ನಿವೃತ್ತ ಶಿಕ್ಷಕನಿಂದ ಅಸಾಮಾನ್ಯ ಸೇವೆ: ವಿದ್ಯಾರ್ಥಿಗಳ ಬಳಿಗೆ ಓಡುತ್ತಲೇ ಇರುವ ನಾರಾಯಣ ನಾಯಕ್

Update: 2018-09-05 07:15 GMT

ತನ್ನ ಸೇವೆಗೆ ಯಾವುದೇ ಆರ್ಥಿಕ ಪ್ರತಿಫಲವನ್ನು ಪಡೆಯದೆ ತನ್ನ ದುಡಿಮೆಯ ಹಣವನ್ನು ಪ್ರತಿದಿನ ವ್ಯಯಿಸುತ್ತಿರುವ ನಾರಾಯಣ ನಾಯಕರದ್ದು ಒಂದು ಆದರ್ಶ ಸೇವೆ. ಶಿಕ್ಷಕರ ದಿನಾಚರಣೆಯಂದು ಈ ದಣಿವರಿಯದ ಸೇವಕನಿಗೆ ಗೌರವ ಅರ್ಪಿಸೋಣ. 

76ರ ಹರೆಯದ ನಾರಾಯಣ ನಾಯಕ್ ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾಗಿ 17 ವರ್ಷಗಳು ಕಳೆದಿವೆ. ಆದರೆ, ಇವರ ಸೇವೆ ನಿರಂತರ ನಡೆಯುತ್ತಿದೆ. ಬಂಟ್ವಾಳ ತಾಲೂಕಿನ ನಾರಾಯಣ ನಾಯಕ್. ಸಂಗಬೆಟ್ಟು ಗ್ರಾಮದ ಕರ್ಪೆ ಎಂಬ ಊರಿನ ನಿವಾಸಿ. ತಮ್ಮ ಶಿಕ್ಷಕ ತರಬೇತಿಯ ನಂತರ 1963ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಬಂಟ್ವಾಳ ತಾಲೂಕಿನ ಸರಕಾರಿ ಪ್ರಾಥಮಿಕ ಶಾಲೆ ಕೋಡಪದವಿನಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಹತ್ತು ವರ್ಷಗಳ ಸೇವೆಯ ನಂತರ ಇದೇ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಯಿಗೆ ವರ್ಗಾವಣೆಗೊಂಡು ಅಲ್ಲಿ ಹತ್ತು ವರ್ಷಗಳ ಕಾಲ ಕರ್ತವ್ಯದಲ್ಲಿದ್ದರು. 1983ರಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಭಡ್ತಿ ಹೊಂದಿ ಸಜಿಪ ಮೂಡ ಪ್ರೌಢಶಾಲೆಯಲ್ಲಿ ಹತ್ತು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದರು. ಆ ಬಳಿಕ ಕೊಯ್ಲ ಮತ್ತು ವಾಮದಪದವು ಸರಕಾರಿ ಪ್ರೌಢಶಾಲೆಗಳಲ್ಲಿ ಶಿಕ್ಷಕ-ಮುಖ್ಯ ಶಿಕ್ಷಕ ಅಲ್ಲದೆ, ಕೆಲವು ವರ್ಷ ಶಾಲಾ ತಪಾಸಣಾಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿ 2001ರಲ್ಲಿ ನಿವೃತ್ತಿಯಾದರು. ತಾನು ಶಿಕ್ಷಕನಾಗಿದ್ದಾಗ ಶಾಲೆಗಳಿಗೆ ಪೀಠೋಪಕರಣ, ಆವರಣ ಗೋಡೆ, ತರಗತಿ ಕೋಣೆಗಳ ನಿರ್ಮಾಣಕ್ಕೆ ಮುತುವರ್ಜಿ ವಹಿಸಿದ್ದರು. ಶಾಲಾ ಆವರಣಗಳಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಿ ತೆಂಗಿನ ಫಸಲನ್ನು ತೆಗಿಯುವಲ್ಲಿ ಯಶಸ್ವಿಯಾಗಿದ್ದರು. ತನ್ನ 58ನೇ ವಯಸ್ಸಿನಲ್ಲಿ ವಯೋ ನಿವೃತ್ತಿ ಹೊಂದಿದ ಬಳಿಕ ಸರಕಾರದಿಂದ ನಿವೃತ್ತಿ ವೇತನ, ಅವರ ವಿಶಾಲವಾದ ಕೃಷಿ ತೋಟದಿಂದ ಬರುವ ಆದಾಯ, ಮಕ್ಕಳ ದುಡಿಮೆ ಇವೆಲ್ಲ ಇದ್ದರೂ ನಾರಾಯಣ್ ನಾಯಕ್ ಮನೆಗೆ ಮಾತ್ರ ಸೀಮಿತವಾಗಿರಲಿಲ್ಲ. ನಿವೃತ್ತಿಯ ನಂತರ ತನಗೆ ಪಿಂಚಣಿ ಬರುತ್ತಿದೆ. ತಾನೇಕೆ ಸಮಾಜಕ್ಕೆ ಏನಾದರೂ ಕೊಡಬಾರದು ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಂಡು, ಕಳೆದ 17 ವರ್ಷಗಳಿಂದ ವಿದ್ಯಾರ್ಥಿಗಳ ಬಳಿಕ ಧಾವಿಸುತ್ತಲೇ ಇದ್ದಾರೆ. ಸರಕಾರಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಸೌಲಭ್ಯ ದೊರಕಿಸಿ ಕೊಡುವ ಸೇವೆಯನ್ನು ಮಾಡಲು ಆರಂಭಿಸಿದರು.

 ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಹುತೇಕ ಸರಕಾರಿ ಶಿಕ್ಷಣ ಸಂಸ್ಥೆಗಳಿಗೆ ಪ್ರತಿದಿನ ಭೇಟಿ ನೀಡಿ ಕೆಲವು ಕಾಲೇಜುಗಳಲ್ಲಿ ವಾರದಲ್ಲಿ ನಿರ್ದಿಷ್ಟ ದಿನಗಳಂದು ಇಡೀ ದಿನ ಇದ್ದು, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿರುತ್ತಾರೆ. ಸರಕಾರದಿಂದ ದೊರಕುವ ವಿದ್ಯಾರ್ಥಿ ವೇತನದ ಸಮಗ್ರ ಮಾಹಿತಿ ನೀಡುವುದು, ಉಚಿತ ಅರ್ಜಿ ವಿತರಣೆ, ಆನ್‌ಲೈನ್ ಮೂಲಕ ಅರ್ಜಿ ತುಂಬಲು ನೆರವು, ಖಾಸಗಿ ವಿದ್ಯಾರ್ಥಿ ವೇತನದ ಅರ್ಜಿಗಳ ಉಚಿತ ವಿತರಣೆ, ಅರ್ಜಿಗಳನ್ನು ಖಾಸಗಿ ಸಂಸ್ಥೆಗಳಿಗೆ ತಲುಪಿಸುವುದು, ಖಾಸಗಿ ಸಂಸ್ಥೆಗಳ ವಿದ್ಯಾರ್ಥಿ ವೇತನದ ಫಲಾನುಭವಿಗಳ ಆಯ್ಕೆಗೆ ಮನೆ ಮನೆ ಭೇಟಿ ಇತ್ಯಾದಿ ಸೇವೆಗಳನ್ನು ಯಾವುದೇ ಪ್ರತಿಫಲ ಪಡೆಯದೆ ನಿರಂತರವಾಗಿ ಮಾಡುತ್ತಿರುವುದು ಇವರ ಹೆಗ್ಗಳಿಕೆ.

ತನ್ನ ದ್ವಿಚಕ್ರ ವಾಹನವನ್ನು ಏರಿ ತನ್ನದೇ ಸ್ವಂತ ಖರ್ಚಿನಿಂದ ದಿನನಿತ್ಯ ನೂರಾರು ಕಿ.ಮೀ. ಸಂಚರಿಸಿ ಶಾಲೆಗೆ ಭೇಟಿ ನೀಡಿ ಉಚಿತ ಮಾಹಿತಿ ನೀಡುತ್ತಿರುವ ನಾರಾಯಣ ನಾಯಕ್ ಶಿಕ್ಷಕ ವೃತ್ತಿಯ ಘನತೆಯನ್ನು ಎತ್ತಿ ಹಿಡಿದಿದ್ದಾರೆ. ಕೆಲವು ಕಾಲೇಜುಗಳಲ್ಲಿ ಅಲ್ಲಿನ ಮುಖ್ಯಸ್ಥರ ಅನುಮತಿ ಪಡೆದು ವಾರದಲ್ಲಿ ಕೆಲವು ದಿನ ಅಲ್ಲಿಯೇ ಇದ್ದು ವಿದ್ಯಾರ್ಥಿಗಳಿಗೆ ನೆರವಾಗುತ್ತಿದ್ದಾರೆ. ವಿದ್ಯಾರ್ಥಿ ವೇತನ ನೀಡುವ ಸರಕಾರಿ ಇಲಾಖೆಗಳಿಗೆ ಆಗಾಗ ಭೇಟಿ ನೀಡಿ ಕಾಲ ಕಾಲಕ್ಕೆ ಮಾಹಿತಿ ಪಡೆಯುತ್ತಿದ್ದಾರೆ ಮತ್ತು ಅದನ್ನು ವಿದ್ಯಾರ್ಥಿಗಳಿಗೆ ಯಥಾವತ್ತಾಗಿ ವರ್ಗಾಯಿಸುತ್ತಿದ್ದಾರೆ.

 ವಿವಿಧ ಜಾತಿ, ಧರ್ಮ ಹಾಗೂ ವಿವಿಧ ಭಾಷೆಯ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನಕ್ಕಾಗಿ ಎಲ್ಲ ಸಂಘ ಸಂಸ್ಥೆಗಳ ಕಚೇರಿಯನ್ನು ಸಂಪರ್ಕಿಸುತ್ತಿದ್ದಾರೆ. ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೆರವಾಗುತ್ತಿದ್ದಾರೆ.

ಅದಲ್ಲದೆ, ಪುತ್ತೂರಿನಿಂದ ಕುಂದಾಪುರದ ಕೋಡಿ ತನಕ ಸುತ್ತಾಡುವ ಇವರ ಸೇವೆ ಅನನ್ಯವಾದುದು. ತನಗೆ ಈ ಸೇವೆಯಲ್ಲಿ ಸಂಪೂರ್ಣ ತೃಪ್ತಿಯಿದೆ. ವಿಶ್ರಾಂತಿ ಎಂಬುವುದು ತನಗೆ ಸೇವಾ ಕಾರ್ಯವೇ ಆಗಿದೆ. ತನ್ನ ಕೆಲಸದಿಂದ ತನಗೆ ರಾತ್ರಿ ನೆಮ್ಮದಿಯ ನಿದ್ರೆ ಬೀಳುತ್ತಿದೆ. ಮಕ್ಕಳಿಗೆ ನೀಡುವ ಸೇವೆಯೇ ನೈಜವಾದುದು ಎಂಬುದು ಇವರ ಅಭಿಪ್ರಾಯ. ನೆನಪಿನ ಶಕ್ತಿ, ದೃಷ್ಠಿ, ದೈಹಿಕ, ಮಾನಸಿಕ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಂಡಿರುವ ಈ ಶಿಕ್ಷಕರ ಪರಿಚಯವಿಲ್ಲದವರು ಯಾರೂ ಇಲ್ಲ. ಇವರ ಪರಿಚಯ ಹೆಚ್ಚಿ ನವರಿಗೆ ಇದೆ.

 ನಾರಾಯಣ ನಾಯಕ್‌ರಿಗೆ ಹಲವು ಸಂಘ ಸಂಸ್ಥೆಗಳು ಸನ್ಮಾನ ಮಾಡಿವೆ. ಸುವರ್ಣ ವಾಹಿನಿಯ ಅಸಾಮಾನ್ಯ ಕನ್ನಡಿಗ-2018 ಪ್ರಶಸ್ತಿ ಇವರಿಗೆ ಸಂದಿದೆ. ಈ ಪ್ರಶಸ್ತಿಯೊಂದಿಗೆ ಲಭಿಸಿದ ನಗದು 25,000 ರೂ.ಗೆ 25,000 ರೂ. ಸೇರಿಸಿ ಎರಡು ಸರಕಾರಿ ಪ್ರೌಢಶಾಲೆಗಳಿಗೆ ದತ್ತಿ ನಿಧಿಯಾಗಿ ದಾನ ಮಾಡಿ ಎಸೆಸೆಲ್ಸಿಯಲ್ಲಿ ಅತ್ಯಧಿಕ ಅಂಕ ಪಡೆದವರಿಗಾಗಿ ಪುರಸ್ಕರಿಸಲು ನೀಡಿರುತ್ತಾರೆ.

Writer - ಅಬ್ದುರ್ರಝಾಕ್ ಅನಂತಾಡಿ

contributor

Editor - ಅಬ್ದುರ್ರಝಾಕ್ ಅನಂತಾಡಿ

contributor

Similar News