ಅರ್ಜಿ ಆಹ್ವಾನದ ಮೂಲಕ ನ್ಯಾಯಮೂರ್ತಿಗಳ ನೇಮಕ ವಿಚಾರ: ಅರ್ಜಿ ವಜಾಗೊಳಿಸಿದ ಹೈಕೋರ್ಟ್

Update: 2018-09-04 16:45 GMT

ಬೆಂಗಳೂರು, ಸೆ.4: ಕೊಲಿಜಿಯಂ ವ್ಯವಸ್ಥೆಗೆ ಬದಲಾಗಿ ಅರ್ಜಿ ಆಹ್ವಾನದ ಮೂಲಕ ವಕೀಲರನ್ನು ಹೈಕೋರ್ಟ್ ನ್ಯಾಯಮೂರ್ತಿಗಳ ಹುದ್ದೆಗೆ ನೇಮಿಸುವ ಪದ್ಧತಿ ಜಾರಿಗೆ ತರುವಂತೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಈ ಕುರಿತಂತೆ ವಕೀಲ ಅರವಿಂದ ಕಾಮತ್ ಪುತ್ತೂರು, ವಿ.ಎಲ್.ಜಗದೀಶ್ ಮತ್ತು ವಿ.ಪ್ರಶಾಂತ್ ಮೂರ್ತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಈ ವಿಷಯದಲ್ಲಿ ಈಗಾಗಲೇ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ನ್ಯಾಯಪೀಠದ ಆದೇಶವಿದ್ದು ಇದನ್ನು ಅರ್ಜಿದಾರರು ಮನನ ಮಾಡಬೇಕು. ಈ ಅರ್ಜಿ ವಿಚಾರಣೆಗೆ ಯೋಗ್ಯವಾಗಿಲ್ಲ. ದಂಡ ಹಾಕದೇ ವಜಾಗೊಳಿಸುತ್ತಿದ್ದೇನೆ ಎಂದು ನ್ಯಾಯಪೀಠ ಅರ್ಜಿದಾರರಿಗೆ ಎಚ್ಚರಿಕೆ ನೀಡಿತು.

ಅರ್ಜಿಯಲ್ಲಿ ಏನಿತ್ತು: ಅರ್ಹ ಹಾಗೂ ಆಕಾಂಕ್ಷಿ ವಕೀಲರಿಂದ ಅರ್ಜಿ ಆಹ್ವಾನಿಸಬೇಕು. ವಕೀಲರ ಪರಿಷತ್ತು ಹಾಗೂ ಸಂಘಗಳು, ಹಾಲಿ, ನಿವೃತ್ತ ನ್ಯಾಯಮೂರ್ತಿಗಳು, ರಾಜಕೀಯ ಪಕ್ಷಗಳಿಂದ ಶಿಫಾರಸು ಪಡೆದು, ಅದರಲ್ಲಿ ಅರ್ಹರನ್ನು ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News