ಬೆಂಗಳೂರು: ಚಿಂತಕರ ಬಂಧನ ಖಂಡಿಸಿ ದಸಂಸ ಪ್ರತಿಭಟನೆ

Update: 2018-09-04 15:06 GMT

ಬೆಂಗಳೂರು, ಸೆ.4: ಪ್ರಧಾನಿ ಹತ್ಯೆ ಸಂಚು ಆರೋಪದ ಮೇಲೆ ದಲಿತ ಚಿಂತಕರು ಹಾಗೂ ಹೋರಾಟಗಾರರನ್ನು ಕೇಂದ್ರ ಸರಕಾರವು ಉದ್ದೇಶ ಪೂರ್ವಕವಾಗಿ ಬಂಧಿಸಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‌ ವಾದ) ಸದಸ್ಯರು ಪ್ರತಿಭಟನೆ ನಡೆಸಿದರು.

ಮಂಗಳವಾರ ನಗರದ ಮೌರ್ಯ ವೃತ್ತದ ಬಳಿ ಜಮಾಯಿಸಿದ ದಸಂಸ ಸದಸ್ಯರು, ಕೇಂದ್ರ ಸರಕಾರದ ಪ್ರಜಾಪ್ರಭುತ್ವ ದಮನ ನೀತಿ ಖಂಡಿಸಿ, ಈ ಕೂಡಲೇ ಹೋರಾಟಗಾರರನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದಲಿತ ಹೋರಾಟಗಾರ ಮಾವಳ್ಳಿ ಶಂಕರ್, ಜಾತಿ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ವ್ಯಕ್ತಿಗಳ ಹತ್ಯೆಗಳಾಗುತ್ತಿವೆ. ಹತ್ಯೆ ಆರೋಪದಡಿ ಲೇಖಕರನ್ನು, ಹೋರಾಟಗಾರರನ್ನು ಜೈಲಿಗೆ ಕಳುಹಿಸಿ ಪ್ರಜಾಪ್ರಭುತ್ವ ವಿರೋಧಿ ನಿಲುವು ತಳೆದಿರುವ ಕೇಂದ್ರದ ನೀತಿ ಖಂಡನೀಯ. ಬಂಧಿತರಾಗಿರುವ ಹೋರಾಟಗಾರರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ದೇಶದಲ್ಲಿ ನಡೆದ ವಿಚಾರವಾದಿಗಳ ಕೊಲೆ ಪ್ರಕರಣಗಳ ಹಿಂದೆ ಸನಾತನವಾದಿಗಳು ಭಾಗಿಯಾಗಿದ್ದಾರೆ. ಗೌರಿ ಲಂಕೇಶ್ ಹಂತಕರನ್ನು ಸೆರೆ ಹಿಡಿಯುವ ಮೂಲಕ ರಾಜ್ಯ ಎಸ್‌ಐಟಿ ತಂಡವು ಹಂತಕರು ಸನಾತನ ಸಂಸ್ಥೆಗೆ ಸೇರಿದ್ದಾರೆ ಎಂಬ ಸತ್ಯ ಅನಾವರಣಗೊಂಡಿದೆ ಎಂದರು.

ಹಿಂಸಾ ಪ್ರವೃತ್ತಿಗಳನ್ನು ಬಾಹ್ಯವಾಗಿ ಬೆಂಬಲಿಸುತ್ತಿರುವ ಕೇಂದ್ರ ಸರಕಾರದ ಅಭಿವ್ಯಕ್ತಿ ಸ್ವಾತಂತ್ರ್ಯ ತಡೆಹಿಡಿಯುವ ಕ್ರಮವನ್ನು ಒಪ್ಪಲು ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸರಕಾರಕ್ಕೆ ಜನರೇ ಬುದ್ಧಿ ಕಲಿಸುತ್ತಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News