"ನ್ಯಾಯಾಧೀಶರನ್ನೇ ಪ್ರತಿವಾದಿಗಳನ್ನಾಗಿ ಮಾಡಿ ಕಾನೂನಿನ ದುರುಪಯೋಗ ಪಡಿಸಿಕೊಳ್ಳುತ್ತಿದ್ದೀರಿ"

Update: 2018-09-04 15:14 GMT

ಬೆಂಗಳೂರು, ಸೆ.4: ನ್ಯಾಯಾಧೀಶರನ್ನೇ ಪ್ರತಿವಾದಿಗಳನ್ನಾಗಿ ಮಾಡುವ ಮೂಲಕ ನೀವು ಕಾನೂನಿನ ದುರುಪಯೋಗ ಪಡಿಸಿಕೊಳ್ಳುತ್ತಿದ್ದೀರಿ ಎಂದು ಗೌರಿ ಲಂಕೇಶ್ ಹತ್ಯೆ ಪ್ರಕಣದ ಆರೋಪಿಗಳ ಮೇಲೆ ಹೈಕೋರ್ಟ್ ಕಿಡಿಕಾರಿದೆ.

ಪೊಲೀಸರಿಂದ ಬಂಧನಕ್ಕೊಳಗಾದ ನಮಗೆ ವಕೀಲರನ್ನು ನೇಮಿಸಿಕೊಳ್ಳಲು ಅವಕಾಶ ನೀಡುವಲ್ಲಿ ವಿಚಾರಣಾ ನ್ಯಾಯಾಲಯಗಳ ನ್ಯಾಯಾಧೀಶರು ನಿರ್ಲಕ್ಷ ತೋರಿದ್ದಾರೆ ಎಂದು ಆಕ್ಷೇಪಿಸಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ನ್ಯಾಯಮೂರ್ತಿ ನಾಗರತ್ನ ಅವರು, ನಿಮಗೆ ಕಾನೂನಿನ ಕನಿಷ್ಠ ಜ್ಞಾನವೂ ಇಲ್ಲವೇ ಎಂದು ಅರ್ಜಿದಾರರ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡರು. ಇಂತಹುದನ್ನು ಕೋರ್ಟ್ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಪ್ರಕರಣದಲ್ಲಿ ನಗರದ 5ನೆ ಎಸಿಎಂಎಂ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಸೋಮಶೇಖರ್, 3ನೆ ಎಸಿಎಂಎಂ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ವಿ.ಪ್ರಕಾಶ್, 1ನೆ ಎಸಿಎಂಎಂ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಜಗದೀಶ್, 4ನೆ ಎಸಿಎಂಎಂ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಮಾಲಾ ಅವರ ಹೆಸರುಗಳನ್ನು ಪ್ರತಿವಾದಿಗಳ ಪಟ್ಟಿಯಿಂದ ತೆಗೆದು ಹಾಕಿ ಎಂದು ಆದೇಶಿಸಿದರು.

ಶಿವಮೊಗ್ಗ ಜಿಲ್ಲೆ ಕುಪ್ಪನಹಳ್ಳಿಯ ಸುಜಿತ್ ಕುಮಾರ್, ವಿಜಯಪುರ ಜಿಲ್ಲೆ ತಿಕೋಟಾ ಹೋಬಳಿ ರತ್ನಾಪುರ ಗ್ರಾಮದ ಮನೋಹರ ಯಡವೆ, ಪುಣೆಯ ಚಿಂಚ್‌ವಾಡದ ಅಮೋಲ್ ಕಾಳೆ ಮತ್ತು ಮಹಾರಾಷ್ಟ್ರದ ಸಿಂಧೂದುರ್ಗ ಜಿಲ್ಲೆ ಕರಣಿ ಗ್ರಾಮದ ಅಮಿತ್ ರಾಮಚಂದ್ರ ದೇಗ್ವೇಕರ್ ಸಲ್ಲಿಸಿರುವ ರಿಟ್ ಅರ್ಜಿ ಇದಾಗಿದೆ.

ಅರ್ಜಿಯಲ್ಲಿ ಏನಿದೆ: ಪೊಲೀಸರು ನಮಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದಾರೆ. ಹಿಂಸೆಯ ಬಗ್ಗೆ ನ್ಯಾಯಾಧೀಶರ ಮುಂದೆ ಏನಾದರೂ ಬಾಯಿ ಬಿಟ್ಟರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದೂ ಎಚ್ಚರಿಸಿದ್ದಾರೆ. ಇದರಿಂದಾಗಿ ನಾವು ವಕೀಲರ ನೆರವು ಪಡೆಯಲು ಸಾಧ್ಯವಾಗಿಲ್ಲ. ಈ ಪ್ರಕರಣದ ವಿಚಾರಣೆ ನಡೆಸಿರುವ ನಾಲ್ವರು ಮ್ಯಾಜಿಸ್ಟ್ರೇಟರು ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸಿದ್ದಾರೆ ಎಂದು ಆಕ್ಷೇಪಿಸಲಾಗಿದೆ. ಅರ್ಜಿದಾರರ ಪರ ವಕೀಲ ಎನ್.ಪಿ.ಅಮತೇಶ್ ವಕಾಲತ್ತು ವಹಿಸಿದ್ದರು.

ಅರ್ಜಿದಾರರ ಮನವಿ ಏನು: ತಪ್ಪು ಎಸಗಿರುವ ಮ್ಯಾಜಿಸ್ಟ್ರೇಟರ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕು. ನಾಲ್ವರೂ ಮ್ಯಾಜಿಸ್ಟ್ರೇಟರು ಆರೋಪಿಗಳಿಗೆ ತಲಾ 1 ಲಕ್ಷ ಪರಿಹಾರ ನೀಡುವಂತೆ ನಿರ್ದೇಶಿಸಬೇಕು. ಅವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿಕೊಳ್ಳಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಧೀನ ನ್ಯಾಯಾಲಯದಲ್ಲಿರುವ ದಾಖಲೆಗಳನ್ನು ಹೈಕೋರ್ಟ್‌ಗೆ ತರಿಸಿಕೊಂಡು ಪರಿಶೀಲಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News