ಕೊಲ್ಕತ್ತಾ: ಆರು ವರ್ಷದಲ್ಲಿ ಮೂರನೇ ಸೇತುವೆ ಕುಸಿತ; ಓರ್ವ ಮೃತ್ಯು

Update: 2018-09-05 03:53 GMT

ಕೊಲ್ಕತ್ತಾ, ಸೆ. 5: ಇಲ್ಲಿನ ಮಜೇರ್‌ಹಾತ್ ಸೇತುವೆಯ 20 ಮೀಟರ್ ಉದ್ದದ ಡೆಕ್ ಮಂಗಳವಾರ ಸಂಜೆ ಕುಸಿದು ಬಿದ್ದು ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಇತರ 21 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಕಳೆದ ಆರು ವರ್ಷಗಳಲ್ಲಿ ನಗರದಲ್ಲಿ ನಡೆಯುತ್ತಿರುವ ಮೂರನೇ ಸೇತುವೆ ಕುಸಿತ ಇದಾಗಿದೆ. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಸೇತುವೆಯ ಅವಶೇಷಗಳಡಿ ಮತ್ತಷ್ಟು ಮಂದಿ ಸಿಕ್ಕಿಹಾಕಿಕೊಂಡಿರುವ ಸಾಧ್ಯತೆ ಇದೆ ಎಂದು ಪರಿಹಾರ ಕಾರ್ಯಾಚರಣೆ ಸಿಬ್ಬಂದಿ ಶಂಕೆ ವ್ಯಕ್ತಪಡಿಸಿದ್ದಾರೆ.

ಸೇತುವೆ ದಾಟುತ್ತಿದ್ದ ಬೈಕ್ ಸವಾರ ಸೌಮನ್ ಬಾಗ್ ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸೇತುವೆ ಕುಸಿದಾಗ ಮೂರು ಬೈಕ್‌ಗಳು ಕೆಳಕ್ಕೆ ಬಿದ್ದಿವೆ. ಒಂದು ಮಿನಿಬಸ್ ಹಾಗೂ ಐದು ಕಾರುಗಳು ಕೂಡಾ ಬಿದ್ದು ನಜ್ಜುಗುಜ್ಜಾಗಿವೆ. ಈ ಸಂದರ್ಭ ಹಲವು ಮಂದಿ ಗಾಯಗೊಂಡರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಕಚೇರಿಗಳಿಂದ ಉದ್ಯೋಗಿಗಳು ವಾಪಸ್ಸಾಗುವ ವೇಳೆ ಇಲ್ಲಿ ವಾಹನದಟ್ಟಣೆ ಇರುವ ಕಾರಣ ಇನ್ನು ಒಂದು ಗಂಟೆ ಕಳೆದು ಸೇತುವೆ ಕುಸಿದಿದ್ದರೆ ಸಾವು ನೋವು ಇನ್ನಷ್ಟು ಹೆಚ್ಚುತ್ತಿತ್ತು. ಈ ಸೇತುವೆ ಕೊಲ್ಕತ್ತಾ ನಗರ ಹಾಗೂ ಜನನಿಬಿಡ ದಕ್ಷಿಣ 24 ಪರಗಣಾ ಜಿಲ್ಲೆಯ ಬೆಹಾಲ ಪಟ್ಟಣವನ್ನು ಸಂಪರ್ಕಿಸುವ ಪ್ರಮುಖ ಸೇತುವೆಯಾಗಿದೆ. ವಾಹನದಟ್ಟಣೆ ಸಂದರ್ಭದಲ್ಲಿ ಸುಮಾರು 4000 ವಾಹನಗಳು ಈ ಸೇತುವೆ ಮೂಲಕ ಹಾದುಹೋಗುತ್ತವೆ.
ಪಕ್ಕದ ಬರ್ದ್ವಾನ್ ರಸ್ತೆಯ ಮಹಾದೇವತಾಲ ಕೊಳಗೇರಿಯ ನಿವಾಸಿಗಳು ತಕ್ಷಣ ಧಾವಿಸಿ ಗಾಯಾಳುಗಳನ್ನು ಹೊರಕ್ಕೆ ತೆಗೆಯುವಲ್ಲಿ ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News