ಸಿದ್ಧಾಂತ ದಿವಾಳಿಯಾಗಿ ಗುಂಡು ಬಂದೂಕುಗಳ ಮೂಲಕ ಪ್ರತಿರೋಧ ಒಡ್ಡುತ್ತಿರುವ ಆರೆಸ್ಸೆಸ್: ದಿನೇಶ್ ಅಮೀನ್‌ ಮಟ್ಟು

Update: 2018-09-05 16:34 GMT

ಬೆಂಗಳೂರು, ಸೆ.5: ಆರೆಸ್ಸೆಸ್ ಹಾಗೂ ಬಿಜೆಪಿ ಸಿದ್ಧಾಂತವು ದಿವಾಳಿ ಎದ್ದಿದೆ. ಹೀಗಾಗಿ ಅವರು ತಮ್ಮ ಸಿದ್ಧಾಂತಗಳ ಕುರಿತು ಚರ್ಚೆಗಳ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವಾಗದೆ, ಗುಂಡು ಬಂದೂಕುಗಳ ಮೂಲಕ ಪ್ರತಿರೋಧ ಒಡ್ಡುತ್ತಿದ್ದಾರೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಿಸಿದರು.

ಬುಧವಾರ ಗೌರಿ ಲಂಕೇಶ್ ಬಳಗ ಹಾಗೂ ಗೌರಿ ಮೆಮೋರಿಯಲ್ ಟ್ರಸ್ಟ್ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗೌರಿ ದಿನದ ಅಂಗವಾಗಿ ಆಯೋಜಿಸಿದ್ದ ಅಭಿವ್ಯಕ್ತಿ ಸ್ವಾತಂತ್ರ ಸಮಾವೇಶದ ‘ಕಗ್ಗತ್ತಲ ಕಾಲದ ಕೋಲ್ಮಿಂಚುಗಳು’ ಗೋಷ್ಟಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಆರೆಸ್ಸೆಸ್‌ಗೆ ಮುಂದಿನ 7ವರ್ಷಕ್ಕೆ 100ವರ್ಷ ತುಂಬಲಿವೆ. ಇಷ್ಟು ಸುದೀರ್ಘ ಅವಧಿಯಲ್ಲಿ ಸಂಘಪರಿವಾರಕ್ಕೆ ಒಬ್ಬ ಚಿಂತಕ, ಬುದ್ಧಿಜೀವಿಯನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ. ಹೀಗಾಗಿ ಪ್ರಗತಿಪರ ಸಿದ್ಧಾಂತದೊಂದಿಗೆ ಚರ್ಚೆಯ ಮೂಲಕ ಮುಖಾಮುಖಿಯಾಗಲು ಸಾಧ್ಯವಾಗದೆ, ಹಲ್ಲೆ, ಬಂದೂಕಗಳ ಮೂಲಕ ಪ್ರತಿರೋಧ ಒಡ್ಡಲು ಮುಂದಾಗಿದೆ ಎಂದು ಅವರು ಹೇಳಿದರು.

ನನ್ನ ಪ್ರಕಾರ ಪೊಲೀಸರು ಗಾಂಧಿಯ ನಂತರ ಗೌರಿ ಹತ್ಯೆಯ ವಿಚಾರದಲ್ಲಿ ಇಷ್ಟೊಂದು ಚಾಕಚಕ್ಯತೆಯಿಂದ ವೃತ್ತಿಪರತೆಯಿಂದ ಕೆಲಸ ಮಾಡಿದ್ದಾರೆ. ಇದರಿಂದ ದಾಭೋಲ್ಕರ್, ಪನ್ಸಾರೆ ಮತ್ತು ಕಲಬುರ್ಗಿ ಹತ್ಯೆಯ ವಿವರಗಳು ಬಯಲಾಗುತ್ತಿವೆ. ಗೌರಿ ಹತ್ಯೆಯ ತನಿಖೆ ತಾರ್ಕಿಕ ಅಂತ್ಯ ಕಾಣುತ್ತಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ಹಿರಿಯ ನಟ ಪ್ರಕಾಶ್ ರೈ ಮಾತನಾಡಿ, ಗೌರಿ ಹತ್ಯೆಗೆ ಯಾರು ಕಾರಣರೆಂದು ನಾವು ಪ್ರಾರಂಭದಲ್ಲಿ ಹೇಳಿದ್ದೆವು. ಅದನ್ನೆ ಪೊಲೀಸ್ ತನಿಖೆಗಳು ಹೇಳುತ್ತಿವೆ. ಪೊಲೀಸರ ಈ ಸಾಕ್ಷಾಧಾರಗಳನ್ನು ಪಡೆದುಕೊಂಡು ಮೂಲಭೂತವಾದಿಗಳ ಮನುಷ್ಯವಿರೋಧಿ ತನವನ್ನು ಜನತೆಗೆ ತಲುಪಿಸುವಂತಹ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ಹಿಂದುತ್ವ ವಾದಿಗಳು ದೇಶದ ಸಾಮಾನ್ಯ ಹಿಂದುಗಳನ್ನು ಕುರಿಗಳ ರೀತಿ ಭಾವಿಸಿ, ತಮಗೆ ಹೇಗೆ ಬೇಕೋ ಹಾಗೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿವೆ. ಇದು ತುಂಬಾ ಅಪಾಯಕಾರಿಯಾದದ್ದು. ಹೀಗಾಗಿ ಕೇಂದ್ರ ಸರಕಾರಕ್ಕೆ ನಾವು ಅಂಜದೆ ಗೌರಿ, ಕಲಬುರ್ಗಿ, ಪನ್ಸಾರೆ, ದಾಭೋಲ್ಕರ್ ಮಾರ್ಗದಲ್ಲಿ ಸಾಗಬೇಕಿದೆ ಎಂದು ಅವರು ಆಶಿಸಿದರು.

ಪ್ರಗತಿಪರರನ್ನು ಅರ್ಬನ್ ನಕ್ಸಲ್, ಹಿಂದೂ ವಿರೋಧಿ ಎಂದು ಸುಳ್ಳು ಹಬ್ಬಿಸುತ್ತಿದ್ದಾರೆ. ಇದನ್ನು ತುಂಬಾ ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಇಂತಹ ಸಂದಭರ್ದಲ್ಲಿ ನಾವು ಜೋಪಾನವಾಗಿ ಮಾತಾಡುವ ಮೂಲಕ ಜನತೆಗೆ ನಿಜವಾದ ಸತ್ಯವನ್ನು ತಿಳಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಿ ಹೋರಾಟ ಮಾಡೋಣವೆಂದು ಅವರು ಹೇಳಿದರು.

ಪ್ರಗತಿಪರ ಚಿಂತಕ ನರೇಂದ್ರ ನಾಯಕ್ ಮಾತನಾಡಿ, ಕೋಮುವಾದಿ ಶಕ್ತಿಗಳು ನಮ್ಮ ಹತ್ಯೆಗೆ ಹಿಟ್‌ ಲಿಸ್ಟ್‌ಗಳನ್ನು ತಯಾರಿಸುತ್ತಲೆ ಇರಲಿ. ನಮ್ಮ ಕೆಲಸವನ್ನು ನಾವು ಮಾಡುತ್ತಲೆ ಹೋಗೋಣ, ಯಾವುದೆ ಕಾರಣಕ್ಕೂ ಕೋಮುವಾದಿ ಶಕ್ತಿಗಳಿಗೆ ಹೆದರಿ ಮಾತನಾಡುವುದನ್ನು ನಿಲ್ಲಿಸದಿರೋಣ ಎಂದು ತಿಳಿಸಿದರು.

ದಕ್ಷಿಣ ಕನ್ನಡದಲ್ಲಿ ಸ್ಥಾಪಿತ ಹಿತಾಸಕ್ತಿಗಳ ವಿರುದ್ಧದ ನಮ್ಮ ಹೋರಾಟಕ್ಕೆ ಹಿರಿಯ ಪತ್ರಕರ್ತ ಪಿ.ಲಂಕೇಶ್ ಬೆನ್ನಿಗಿದ್ದರು. ಅವರ ನಂತರದಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ನಮಗೆ ಸಾಕಷ್ಟು ಸಹಕಾರ ನೀಡಿದ್ದಾರೆ. ಗೌರಿ ಲಂಕೇಶ್ ಮೂಲಭೂತವಾದಿಗಳ ಬಗ್ಗೆ ನನಗೆ ಸದಾ ಎಚ್ಚರಿಸುತ್ತಿದ್ದರು. ಆದರೆ, ಅವರೆ ಕೋಮುವಾದಿ ಶಕ್ತಿಗಳಿಂದ ಬಲಿಯಾಗಬೇಕಾಯಿತು ಎಂದು ವಿಷಾದಿಸಿದರು.

ವಿಮರ್ಶಕಿ ಎಂ.ಎಸ್.ಆಶಾದೇವಿ ಮಾತನಾಡಿ, ಹಿರಿಯ ಪತ್ರಕರ್ತ ಪಿ.ಲಂಕೇಶ್ ತಮ್ಮ ಚಿಂತನೆಗಳನ್ನು ಕತೆ, ಸಿನೆಮಾ ಮೂಲಕ ಪ್ರತಿಪಾದಿಸಿದರೆ, ಗೌರಿ ಲಂಕೇಶ್ ಹೋರಾಟದ ಮೂಲಕ ಪ್ರತಿಪಾದಿಸಿದವಳು. ಆದರೂ, ಎಲ್ಲ ಸಿದ್ಧಾಂತಗಳನ್ನು ಮೀರಿ ಪ್ರೀತಿಗಾಗಿ ಹಂಬಲಿಸಿದ ಅಪರೂಪದ ಪತ್ರಕರ್ತೆಯಾಗಿದ್ದಳು ಎಂದು ಸ್ಮರಿಸಿದರು.

ಸಮಾರೋಪ ಸಮಾರಂಭದ ಆಶಯ ನುಡಿಗಳನ್ನಾಡಿದ ಗೌರಿ ಬಳಗದ ಸಂಚಾಲಕ ಕೆ.ಎಲ್.ಅಶೋಕ್, ಆಗಸ್ಟ್ 30ಕ್ಕೆ ಕಲಬುರ್ಗಿ ಹತ್ಯೆಯಾಗಿ 3 ವರ್ಷ, ಗೌರಿ ಲಂಕೇಶ್ ಹತ್ಯೆಯಾಗಿ ಇಂದಿಗೆ ಒಂದು ವರ್ಷ. ಹೀಗಾಗಿ ನಮ್ಮ ಹೋರಾಟವನ್ನು ಪ್ರತಿರೋಧ ಸಪ್ತಾಹ ಎಂದು ಕರೆದಿದ್ದೇವೆ. ಕೋಮುವಾದಿ ವಿರುದ್ಧ ನಾವೆಲ್ಲಾ ಒಂದಾಗಿ ಐಕ್ಯತೆ ಸಾಧಿಸುತ್ತೇವೆ ಎಂದು ಸಾರಿ ಹೇಳಲು ನಾವೆಲ್ಲಾ ಸೇರಿದ್ದೇವೆ ಎಂದು ತಿಳಿಸಿದರು.

2019ಕ್ಕೆ ಮತ್ತೆ ಇದೇ ಸರ್ವಾಧಿಕಾರಿಗಳು ಅಧಿಕಾರದ ಚುಕ್ಕಾಣಿ ಹಿಡಿದರೆ ನಮಗೆ ಮತ್ತಷ್ಟು ಕಷ್ಟವಾಗುತ್ತದೆ. ಹಾಗಾಗಿ ಹೊಸ ರೀತಿಯಲ್ಲಿ ಯುವಪಡೆಯನ್ನು ಸಂಘಟಿಸಿ ವೈವಿಧ್ಯಮಯ ಹೋರಾಟಗಳನ್ನು ನಾವು ಕಟ್ಟಬೇಕಿದೆ. ಹಾಗಾಗಿ ಅದರ ತಯಾರಿಯಾಗಿ ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಎಲ್ಲ ರಾಜ್ಯದ ಸಂಗಾತಿಗಳು ಐಕ್ಯತೆಯನ್ನು ಸಾರಲಿಕ್ಕೆ ಒಂದೆಡೆ ಸೇರಿದ್ದೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News