ಬೆಂಬಲ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್-ಜೆಡಿಎಸ್: ಯಡಿಯೂರಪ್ಪ

Update: 2018-09-04 14:34 GMT

ಬೆಂಗಳೂರು, ಸೆ.4: ನಗರ ಸ್ಥಳೀಯ ಸಂಸ್ಥೆಗಳ ಫಲಿತಾಂಶ ಸಮ್ಮಿಶ್ರ ಸರಕಾರಕ್ಕೆ ಬೆಂಬಲ ಸೂಚಿಸಿದ ಸಂಕೇತ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯ ಮುನ್ಸೂಚನೆ, ಎಲ್ಲ ಸ್ಥಾನಗಳನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಗೆಲ್ಲುತ್ತದೆ ಎನ್ನುತ್ತಾರೆ. ಆದರೆ, ಕಣ್ಣ ಮುಂದೆ ಇರುವ ಸತ್ಯವೇ ಬೇರೆ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

2007ರಿಂದ ಇಲ್ಲಿಯವರೆಗೆ ನಡೆದ ಮೂರು ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಗಮನಿಸಿದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳು ತಮ್ಮ ಬೆಂಬಲವನ್ನು ಕಳೆದುಕೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

2007ರಲ್ಲಿ 5004 ಸ್ಥಾನಗಳಿಗೆ ಚುನಾವಣೆ ನಡೆದು ಬಿಜೆಪಿ 1180, ಕಾಂಗ್ರೆಸ್ 1606, ಜೆಡಿಎಸ್ 1504, ಪಕ್ಷೇತರರು 716, ಅಂದರೆ ಶೇಕಡವಾರು ಸ್ಥಾನಗಳಲ್ಲಿ ಬಿಜೆಪಿ ಶೇ.23.58, ಕಾಂಗ್ರೆಸ್ ಶೇ.32.29, ಜೆಡಿಎಸ್ ಶೇ.30.05 ಹಾಗೂ ಪಕ್ಷೇತರರು ಶೇ.14.30ರಷ್ಟು ಸ್ಥಾನಗಳು ಪಡೆದಿದ್ದವು ಎಂದು ಅವರು ಹೇಳಿದ್ದಾರೆ.

2013ರಲ್ಲಿ 4952 ಸ್ಥಾನಗಳಿಗೆ ಚುನಾವಣೆ ನಡೆದು ಬಿಜೆಪಿ 905, ಕಾಂಗ್ರೆಸ್ 1960, ಜೆಡಿಎಸ್ 906, ಪಕ್ಷೇತರರು 1183, ಶೇಕಡವಾರು ಬಿಜೆಪಿ ಶೇ.18.27, ಕಾಂಗ್ರೆಸ್ ಶೇ.39.57, ಜೆಡಿಎಸ್ 18.29, ಪಕ್ಷೇತರರು ಶೇ.23.88ರಷ್ಟು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು ಎಂದು ಅವರು ತಿಳಿಸಿದ್ದಾರೆ.

ನಿನ್ನೆ ಪ್ರಕಟವಾಗಿರುವ ಚುನಾವಣಾ ಫಲಿತಾಂಶವನ್ನು ಗಮನಿಸಿದರೆ ಅರ್ಧದಷ್ಟು ಸ್ಥಾನಗಳಿಗೆ ಚುನಾವಣೆ ನಡೆದಿದೆ. 2662 ಒಟ್ಟು ಸ್ಥಾನಗಳಲ್ಲಿ ಬಿಜೆಪಿ 929, ಕಾಂಗ್ರೆಸ್ 982, ಜೆಡಿಎಸ್ 375, ಪಕ್ಷೇತರರು 376, ಶೇಕಡವಾರು ಬಿಜೆಪಿ 34.89, ಕಾಂಗ್ರೆಸ್ ಶೇ.36.88, ಜೆಡಿಎಸ್ ಶೇ.14.08 ಹಾಗೂ ಪಕ್ಷೇತರರು ಶೇ.14.12ರಷ್ಟು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಈ ಶೇಕಡವಾರು ಫಲಿತಾಂಶ ಲೆಕ್ಕಕ್ಕೆ ತೆಗೆದುಕೊಂಡರೆ ಒಂದು ಕಡೆ ಜೆಡಿಎಸ್ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದರೆ, ಕಾಂಗ್ರೆಸ್‌ನ ಮೂಲ ನೆಲೆಯೇ ಕುಸಿಯುತ್ತಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಆದರೆ, ಕುಮಾರಸ್ವಾಮಿ ಮಾತಿನ ಭರದಲ್ಲಿ ಮನಸ್ಸಿಗೆ ತೋಚಿದಂತೆ ಮಾತನಾಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ‘ಶ್ವೇತಪತ್ರ’ಕ್ಕೆ ತನ್ನದೇ ಆದ ಘನತೆ ಇದೆ. ಆದರೆ, ಯಾವುದೇ ಬಣ್ಣದ ಪತ್ರವನ್ನು ಕೊಡಲು ಸಿದ್ಧ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಶ್ವೇತಪತ್ರವನ್ನೆ ಅವಹೇಳನ ಮಾಡಿದ್ದಾರೆ. ಅವರು ಬುದ್ಧಿ ಸ್ಥಿಮಿತ ಕಳೆದುಕೊಂಡವರಂತೆ ಮಾತನಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಹೇಳುವುದು ಇಷ್ಟೇ. ರಾಜ್ಯದ ಜನ ನಿಮ್ಮ ಮತ್ತು ಸರಕಾರದ ನಡವಳಿಕೆಯಿಂದ ಬೇಸತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಕಡಿಮೆ ಎಂದರೆ ರಾಜ್ಯದ 25 ಸ್ಥಾನಗಳಲ್ಲಿ ಗೆಲ್ಲಿಸುವ ಮೂಲಕ ನಿಮಗೆ ಬುದ್ಧಿ ಕಲಿಸುತ್ತಾರೆ. ಅಲ್ಲದೇ, ನಿಮ್ಮ ಎಲ್ಲ ಠೇಂಕಾರಗಳಿಗೆ ಉತ್ತರ ಕೊಡುತ್ತಾರೆ ಎಂದು ಅವರು ಪ್ರಕಟನೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News