ಸನಾತನ ಕಾಲಕ್ಕೆ ದೇಶವನ್ನು ಎಳೆಯುತ್ತಿರುವ ಶಕ್ತಿಗಳು ಗೌರಿಯ ಹತ್ಯೆ ಮಾಡಿವೆ: ನೂರ್ ಶ್ರೀಧರ್

Update: 2018-09-05 16:02 GMT

ಬೆಂಗಳೂರು, ಸೆ.5: ಗೌರಿ ನೆನಪಲ್ಲ. ನೆನಪು ಎಂಬುದು ಗತದ ವಿಚಾರ. ಗೌರಿ ಗತವಲ್ಲ. ಗೌರಿ ಹತ್ಯೆ ವರ್ತಮಾನ. ಕೆಲವು ಶಕ್ತಿಗಳು ಅದನ್ನು ಗತಕ್ಕೆ ಕೊಂಡೊಯ್ಯಲು ನೋಡುತ್ತಿದ್ದಾರೆ. ನಾವು ಅದನ್ನು ಭವಿಷ್ಯಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದೇವೆ ಎಂದು ನೂರ್ ಶ್ರೀಧರ್ ಹೇಳಿದ್ದಾರೆ.

ಸನಾತನ ಕಾಲಕ್ಕೆ ದೇಶದ ಜನರನ್ನು ಎಳೆದುಕೊಂಡು ಹೋಗಲು ಪ್ರಯತ್ನಿಸುತ್ತಿರುವ ಶಕ್ತಿಗಳು ಗೌರಿಯನ್ನು ಹತ್ಯೆ ಮಾಡಿದ್ದಾರೆ. ನಾವು ಭವಿಷ್ಯಕ್ಕೆ ತೆಗೆದುಕೊಂಡು ಹೋಗಲೇಬೇಕೆಂಬ ಪಣ ತೊಟ್ಟಿದ್ದೇವೆ. ಇದು ಸ್ಪ್ರಿಂಗ್ ಇದ್ದ ಹಾಗೆ. ಅವರು ಹಿಂದಕ್ಕೆ ಎಳೆಯಲು ತೀವ್ರ ಪ್ರಯತ್ನ ಪಡುತ್ತಿದ್ದಾರೆ. ಆದರೆ ಎಷ್ಟೆ ಹಿಂದಕ್ಕೆಳೆದರೂ ಅದಕ್ಕೊಂದು ಮಿತಿಯಿದೆ ಮತ್ತು ಹಿಂದಕ್ಕೆ ಎಳೆದಷ್ಟು ಬಿಟ್ಟಾಗ ಬಹಳ ಮುಂದಕ್ಕೆ ಅದು ಚಲಿಸುತ್ತದೆ ಎಂಬುದನ್ನು ನಾವು ಮರೆಯಬಾರದು ಎಂದವರು ಹೇಳಿದರು.

ಬುದ್ಧ, ಬಸವಣ್ಣ, ಏಸು, ಗಾಂಧಿ ಮತ್ತು ಅಂಬೇಡ್ಕರ್ ಇವರೆಲ್ಲರೂ ವರ್ತಮಾನವಾಗಿದ್ದು, ನಮ್ಮ ಜೊತೆ ಭವಿಷ್ಯಕ್ಕೆ ಮುನ್ನಡೆಯುತ್ತಾರೆ. ಗೌರಿ ಇಂದು ನಮ್ಮ ಜೊತೆ ಮಾತ್ರವಲ್ಲ ಜಗತ್ತಿನಾದ್ಯಂತ ಇದ್ದಾರೆ. ಅವರ ಹತ್ಯೆಯಾಗಿ ಒಂದು ವರ್ಷವಾದರೂ ಜೀವಂತವಾಗಿದ್ದಾರೆ. ನಮಗೆ ಪ್ರೇರಣೆಯಾಗಿದ್ದಾರೆ, ಪಾಠವಾಗಿದ್ದರೆ ಮತ್ತು ಪಥವಾಗಿದ್ದಾರೆ. ‘ಇಲ್ಲಿ ಬಿತ್ತಿಹ ಬೀಜ, ಜಗದೆಲ್ಲೆಡೆ ಚಿಗುರಿದೆ ನೋಡ’ ಎಂಬ ಈ ವಾಕ್ಯ ನೂರಕ್ಕೆ 200ರಷ್ಟು ಸತ್ಯ. ಜಗತ್ತಿನಾದ್ಯಂತ ಎಲ್ಲರ ಗುಂಡಿಗೆಗಳಲ್ಲಿ ಗೌರಿ ಜೀವಂತವಾಗಿದ್ದಾರೆ. ಪಂಜಾಬ್‍ನಲ್ಲಿ ಕಳೆದ ಒಂದು ವರ್ಷದಿಂದ ಗೌರಿ ಕುರಿತು ಹಲವು ಸಂಘಟನೆಗಳು ಒಟ್ಟುಗೂಡಿ 37 ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಇಂದು ಕೂಡ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದು ಗೌರಿ ನಮಗೆ ಪ್ರೇರಣೆ ಎನ್ನಲು ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಶ್ರೀಧರ್ ಹೇಳಿದರು.

ಗೌರಿ ಯಾಕೆ ಬಿಜೆಪಿಯನ್ನು ಇಷ್ಟು ಟೀಕಿಸುತ್ತಿದ್ದಾರೆ ಎಂದು ಕೆಲವರು ಪ್ರಶ್ನಿಸುತ್ತಿದ್ದರು. ಟೀಕಿಸುವ ಮೂಲಕ ಗೌರಿ ನಮಗೊಂದು ಪಾಠ ಹೇಳುತ್ತಿದ್ದರು. ವಿನಾಶ ಕಾಲ ಹತ್ತಿರದಲ್ಲಿದೆ. ಫ್ಯಾಸಿಸಂ ಬಂದಿದೆ ಎಂದು ಎಚ್ಚರಿಸುತ್ತಿದ್ದರು. ಆದರೆ ನಾವು ಸಿದ್ಧಾಂತಗಳು, ಫ್ಯಾಸಿಸಂ ಬಂದಿದೆಯೋ ಇಲ್ಲವೋ ಎಂಬ ಚರ್ಚೆಯಲ್ಲಿ ಮುಳುಗಿದ್ದೆವು. ಗೌರಿ ಹತ್ಯೆ ಫ್ಯಾಸಿಸಂ ಬಂದಿರುವ ಲ್ಯಾಂಡ್‍ಮಾರ್ಕ್ ಆಗಿದೆ. ಇದಕ್ಕೆ ಬಂದ ಪ್ರತಿಕ್ರಿಯೆಯೂ ಕೂಡ ಅದನ್ನೇ ತೋರಿಸುತ್ತದೆ. ಲಕ್ಷಾಂತರ ಜನ ಪ್ರತಿರೋಧಿಸಿದರೂ ಕೂಡ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಹತ್ಯೆ ಮಾಡಿದವರು ಯಾರು ಎಂದು ಗೊತ್ತಿದ್ದರೂ ಅದನ್ನು ಭಯೋತ್ಪಾದಕ ಸಂಘಟನೆಯೆಂದು ಘೋಷಿಸಲು ತಾಕತ್ತಿಲ್ಲ. ಗೌರಿಯ ಹತ್ಯೆಯನ್ನು ಸಂಭ್ರಮಿಸುತ್ತಿರುವುದು ಈ ನಾಡಿನ ದುರಂತ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News