ರೈತರ ಅನುಭವ ಪುಸ್ತಕ ರೂಪದಲ್ಲಿ ದಾಖಲಾಗಲಿ: ಹಿರಿಯ ಪತ್ರಕರ್ತ ಈಶ್ವರ ದೈತೋಟ

Update: 2018-09-04 15:05 GMT

ಬೆಂಗಳೂರು, ಸೆ.4: ರೈತರು ತಮ್ಮ ಕೃಷಿ ಕ್ಷೇತ್ರದಲ್ಲಿ ಪಡೆದಿರುವ ಅನುಭವವನ್ನು ಬರವಣಿಗೆ ರೂಪದಲ್ಲಿ ದಾಖಲಿಸಬೇಕು. ಇದರಿಂದ ಕೃಷಿ ಕ್ಷೇತ್ರದಲ್ಲಿ ತೊಡಗುವ ಮುಂದಿನ ಯುವ ತಲೆಮಾರಿಗೆ ಮಾರ್ಗದರ್ಶಿಯಾಗಲಿದೆ ಎಂದು ಹಿರಿಯ ಪತ್ರಕರ್ತ ಈಶ್ವರ ದೈತೋಟ ಅಭಿಪ್ರಾಯಿಸಿದರು.

ಮಂಗಳವಾರ ಕೃಷಿ ವಿಶ್ವವಿದ್ಯಾಲಯ ನಗರದ ಪಶುವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಕೃಷಿಕರ ಕೈಗೆ ಲೇಖನಿ ಕುರಿತ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರ ಹಾಗೂ ಕೃಷಿ ಪತ್ರಿಕೋದ್ಯಮ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕೃಷಿ ಇಲಾಖೆ ರೈತರಿಗಾಗಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನೀಡುತ್ತದೆ. ಆದರೆ, ಇದು ಬಹಳಷ್ಟು ರೈತರಿಗೆ ತಲುಪುವುದಿಲ್ಲ. ಹೀಗಾಗಿ ಕೃಷಿಕರೆ ತೋಟದಲ್ಲಿ, ಹೊಲದಲ್ಲಿ ತಮಗಾದ ಅನುಭವಗಳನ್ನು ಬರವಣಿಗೆ ರೂಪದಲ್ಲಿ ಇಳಿಸಬೇಕು. ಇದರಿಂದ ಕೃಷಿಕರ ಸಮಸ್ಯೆಗಳಿಗೆ ಮೂಲ ಕಾರಣಗಳನ್ನು ಹುಡುಕಲು ಸಾಧ್ಯವಾಗುತ್ತದೆ ಹಾಗೂ ಮುಂಬರುವ ಯುವ ಕೃಷಿಕರಿಗೆ ಮಾರ್ಗದರ್ಶಿ ಕೈಪಿಡಿಯಾಗುತ್ತದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಇದೇ ಪ್ರಪ್ರಥಮವಾಗಿ ರೈತರಿಗೆ ಹಾಗೂ ಕೃಷಿಕರಿಗೆ ಬರವಣಿಗೆ ಕುರಿತಾಗಿ ಕಾರ್ಯಾಗಾರವನ್ನು ಹಮ್ಮಿಕೊಂಡಿರುವುದು ಸಂತಸದ ವಿಚಾರ. ಕೃಷಿಕರ ಬದುಕನ್ನು, ಅನುಭವವನ್ನು ಇತರರು ಕೇಳಿ ದಾಖಲಿಸುವುದಕ್ಕಿಂತ, ತಮ್ಮ ಅನುಭವಗಳನ್ನು ತಾವೇ ಬರೆದರೆ, ಹೆಚ್ಚು ಅರ್ಥಪೂರ್ಣ ಹಾಗೂ ಜೀವಂತಿಕೆಯಿಂದ ಕೂಡಿರುತ್ತದೆ ಎಂದು ಅವರು ಹೇಳಿದರು.

ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಎಸ್.ನಟರಾಜು ಮಾತನಾಡಿ, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ ತಮ್ಮ ಅನುಭವವನ್ನು ಧಾರೆ ಎರೆಯುವುದರ ಜತೆಗೆ ತರಬೇತಿಯಲ್ಲಿ ಭಾಗವಹಿಸಲು ಆಗಮಿಸಿರುವ ರೈತರು ತಮ್ಮ ಜ್ಞಾನವನ್ನು ಹಂಚಿಕೊಳ್ಳಬೇಕು. ಆ ಮೂಲಕ ಕೃಷಿ ವಿಜ್ಞಾನಿಗಳಿಗೆ, ಅಧ್ಯಾಪಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕೃಷಿ ಕ್ಷೇತ್ರದಲ್ಲಿ ಅಗತ್ಯವಾದ ಆಧುನಿಕ ತಂತ್ರಜ್ಞಾನ ಆವಿಷ್ಕರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ನಿರ್ದೇಶಕ ಡಾ.ಬಿ.ವೈ.ಶ್ರೀನಿವಾಸ್, ಡಾ.ಕೆ.ಶಿವರಾಮು, ಡಾ.ಕೆ.ವೆಂಕಟರಂಗನಾಯ್ಕ, ಡಾ.ಡಿ.ಕೆ.ಸುರೇಶ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News