ಅಂತರ್‌ರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಚಿಂತನೆ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-09-05 14:56 GMT

ಬೆಂಗಳೂರು, ಸೆ.5: ಕರ್ನಾಟಕದಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಉದ್ದೇಶದಿಂದ ಅಂತರ್‌ರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಚಿಂತನೆ ನಡೆಸಿದ್ದು, ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ನೀಲ ನಕ್ಷೆ ತಯಾರಿಸಿ ನೀಡುವಂತೆ ನಿರ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯವು ಸೆಂಟ್ರಲ್ ಕಾಲೇಜಿನಲ್ಲಿ ಆರಂಭಿಸಿದ ಸ್ನಾತಕೋತ್ತರ ಪದವಿ ಕಲಾ ವಿಭಾಗದ ತರಗತಿಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿನ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಸಮಾನವಾದ ಶಿಕ್ಷಣ ಸಿಗುವಂತೆ ಮಾಡಬೇಕಿರುವುದು ಸರಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಮೈತ್ರಿ ಸರಕಾರ ಶೈಕ್ಷಣಿಕ ಬೆಳವಣಿಗೆಗಾಗಿ ಎಲ್ಲ ರೀತಿಯ ಸಹಕಾರ ನೀಡುತ್ತದೆ. ಆದರೆ, ಶಿಕ್ಷಕರು, ಪ್ರಾಧ್ಯಾಪಕರು ಉತ್ತಮ ಶಿಕ್ಷಣ ನೀಡಲು ಸಹಕರಿಸಬೇಕು ಎಂದ ಅವರು, ಸರಕಾರಿ ಶಾಲೆ, ಕಾಲೇಜುಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವುದಕ್ಕಾಗಿ ಒಂದು ಸಾವಿರ ಕೋಟಿ ರೂ.ನೀಡಲಾಗಿದೆ. ಉದ್ಯೋಗ ಆಧಾರಿತ ಪಠ್ಯಕ್ರಮಗಳನ್ನು ಅನುಷ್ಠಾನ ಮಾಡುವತ್ತ ಆಲೋಚಿಸಬೇಕಿದೆ. ಸರಕಾರದಂತೆ ಶಿಕ್ಷಕರು ಕೂಡ ಬದ್ಧತೆ ಪ್ರದರ್ಶಿಸಿ ಕಾರ್ಯ ನಿರ್ವಹಿಸಬೇಕಿದೆ ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ಈಗಾಗಲೇ ಕೆಲವು ಸರಕಾರಿ ಶಾಲಾ ಮತ್ತು ಕಾಲೇಜುಗಳು ಖಾಸಗಿ ಶಿಕ್ಷಣ ಸಂಸ್ಥೆಗಳಿಗಿಂತ ಉತ್ತಮ ಶಿಕ್ಷಣ ನೀಡುತ್ತಿರುವುದು ವರದಿಯಾಗುತ್ತಿದೆ. ಅದರಲ್ಲಿ ನಗರದ ಮಹಾರಾಣಿ ಕಾಲೇಜು ಒಂದಾಗಿದೆ. ಇದೇ ರೀತಿಯಲ್ಲಿ ರಾಜ್ಯಾದ್ಯಂತ ಸರಕಾರಿ ಶಾಲಾ-ಕಾಲೇಜುಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ಖಾಸಗಿ ಶಾಲೆಗಳಿಗೆ ಸಮಾನವಾದ ರೀತಿಯಲ್ಲಿ ರೂಪಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಅಸಮಾಧಾನ: ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಮಾಡುವುದು ನಿಲ್ಲಬೇಕು. ವಿಶ್ವವಿದ್ಯಾಲಯಗಳ ಕುಲಪತಿಗಳು, ಸಿಂಡಿಕೇಟ್, ಸೆನೆಟ್ ಸದಸ್ಯರ ನೇಮಕಾತಿಯಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯುತ್ತಿರುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಗುರುಗಳಿಗೆ ನಮನ: ಇದೇ ವೇಳೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಾಲೇಜಿನ ಕೊಠಡಿಯಲ್ಲಿದ್ದ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾವಿ ಸರ್ ಸಿ.ವಿ. ರಾಮನ್ ಅವರ ಭಾವಚಿತ್ರದ ಮೇಲೆ ‘ಗುರುಗಳಿಗೆ ನಮನ’ ಎಂದು ಹಸ್ತಾಕ್ಷರ ಹಾಕಿದರು. ಮುಖ್ಯಮಂತ್ರಿಗಳು ಕಲಾ ವಿಭಾಗದ ತರಗತಿಗಳನ್ನು ಆರಂಭಿಸಿದ ಕ್ಷಣ ನೆನಪಿನಲ್ಲಿ ಉಳಿಯುವುದಕ್ಕಾಗಿ ಮುಖ್ಯಮಂತ್ರಿಗಳ ಹಸ್ತಾಕ್ಷರ ಪಡೆಯಲಾಯಿತು.

ಈ ಸಂದರ್ಭದಲ್ಲಿ ಕುಲಪತಿ ಪ್ರೊ. ಎಸ್. ಜಾಫೆಟ್, ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ, ಶಾಸಕ ಆರ್. ರೋಷನ್ ಬೇಗ್, ಚಿಂತಕ ಹಾಗೂ ನಿವೃತ್ತ ಅಧ್ಯಾಪಕ ಜಿ.ರಾಮಕೃಷ್ಣ, ಬೆಂ.ವಿವಿ ಕುಲಪತಿ ಪ್ರೊ. ಕೆ.ಆರ್. ವೇಣುಗೋಪಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಎಂಟು ಕೋರ್ಸ್‌ಗಳಿಗೆ ಚಾಲನೆ

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯವು 2018-19ನೆ ಸಾಲಿನಲ್ಲಿ ಕಲಾ ವಿಭಾಗದಲ್ಲಿ ಎಂಟು ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಆರಂಭಿಸಿದೆ. ಕನ್ನಡ, ಇಂಗ್ಲಿಷ್, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಾಮಾಜಿಕ ಶಾಸ್ತ್ರ, ತತ್ವಶಾಸ್ತ್ರ ವಿಭಾಗಗಳಿಗೆ ಸಿಎಂ ಕುಮಾರಸ್ವಾಮಿ ಚಾಲನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News