ಪಟ್ಟಂದೂರು ಅಗ್ರಹಾರ ಕೆರೆ ಅಂಗಳ ಹಕ್ಕು ಪತ್ರ ವಿಚಾರ: ಮಧ್ಯಂತರ ತಡೆ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆ

Update: 2018-09-04 16:43 GMT

ಬೆಂಗಳೂರು, ಸೆ.4: ಪಟ್ಟಂದೂರು ಅಗ್ರಹಾರ ಗ್ರಾಮದ ಸರ್ವೇ ನಂ.54ರಲ್ಲಿ 11 ಎಕರೆ 20 ಗುಂಟೆ ಜಮೀನಿಗೆ ದಾಖಲೆ ನೀಡಬೇಕೆಂಬ ಭೂ ನ್ಯಾಯಮಂಡಳಿ ಆದೇಶಕ್ಕೆ ಏಕಸದಸ್ಯ ನ್ಯಾಯಪೀಠ ನೀಡಿರುವ ಮಧ್ಯಂತರ ತಡೆಯಾಜ್ಞೆ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.

ಈ ಕುರಿತಂತೆ ಎಚ್.ಬಿ.ಮುನಿವೆಂಕಟಪ್ಪ ಸಲ್ಲಿಸಿರುವ ಮೇಲ್ಮನವಿಯನ್ನು ನ್ಯಾಯಮೂರ್ತಿ ಆರ್.ಎಸ್.ಚೌಹಾಣ್ ಮತ್ತು ನ್ಯಾಯಮೂರ್ತಿ ಬಿ.ಎಂ.ಶ್ಯಾಮ್‌ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಕಚೇರಿ ಆಕ್ಷೇಪಣೆ ಸರಿಪಡಿಸುವಂತೆ ಅರ್ಜಿದಾರರ ಪರ ವಕೀಲ ಪಿ.ಎನ್.ಮನಮೋಹನ್ ಅವರಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಸೆ. 14ಕ್ಕೆ ಮುಂದೂಡಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನೂ 14ರಂದೇ ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ನ್ಯಾಯಪೀಠ ತಿಳಿಸಿದೆ.

ಸರ್ವೇ ನಂ 54ರ ಪ್ರದೇಶವು 1859ರ ಸರಕಾರಿ ದಾಖಲೆಗಳಲ್ಲಿ ಹಾಗೂ ಬಿ.ಖರಾಬ್ ಜಮೀನು ಎಂದೇ ಗುರುತಿಸಲಾಗಿದೆ. ಹೀಗಾಗಿ, ಬಿ.ಖರಾಬ್ ಜಮೀನನ್ನು ಈಗ ಹಿಡುವಳಿ ಜಮೀನು ಎಂದು ಪರಿವರ್ತಿಸಲು ಸರಕಾರದಿಂದ ಪ್ರತ್ಯೇಕ ಆದೇಶದ ಅಗತ್ಯವಿದೆ. ಅಷ್ಟಕ್ಕೂ ಇದು ಕೆರೆಯ ಜಾಗ ಎಂಬುದು ಸರಕಾರದ ವಾದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News