ದೇಶ ಉರಿಯುತ್ತಿದ್ದರೂ ಮಾತನಾಡದ ಪ್ರಧಾನಿಯದ್ದು ‘ರಾಕ್ಷಸರೂಪದ ಮೌನ’: ಪ್ರಕಾಶ್ ರೈ

Update: 2018-09-05 15:19 GMT

ಬೆಂಗಳೂರು, ಸೆ.5: ಒಂದು ವರ್ಷವಾಗಿದೆ. ಗೌರಿಯೊಳಗೆ ನಾನು ಹುಟ್ಟಿ ಒಂದು ವರ್ಷವಾಗಿದೆ. ನೋವು, ಹತಾಶೆ, ಅನ್ಯಾಯ ಇವುಗಳನ್ನೆಲ್ಲಾ ಒಳಗೊಂಡ ಈ ಒಂದು ವರ್ಷದ ಹಸುಗೂಸು ಹೇಳುವಂತೆ ನಾನು ನಡೆಯುತ್ತಿದ್ದೇನೆ ಎಂದು ಬಹುಭಾಷಾ ನಟ, ನಿರ್ದೇಶಕ ಪ್ರಕಾಶ್ ರೈ ಹೇಳಿದರು.

ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆಯಾಗಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಒಂದು ವರ್ಷ ಬಹಳ ಮಾತಾಡಿದ್ದೇವೆ. ಕೋಪ, ಆಕ್ರೋಶ, ಅಸಹಾಯಕತೆ, ನೋವುಗಳನ್ನು ಹೊರಹಾಕಿದ್ದೇವೆ. ನಾವು ಒಂದು ವರ್ಷದ ಹಿಂದೆ ಗೌರಿಯನ್ನು ಕಳೆದುಕೊಂಡಾಗ ಅದಕ್ಕೆ ಯಾರು ಕಾರಣ ಎಂದು ಹೇಳಿದ್ದೆವೋ, ಎಲ್ಲಾ ತನಿಖೆಗಳು ಈಗ ಅದನ್ನೇ ಹೇಳುತ್ತಿವೆ ಎಂದವರು ಹೇಳಿದರು.

ನಾವು ನಮ್ಮ ಹೋರಾಟವನ್ನು ಬದಲಿಸಬೇಕಿದೆ. ಇಲ್ಲದಿದ್ದರೆ ಅವರು ಜನರ ಒಳ್ಳೆಯತನವನ್ನೇ ಬದಲಿಸಿಬಿಡುತ್ತಾರೆ. ನಾವು ನಮ್ಮ ನೋವನ್ನು ಮರೆತು, ಗೌರಿಯನ್ನು ಮರೆತು ಯೋಚನೆ ಮಾಡಬೇಕಿದೆ. ಗೌರಿ ಒಂದು ಮುಗಿಯದ ಕಥೆಯಾಗಿದ್ದಾಳೆ. ಎಷ್ಟು ಅನ್ಯಾಯ, ಕುತೂಹಲಗಳನ್ನು ತನ್ನ ಪ್ರಾಣಾರ್ಪಣೆಯ ಮೂಲಕ ತೋರಿಸಿದ್ದಾಳೆ. ಇದರಿಂದ ಕಲ್ಬುರ್ಗಿ, ಪನ್ಸಾರೆ, ದಾಭೋಲ್ಕರ್ ಹತ್ಯೆಯ ಸಂಚುಗಳು ಗೋಚರಿಸುತ್ತಿವೆ ಎಂದು ಪ್ರಕಾಶ್ ರೈ ಹೇಳಿದರು.

ಈಗಿನ ಪರಿಸ್ಥಿತಿ ಹೇಗಿದೆ ಅಂದರೆ ಅಣೆಕಟ್ಟಿಗೆ ನೀರು ಜಾಸ್ತಿ ಸೇರುತ್ತಿದೆ. ಅಣೆಕಟ್ಟು ಒಡೆಯುವುದೊಂದೇ ಬಾಕಿ. ಬಲಾಢ್ಯರು ಅಧಿಕಾರಕ್ಕೆ ಬರುತ್ತಿದ್ದಾರೆ. ಇನ್ನೊಂದಿಷ್ಟು ಕೊಲೆಗಳು, ಹಲ್ಲೆಗಳು ಸೇರಿದಂತೆ ಏನಾದರೂ ಮಾಡಿ ಅಧಿಕಾರದಲ್ಲಿ ಕುಳಿತುಕೊಳ್ಳಲು ಹವಣಿಸುತ್ತಿದ್ದಾರೆ. ಜಯಶ್ರೀಯವರು ಹಾಡುತ್ತಿದ್ದಾಗ ‘ಕಾಪಾಡೋ ಕುರಿಗಳನ್ನು’ ಎಂದರು. ನಾವೆಲ್ಲಾ ಕುರಿಗಳಾಗಿದ್ದೇವೆ. ಆದರೆ ಕಾಪಾಡುವವರು ಯಾರು. ಅಧಿಕಾರದಲ್ಲಿರುವವರೇ ಕೊಲೆಗಡುಕರಾಗಿರುವಾಗ ಕಾಪಾಡುವವರು ಯಾರು?, ನಾವೇ ಕಾಪಾಡಬೇಕಿದೆ ಎಂದರು.

ಇಂದು ಮನುಷ್ಯ ಧರ್ಮವನ್ನಲ್ಲ, ಹಿಂದೂ ಧರ್ಮವನ್ನು ಕಾಪಾಡಬೇಕಿದೆ. ಜನಸಾಮಾನ್ಯರಿಗೆ ಇದನ್ನು ಅರ್ಥ ಮಾಡಿಸಬೇಕಿದೆ. ನಾವೆಲ್ಲರು ಒಂದು ದಿನ ಸಾಯುತ್ತೇವೆ. ನಾವ್ಯಾರು ಚಿರಂಜೀವಿಗಳಲ್ಲ. ಆದರೆ ಸಾಯುವ ವಿಧಾನ ಯಾವುದು. ಅಲ್ಲಿಯವರೆಗೂ ನಮಗೆ ಬದುಕು ಇರುತ್ತದೆ ಎನ್ನುವುದು ಮುಖ್ಯ ಎಂದ ಅವರು, ಗೌರಿ, ದಾಭೋಲ್ಕರ್, ಪನ್ಸಾರೆ, ಕಲ್ಬುರ್ಗಿಯವರದು ಸಾವಲ್ಲ. ಅದು ಕೊಲೆ. ನಿನ್ನೆ ಅವರು, ನಾಳೆ ನಾವಾಗುತ್ತೇವೆ ಎಂದರು.

ಮನಮೋಹನ್ ಸಿಂಗ್‍ ರನ್ನು ಮೌನಿ ಎಂದು ಗೇಲಿ ಮಾಡುತ್ತಿದ್ದೆವು. ಆದರೆ ಈಗೊಬ್ಬ ಪ್ರಧಾನಿಯಾಗಿದ್ದಾರೆ. ಅವರು ಮೌನವಾಗಿರುತ್ತಾರೆ. ಇದು ಅಪಾಯಕಾರಿ. ಇದು ರಾಕ್ಷಸರೂಪದ ಮೌನ. ದೇಶ ಉರಿಯುತ್ತಿದ್ದರೂ ಅವರು ಮೌನವಾಗಿದ್ದಾರೆ. ಎಲ್ಲವನ್ನೂ ಸುಮ್ಮನೆ ನೋಡಿ ಕೊಲೆಗಾರರನ್ನು ಬೆಂಬಲಿಸುತ್ತಿದ್ದಾರೆ. ಜನರೆಲ್ಲಾ ಬೆಂಕಿ ಆರಿಸಲು ಹೋದಾಗ ಊರು ಕೊಳ್ಳೆ ಹೊಡೆಯುವಂತಹ ಕಳ್ಳರಿವರು. ಮೋದಿಯವರ ಮಾತುಗಳು ಸಿಗರೇಟ್ ಪ್ಯಾಕ್ ಮೇಲೆ ಬರೆಯುವ ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಬರೆಯುವ ಡಿಸ್ ಕ್ಲೈಮರ್ ಅಷ್ಟೇ ಆಗಿವೆ. ಇದನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದು ಪ್ರಕಾಶ್ ರೈ ಹೇಳಿದರು.

ನಮ್ಮನ್ನು ಅರ್ಬನ್ ನಕ್ಸಲ್, ಹಿಂದೂ ವಿರೋಧಿ ಎಂದು ಹೇಳುತ್ತಿದ್ದಾರೆ. ಈ ಮೂಲಕ ತುಂಬಾ ವ್ಯವಸ್ಥಿತಿವಾಗಿ ಪಿತೂರಿ ಮಾಡುತ್ತಿದ್ದಾರೆ. ಈ ಬಗ್ಗೆ ನಾವು ಎಚ್ಚರಿಕೆ ವಹಿಸಬೇಕು ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News