ಬೆಂಗಳೂರು: ಬಾಲಕನ ಹೃದಯ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ

Update: 2018-09-04 15:08 GMT

ಬೆಂಗಳೂರು, ಸೆ.4: ಬನ್ನೇರುಘಟ್ಟ ರಸ್ತೆ ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ಇತ್ತೀಚೆಗೆ ಹೃದಯರೋಗದಿಂದ ಬಳಲುತ್ತಿದ್ದ ಬಾಲಕನಿಗೆ ಪ್ರಥಮವಾಗಿ ಹೃದಯ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ.

ರಾಜ್ಯದ 13 ವರ್ಷದ ಬಾಲಕ ಡೈಲೇಟೆಡ್ ಕಾರ್ಡಿಯೋಮಯೋಪಥಿ (ಹೃದಯದ ಮಾಂಸಖಂಡ ದುರ್ಬಲಗೊಂಡು ರಕ್ತವನ್ನು ಪಂಪ್ ಮಾಡುವ ಸಾಮರ್ಥ್ಯ ಕಡಿಮೆಯಾಗುವ ಸ್ಥಿತಿ)ಯಿಂದ ಬಳಲುತ್ತಿದ್ದನು. ಈತನಿಗೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಅಪಘಾತವೊಂದರಲ್ಲಿ ಮೆದುಳು ನಿಷ್ಕ್ರಿಯದಿಂದ ಸಾವಿಗೆ ಗುರಿಯಾಗಿದ್ದ 20 ವರ್ಷ ವಯಸ್ಸಿನ ಯುವಕನಿಂದ ಹೃದಯವನ್ನು ಸಂಗ್ರಹಿಸಿ ಬಾಲಕನಿಗೆ ಹೃದಯ ಕಸಿ ಶಸ್ತ್ರಚಿಕಿತ್ಸೆ ಮಾಡುವಲ್ಲಿ ವೈದ್ಯರು ಸಫಲರಾಗಿದ್ದಾರೆ.

ಹೃದಯದ ಕಸಿ ಶಸ್ತ್ರಚಿಕಿತ್ಸೆಯನ್ನು ದೇಶದ ಇಬ್ಬರು ಖ್ಯಾತ ಹೃದಯ ಶಸ್ತ್ರಚಿಕಿತ್ಸಾ ತಜ್ಞರಾದ ಚೆನ್ನೈನ ಫೋರ್ಟಿಸ್ ಮಲರ್ ಆಸ್ಪತ್ರೆಯ ಮುಖ್ಯ ಹೃದಯ ಮತ್ತು ಎದೆಭಾಗದ ಮತ್ತು ಕಸಿ ಶಸ್ತ್ರಚಿಕಿತ್ಸಾ ತಜ್ಞ ಡಾ.ಕೆ.ಆರ್.ಬಾಲಕೃಷ್ಣನ್ ಮತ್ತು ಬೆಂಗಳೂರಿನ ಫೋಟಿಸ್ ಆಸ್ಪತ್ರೆಯ ಹೃದಯ ರಕ್ತನಾಳ ವಿಜ್ಞಾನ ವಿಭಾಗದ ಅಧ್ಯಕ್ಷ ಡಾ.ವಿವೇಕ್ ಜವಳಿ ನೆರವೇರಿಸಿದರು.

ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಹೃದಯ ರಕ್ತನಾಳ ವಿಜ್ಞಾನ ವಿಭಾಗದ ಅಧ್ಯಕ್ಷ ಡಾ.ವಿವೇಕ್ ಜವಳಿ ಮಾತನಾಡಿ, ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಇದು ನಮ್ಮ ಮೊದಲ ಸಂಕೀರ್ಣ ವಕ್ಕಳ ಹೃದಯ ಕಸಿ ಶಸ್ತ್ರಚಿಕಿತ್ಸೆ ಆಗಿದ್ದು, ಹಲವಾರು ಸವಾಲುಗಳು ಇದ್ದರೂ ಸರಾಗವಾಗಿ ನಡೆಯಿತು. ಈ ಶಸ್ತ್ರ ಚಿಕಿತ್ಸೆಯಿಂದ ಆತ್ಮವಿಶ್ವಾಸ ಹೆಚ್ಚಿದೆ ಎಂದು ಹರ್ಷ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News