ಉಪಮುಖ್ಯಮಂತ್ರಿಗಳಿಂದ ಸಿಟಿ ರೌಂಡ್: ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲು ಪರಮೇಶ್ವರ್ ಸೂಚನೆ

Update: 2018-09-04 14:38 GMT

ಬೆಂಗಳೂರು, ಸೆ.4: ಹತ್ತು ಸಾವಿರ ಕೋಟಿಯಷ್ಟು ಬಜೆಟ್ ಮಂಡಿಸುವ ಬಿಬಿಎಂಪಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ 500 ಕೋಟಿ ಹಣ ಮೀಸಲಿಡಲು ಕಷ್ಟ ಯಾಕೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಶಿವಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಗರ ಪ್ರದಕ್ಷಿಣೆ ನಡೆಸಿದ ಸಂದರ್ಭದಲ್ಲಿ, ಇಲ್ಲಿನ ಸರಕಾರಿ ಉರ್ದು ಶಾಲೆಗೆ ಭೇಟಿ ಶಾಲೆ ಸಂಪೂರ್ಣ ಹಾಳಾಗಿರುವುದನ್ನು ಕಂಡು ಕೆಂಡಾಮಂಡಲರಾದ ಪರಮೇಶ್ವರ್, ಸರಕಾರಿ ಹಾಗೂ ಬಿಬಿಎಂಪಿ ಶಾಲೆಗಳ ಅವ್ಯವಸ್ಥೆ ಸರಿಪಡಿಸಲು ಯಾಕೆ ಮುಂದಾಗಿಲ್ಲ ಎಂದು ಕಿಡಿಕಾರಿದರು.

ಸ್ಥಳೀಯ ಬಿಬಿಎಂಪಿ ಸದಸ್ಯರು ಶಾಲೆಗಳ ದುರಸ್ತಿ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಎಸ್ಟಿಮೇಟ್ ಹಾಕಲಾಗಿದೆ ಎಂದು ಉತ್ತರಿಸಿದರು. ಇದರಿಂದ ಕುಪಿತಗೊಂಡ ಅವರು, ಅಧಿಕಾರಿಗಳಿಗೆ ಕಾಯುತ್ತಾ ಕೂರಬೇಡಿ. ಕೂಡಲೇ ಸಮಸ್ಯೆಯನ್ನು ಬಗೆಹರಿಸಿ ಎಂದು ಸೂಚಿಸಿದರು. ಅಲ್ಲದೆ, ನನಗೆ ಎಸ್ಟಿಮೇಟ್ ತಂದುಕೊಡಿ. ಕೂಡಲೇ ಐದು ಕೋಟಿ ಬಿಡುಗಡೆ ಮಾಡಿಸುತ್ತೇನೆ. ಅಭಿವೃದ್ಧಿ ಕೆಲಸವನ್ನು ಪೂರ್ಣಗೊಳಿಸಿ ಎಂದು ಸೂಚಿಸಿದರು. ಅನಂತರ ಮಕ್ಕಳೊಂದಿಗೆ ಚರ್ಚೆ ನಡೆಸಿದರು. ಅಲ್ಲಿಂದ ಭಾರತಿನಗರದ ಹೆರಿಗೆ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸಾ ಪದ್ಧತಿ, ಸ್ವಚ್ಛತೆ, ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.

ಎಂ.ವಿ.ಗಾರ್ಡನ್‌ಗೆ ತೆರಳಿದ ಅವರು ಅಲ್ಲಿನ ಗ್ರಂಥಾಲಯ, ಜಿಮ್, ಅಂಗನವಾಡಿಗಳ ಸ್ಥಿತಿಗತಿಯನ್ನು ಪರಿಶೀಲನೆ ನಡೆಸಿದರು. ಈ ವೇಳೆ ಹೆಚ್ಚಿನ ಉಪಕರಣವಿಲ್ಲದೆ ನಡೆಸುತ್ತಿದ್ದ ಜಿಮ್ ಕಂಡು ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ಪರಮೇಶ್ವರ್ ಈ ಸ್ಥಳದಲ್ಲಿ ಎರಡು ಅಂತಸ್ಥಿನ ಜಿಮ್, ಇ ಗ್ರಂಥಾಲಯ, ಅಂಗನವಾಡಿ ಕಟ್ಟಡ ನಿರ್ಮಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಬಿಬಿಎಂಪಿ ಪೂರ್ವ ವಲಯದಿಂದ ಶಿವಾಜಿನಗರ ಗುರುದ್ವಾರದ ಬಳಿ ಇರುವ ಮಳೆ ನೀರು ಕಾಲುವೆ ವೀಕ್ಷಿಸಿದರು. ಈ ಭಾಗದಲ್ಲೂ ಸಾಕಷ್ಟು ಹೂಳು ತುಂಬಿದ್ದನ್ನು ಗಮನಿಸಿದ ಅವರು ಕೂಡಲೇ ಈ ಬಗ್ಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇದಕ್ಕೂ ಮುನ್ನ ಗುರುದ್ವಾರ ಬಳಿ ಇರುವ ಸ್ಲಂ ಬೋರ್ಡ್‌ನಿಂದ ನಿರ್ಮಿತಗೊಂಡಿರುವ ಕಟ್ಟಡಗಳನ್ನು ಪರಿಶೀಲಿಸಿದರು. ಹಲವು ವರ್ಷಗಳ ಹಿಂದೆ ಕಟ್ಟಿರುವ ಈ ಕಟ್ಟಡ ಸಂಪೂರ್ಣ ಶಿಥಿಲಗೊಳ್ಳುವ ಹಂತಕ್ಕೆ ತಲುಪಿರುವುದರ ಬಗ್ಗೆ ಅಲ್ಲಿನ ನಿವಾಸಿಗಳು ದೂರು ಸಲ್ಲಿಸಿದರು. ಈ ಕಟ್ಟಡವನ್ನು ಸ್ಲಂ ಬೋರ್ಡ್ ಹಾಗೂ ಬಿಡಿಎ ಸಹಭಾಗಿತ್ವದಲ್ಲಿ ಮರು ನಿರ್ಮಿಸುವ ಬಗ್ಗೆ ಆಶ್ವಾಸನೆ ನೀಡಿದರು.

ಬ್ರಾಡ್ ವೇ ರಸ್ತೆಯಲ್ಲಿರುವ ಸಹಾಯಕ ಪೊಲೀಸ್ ಆಯುಕ್ತರ ಕಚೇರಿ ಹಾಗೂ ಖಾಲಿ ಇರುವ ಹಳೇ ಕ್ವಾಟ್ರಸ್‌ಗೆ ಭೇಟಿ ನೀಡಿದ ಅವರು, ಸಂಪೂರ್ಣ ನಶಿಸಿರುವ ಕಟ್ಟಡವನ್ನು ಕೆಡವಿ ನೂತನ ಕಟ್ಟಡ ನಿರ್ಮಿಸುವ ಸಂಬಂಧ ನಗರ ಪೊಲೀಸ್ ಆಯುಕ್ತರೊಂದಿಗೆ ಮಾತುಕತೆ ನಡೆಸಿದರು. ಶಿವಾಜಿ ರಸ್ತೆಯಲ್ಲಿರುವ ಸರಕಾರಿ ವಿಕೆಒ ಶಾಲೆಗೆ ತೆರಳಿದ ಅವರು, ಅತ್ಯಾಧುನಿಕ ವ್ಯವಸ್ಥೆ ನಿರ್ಮಾಣಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಐಎಂಎ ಜ್ಯುವೆಲರಿ ಈ ಶಾಲೆಯನ್ನು ದತ್ತು ಸ್ವೀಕರಿಸಿ, ಖಾಸಗಿ ಶಿಕ್ಷಣ ಸಂಸ್ಥೆಗೆ ಸರಿಸಮವಾಗಿ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ. ಅವರಂತೆ ಇತರರೂ ಮುಂದೆ ಬರಬೇಕು ಎಂದು ಹೇಳಿದರು.

ಬಳಿಕ ಶಿವಾಜಿನಗರದ ಪೊಲೀಸ್ ಕ್ವಾಟ್ರಸ್‌ಗೆ ಭೇಟಿ ನೀಡಿದ ಅವರು, ಅಲ್ಲಿನ ಸಿಬ್ಬಂದಿ ಕುಟುಂಬಗಳ ಸಮಸ್ಯೆ ಆಲಿಸಿದರು. ಅತ್ಯಂತ ಇಕ್ಕಟ್ಟಿನ ಮನೆಯಲ್ಲಿ ಪೊಲೀಸ್ ಸಿಬ್ಬಂದಿ ಕುಟುಂಬ ವಾಸಿಸುತ್ತಿದ್ದಾರೆ. ಈಗಾಗಲೇ ಪೊಲೀಸ್ ಕಾನ್ಸ್‌ಟೇಬಲ್‌ಗಳಿಗಾಗಿ ಕ್ವಾಟ್ರಸ್ ನಿರ್ಮಿಸಲಾಗುತ್ತಿದೆ. ಎಲ್ಲೆಡೆ ಉತ್ತಮ ಕ್ವಾಟ್ರಸ್ ನಿರ್ಮಿಸುವ ಇಂಗಿತವಿದೆ ಎಂದರು.

ಶಿವಾಜಿನಗರದ ಸಮೀಪವಿದ್ದ ಮಳೆನೀರು ಕಾಲುವೆಯನ್ನೂ ವೀಕ್ಷಿಸಿದರು. ಕಾಲುವೆ ಅವಸ್ಥೆಯಿಂದ ಬೇಸರಗೊಂಡ ಅವರು ರಾಜಕಾಲುವೆ ಹಾಗೂ ನೀರು ಕಾಲುವೆಯನ್ನು ನಿರ್ವಹಣೆ ಮಾಡಲು ಪ್ರತ್ಯೇಕ ಅಧಿಕಾರಿ ನೇಮಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಹಲಸೂರು ಕೆರೆಗೆ ಭೇಟಿ ನೀಡಿದ ಅವರು, ಹಲಸೂರು ಕೆರೆ ಮೇಲ್ದರ್ಜೆಗೇರಿಸುವ ಯೋಜನೆಯ ನೀಲನಕ್ಷೆಯನ್ನು ಪ್ರದರ್ಶಿಸಿದರು.

ಈ ಸಂದರ್ಭ ಶಾಸಕ ಆರ್.ರೋಷನ್ ಬೇಗ್, ಮೇಯರ್ ಸಂಪತ್ ರಾಜ್, ಬಿವಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ನಗರ ಪೊಲೀಸ್ ಆಯುಕ್ತ ಸುನೀಲ್‌ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಪೆಟ್ರೋಲ್ ಡೀಸೆಲ್ ಬೆಲೆ ಗಗನಕ್ಕೇರಿದೆ. ಇಂಟರ್‌ನ್ಯಾಷನಲ್ ಬ್ಯಾರಲ್ ಬೆಲೆ ಆಧಾರದ ಮೇಲೆ ಇಂಧನದ ಬೆಲೆ ನಿಗದಿಯಾಗತ್ತದೆ. ಅಲ್ಲಿ ಬೆಲೆ ಕಡಿಮೆಯಾದಾಗ ಇಂಧನದ ಬೆಲೆ ಇಳಿಸಬೇಕು. ಆದರೆ ಈ ಕೇಂದ್ರ ಸರಕಾರ ಬೆಲೆ ಕಡಿಮೆ ಮಾಡದೆ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಿದೆ. ಇಂಧನದ ಬೆಲೆ ಮಿತಿ ಮೀರುತ್ತಿರುವುದನ್ನು ಖಂಡಿಸಿ ಸೆ. 14 ರಂದು ಕೆಪಿಸಿಸಿ ವತಿಯಿಂದ ಹೋರಾಟ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ.

-ಪರಮೇಶ್ವರ್, ಉಪ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News