ಮಳೆ ಬರುವ ಮೊದಲು ಮನೆ ನಿರ್ಮಿಸಿಕೊಡಿ: ಪರಮೇಶ್ವರ್‌ಗೆ ಶಿವಾಜಿನಗರ ಕ್ಷೇತ್ರ ನಿವಾಸಿಗಳ ಮನವಿ

Update: 2018-09-04 14:44 GMT

ಬೆಂಗಳೂರು, ಸೆ. 4: ಮಳೆ ಬಂದರೆ ಸೋರುತ್ತಿದ್ದು, ಮನೆಗಳು ಬೀಳುವ ಹಂತದಲ್ಲಿವೆ. ಜೀವ ಕೈಯಲ್ಲಿಡಿದುಕೊಂಡು ಬದುಕುತ್ತಿದ್ದೇವೆ. ಹೀಗಾಗಿ, ಮಳೆ ಬರುವ ಮೊದಲೇ ನಮಗೆ ಮನೆಗಳನ್ನು ಕಟ್ಟಿಕೊಡಿ ಎಂದು ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಿವಾಸಿಗಳು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ಗೆ ಮನವಿ ಸಲ್ಲಿಸಿದರು.

ಮಂಗಳವಾರ ನಗರ ಪ್ರದಕ್ಷಿಣೆ ಸಂದರ್ಭದಲ್ಲಿ ಇಲ್ಲಿನ ಎಂ.ಬಿ.ಗಾರ್ಡನ್‌ನ ನಿವಾಸಿ ಧನಲಕ್ಷ್ಮಿ, ಸೆಲ್ವಿ, ಲಾರ್ಡ್ ಮೇರಿ ಹಾಗೂ ಇನ್ನಿತರೆ ಮಹಿಳೆಯರು ಪರಮೇಶ್ವರ್‌ಗೆ ಮನವಿ ಸಲ್ಲಿಸಿ, ಕಳೆದ 40 ವರ್ಷಗಳಿಂದ ಕೊಳಗೇರಿ ಮಂಡಳಿ ನಿರ್ಮಿಸಿಕೊಟ್ಟಿರುವ ವಾಸಸ್ಥಾನನಗಳಲ್ಲಿ ಇದ್ದೇವೆ. ಆದರೆ, ಅವು ಬಿರುಕು ಬಿಟ್ಟಿದ್ದು, ಯಾವಾಗ ಉರುಳುತ್ತವೆಯೋ ಗೊತ್ತಿಲ್ಲ. ಪ್ರತಿದಿನ ರಾತ್ರಿ ವೇಳೆ ನಮಗೆ ಸರಿಯಾಗಿ ನಿದ್ದೆಯೇ ಬರುವುದಿಲ್ಲ, ಭಯದಿಂದ ಬದುಕುತ್ತಿದ್ದೇವೆ. ಹೀಗಾಗಿ, ಶೀಘ್ರವಾಗಿ ನಮಗೆ ಮನೆ ಕಟ್ಟಿಸಿಕೊಂಡು ಎಂದು ಕೋರಿದರು.

ಮನೆಗಳ ಜತೆಗೆ ಶೌಚಾಲಯಗಳು ಬೀಳುವ ಹಂತದಲ್ಲಿದೆ. ಮಹಿಳೆಯರಿಗೆ ಹಾಗೂ ಪುರುಷರಿಗೆ ತಲಾ 5 ಪ್ರತ್ಯೇಕ ಶೌಚಾಲಯಗಳನ್ನು ಕಟ್ಟಲಾಗಿತ್ತು. ಈಗ ಸಾರ್ವಜನಿಕರೆ ಬಳಸುತ್ತಿರುವುದರಿಂದ ಕೊಳೆಗೇರಿಗಳು ಅದನ್ನೇ ಅನಿವಾರ್ಯವಾಗಿ ಬಳಸುವಂತಾಗಿದೆ. ಅವು ಸಂಪೂರ್ಣವಾಗಿ ಹಾಳಾಗಿವೆ ಎಂದು ನಿವಾಸಿ ರಾಬರ್ಟ್ ಎಂಬುವವರು ಪರಮೇಶ್ವರ್‌ಗೆ ಮನವಿ ಸಲ್ಲಿಸಿದರು.

ಮನೆ ನಿರ್ಮಿಸಿಕೊಡಿ: ನಿವಾಸಿಗಳ ಮನವಿಗೆ ಸ್ಪಂದಿಸಿದ ಪರಮೇಶ್ವರ್, ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಅಲ್ಲದೆ, ಎಂ.ವಿ. ಗಾರ್ಡನ್‌ನಲ್ಲಿರುವ 40 ವರ್ಷಕ್ಕೂ ಹಳೆಯದಾದ ಕಟ್ಟಡವನ್ನು ತೆರವು ಮಾಡಿ ಬಿಬಿಎಂಪಿ ಅನುದಾನದಲ್ಲಿ ಹೊಸಕಟ್ಟಡ ನಿರ್ಮಿಸುವಂತೆ ಆದೇಶಿಸಿದರು.

ಬಿಡಿಎ, ಕೊಳಗೇರಿ ನಿರ್ಮೂಲನಾ ಮಂಡಳಿ ನಿರ್ಮಿಸಿದ ಕಟ್ಟಡ 25 ವರ್ಷಗಳಿಗೂ ಹಳೆಯದಾಗಿದೆ ಎಂಬುದರ ಬಗ್ಗೆ ಮಾಹಿತಿ ಪಡೆದ ಉಪಮುಖ್ಯಮಂತ್ರಿ ಪರಮೇಶ್ವರ್, ಕೂಡಲೇ ಕಟ್ಟಡ ತೆರವಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಹಾಗೂ ಸಮುದಾಯ ಭವನವನ್ನು ಹೊಸದಾಗಿ ನಿರ್ಮಿಸಿ ಸಾರ್ವಜನಿಕರ ಬಳಕೆಗೆ ಒಪ್ಪಿಸಲಾಗುವುದು ಎಂದು ಸ್ಥಳೀಯರಿಗೆ ಭರವಸೆ ನೀಡಿದರು. ಅನಂತರ ಹಲಸೂರಿನ ಸತ್ಯನಾರಾಯಣ ರಸ್ತೆಯಲ್ಲಿರುವ ಶಿಶು ವಿಹಾರಕ್ಕೆ ತೆರಳಿದ ಉಪಮುಖ್ಯಮಂತ್ರಿ ಪರಮೇಶ್ವರ್, ಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನು ಕಂಡು 'ಶಿಶುವಿಹಾರ ಬೀಳುವ ಹಂತದಲ್ಲಿದ್ದರೂ ಹೊಸಕಟ್ಟಡ ನಿರ್ಮಾಣಕ್ಕೆ ಏಕೆ ಕ್ರಮ ಕೈಗೊಂಡಿಲ್ಲ. ಬಿಬಿಎಂಪಿಯಲ್ಲಿ ಅನುದಾನ ಪಡೆಯಲು ಏಕೆ ಪ್ರಯತ್ನಿಸಲಿಲ್ಲ' ಎಂದು ಸ್ಥಳೀಯ ಪಾಲಿಕೆ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.

ರಸ್ತೆ ಬದಿ ತಿಂಡಿ ತಿಂದ ಪರಮೇಶ್ವರ್: ಹಲಸೂರಿನ ಎಸ್.ಎನ್.ರಸ್ತೆಯಲ್ಲಿರುವ ಶಿಶುವಿಹಾರಕ್ಕೆ ಭೇಟಿ ನೀಡಿದ ಬಳಿಕ ವಾಪಸ್ಸಾಗುತ್ತಿದ್ದ ವೇಳೆ ರಸ್ತೆ ಬದಿಯಲ್ಲಿದ್ದ ಅನ್ನಲಕ್ಷ್ಮಿ ಹೊಟೇಲ್ ಎದುರು ನಿಂತು ಬೆಲೆ ವಿಚಾರಿಸಿದ ಉಪ ಮುಖ್ಯಮಂತ್ರಿ ಪರಮೇಶ್ವರ್, ವಡೆ ಪಡೆದು ಶಾಸಕ ರೋಷನ್ ಬೇಗ್, ಮೇಯರ್‌ಗೂ ನೀಡಿ, ತಾವೂ ಸವಿದು ತುಂಬಾ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, 100 ರೂ. ಹಣ ನೀಡಿ ಚಿಲ್ಲರೆ ಪಡೆಯದೆ ಹಿಂದುರಿಗಿದರು.

ಬಟ್ಟೆ ಸ್ವಚ್ಛ ಮಾಡಿದ ಗನ್‌ ಮ್ಯಾನ್

ಆಕಸ್ಮಿಕವಾಗಿ ಉಪಮುಖ್ಯಮಂತ್ರಿ ಪರಮೇಶ್ವರ್‌ರ ಬಟ್ಟೆ ಗಲೀಜಾಗಿದ್ದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕಾರ್ಯಕರ್ತರೊಬ್ಬರು ಅದನ್ನು ತೊಳೆಯಲು ಮುಂದಾದರು. ಆಗ ನೀನು ಬೇಡ ಎಂದು ಪಕ್ಕದಲ್ಲೇ ಇದ್ದ ಗನ್‌ಮ್ಯಾನ್‌ರನ್ನು ಕರೆದರು. ಆತ, ಅವರ ಬಟ್ಟೆಯನ್ನು ನೀರಿನಿಂದ ಸ್ವಚ್ಛಗೊಳಿಸಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News