ವಸತಿ ಶಾಲೆ, ವಸತಿ ನಿಲಯಗಳ ಸಮಗ್ರ ಸುಧಾರಣೆಗೆ ಕ್ರಮ ಕೈಗೊಳ್ಳಲು ಕುಮಾರಸ್ವಾಮಿ ಸೂಚನೆ

Update: 2018-09-04 17:14 GMT

ಬೆಂಗಳೂರು, ಸೆ.4: ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳು ಹಾಗೂ ವಸತಿ ನಿಲಯಗಳ ಸಮಗ್ರ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸೂಚಿಸಿದರು.

ಅವರು ಇಂದು ಗೃಹಕಚೇರಿ ಕೃಷ್ಣಾದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು. ವಸತಿ ಶಾಲೆಗಳು ಹಾಗೂ ವಸತಿ ನಿಲಯಗಳನ್ನು ನವೋದಯ ಮಾದರಿ ವಸತಿ ಶಾಲೆಗಳಂತೆ ಉನ್ನತೀಕರಿಸುವ ನಿಟ್ಟಿನಲ್ಲಿ ಅಧ್ಯಯನ ಮಾಡಲು ಪರಿಣತರ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಎಲ್ಲ ವಸತಿ ನಿಲಯಗಳನ್ನು ನಿರ್ವಹಣೆಯ ಗುಣಮಟ್ಟದ ಆಧಾರದಲ್ಲಿ ವರ್ಗೀಕರಣ ಮಾಡಲಿದ್ದು, 3 ತಿಂಗಳಲ್ಲಿ ವರದಿ ನೀಡಲಿದೆ. ಇದರ ಆಧಾರದಲ್ಲಿ ವಸತಿ ಶಾಲೆಗಳು ಹಾಗೂ ವಸತಿ ನಿಲಯಗಳ ನಿರ್ವಹಣೆ, ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು.

ಇಲಾಖೆಯಲ್ಲಿ ವಸತಿ ನಿಲಯಗಳು/ ವಸತಿ ಶಾಲೆಗಳ ನಿರ್ವಹಣೆಗೆ ನಿಖರ ಮಾರ್ಗಸೂಚಿಗಳನ್ನು ರೂಪಿಸುವಂತೆ ಹಾಗೂ ಅವುಗಳನ್ನು ಜಾರಿಗೊಳಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಪ್ರಸಕ್ತ ವರ್ಷ ಪರಿಶಿಷ್ಟ ಜಾತಿ ಉಪ ಯೋಜನೆ ಹಾಗೂ ಪರಿಶಿಷ್ಟ ಪಂಗಡ ಉಪ ಯೋಜನೆಗಳಿಗೆ ಒಟ್ಟು 29,209.47 ಕೋಟಿ ರೂ. ಅನುದಾನ ಹಂಚಿಕೆಯಾಗಿದ್ದು, ಈ ಅನುದಾನ ಅರ್ಹರನ್ನು ತಲುಪುವಂತೆ ಯೋಜನೆ ರೂಪಿಸಿ ಜಾರಿಗೊಳಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ಇದರಲ್ಲಿ ಯಾವುದೇ ಲೋಪವಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಕೈಗೊಳ್ಳಲಾಗುವವುದು ಎಂದು ಎಚ್ಚರಿಸಿದರು.

ಕಳೆದ ನೂರು ದಿನಗಳಲ್ಲಿ ಇಲಾಖೆಯು ಹಲವು ಪ್ರಮುಖ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದು, ಇಲಾಖೆಯ ಕುಂದುಕೊರತೆ ನಿವಾರಣೆಗಾಗಿ ಪ್ರಾರಂಭಿಸಿರುವ ಕಲ್ಯಾಣ ಕೇಂದ್ರ ಎಂಬ ಕಾಲ್ ಸೆಂಟರ್ ಪ್ರಾರಂಭಿಸಿದ್ದು, ಪ್ರತಿ ದಿನ ಸಾವಿರಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಲಾಗುತ್ತಿದೆ.
ವಿದ್ಯಾರ್ಥಿ ವೇತನ ಮಂಜೂರಾತಿಗಾಗಿ ಡಿಬಿಟಿ ಪೋರ್ಟಲ್ ಪ್ರಾರಂಭಿಸಲಾಗಿದ್ದು, ಇದರಿಂದ ವಿದ್ಯಾರ್ಥಿ ವೇತನ ಹಂಚಿಕೆಯನ್ನು ಅತ್ಯಂತ ಪಾರದರ್ಶಕವಾಗಿ ನಿರ್ವಹಿಸಲು ಸಾಧ್ಯವಾಗುತ್ತಿದೆ.

ಅರಣ್ಯ ಮತ್ತು ಅರಣ್ಯದ ಅಂಚಿನಲ್ಲಿರುವ ಆದಿವಾಸಿ ಜನರ ಆರೋಗ್ಯ ಸಂರಕ್ಷಣೆಗಾಗಿ ಪ್ರಥಮ ಬಾರಿಗೆ 17 ಸಂಚಾರಿ ಆರೋಗ್ಯ ಘಟಕಗಳನ್ನು ಪ್ರಾರಂಭಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಅರೆ ಅಲೆಮಾರಿ/ ಅಲೆಮಾರಿ ಜನಾಂಗಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಸೂಚನೆ ನೀಡಿದರು. ಇವರ ಆರೋಗ್ಯ ಕಾಳಜಿ, ಜೀವನೋಪಾಯ ಹಾಗೂ ವಸತಿ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದರು.

ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್, ಸಮಾಜ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಂ. ಲಕ್ಷ್ಮೀನಾರಾಯಣ ಮತ್ತಿತರ ಹಿರಿಯ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News