ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ ಮೀಸಲಾತಿ ಕಲ್ಪಿಸಿರುವ ವಿವರ ನೀಡಲು ಹೈಕೋರ್ಟ್ ಸೂಚನೆ

Update: 2018-09-05 17:40 GMT

ಬೆಂಗಳೂರು, ಸೆ.5: ರಾಜ್ಯ ಲೋಕೋಪಯೋಗಿ ಇಲಾಖೆ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಹಾಗೂ ಪರಿಶಿಷ್ಟ ಪಂಗಡಗಳ (ಎಸ್‌ಟಿ) ಗುತ್ತಿಗೆದಾರರಿಗೆ ಮೀಸಲಾತಿ ಕಲ್ಪಿಸಿರುವ ವಿವರ ನೀಡಿ ಎಂದು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

ಈ ಕುರಿತಂತೆ ಎಚ್.ಎಂ.ವಿಶ್ವನಾಥ್ ಎಂಬುವರು ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎಸ್.ಎಂ.ಚಂದ್ರಶೇಖರ್, ಸರಕಾರದ ಈ ಕ್ರಮ ಸಂವಿಧಾನ ಬಾಹಿರ. ಯಾರು ಅರ್ಹರಿದ್ದಾರೊ ಅವರಿಗೆ ಮಾತ್ರ ಗುತ್ತಿಗೆ ನೀಡಬೇಕು ಎಂದು ವಾದ ಮಂಡಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ, ಸರಕಾರವು ಸಂವಿಧಾನದ 46ನೇ ವಿಧಿಯಡಿ ಸಬಲೀಕರಣದ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದೆ. ಅಷ್ಟಕ್ಕೂ ಅರ್ಜಿದಾರರು ಗುತ್ತಿಗೆ ಕೇಳಿ ಅರ್ಜಿ ಹಾಕಿಲ್ಲ. ಆದ್ದರಿಂದ ಈ ರೀತಿ ಆಕ್ಷೇಪಣೆ ಮಾಡಿ ಅರ್ಜಿ ಸಲ್ಲಿಸುವುದಕ್ಕೆ ಅವರಿಗೆ ಯಾವುದೇ ಅರ್ಹತೆ ಇಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ಈ ಕುರಿತಂತೆ ಹೆಚ್ಚಿನ ವಿವರ ಒದಗಿಸಿ ಎಂದು ವಿಚಾರಣೆಯನ್ನು ಇದೇ 18ಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News