ನಟ ಯಶ್ ಬಾಡಿಗೆ ಮನೆ ವಿವಾದ: ಸೆಷನ್ಸ್ ಕೋರ್ಟ್ ಆದೇಶ ಎತ್ತಿ ಹಿಡಿದ ಹೈಕೋರ್ಟ್

Update: 2018-09-05 16:30 GMT

ಬೆಂಗಳೂರು, ಸೆ.5: ಚಿತ್ರನಟ ಯಶ್ ವಾಸ ಮಾಡುತ್ತಿರುವ ಬಾಡಿಗೆ ಮನೆ ವಿವಾದಕ್ಕೆ ಸಂಬಂಧಿಸಿದಂತೆ ಸೆಷನ್ಸ್ ಕೋರ್ಟ್ ನೀಡಿರುವ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಸೆಷನ್ಸ್ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಯಶ್ ತಾಯಿ ಎ.ಪುಷ್ಪಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಹಾಗೂ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್‌ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ಕೂಡಲೇ ಮನೆಯ ಮಾಲಕರಿಗೆ ಬಾಡಿಗೆದಾರರಾದ ಯಶ್ ಕುಟುಂಬದವರು 23 ಲಕ್ಷ 27 ಸಾವಿರ ರೂ.ಬಾಕಿ ಉಳಿಸಿಕೊಂಡಿರುವ ಹಣವನ್ನು ನೀಡಿ, ಮಾರ್ಚ್ 31ರವರೆಗೆ ಮುಂದುವರೆಯಬಹುದು. ಇಲ್ಲವಾದರೆ ಡಿಸೆಂಬರ್‌ನಲ್ಲಿ ಮನೆ ಖಾಲಿ ಮಾಡಿ ಎಂದು ಆದೇಶಿಸಿದೆ.

ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ಮುನಿಪ್ರಸಾದ್ ಹಾಗೂ ಡಾ.ವನಜಾ ಎಂಬುವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ಯಶ್ ಕುಟುಂಬ ವಾಸವಾಗಿದೆ. ಬಾಡಿಗೆ ಹಣಕ್ಕೆ ಸಂಬಂಧಿಸಿದಂತೆ ಮನೆ ಮಾಲಕ ಹಾಗೂ ಯಶ್ ನಡುವೆ ಮನಸ್ತಾಪವಾಗಿತ್ತು. ಈ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಅದೃಷ್ಟದ ಮನೆ ಎಂಬ ಕಾರಣಕ್ಕೆ ಯಶ್ ಮನೆ ಖಾಲಿ ಮಾಡಲು ನಿರಾಕರಿಸಿದ್ದರು. ಇದೆ ಮನೆಯಲ್ಲಿದ್ದಾಗ ಯಶ್ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದರು.

ಅರ್ಜಿದಾರರ ಪರ ವಾದಿಸಿದ ವಕೀಲರು, ಯಶ್ ಕುಟುಂಬದವರು ಈಗಾಗಲೇ ಮನೆಯನ್ನು ನವೀಕರಣ ಮಾಡಲು 12 ಲಕ್ಷ ರೂ.ಹಣವನ್ನು ನೀಡಿದ್ದಾರೆ. ಆದರೆ, ಮನೆಯ ಮಾಲಕರು ಆ ಹಣದ ಬಗ್ಗೆ ಏನು ಹೇಳದೆ ಬಾಕಿ ಉಳಿಸಿಕೊಂಡಿರುವ ಹಣವನ್ನು ನೀಡಿ ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ಪೀಠಕ್ಕೆ ವಿವರಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಯಶ್ ಕುಟುಂಬಕ್ಕೆ 23 ಲಕ್ಷ 27 ಸಾವಿರ ರೂ.ಹಣ ನೀಡಲು ಆದೇಶಿಸಿ ಅರ್ಜಿಯನ್ನು ವಜಾಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News