ಸೆ.6: ‘ದಿ ವ್ಹೀಲ್ ಆಫ್ ಜಸ್ಟೀಸ್’ ಕೃತಿ ಬಿಡುಗಡೆ
ಬೆಂಗಳೂರು, ಸೆ.4: ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪಮೊಯ್ಲಿ ರಚಿಸಿರುವ ‘ದಿ ವ್ಹೀಲ್ ಆಫ್ ಜಸ್ಟಿಸ್’ ಕೃತಿ ಬಿಡುಗಡೆ ಸಮಾರಂಭವನ್ನು ಬೆಂಗಳೂರು ವಕೀಲರ ಸಂಘದ ವತಿಯಿಂದ ನಾಳೆ (ಸೆ.6)ರಂದು ಹಮ್ಮಿಕೊಳ್ಳಲಾಗಿದೆ.
ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಎ. ಗಂಗಾಧರಯ್ಯ, ಸಮಾರಂಭವು ಹೈಕೋರ್ಟ್‌ನ ಸಭಾಂಗಣ-2 ರಲ್ಲಿ ನಡೆಯಲಿದ್ದು, ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಡಾ.ಎಂ.ಎನ್.ವೆಂಕಟಾಚಲಯ್ಯ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಹೇಳಿದರು.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ.ಎನ್.ಕುಮಾರ್, ಸರಕಾರದ ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ ಹಾಗೂ ವಕೀಲರ ಸಂಘದ ಅಧ್ಯಕ್ಷ ಎ.ಪಿ ರಂಗನಾಥ್ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಇದುವರೆಗೂ ರಾಮಾಯಣ ಮಹಾನ್ವೇಷಣಂ, ಸಿರಿ ಮುಡಿ ಪರಿಕ್ರಮಣಂ ಹಾಗೂ ಬಾಹುಬಲಿ ಅಹಿಂಸಾ ದಿಗ್ವಿಜಯಂ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದು, ಇದೀಗ ‘ದಿ ವ್ಹೀಲ್ ಆಫ್ ಜಸ್ಟೀಸ್’ ಕೃತಿ ಬಿಡುಗಡೆಯಾಗುತ್ತಿದೆ. ಈ ಕೃತಿಯಲ್ಲಿ ಕಾನೂನಿನ ಮೂಲ, ಕಾನೂನಿನ ಅಭಿವೃದ್ಧಿ, ಕಾನೂನಿನ ಬ್ರಾತತ್ವಕ್ಕೆ ಸಂಬಂಧಿಸಿದ ವಿಚಾರ ಸೇರಿದಂತೆ ಹಲವು ವಿಚಾರಗಳನ್ನು ಚರ್ಚಿಸಿದ್ದಾರೆ ಎಂದು ಮಾಹಿತಿ ನೀಡಿದರು.