ಹೆಣ್ಣು ಮಕ್ಕಳು, ಶೂದ್ರರಿಗೆ ಶಿಕ್ಷಣದ ಅವಕಾಶ ಕಲ್ಪಿಸಿದ್ದು ಸಾವಿತ್ರಿಬಾಯಿ ಫುಲೆ: ಸಚಿವ ಎನ್.ಮಹೇಶ್

Update: 2018-09-05 14:15 GMT

ಬೆಂಗಳೂರು, ಸೆ. 5: 'ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಪರಿಕಲ್ಪನೆಯನ್ನು ನೀಡಿದ್ದು ದೇಶದ ಮೊಟ್ಟ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ. ಮೊದಲ ಬಾರಿಗೆ ಹೆಣ್ಣು ಮಕ್ಕಳು ಮತ್ತು ಶೂದ್ರರಿಗೆ ಶಿಕ್ಷಣ ಕಲಿಕೆ ಅವಕಾಶ ಕಲ್ಪಿಸಿದ್ದು ಮಹಾತ್ಮ ಜ್ಯೋತಿಬಾ ಫುಲೆ ದಂಪತಿ' ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಸ್ಮರಿಸಿದ್ದಾರೆ.

ಬುಧವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, 1835ರಲ್ಲಿ ಶಿಕ್ಷಣವನ್ನು ಸಾರ್ವತ್ರಿಕಗೊಳಿಸಿದ ಕೀರ್ತಿ ಬ್ರಿಟಿಷರಿಗೆ ಸಲ್ಲುತ್ತದೆ. ಆದರೆ, ಹೆಣ್ಣು ಮಕ್ಕಳು ಮತ್ತು ಶೂದ್ರರಿಗೆ ಅಕ್ಷರ ಕಲಿಕೆಗೆ ಮೊಟ್ಟಮೊದಲು ಶಾಲೆ ಸ್ಥಾಪಿಸಿದ್ದು ಜ್ಯೋತಿಬಾ ಫುಲೆ. ಅಲ್ಲದೆ, 1882ರಲ್ಲಿ ಹಂಟರ್ ಆಯೋಗಕ್ಕೆ ಶಾಲೆ ಸ್ಥಾಪಿಸಲು ಮನವಿ ಸಲ್ಲಿಸಿದ್ದು ಫುಲೆ ದಂಪತಿ ಎಂದು ನೆನಪು ಮಾಡಿಕೊಂಡದರು.

'ಉಪ್ಪು ಕೊಟ್ಟವರನ್ನು ಮುಪ್ಪಿನ ವರೆಗೂ ನೆನಯಬೇಕು' ಎಂಬ ಮಾತಿನಂತೆ ನಾವಿಂದು ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ದಂಪತಿಯನ್ನು ನೆನಪು ಮಾಡಿಕೊಳ್ಳಬೇಕು ಎಂದ ಅವರು, ಶಿಕ್ಷಣದಿಂದಲೇ ದೇಶದ ಅಭಿವೃದ್ಧಿ ಸಾಧ್ಯ. ರಾಷ್ಟ್ರದ ಯಶಸ್ಸು ಶಿಕ್ಷಣದಿಂದಲೇ ಎಂದು ಹೇಳಿದರು.

ನಮ್ಮ ಶಿಕ್ಷಕರೇ ಬೆಸ್ಟ್: ಖಾಸಗಿ ಶಾಲೆಗಳ ಮಕ್ಕಳಿಗೆ ಗಿಳಿಪಾಠ ಒಪ್ಪಿಸುವ ಶಿಕ್ಷಕರಿಗಿಂತ ಸರಕಾರಿ ಶಾಲೆಗಳಲ್ಲಿನ ಮಕ್ಕಳ ಮನಸ್ಥಿತಿಯನ್ನು ಅರಿತು ಕಲಿಸುವ ನಮ್ಮ ಶಿಕ್ಷಕರು ನೂರುಪಾಲು ಉತ್ತಮ ಎಂದು ಮಹೇಶ್ ಇದೇ ವೇಳೆ ಸರಕಾರಿ ಶಾಲಾ ಶಿಕ್ಷಕರ ಕರ್ತವ್ಯವನ್ನು ಶ್ಲಾಘಿಸಿದರು.

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭಗೊಂಡಿದ್ದು, ಕೋರಿಕೆ ವರ್ಗಾವಣೆ ಹಿನ್ನೆಲೆಯಲ್ಲಿ ವಿಳಂಬವಾಗುತ್ತಿದೆ. ಮಕ್ಕಳ ಶೈಕ್ಷಣಿಕ ಉದ್ದೇಶಕ್ಕಾಗಿ ವರ್ಗಾವಣೆಯಲ್ಲಿ ಶೇ.10ರಷ್ಟು ಇದರಲ್ಲಿ ವ್ಯತ್ಯಾಸ ಆಗಬಹುದು. ಎಲ್ಲ ಶಿಕ್ಷಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

'ಮುಂದಿನ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ ಬರುವ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯೋನ್ಮುಖರಾಗಬೇಕು. ರಾಜ್ಯದ 1.5 ಕೋಟಿ ವಿದ್ಯಾರ್ಥಿಗಳ ಹಣೆಬರಹವನ್ನು ಶಿಕ್ಷಕರು ರೂಪಿಸುತ್ತಾರೆ. ಅವರಲ್ಲಿ ಸಕಾರಾತ್ಮಕ ಅಂಶಗಳನ್ನು ತುಂಬಿದರೆ ಅವರು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ'

-ಎನ್.ಮಹೇಶ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News