ನರೇಂದ್ರ ಮೋದಿ ಪ್ರಧಾನಿಯಾಗಿದ್ದರಿಂದ ಹಿಂದೂಗಳು ಕಷ್ಟದಲ್ಲಿದ್ದಾರೆ: ಕನ್ಹಯ್ಯಾ ಕುಮಾರ್

Update: 2018-09-05 16:57 GMT

ಬೆಂಗಳೂರು, ಸೆ.5: ನಮ್ಮ ಸಂಸ್ಕೃತಿ, ದೇಶದ ಇತಿಹಾಸ, ಸಂವಿಧಾನದ ಮೂಲ ಆಶಯಗಳೊಂದಿಗೆ ಆರೆಸೆಸ್ಸ್, ಬಿಜೆಪಿಯವರು ಚೆಲ್ಲಾಟವಾಡುತ್ತಿದ್ದಾರೆ. ನೀವು ಎಷ್ಟೇ ದೊಡ್ಡ ಕ್ರೀಡಾಪಟುಗಳಾದರೂ, ಈ ದೇಶದ ಜನತೆ ಅಂಪೈರ್ ರೀತಿಯಲ್ಲಿ ನಿಮ್ಮ ಆಟವನ್ನು ಗಂಭೀರವಾಗಿ ನೋಡುತ್ತಿದ್ದಾರೆ ಎಂಬುದನ್ನು ಮರೆಯಬೇಡಿ ಎಂದು ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಎಚ್ಚರಿಕೆ ನೀಡಿದರು.

ಬುಧವಾರ ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗೌರಿ ಲಂಕೇಶ್ ಬಳಗ ಮತ್ತು ಗೌರಿ ಸ್ಮಾರಕ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಅಭಿವ್ಯಕ್ತಿ ಸ್ವಾತಂತ್ರ ಸಮಾವೇಶದ ಸಮಾರೋಪ ಸಮಾರಂಭ ‘ಪ್ರತಿರೋಧ ಭಾರತ’ದಲ್ಲಿ ಅವರು ಮಾತನಾಡಿದರು. ಹೊಸದಿಲ್ಲಿಯ ಜಂತರ್‌ ಮಂತರ್ ಬಳಿ ಹಾಡುಹಗಲೇ ದೇಶದ ಸಂವಿಧಾನದ ಪ್ರತಿಯನ್ನು ಸುಟ್ಟು, ಬಾಬಾಸಾಹೇಬ್ ಅಂಬೇಡ್ಕರ್ ವಿರುದ್ಧ ಘೋಷಣೆಗಳನ್ನು ಕೂಗಲಾಗುತ್ತಿದೆ. ಕಳೆದ ನಾಲ್ಕೂವರೆ ವರ್ಷಗಳಿಂದ ಈ ದೇಶದ ಒಳಗೆ ಸಂವಿಧಾನ ಅಪಾಯವನ್ನು ಎದುರಿಸುತ್ತಿದೆ ಎಂದು ಅವರು ಹೇಳಿದರು.

ಗೌರಿ ಲಂಕೇಶ್ ಹತ್ಯೆಯಾಗಿ ಇಂದಿಗೆ ಒಂದು ವರ್ಷವಾಗಿದೆ. ಕೆಲವೇ ದಿನಗಳ ಹಿಂದೆ ನನ್ನ ಸ್ನೇಹಿತ ಉಮರ್ ಖಾಲಿದ್ ಮೇಲೆ ಗುಂಡಿನ ದಾಳಿ ನಡೆಯಿತು. ನಮಗೆ ವಿಜ್ಞಾನದ ಮೇಲೆ ನಂಬಿಕೆಯಿದೆ. ಅವರು ನಮ್ಮನ್ನು ಎಷ್ಟು ಪ್ರಮಾಣದಲ್ಲಿ ತುಳಿಯಲು ಪ್ರಯತ್ನ ಪಡುತ್ತಾರೋ ನಾವು ಅಷ್ಟೇ ವೇಗವಾಗಿ ಪುಟಿದೆದ್ದು ಮೇಲೆ ಏಳುತ್ತೇವೆ ಎಂದು ಕನ್ಹಯ್ಯಾ ಕುಮಾರ್ ತಿಳಿಸಿದರು.

ನೀವು ನಮ್ಮ ಮೇಲೆ ಗುಂಡಿನ ದಾಳಿ ಮಾಡಿಸಿ, ಜೈಲಿಗೆ ಹಾಕಿ, ನಗರ ನಕ್ಸಲರು, ದೇಶದ್ರೋಹಿ, ಹಿಂದೂ ವಿರೋಧಿ ಎಂದು ಕರೆದರೂ ನಾವು ನಮ್ಮ ಗುರಿಯಿಂದ ವಿಮುಖರಾಗುವುದಿಲ್ಲ. ಹಿಂದೂಗಳ ಆಡಳಿತವನ್ನು ತಂದಿದ್ದೇವೆ ಎನ್ನುವವರು ದೇಶದ ನಿರುದ್ಯೋಗ, ರೈತರು, ಕಾರ್ಮಿಕರು, ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರ ಬಗ್ಗೆ ಮಾತನಾಡಿದರೆ, ಹಿಂದೂಗಳು ಸಂಕಷ್ಟದಲ್ಲಿದ್ದಾರೆ ಎನ್ನುತ್ತಾರೆ. ದೇಶದ ಜನತೆಗೆ ನೀವು ಅರ್ಧ ಸತ್ಯ ಮಾತ್ರ ಹೇಳುತ್ತಿದ್ದೀರ. ಹಿಂದೂಗಳು ಕಷ್ಟದಲ್ಲಿರುವುದು ನರೇಂದ್ರಮೋದಿ ಈ ದೇಶದ ಪ್ರಧಾನಿಯಾಗಿರುವುದರಿಂದ ಎಂದು ಅವರು ಟೀಕಿಸಿದರು.

ನಕ್ಸಲ್‌ ವಾದದ ಹೆಸರಿನಲ್ಲಿ ಜನಸಾಮಾನ್ಯರನ್ನು ಅವರ ನೈಜ ಸಮಸ್ಯೆಗಳಿಂದ ವಿಮುಖಗೊಳಿಸಲಾಗುತ್ತಿದೆ. ಸಂವಿಧಾನ ವಿರೋಧಿಯಾದ ಯಾವ ಕ್ರಮಗಳನ್ನೂ ನಾವು ಬೆಂಬಲಿಸುವುದಿಲ್ಲ ಎಂದು ಅವರು ಹೇಳಿದರೂ, ನಗರ ನಕ್ಸಲ್, ದೇಶದ್ರೋಹಿ ಎಂದು ಹೇಳಿ ಲೇಖಕರನ್ನು ಜೈಲಿಗೆ ಹಾಕಲಾಗಿದೆ. ಅವರ ಪ್ರಶ್ನೆಗಳಿಗೆ ಕೇಂದ್ರ ಸರಕಾರದ ಬಳಿ ಉತ್ತರವಿಲ್ಲ. ನರೇಂದ್ರಮೋದಿ ಪ್ರಧಾನಿಯಾದಾಗಿನಿಂದಲೂ 12 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ರೈತರಿಗೆ ವಿಮೆ ನೀಡುವ ಕಂಪೆನಿಗಳು 10 ಸಾವಿರ ಕೋಟಿ ರೂ.ಲಾಭ ಮಾಡಿಕೊಂಡಿವೆ ಎಂದು ಅವರು ಆರೋಪಿಸಿದರು.

ಬಿಹಾರದ ಮುಝಫ್ಫರ್‌ಪುರ್‌ನಲ್ಲಿ 35 ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವಾಯಿತು. ಅವರಲ್ಲಿ ಹಿಂದೂಗಳಿರಲಿಲ್ಲವೇ? ಇಂಜಿನಿಯರಿಂಗ್ ಪದವಿ ಕೈಯಲ್ಲಿ ಹಿಡಿದುಕೊಂಡು ಉದ್ಯೋಗಕ್ಕಾಗಿ ಅಲೆದಾಡುವ ಯುವಕರಲ್ಲಿ ಹಿಂದೂಗಳಿಲ್ಲವೇ? ಹಿಂದೂ ಧರ್ಮದ ಹೆಸರಿನಲ್ಲಿ ನಮ್ಮ ಕಣ್ಣಿಗೆ ಮಣ್ಣೆರೆಚಿ, ಅಂಬಾನಿ, ಅದಾನಿಯ ಕೆಲಸಗಳನ್ನು ಮಾಡಿಕೊಡಲಾಗುತ್ತಿದೆ ಎಂದು ಕನ್ಹಯ್ಯ ಕುಮಾರ್ ದೂರಿದರು.

ಕೇಸರಿಬಣ್ಣವು ಧೈರ್ಯದ ಪ್ರತೀಕ. ಬಸವಣ್ಣ, ಸಂಭಾಜಿ ಮಹಾರಾಜ್, ಸಾಹು ಮಹಾರಾಜ್, ಬುದ್ಧನ ಉಡುಪು, ಸ್ವಾಮಿ ಅಗ್ನಿವೇಶ್ ಧರಿಸುವ ಬಟ್ಟೆಗಳ ಬಣ್ಣವು ಕೇಸರಿ. ಆದರೆ, ನೀವು ಕೇಸರಿ ವಸ್ತ್ರ ಧರಿಸಿಕೊಂಡು ಗುಂಪುಗಳಲ್ಲಿ ಹೋಗಿ ಅಮಾಯಕ ಮುಸ್ಲಿಮರ ಹತ್ಯೆ ಮಾಡುತ್ತಿದ್ದೀರ. ಇದು ಧೈರ್ಯದ ಕೆಲಸವಲ್ಲ, ಹೇಡಿತನದ ಕೆಲಸ ಎಂದು ಅವರು ಕಿಡಿಗಾರಿದರು.

ರಾವಣ ಸೀತೆಯನ್ನು ಅಪಹರಿಸಲು ಕೇಸರಿ ವಸ್ತ್ರವನ್ನೆ ತೊಟ್ಟು ಬಂದಿದ್ದನು. ಕೇಸರಿ ವಸ್ತ್ರ ತೊಡುವವರು ಎಲ್ಲರೂ ರಾಮನ ಭಕ್ತರಾಗಿರುವುದಿಲ್ಲ. ಅವರಲ್ಲಿ ನಾಥೂರಾಮನ ಭಕ್ತರೂ ಇರುತ್ತಾರೆ ಎಂಬುದನ್ನು ಮರೆಯಬಾರದು. ಯೋಗಿ ಆದಿತ್ಯನಾಥನ ಕೇಸರಿ ಬೇಕೋ, ಸ್ವಾಮಿ ಅಗ್ನಿವೇಶರ ಕೇಸರಿ ಬೇಕೋ ಎಂಬುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಗುಜರಾತಿನ ಶಾಸಕ, ದಲಿತ ಯುವ ನಾಯಕ ಜಿಗ್ನೇಶ್ ಮೇವಾನಿ ಮಾತನಾಡಿ, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ವಿಚಾರವಾದಿಗಳನ್ನು ಅರ್ಬನ್ ನಕ್ಸ್‌ಲೈಟ್ ಎಂದು ಹೇಳಿ ಜೈಲಿಗಟ್ಟುತ್ತಿದೆ. ಹೀಗಾಗಿ, ಬಿಜೆಪಿಯನ್ನು ಸೋಲಿಸಲು ನಾನು ಹೋರಾಟ ಮಾಡುತ್ತೇನೆ ಎಂದರು.

ರಾಜ್ಯದ ವಿಧಾನಸಭಾ ಚುನಾವಣೆಗಳು ನಡೆದಾಗ ಕಾಂಗ್ರೆಸ್, ಜೆಡಿಎಸ್ ಮುಖಂಡರ ಮೇಲೆ ಒಂದೇ ಒಂದು ಎಫ್‌ಐಆರ್ ದಾಖಲಾಗಿಲ್ಲ. ಆದರೆ, ನನ್ನ ವಿರುದ್ಧ ಮೂರು ಎಫ್‌ಐಆರ್ ದಾಖಲಿಸಿದ್ದಾರೆ. ಈ ಮೂಲಕ ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗಿದೆ. ಇಲ್ಲಿ ನೆರೆದಿರುವವರು ಬಿಜೆಪಿಯನ್ನು ಸೋಲಿಸಲು ರಾಜಸ್ಥಾನ, ಛತ್ತೀಸ್‌ಗಡ, ಮಧ್ಯಪ್ರದೇಶಕ್ಕೂ ತೆರಳಿ ಹೋರಾಟ ಮಾಡಲು ಮುಂದಾಗಬೇಕಿದೆ ಎಂದು ಅವರು ಕರೆ ನೀಡಿದರು.

ಮಹಾರಾಷ್ಟ್ರದಲ್ಲಿ ದಾಭೋಲ್ಕರ್ ಹತ್ಯೆಯಾಗಿ ಐದು ವರ್ಷ ಆಗಿತ್ತು. ಗೌರಿ ಲಂಕೇಶ್ ಹತ್ಯೆಯಲ್ಲಿ ಸನಾತನ ಸಂಸ್ಥೆಯ ಸದಸ್ಯರ ಕೈವಾಡವಿರುವುದನ್ನು ಕರ್ನಾಟಕ ಎಸ್‌ಐಟಿ ಪತ್ತೆ ಹಚ್ಚಿದ ಕೂಡಲೆ, ತರಾತುರಿಯಲ್ಲಿ ಮಹಾರಾಷ್ಟ್ರ ಪೊಲೀಸರು ಸನಾತನ ಸಂಸ್ಥೆಯ ಸದಸ್ಯರನ್ನು ಬಂಧಿಸಿದರು. ಒಂದು ವೇಳೆ ಕರ್ನಾಟಕ ಪೊಲೀಸರು ಅವರನ್ನು ಬಂಧಿಸಿ, ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರೆ, ಇಲ್ಲಿ ನರೇಂದ್ರಮೋದಿ ಹಾಗೂ ಅಮಿತ್ ಶಾ ಆಟ ನಡೆಯುತ್ತಿರಲಿಲ್ಲ.
-ಕನ್ಹಯ್ಯ ಕುಮಾರ್, ವಿದ್ಯಾರ್ಥಿ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News