ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಚಿಂತನೆ: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ

Update: 2018-09-04 14:13 GMT

ಬೆಂಗಳೂರು, ಸೆ.4: ಡಿಸೇಲ್ ದರ ನಿರಂತರವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಪ್ರಯಾಣ ದರವನ್ನು ಅನಿವಾರ್ಯವಾಗಿ ಹೆಚ್ಚಳ ಮಾಡಬೇಕಿದೆ. ಈ ಸಂಬಂಧ ಮುಖ್ಯಮಂತ್ರಿ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೇಲ್ ದರ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಈಶಾನ್ಯ ಹಾಗೂ ವಾಯವ್ಯ ಸಾರಿಗೆ ಸಂಸ್ಥೆಗಳಿಗೆ 186 ಕೋಟಿ ರೂ.ಹೊರೆಯಾಗಿದೆ ಎಂದರು.

ಪ್ರತಿ ವಾರ ಡಿಸೇಲ್ ಬೆಲೆ ಏರಿಕೆಯಾಗುತ್ತಿದೆ. ಆದುದರಿಂದ, ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡಲೇಬೇಕಿದೆ. ಶೇ.18ರಷ್ಟು ಪ್ರಯಾಣ ದರ ಹೆಚ್ಚಳ ಮಾಡುವಂತೆ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಯಾಣಿಕರಿಗೂ ಹೊರೆಯಾಗದಂತೆ, ಸಾರಿಗೆ ಸಂಸ್ಥೆಗಳಿಗೆ ನಷ್ಟವಾಗದಂತೆ ಪ್ರಯಾಣ ದರವನ್ನು ಹೆಚ್ಚಳ ಮಾಡುವುದು ನಮ್ಮ ಉದ್ದೇಶ ಎಂದು ತಮ್ಮಣ್ಣ ತಿಳಿಸಿದರು. ಹಬ್ಬಗಳ ದಿನದಂದು ಸರಕಾರಿ ಬಸ್ಸುಗಳ ಟಿಕೆಟ್ ದರ ಹೆಚ್ಚಳ ಮಾಡುವುದಿಲ್ಲ. ಬದಲಾಗಿ, ಹೆಚ್ಚುವರಿ ಬಸ್ಸುಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಖಾಸಗಿ ಬಸ್ಸುಗಳು ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರಿಂದ ಹೆಚ್ಚಿನ ಹಣ ದೋಚುವ ಸಂಗತಿ ನಮಗೆ ಗೊತ್ತಿದೆ. ಆದರೆ, ಯಾರೂ ಈ ಬಗ್ಗೆ ದೂರು ನೀಡುವುದಿಲ್ಲ. ಆದುದರಿಂದ, ನಾವು ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.

ಸಾರಿಗೆ ಇಲಾಖೆಯಿಂದ ಹಲವು ಯೋಜನೆಗಳನ್ನು ಜಾರಿಗೆ ತರಲು ಚಿಂತನೆ ನಡೆಸಲಾಗಿದೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದು 3 ತಿಂಗಳಾಗಿದೆ. ಯೋಜನೆಗಳನ್ನು ಜಾರಿಗೆ ತರಲು ಸಮಯಾವಕಾಶ ಬೇಕು. ಯೋಜನಾಬದ್ಧ, ಸಮರ್ಪಕವಾಗಿ ಹೊಸ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ತಮ್ಮಣ್ಣ ತಿಳಿಸಿದರು.

ಅನಾವಶ್ಯಕ ಬಸ್ಸುಗಳಿಗೆ ಕಡಿವಾಣ ಹಾಕಲು ಚಿಂತನೆ ನಡೆಸಲಾಗಿದೆ. ಅನಾವಶ್ಯಕವಾಗಿ ಸಂಚರಿಸುತ್ತಿರುವ ಬಸ್ಸುಗಳಿಂದ ನಷ್ಟವಾಗುತ್ತಿದೆ. ಆದುದರಿಂದ, ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಕೇಳಿದ್ದೇನೆ. ಆನಂತರ, ಅನವಶ್ಯಕ ಬಸ್ಸುಗಳ ಸಂಚಾರಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಅಗತ್ಯವಿಲ್ಲದಿದ್ದರೂ ಹೊಸ ಬಸ್ಸುಗಳನ್ನು ಖರೀದಿ ಮಾಡುವ ಪ್ರಕ್ರಿಯೆಗೂ ಕಡಿವಾಣ ಹಾಕಲಾಗುವುದು. ದೂರದ ಊರುಗಳಿಗೆ ಸ್ಲೀಪರ್ ಕೋಚ್ ಬಸ್ಸುಗಳ ಬೇಡಿಕೆ ಇರುವುದರಿಂದ ಹೊಸದಾಗಿ 40 ಬಸ್ಸುಗಳನ್ನು ಖರೀದಿಸಲಾಗುವುದು. ಖಾಸಗಿ ಬಸ್ಸುಗಳ ಮಾಲಕರ ಜೊತೆ ಸಾರಿಗೆ ಇಲಾಖೆಯ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಮಾಹಿತಿಗಳು ಸಿಕ್ಕಿವೆ. ಹಂತ ಹಂತವಾಗಿ ಇವೆಲ್ಲದಕ್ಕೂ ಕಡಿವಾಣ ಹಾಕಲಾಗುವುದು ಎಂದು ತಮ್ಮಣ್ಣ ತಿಳಿಸಿದರು.

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ಕುರಿತು ಮುಖ್ಯಮಂತ್ರಿ ಜೊತೆ ಇನ್ನೊಂದು ವಾರದಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಎಸ್ಸಿಪಿ ಮತ್ತು ಟಿಎಸ್ಪಿಯೋಜನೆಯಡಿ ಶೇ.25ರಷ್ಟು ನೀಡುತ್ತಿದ್ದ ಹಣವನ್ನು ಶೇ.50ರಷ್ಟು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಹೀಗಾಗಿ ಸರಕಾರ ಶೇ.50ರಷ್ಟು ಹಾಗೂ ಸಮಾಜ ಕಲ್ಯಾಣ ಇಲಾಖೆ ಶೇ.50ರಷ್ಟು ಬಸ್‌ಪಾಸ್ ದರವನ್ನು ಭರಿಸಲಿವೆ.

-ಡಿ.ಸಿ.ತಮ್ಮಣ್ಣ, ಸಾರಿಗೆ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News