ಹೊರಗಿನ ಮತದಾರರಿಂದ ಮತ ಚಲಾವಣೆಗೆ ಸಿದ್ಧತೆ ಆರೋಪ: ಹೈಕೋರ್ಟ್ ಮೊರೆ ಹೋಗಲು ಬಿಜೆಪಿ ನಿರ್ಧಾರ

Update: 2018-09-04 14:53 GMT

ಬೆಂಗಳೂರು, ಸೆ.4: ವಿವಿಧ ಯೋಜನೆಗಳ ಮೂಲಕ ಕೋಟ್ಯಂತರ ಹಣ ಲೂಟಿ ಮಾಡುವ ಉದ್ದೇಶದಿಂದ ಹೊರಗಿನ ಎಂಎಲ್‌ಸಿಗಳನ್ನು ಕರೆತಂದು ಮೇಯರ್ ಸ್ಥಾನಕ್ಕೆ ಮತ ಹಾಕಿಸುವ ಹುನ್ನಾರ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕರ ಪದ್ಮನಾಭರೆಡ್ಡಿ ಆರೋಪಿಸಿದ್ದು, ಈ ಸಂಬಂಧ ಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸಭಾ ಸದಸ್ಯ ಜಯರಾಮ್ ರಮೇಶ್, ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ರಘು ಆಚಾರ್, ಕೋಲಾರದ ಸಿ.ಆರ್.ಮನೋಹರ್, ಪಾವಗಡದ ಉಗ್ರಪ್ಪ ಮುಂತಾದವರನ್ನೆಲ್ಲ ವಿಳಾಸ ಬದಲಾಯಿಸಿ ಮೇಯರ್ ಚುನಾವಣೆ ಸಂದರ್ಭದಲ್ಲಿ ಮತ ಹಾಕಿಸಿ ಗೆಲ್ಲಿಸಿಕೊಳ್ಳುವ ತಂತ್ರ ರೂಪಿಸಲಾಗಿದೆ ಎಂದು ದೂರಿದರು.

ಹಿಂದಿನ ವರ್ಷ ನಡೆದ ಮೇಯರ್ ಚುನಾವಣೆಯಲ್ಲಿಯೂ ಇದೇ ರೀತಿ ತಂತ್ರ ಅನುಸರಿಸಿ ಗೆದ್ದಿದ್ದರು. ಅನಂತರ ಪಾಲಿಕೆಯಲ್ಲಿ ಹಲವು ಯೋಜನೆಗಳ ಅಡಿಯಲ್ಲಿ ಅಪಾರವಾದ ಅನುದಾನ ಲೂಟಿ ಮಾಡಲಾಗಿತ್ತು. ಆದರೆ, ಈ ಬಾರಿಯೂ ಅದೇ ರೀತಿ ಮಾಡಲು ಮುಂದಾಗಿದ್ದಾರೆ. ಅದನ್ನು ವಿರೋಧಿಸಿ ಹೈಕೋರ್ಟ್ ಮೊರೆ ಹೋಗುತ್ತೇವೆ. ನ್ಯಾಯಾಲಯದಲ್ಲಿ ನಮಗೆ ಖಚಿತವಾಗಿ ಗೆಲುವು ಸಿಗುತ್ತದೆ ಎಂದು ಹೇಳಿದರು.

ನೂರು ಸದಸ್ಯ ಬಲವಿರುವ ಬಿಜೆಪಿ, ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯಲಿದೆ. ಮನೋಹರ್, ರಘು ಆಚಾರ್ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿ ಸರಕಾರಿ ಅನುದಾನವನ್ನು ಅವರ ಕ್ಷೇತ್ರಕ್ಕೆ ಬಳಸಿಕೊಳ್ಳುತ್ತಾರೆ. ಇಲ್ಲಿ ಬಂದು ಮತ ಹಾಕುತ್ತಾರೆ. ಇದು ಎಷ್ಟು ಸಮಂಜಸ. ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸುತ್ತೇವೆ. ಬಿಜೆಪಿಗೆ 7 ಮತಗಳ ಕೊರತೆ ಇದೆ. ಪಕ್ಷೇತರರು ಬೆಂಬಲಿಸಿದರೆ ನಾವು ಬಿಬಿಎಂಪಿ ಅಧಿಕಾರದ ಚುಕ್ಕಾಣಿ ಹಿಡಿಯಬಹುದು. ನಾವು ಅವರ ಬೆಂಬಲವನ್ನು ಕೇಳುವುದಿಲ್ಲ. ಆದರೂ ಈ ಬಾರಿ ಬಿಜೆಪಿಯೇ ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯಲಿದೆ. ನಮ್ಮ ಪಕ್ಷದವರೇ ಮೇಯರ್ ಆಗಲಿದ್ದಾರೆ ಎಂದು ಪದ್ಮನಾಭರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News