹತ್ಯೆಗೈದ ದುಷ್ಕರ್ಮಿಗಳು

Update: 2018-09-04 07:55 GMT

ಅಲಹಾಬಾದ್, ಸೆ. 4: ನಿವೃತ್ತ ಪೊಲೀಸ್ ಸಿಬ್ಬಂದಿಯೊಬ್ಬರ ಮೇಲೆ ಮೂವರು ವ್ಯಕ್ತಿಗಳು ಅಲಹಾಬಾದ್ ನಗರದ ನಡು ರಸ್ತೆಯಲ್ಲಿ ಬೆತ್ತದಿಂದ  ಹಲ್ಲೆ ನಡೆಸಿ, ಗಂಭೀರ ಗಾಯಗೊಳಿಸಿದ ಪರಿಣಾಮ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೃತರನ್ನು 70 ವರ್ಷದ ಅಬ್ದುಲ್ ಸಮದ್ ಖಾನ್ ಎಂದು ಗುರುತಿಸಲಾಗಿದೆ.

ದುಷ್ಕರ್ಮಿಗಳು ಅವರನ್ನು ಅದೆಷ್ಟು ಬರ್ಬರವಾಗಿ ಥಳಿಸಿದ್ದರೆಂದರೆ ಆಸ್ಪತ್ರೆಗೆ ದಾಖಲಿಸುವ ಹೊತ್ತಿಗೆ ಅವರಿಗೆ ತೀವ್ರ ರಕ್ತಸ್ರಾವವಾಗುತ್ತಿತ್ತು.

ಸೋಮವಾರ ಬೆಳಗ್ಗೆ ನಡೆದ ಈ ಪೈಶಾಚಿಕ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನೊಬ್ಬ ವ್ಯಕ್ತಿ ಈ ಘಟನೆಯನ್ನು ತನ್ನ ಮನೆಯ ಟೆರೇಸಿನಲ್ಲಿ ನಿಂತು ನೋಡುತ್ತಿರುವುದು ಕಾಣಿಸುತ್ತದೆ.  ಖಾನ್ ಮೇಲೆ ದಾಳಿ ನಡೆಯುತ್ತಿದ್ದಾಗ ಹಲವಾರು ವಾಹನಗಳು ಹಾದು ಹೋದರೂ ಅವರೆಲ್ಲರೂ ಅರೆ ಕ್ಷಣ ನಿಂತು ನಂತರ ತಮ್ಮ ದಾರಿಯಲ್ಲಿ ಸಾಗಿರುವುದು ಸುಮಾರು 40 ಸೆಕೆಂಡಿನ ಈ ವೀಡಿಯೊ ಕ್ಲಿಪ್ಪಿನಲ್ಲಿ ಕಾಣಿಸುತ್ತದೆ.

ಆರಂಭದಲ್ಲಿ ಇದ್ದ ಮೂವರು ದುಷ್ಕರ್ಮಿಗಳ ಜತೆ ಮತ್ತೆ ಮೂವರು ಸೇರಿಕೊಂಡಿದ್ದು ಇನ್ನಿಬ್ಬರು ಅಲ್ಲಿ ನಿಂತು ಸಮದ್ ಥಳಿತಕ್ಕೊಳಗಾಗುವುದನ್ನು ನೋಡುತ್ತಿದ್ದರು. ದುಷ್ಕರ್ಮಿಗಳು ನಂತರ ಅಲ್ಲಿಂದ ಪರಾರಿಯಾಗುತ್ತಿದ್ದಂತೆಯೇ ಖಾನ್ ಅವರು ಗೋಡೆಗೆ ತಾಗಿ ಕುಳಿತಿದ್ದು ಕಾಣಿಸುತ್ತದೆ. ಪ್ರಮುಖ ಆರೋಪಿ ಜುನೈದ್ ಮೇಲೆ ಕನಿಷ್ಠ 10 ಕ್ರಿಮಿನಲ್ ಪ್ರಕರಣಗಳಿವೆ. ಸಂಬಂಧಿಗಳೊಂದಿಗೆ ಇದ್ದ ಆಸ್ತಿ ತಕರಾರೇ ಈ ಘಟನೆಗೆ ಕಾರಣವೆಂದು ಆರಂಭಿಕ ತನಿಖೆಯಿಂದ ತಿಳಿದು ಬಂದಿದೆಯೆಂದು ಅಲಹಾಬಾದ್ ಪೊಲೀಸರು ಹೇಳಿದ್ದಾರೆ.

ಖಾನ್ ಅವರು 2006ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News