2019ರ ಲೋಕಸಭಾ ಚುನಾವಣೆ ಸಂವಿಧಾನ-ಮನುಸ್ಮೃತಿ ನಡುವಿನ ಹೋರಾಟ: ಉಮರ್ ಖಾಲಿದ್

Update: 2018-09-05 19:43 GMT

ಬೆಂಗಳೂರು, ಸೆ.5: 2019ರ ಲೋಕಸಭಾ ಚುನಾವಣೆಯನ್ನು ಬಿಜೆಪಿಯವರು ಹಿಂದೂ-ಮುಸ್ಲಿಮ್, ರಾಹುಲ್-ಮೋದಿ ನಡುವಿನ ಚುನಾವಣೆಯನ್ನಾಗಿ ಬಿಂಬಿಸಲು ಪ್ರಯತ್ನ ಪಡುತ್ತಾರೆ. ಆದರೆ, ವಾಸ್ತವವಾಗಿ ಈ ಚುನಾವಣೆಯು ಸತ್ಯ-ಸುಳ್ಳು, ನ್ಯಾಯ-ಅನ್ಯಾಯ, ಸಂವಿಧಾನ-ಮನುಸ್ಮೃತಿ ನಡುವಿನ ಹೋರಾಟವಾಗಿದೆ ಎಂದು ಜೆಎನ್‌ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಹೇಳಿದರು.

ಬುಧವಾರ ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗೌರಿ ಲಂಕೇಶ್ ಬಳಗ ಮತ್ತು ಗೌರಿ ಸ್ಮಾರಕ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಅಭಿವ್ಯಕ್ತಿ ಸ್ವಾತಂತ್ರ ಸಮಾವೇಶದ ‘ಕಗ್ಗತ್ತಲ ಕಾಲದ ಕೋಲ್ಮಿಂಚುಗಳು’ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನನಗೆ ನಂಬಿಕೆಯಿದೆ ದೇಶದ ಜನ ಈ ಚುನಾವಣೆಯಲ್ಲಿ ಸತ್ಯ, ನ್ಯಾಯ, ಸಂವಿಧಾನವನ್ನು ಗೆಲ್ಲಿಸುತ್ತಾರೆ. ನಮ್ಮ ಹೋರಾಟವು ನರೇಂದ್ರಮೋದಿ ಹಾಗೂ ಬಿಜೆಪಿಯ ವಿರುದ್ಧವಿಲ್ಲ. ಮಾನವತಾ ವಿರೋಧಿ ಮನುವಾದಿ ಸಂಘಟನೆಯ ವಿರುದ್ಧ ಎಂದು ಉಮರ್‌ ಖಾಲಿದ್ ಹೇಳಿದರು.

ಗೌರಿ ಲಂಕೇಶ್ ಹತ್ಯೆಗೆ ಮುನ್ನ ಅವರನ್ನು ಹಿಂದೂ ವಿರೋಧಿ ಎಂದು ಬಿಂಬಿಸಲಾಯಿತು. ಕಳೆದ ಎರಡೂವರೆ ವರ್ಷಗಳಿಂದ ನನ್ನನ್ನು ದೇಶದ್ರೋಹಿ ಎಂದು ಬಿಂಬಿಸಲಾಗುತ್ತಿದೆ. ದೇಶದ ಯಾವುದೇ ನ್ಯಾಯಾಲಯದಲ್ಲಿ ನನ್ನ ವಿರುದ್ಧ ಮಾಡಿರುವ ಆರೋಪವನ್ನು ಸಾಬೀತು ಮಾಡಿ ತೋರಿಸಿ ಎಂದು ಸವಾಲು ಹಾಕಿದ ಅವರು, ನಾನು ಎಂದಿಗೂ ದೇಶದ್ರೋಹಿ ಘೋಷಣೆಗಳನ್ನು ಕೂಗಿಲ್ಲ ಎಂದರು.

ನನ್ನ ಮೇಲೆ ನಡೆದ ಗುಂಡಿನ ದಾಳಿಗೆ ಬಂದೂಕು ತೆಗೆದುಕೊಂಡ ಬಂದಿದ್ದ ಆ ಇಬ್ಬರು ವ್ಯಕ್ತಿಗಳು ಹೊಣೆಯಲ್ಲ. ಈ ಕೇಂದ್ರ ಸರಕಾರ, ಸರಕಾರದ ವಕ್ತಾರರು, ರಾತ್ರಿ ಬಂದು ‘ನೇಷನ್ ವಾಂಟ್ಸ್‌ಟು ನೋ’ ಎನ್ನುವ ಸುದ್ದಿವಾಹಿನಿಗಳ ಆ್ಯಂಕರ್‌ಗಳು ಇದಕ್ಕೆ ಹೊಣೆ ಎಂದು ಅವರು ಆರೋಪಿಸಿದರು.

ನಾನು ಎಂದಿಗೂ ದೇಶದ್ರೋಹಿಯಲ್ಲ. ರಾತ್ರೋರಾತ್ರಿ ಬಂದು ನೋಟುಗಳ ಚಲಾವಣೆ ಬಂದ್, ಕಪ್ಪುಹಣ ವಾಪಸ್ ತರಬೇಕಿದೆ ಎನ್ನುವವರು ದೇಶದ್ರೋಹಿಗಳು. ದೇಶದ ರೈತರು, ಕಾರ್ಮಿಕರನ್ನು ಬೀದಿ ಪಾಲು ಮಾಡಿ, ಅಂಬಾನಿ, ಅದಾನಿಗೆ ಲಾಭ ಮಾಡಿಕೊಡುವವರು ದೇಶದ್ರೋಹಿಗಳು, 2014ರ ಚುನಾವಣೆಯಲ್ಲಿ ಎರಡು ಕೋಟಿ ಉದ್ಯೋಗ ನೀಡುವ ಭರವಸೆ ನೀಡಿದವರು ದೇಶದ್ರೋಹಿಗಳು ಎಂದು ಉಮರ್‌ ಖಾಲಿದ್ ಕಿಡಿಗಾರಿದರು.

ಕಾರ್ಪೋರೇಟ್ ಸಂಸ್ಥೆಗಳ ಸಾಲ ಮನ್ನಾ ಮಾಡಲು ಲಕ್ಷಾಂತರ ಕೋಟಿ ರೂ.ಗಳಿವೆ. ಆದರೆ, ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡಲು ಒಂದು ಪೈಸೆ ನೀಡದೆ, ರೈತರನ್ನು ಸಾಲದ ಸುಳಿಗೆ ಸಿಲುಕಿಸಿ, ಅವರು ಆತ್ಮಹತ್ಯೆ ಮಾಡಿಕೊಳ್ಳಲು ಬಿಡುತ್ತಿರುವವರು ದೇಶದ್ರೋಹಿಗಳು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ದಲಿತರು, ಆದಿವಾಸಿಗಳ ಮೇಲೆ ಹಲ್ಲೆ ಮಾಡುವವರು, ಅವರ ಪರವಾಗಿ ಧ್ವನಿ ಎತ್ತುವವರನ್ನು ನಗರ ನಕ್ಸಲರು ಎಂದು ಕರೆದು ಜೈಲಿಗೆ ಹಾಕುವವರು, ಹತ್ಯೆ, ಅತ್ಯಾಚಾರದ ಆರೋಪಿಗಳಿಗೆ ಹೂವಿನ ಹಾರ ಹಾಕಿ ಮೆರವಣಿಗೆ ಮಾಡುವವರು ದೇಶದ್ರೋಹಿಗಳು, ನಾವಲ್ಲ ಎಂದು ಉಮರ್‌ ಖಾಲಿದ್ ಹೇಳಿದರು.

ಒಬ್ಬ ಗೌರಿಯನ್ನು ಹತ್ಯೆ ಮಾಡಿದ್ದಾರೆ. ಆದರೆ, ಕೋಟ್ಯಂತರ ಜನ ಗೌರಿಗಳು ಜನ್ಮ ಪಡೆದಿದ್ದಾರೆ. ಗೌರಿಯ ವಿಚಾರಗಳಿಂದ ಅವರು ಹೆದರುತ್ತಿದ್ದರು. ಅವರ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗದೆ ಕೊಲೆ ಮಾಡಿದ್ದಾರೆ. ಬಿಜೆಪಿ, ಆರೆಸೆಸ್ಸ್‌ನ ಹೇಡಿತನಕ್ಕೆ ನಾನು ಧಿಕ್ಕಾರ ಹೇಳುತ್ತೇನೆ ಎಂದು ಅವರು ಹೇಳಿದರು.

ಗುಜರಾತ್ ಹತ್ಯಕಾಂಡದ ಕುರಿತು ಯಾರೋ ಒಬ್ಬರು ಪ್ರಶ್ನಿಸಿದಾಗ ನರೇಂದ್ರ ಮೋದಿ ಹೇಳಿದರು, ಒಂದು ನಾಯಿಯ ಮರಿ ಸತ್ತರೂ ದುಃಖವಾಗುತ್ತದೆ ಎಂದು. ಆದರೆ, ನೀವು ಕೋಪದಲ್ಲಿ ಅವರ ಭಾಷೆಯನ್ನು ಬಳಕೆ ಮಾಡಬೇಡಿ. ಏಕೆಂದರೆ, ನಾಯಿ ನಿಯ್ಯತ್ತಿನ ಪ್ರಾಣಿ. ಸಂಘಿಗಳು ಎಂದಿಗೂ ದೇಶದ ಬಗ್ಗೆ ನಿಯತ್ತಾಗಿ ಇರಲಿಲ್ಲ. ಮೊದಲು ಬ್ರಿಟಿಷರ ದಲ್ಲಾಳಿಗಳಾಗಿದ್ದರು, ಇಂದು ದೊಡ್ಡ ದೊಡ್ಡ ಕಂಪೆನಿಗಳ ದಲ್ಲಾಳಿಯಾಗಿದ್ದಾರೆ. ದೇಶವನ್ನು ಧರ್ಮ, ಜಾತಿಯ ಆಧಾರದಲ್ಲಿ ವಿಭಜನೆ ಮಾಡಲು ಪ್ರಯತ್ನ ಪಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News