ಮೌಲ್ಯವುಳ್ಳ ರಾಜ್ಯಪಾಲರ ನೇಮಕವಾಗಬೇಕು: ಡಾ.ಸಂದೀಪ್ ಶಾಸ್ತ್ರಿ

Update: 2018-09-04 15:46 GMT

ಬೆಂಗಳೂರು, ಸೆ.4: ರಾಷ್ಟ್ರಪತಿ ಹಾಗೂ ರಾಜ್ಯಪಾಲರ ಕಚೇರಿಗೆ ಗಂಭೀರ ಮುತ್ಸದ್ದಿಗಳು, ಮೌಲ್ಯವುಳ್ಳ ವ್ಯಕ್ತಿಗಳನ್ನು ನೇಮಕ ಮಾಡಬೇಕು ಎಂದು ಜೈನ್ ವಿಶ್ವವಿದ್ಯಾಲಯದ ಕುಲಪತಿ ಡಾ.ಸಂದೀಪ್‌ ಶಾಸ್ತ್ರಿ ಸಲಹೆ ನೀಡಿದರು. 

ಮಂಗಳವಾರ ನಗರದ ವಿವಿ ಕಾನೂನು ಕಾಲೇಜು, ಬೆಂಗಳೂರು ವಿಶ್ವವಿದ್ಯಾಲಯ ವತಿಯಿಂದ ಆಯೋಜಿಸಿದ್ದ, ‘ಕೇಂದ್ರ ರಾಜ್ಯ ಸಂಬಂಧ’ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜವಹರಲಾಲ್ ನೆಹರು ಪ್ರಧಾನಮಂತ್ರಿಗಳಿದ್ದಾಗ ಆಯಾ ರಾಜ್ಯದ ಮುಖ್ಯಮಂತ್ರಿಗಳ ಸಲಹೆ ಪಡೆದುಕೊಂಡು ರಾಜ್ಯಪಾಲರನ್ನು ನೇಮಕ ಮಾಡುತ್ತಿದ್ದರು. ಆದರೆ, ಇಂದು ಏಕಪಕ್ಷೀಯವಾಗಿ ಯಾವ ಮುಖ್ಯಮಂತ್ರಿಗಳ ಜತೆಯೂ ಸಮಾಲೋಚಿಸದೆ ರಾಜ್ಯಪಾಲರನ್ನು ನೇಮಕ ಮಾಡುತ್ತಿರುವುದು ಕೇಂದ್ರ ಹಾಗೂ ರಾಜ್ಯ ಸಂಬಂಧಗಳಿಗೆ ಧಕ್ಕೆ ತರುವ ವಿಚಾರವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕೇಂದ್ರ ಹಾಗೂ ರಾಜ್ಯ ಸರಕಾರದ ಸಂಬಂಧ ಆಡಳಿತ ನಡೆಸುವ ಪಕ್ಷ ಹಾಗೂ ನಾಯಕರ ಕ್ರಿಯಾಶೀಲ ಭಾಗವಹಿಸುವಿಕೆಯಿಂದ ಗಟ್ಟಿಗೊಳ್ಳುತ್ತದೆ. ಸಂವಿಧಾನದ ಅನುಚ್ಛೇದ 356 ಅಪಾಯಕಾರಿ ಉಪಬಂಧವಾಗಿದ್ದು, ಅದನ್ನು ಯಾವ ಸಂದರ್ಭದಲ್ಲಾದರೂ ದುರ್ಬಳಕೆ ಮಾಡಿಕೊಳ್ಳಬಹುದು ಎಂದು ಬೇಸರ ವ್ಯಕ್ತಪಡಿಸಿದರು.

ಚುನಾವಣೆಯಲ್ಲಿ ಸೋತವರು, ಪಕ್ಷಾಂತರ ಕಾಯ್ದೆಯಿಂದ ಅನರ್ಹತೆ ಹೊಂದಿದವರು, ಪಕ್ಷಗಳಿಗೆ ಎಲ್ಲಾ ರೀತಿಯಿಂದಲೂ ಸಹಾಯ ಮಾಡಿದವರನ್ನು ಮಾತ್ರ ರಾಜ್ಯಪಾಲರ ಹುದ್ದೆಗೆ ಕಳುಹಿಸುತ್ತಿರುವುದು ವಿಷಾದಕರ ಸಂಗತಿಯಾಗಿದ್ದು, ರಾಜ್ಯಪಾಲರ ನೇಮಕದಲ್ಲಿ ಹಲವಾರು ಬದಲಾವಣೆ ಅಗತ್ಯ ಇದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಡೀನ್ ಡಾ.ವಿ.ಸಂದೇಶ್, ಸಂಯೋಜಕ ಡಾ.ಎನ್. ಸತೀಶ್‌ಗೌಡ, ಪ್ರಾಧ್ಯಾಪಕ ಡಾ.ಎನ್.ದಶರಥ್, ಡಾ. ಎಲ್.ಚಂದ್ರಕಾಂತಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಆಳುವ ವ್ಯಕ್ತಿಗಳು ಸಂವಿಧಾನವನ್ನು ತಿರುಚುತ್ತಿದ್ದು, ಸಾಮೂಹಿಕವಾಗಿ ನಾವೆಲ್ಲರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಂಬಂಧದ ಹಿತವನ್ನು ಕಾಪಾಡಲು ಶ್ರಮ ವಹಿಸಬೇಕು ಎಂದು ಡಾ.ಸಂದೀಪ್‌ ಶಾಸ್ತ್ರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News