ಹೋರಾಟದ ನದಿಯ ಹರಿವಿಗೆ ಆರೆಸ್ಸೆಸ್ ಫ್ಯಾಸಿಸ್ಟ್ ಕಲ್ಮಶಗಳು ಕೊಚ್ಚಿ ಹೋಗಲಿವೆ: ಕೆ.ಎಲ್.ಅಶೋಕ್

Update: 2018-09-05 15:37 GMT

ಬೆಂಗಳೂರು, ಸೆ.5: ಗೌರಿ ಹತ್ಯೆಯಾಗಿ ಇಂದಿಗೆ ಒಂದು ವರ್ಷವಾಗಿದ್ದು, ಯಾರು ಗಾಂಧಿಯನ್ನು ಕೊಂದರೋ, ಅವರೇ ಗೌರಿಯನ್ನು ಕೊಂದರು ಎಂದು ನಾವು ಹೇಳುತ್ತಲೇ ಇದ್ದೆವು. ಆದರೆ ಅದನ್ನು ಹಲವರು ವಿರೋಧಿಸಿದರು. ನೀವು ಎಡಪಂಥೀಯರು ಯಾವಾಗಲೂ ಇದನ್ನೇ ಹೇಳುತ್ತೀರಿ ಎಂದರು. ಆದರೆ ಅವರೇ ಕೊಂದಿರುವುದು ಇಂದು ಸಾಬೀತಾಗುತ್ತಿದೆ. ಜೊತೆಗೆ ಕಲ್ಬುರ್ಗಿ, ಪನ್ಸಾರೆ ಮತ್ತು ದಾಭೋಲ್ಕರ್‍ರನ್ನು ಕೊಂದವರು ಇವರೇ ಎಂದೂ ಸಾಬೀತಾಗುತ್ತಿದೆ ಎಂದು ಕೋಸೌವೇ ನಾಯಕ ಕೆ.ಎಲ್.ಅಶೋಕ್ ಹೇಳಿದರು.

ಕಾಲ ಕೆಳಗಿನ ಬೆಂಕಿಗಿಂತ, ಕಣ್ಣ ಮುಂದಿನ ಬೆಳಕು ಮುಖ್ಯ ಎಂಬ ಆಶಯದೊಂದಿಗೆ ನಾವು ಭರವಸೆಯಿಂದ ನಡೆಯುತ್ತೇವೆ. ಆಗಸ್ಟ್ 30ಕ್ಕೆ ಕಲ್ಬುರ್ಗಿಯವರು ಹತ್ಯೆಯಾಗಿ 3 ವರ್ಷ, ಸೆಪ್ಟಂಬರ್ 5ಕ್ಕೆ ಗೌರಿ ಹತ್ಯೆಯಾಗಿ ಒಂದು ವರ್ಷವಾಗಲಿದೆ. ಫ್ಯಾಸಿಸಂ ವಿರುದ್ಧ ನಾವೆಲ್ಲಾ ಒಂದಾಗಿ ಐಕ್ಯತೆ ಸಾಧಿಸುತ್ತೇವೆ ಎಂದವರು ಹೇಳಿದರು.

ಈ ಕಾರ್ಯಕ್ರಮ ನಡೆಯುತ್ತಿರುವಾಗಲೇ ಗುಜರಾತ್ ನ ಸಂಜೀವ್ ಭಟ್ ರನ್ನು ಪೊಲೀಸರು ಬಂಧಿಸಿದ್ದಾರೆ. ನಾಳೆ ನಮ್ಮೆಲ್ಲರನ್ನು ಬಂಧಿಸಬಹುದು. ಆದರೆ ನಮ್ಮ ಹೋರಾಟ ಮಾತ್ರ ನಿಲ್ಲಬಾರದು. ನಾಳೆಯೇ ನಾವು ನಿಮ್ಮ ಆಟಾಟೋಪಗಳನ್ನು ತಡೆದುಬಿಡುತ್ತೇವೆಂಬ ಭ್ರಮೆ ನಮಗಿಲ್ಲ. ಆದರೆ ನಿಮಗೆ ಕಡಿವಾಣ ಖಂಡಿತ ಹಾಕುತ್ತೇವೆ ಎಂದವರು ಹೇಳಿದರು.

ಆರೆಸ್ಸೆಸ್ ಪ್ರೇರಿತ ಫ್ಯಾಸಿಸ್ಟ್ ಸರ್ವಾಧಿಕಾರಗಳ ವಿರುದ್ಧ ನಾವು ತೀವ್ರ ಸಂಘರ್ಷ ಮಾಡಲೇಬೇಕಿದೆ. ನಮ್ಮ ಹಿಂದಿನ ಬುದ್ಧ, ಬಸವರು ಹೋರಾಡಿದ ಚರಿತ್ರೆ ನಮ್ಮ ಕಣ್ಣೆದುರಿಗಿವೆ. ಹಾಗಾಗಿ ಇದೇ ಫ್ಯಾಸಿಸಂ ಹೀಗೆ ಉಳಿಯುತ್ತದೆ ಎಂದು ಹೇಳಲಾಗುವುದಿಲ್ಲ. ದೊಡ್ಡ ನದಿಯ ಹರಿವಿಗೆ ಈ ಕಲ್ಮಶಗಳು ಕೊಚ್ಚಿ ಹೋಗುತ್ತದೆ ಎಂಬ ದಿಟ್ಟ ಭರವಸೆ ನಮಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News